ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಶ್ರೀರಾಮಾಯಣ: ಯುದ್ಧಕಾಂಡ


 ಶ್ರೀ ರಾಮಾಯಣ: ಯುದ್ಧಕಾಂಡ 

(ನಮ್ಮ ತಂದೆ ಪಂಡಿತ ತಿರು ಶ್ರೀನಿವಾಸಾಚಾರ್ಯರು ರಚಿಸಿದ 'ಸಂಗ್ರಹ ರಾಮಾಯಣ' ಕೃತಿಯಿಂದ)

ಸುಗ್ರೀವಾಜ್ಞೆಯಂತೆ  ಸಮಸ್ತವಾನರ ಸೈನ್ಯವು ದಕ್ಷಿಣಸಮುದ್ರ ತೀರಕ್ಕೆ ಬಂದು ನೆರೆಯಿತು.  ರಾಮಲಕ್ಷ್ಮಣರು ಸುಗ್ರೀವ ಪ್ರಮುಖರೊಡನೆ ಸೇತು ಬಂಧನದ ಪ್ರಸ್ತಾಪಮಾಡಿ ಲಂಕೆಯ ಮೇಲೆ ದಂಡೆತ್ತಿ ಹೋಗುವ ಸಮಾಲೋಚನೆ ನಡೆಸುತ್ತಿದ್ದರು.

ಇತ್ತ ಮಾರುತಿಯು ಲಂಕಾನಾಶವನ್ನು ಮಾಡಿ ಬಂದ ಕೂಡಲೇ ದಶಗ್ರೀವನಿಗೆ ಚಿಂತೆಯಾಗಿ ರಾಕ್ಷಸವೀರರೊಡನೆ ಮಂತ್ರಾಲೋಚನೆ ನಡೆಸಿದನು.  ರಾವಣನ ತಮ್ಮನಾದ ವಿಭೀಷಣನು ಧರ್ಮಿಷ್ಠನಾದುದರಿಂದ ರಾಜನ ಸಭೆಯಲ್ಲಿ ಅಣ್ಣನಿಗೆ ವಿವೇಕ ಹೇಳಿದರೂ ಪ್ರಯೋಜನವಾಗದುದರಿಂದ ಅವನು ಲಂಕೆಯನ್ನು ಬಿಟ್ಟು ರಾಮನ ಮೊರೆಹೋಗಲು ಆಕಾಶಮಾರ್ಗವಾಗಿ ಬರುತ್ತಿದ್ದನು.  ಆಂಜನೇಯನ ಮಾತಿನಂತೆ ರಘುರಾಮನು ವಿಭೀಷಣನನ್ನು ಸ್ವಾಗತಿಸಿದನು.  ಶ್ರೀರಾಮನು ತನ್ನನ್ನು ಮೊರೆಹೊಕ್ಕ ವಿಭೀಷಣನಿಗೆ ಮುಂದೆ ಲಂಕಾಧಿಪತ್ಯ ಕೊಡಿಸುವುದಾಗಿಯೂ ಅಭಯವಿತ್ತನು.

ಬಳಿಕ ಸೇತುಬಂಧನ ಮಾಡುವ ಸಂದರ್ಭದಲ್ಲಿ ರಾಮನು ಮೂರು ದಿನಗಳ ಕಾಲ ಸಮುದ್ರ ರಾಜನನ್ನು ಸ್ತೋತ್ರ ಮಾಡಿದರೂ ಪ್ರಸನ್ನನಾಗಲಿಲ್ಲವಾದ ಕಾರಣ, ಅವನ ಮೇಲೆ ಆಗ್ನೇಯಾಸ್ತ್ರ ಪ್ರಯೋಗಮಾಡಿದನು.  ಇದರಿಂದ ತಲ್ಲಣಗೊಂಡ ಸಮುದ್ರರಾಜನು ರಘುವೀರನ ಕ್ಷಮೆಬೇಡಿ ತನ್ನ ಮೇಲೆ ಸೇತುವೆ ಕಟ್ಟಲು ದಾರಿಮಾಡಿಕೊಟ್ಟನು.  ನಳನೆಂಬ ಕಪಿವೀರನ ಮುಖಂಡತ್ವದಲ್ಲಿ ಲಂಕೆಯವರೆಗೆ ಮಹಾಸೇತುವೆಯ ನಿರ್ಮಾಣವಾಯಿತು.  ಆಗ ಸಮಸ್ತ ವಾನರ ಸೈನ್ಯದೊಡನೆ ರಾಮಲಕ್ಷ್ಮಣರು ಆ ಸೇತುವೆಯ ಮೇಲೆ ನಡೆದು ಹೋಗಿ ಲಂಕೆಯ ಹೊರವಲಯಕ್ಕೆ ಬಂದು ಸೇರಿದರು.  

ರಾಮಸೇನೆ ಲಂಕೆಯನ್ನಾವರಿಸಿದ ಕೂಡಲೇ ರಾಕ್ಷಸರಿಗೂ ಕಪಿವೀರರಿಗೂ ಯುದ್ಧ ಆರಂಭವಾಯಿತು. ಕಪಿಗಳು ಕಲ್ಲುಗುಂಡು ಮರಗಳಿಂದ ಅನೇಕ ರಾಕ್ಷಸರನ್ನು ಸಂಹರಿಸಿದರು.  ರಾವಣನ ಮಗನಾದ ಇಂದ್ರಜಿತುವು ನಾಗಾಸ್ತ್ರದಿಂದ ರಾಮಲಕ್ಷ್ಮಣರನ್ನು ಬಂಧಿಸಲು, ಆಕಾಶದಿಂದ ಅಲ್ಲಿಗೆ ಬಂದ ಗರುಡನ ಸಹಾಯದಿಂದ ಅವರನ್ನು ಸುತ್ತುಗೊಂಡಿದ್ದ ಸರ್ಪಗಳಿಂದ ಬಿಡುಗಡೆಯಾಯಿತು.  

