ಶ್ರೀರಾಮ ಪಟ್ಟಾಭಿಷೇಕ
ಶ್ರೀರಾಮ ಪಟ್ಟಾಭಿಷೇಕ
(ನಮ್ಮ ತಂದೆ ಪಂಡಿತ ತಿರು ಶ್ರೀನಿವಾಸಾಚಾರ್ಯ ಅವರು ರಚಿಸಿದ 'ಸಂಗ್ರಹ ರಾಮಾಯಣ' ಕೃತಿಯಿಂದ)
ಹೀಗೆ ಪುತ್ರಮಿತ್ರಾನುಜರನ್ನೆಲ್ಲಾ ಕಳೆದುಕೊಂಡು ಸರ್ವನಾಶವಾದ ಮೇಲೆ ರಾವಣನು ರಾಮನ ಮೇಲೆ ಯುದ್ಧಕ್ಕೆ ಬಂದನು. ಲೋಕಕಂಟಕನಾದ ರಾವಣನ ವಧೆಯ ಸಮಯದಲ್ಲಿ ರಾಮನಿಗೆ ದೇವೇಂದ್ರನು ದಿವ್ಯವಾದ ರಥವನ್ನೂ ಧನುರ್ಬಾಣಗಳನ್ನೂ ಒದಗಿಸಿಕೊಟ್ಟನು.
ಅಪ್ರತಿಮವಾದ ರಾಮರಾವಣರ ಯುದ್ಧವು ಭಯಂಕರ ರೀತಿಯಲ್ಲಿ ನಡೆಯಿತು. ರಾಮನು ತನ್ನ ಬಾಣಗಳಿಂದ ದಶಶಿರನ ತಲೆಗಳನ್ನು ಎಷ್ಟೆಷ್ಟು ಬಾರಿ ಕಡಿದುಹಾಕಿದರೂ ಅವು ಮತ್ತೆ ಮತ್ತೆ ಹುಟ್ಟಿಕೊಳ್ಳುತ್ತಿದ್ದವು. ಕಡೆಗೆ ರಾಮನು ಬ್ರಹ್ಮಾಸ್ತ್ರವನ್ನು ಬಿಟ್ಟು ರಾವಣನನ್ನು ಸಂಹರಿಸಿದನು. ಇದರಿಂದ ಸಮಸ್ತ ಜನರಿಗೆ ಮಾತ್ರವಲ್ಲದೆ ಸಕಲ ಲೋಕಕ್ಕೂ ಸಂತೋಷವಾಯಿತು.
ಇತ್ತ ವಿಭೀಷಣನು ರಾವಣನಿಗೆ ಉತ್ತರ ಕ್ರಿಯೆಗಳನ್ನು ನಡೆಸಿದನು. ಅನಂತರ ರಾಮನು ವಿಭೀಷಣನಿಗೆ ಲಂಕಾ ರಾಜ್ಯದಲ್ಲಿ ಪಟ್ಟಾಭಿಷೇಕ ಮಾಡಿಸಿದನು. ಹನುಮಂತನು ರಾವಣವಧೆಯಾದ ಸಂಗತಿ ಸೀತೆಗೆ ತಿಳಿಸಿ ಕೂಡಲೇ ರಾಮನಲ್ಲಿಗೆ ಕರೆತಂದನು. ಆಗ ರಾಮನು ಸೀತೆಯನ್ನು ಕಟುವಾಗಿ ಮಾತನಾಡಿಸಲು, ಆಕೆಯು ಎಲ್ಲರೆದುರು ಅಗ್ನಿ ಕುಂಡವನ್ನು ಏರ್ಪಡಿಸಿ ಅದರಲ್ಲಿ ಪ್ರವೇಶಿಸಿದಳು. ಕೂಡಲೇ ಅಗ್ನಿದೇವನು ಸ್ವಲ್ಪವೂ ನೋವಾಗದಂತೆ ಪತಿವ್ರತೆಯಾದ ಸೀತೆಯನ್ನು ತಂದು ರಾಮನಿಗೊಪ್ಪಿಸಲು ಆಗ ಆತನು ಸಂತೋಷದಿಂದ ಸ್ವೀಕರಿಸಿದನು. ಆಗ ದೇವತೆಗಳು ಹೂಮಳೆಗರೆದರು. ಈ ವೇಳೆಗೆ ರಾಮನು ವನವಾಸ ಮಾಡಿ ಹದಿನಾಲ್ಕು ವರ್ಷ ಸಮೀಪಿಸಿತ್ತು. ಶ್ರೀ ಸೀತಾಲಕ್ಷ್ಮಣ ಸಮೇತನಾದ ಶ್ರೀರಾಮಚಂದ್ರನು ಸಮಸ್ತ ಪರಿವಾರದೊಡನೆ ಪುಷ್ಪಕ ವಿಮಾನದಲ್ಲಿ ಕುಳಿತು ಅಯೋಧ್ಯೆಯತ್ತ ಪ್ರಯಾಣ ಮಾಡಿದನು. ದಾರಿಯಲ್ಲಿ ಭಾರದ್ವಾಜ ಮುನಿಗಳ ಆಶ್ರಮದಲ್ಲಿ ಉಳಿದು ಅವರ ಆಶೀರ್ವಾದವನ್ನು ಸಂಪಾದಿಸಿದನು. ಆಗ ರಾಮನು ಹನುಮಂತನನ್ನು ಭರತನ ಬಳಿಗೆ ಮುಂದಾಗಿ ಕಳುಹಿಸಿ ತನ್ನ ಬರುವಿಕೆಯನ್ನು ತಿಳಿಯ ಹೇಳಿದನು. ಅದರಂತೆ ಮಾರುತಿಯು ನಂದಿಗ್ರಾಮಕ್ಕೆ ಹಾರಿಬಂದು ರಾಮಾಗಮನಕ್ಕೆ ಪರಿತಪಿಸುತ್ತಾ ಅಗ್ನಿಪ್ರವೇಶಕ್ಕೆ ಸಿದ್ಧನಾಗಿದ್ದ ಭರತನನ್ನು ತಡೆದು, ರಾಮನು ಬರುತ್ತಿರುವ ಸಂತೋಷದ ಸುದ್ದಿಯನ್ನು ತಿಳಿಸಿದನು. ಆಗ ಭರತನಿಗೆ ಪರಮಾನಂದವಾಯಿತು.
ನಂದಿಗ್ರಾಮಕೆ ಪುಷ್ಪಕ ವಿಮಾನದಲ್ಲಿ ರಾಮನು ಬಂದಕೂಡಲೇ ಭರತನು ಸುವರ್ಣ ಪಾದುಕೆಗಳನ್ನು ರಾಮನಿಗೆ ತೊಡಿಸಿ, ರಾಮ ಪಾದಗಳ ಮೇಲೆ ಬಿದ್ದು ಹೊರಳಾಡಿದನು. ಆಗ ರಾಮಭದ್ರನು ಭರತನನ್ನೂ, ಶತ್ರುಘ್ನನನ್ನೂ ಆಲಂಗಿಸಿಕೊಂಡ ಮೇಲೆ ನಂದಿ ಗ್ರಾಮ ಪ್ರವೇಶ ಮಾಡಿದನು. ಭರತನು ರಾಮನನ್ನು ರಥದಲ್ಲಿ ಕುಳ್ಳಿರಿಸಿಕೊಂಡು ಅಯೋಧ್ಯೆಗೆ ಕರೆತಂದನು. ಶೋಕಭರಿತನಾದ ಭರತನು ರಾಮಚಂದ್