ಮುಂದೆ ಯುದ್ಧಕ್ಕೆ ಬಂದ ಧೂಮ್ರಾಕ್ಷನನ್ನು ಹನುಮಂತನೂ, ವಜ್ರದಂಷ್ಟ್ರನನ್ನು ಅಂಗದನೂ, ಪ್ರಹಸ್ತನನ್ನು ನೀಲನೂ ಸಂಹರಿಸಿದರು.  ಹೀಗೆ ಯುದ್ಧವೀರರೆಲ್ಲ ಸತ್ತುಹೋದುದರಿಂದ ಕೋಪಾವಿಷ್ಟನಾದ ರಾವಣನು ತಾನೇ ಯುದ್ಧಕ್ಕೆ ಬಂದು ಅನೇಕ ಕಪಿವೀರರನ್ನು ಕೆಳಗುರುಳಿಸಿ ಲಕ್ಷ್ಮಣನನ್ನು ಶಕ್ಯಾಯುಧದಿಂದ ಮೂರ್ಛೆಗೊಳಿಸಿದನು.  ಆಗ ರಾಮನಿಗೆ ಕೋಪಬಂದು ಆಂಜನೆಯನ ಭುಜದ ಮೇಲೇರಿ ಕುಳಿತು ರಾವಣನ ರಥವನ್ನು ಪುಡಿಮಾಡಿ ತನ್ನ ಬಾಣಗಳಿಂದ ಅವನನ್ನು ನೋಯಿಸಿದ್ದಲ್ಲದೆ, ಆ ರಥವಿಹೀನನನ್ನು ಮತ್ತೊಮ್ಮೆ ಯುದ್ಧಕ್ಕೆ ಬರುವಂತೆ ಹೇಳಿಕಳುಹಿಸಿದನು.

ಬಳಿಕ ರಾವಣನು ತನ್ನ ತಮ್ಮನಾದ ಕುಂಭಕರ್ಣನನ್ನು ನಿದ್ರೆಯಿಂದ ಎಬ್ಬಿಸಿ ಯುದ್ಧಕ್ಕೆ ಅಟ್ಟಿದನು.  ಅವನು ಸುಗ್ರೀವನ ಮೇಲೆ ಯುದ್ಧಕ್ಕೆ ಹೋಗಿ ಅವನಿಂದ ಕಿವಿಮೂಗುಗಳನ್ನು ಕಚ್ಚಿಸಿಕೊಂಡನು.  ಕುಂಭಕರ್ಣನು ಹಾಗೆಯೇ ರಾಮನ ಮೇಲೆ ಯುದ್ಧಕ್ಕೆ ಹೋಗಲು, ರಾಮಚಂದ್ರನು ಒಂದೇ ಬಾಣದಿಂದ ಅವನ ಶಿರಚ್ಛೇದನ ಮಾಡಿದನು.

ಕುಂಭಕರ್ಣನ ವಧೆಯಿಂದ ರಾವಣನು ದುಃಖಾಕ್ರಾಂತನಾಗಲು ಇಂದ್ರಜಿತ್ತು ತಂದೆಗೆ ಸಮಾಧಾನ ಹೇಳಿ ಕೋಪದಿಂದ ಯುದ್ಧಕ್ಕೆ ಬಂದು ರಾಮ ಲಕ್ಷ್ಮಣರ ಮೇಲೆ ಬ್ರಹ್ಮಾಸ್ತ್ರ ಪ್ರಯೋಗ ಮಾಡಿದನು.  ಇದರಿಂದ ರಾಮಲಕ್ಷ್ಮಣರು ಸೈನ್ಯಸಮೇತರಾಗಿ ಮೂರ್ಛೆಗೊಂಡರು.  ಕೂಡಲೇ ಜಾಂಬವಂತನ ಸಲಹೆಯಂತೆ ಮೂಲಿಕೆಯನ್ನು ತರಲು ಆಂಜನೇಯನು ಗಗನಕ್ಕೆ ಚಿಮ್ಮಿ ಹಿಮಾಲಯದತ್ತ ಇದ್ದ ಔಷಧಿಪರ್ವತವನ್ನೇ ಕಿತ್ತು ತಂದುಕೊಟ್ಟುದರಿಂದ ರಾಮಲಕ್ಷ್ಮಣಾದಿಗಳ ಜೀವ ಉಳಿಯಿತು.

ಇತ್ತ ಇಂದ್ರಜಿತ್ತು ಶತ್ರು ನಿಗ್ರಹಕ್ಕಾಗಿ ನಿಕುಂಭಿಲಾಯಾಗ ಮಾಡುತ್ತಿರಲು ಲಕ್ಷ್ಮಣನು ಅವನನ್ನು ಯುದ್ಧಕ್ಕೆ ಕರೆದು ಬ್ರಹ್ಮಾಸ್ತ್ರ ಪ್ರಯೋಗ ಮಾಡಿ ಅವನನ್ನು ಸಾಯಿಸಿದನು. 

ನಾಳೆ ಮುಂದುವರೆಯುವುದು

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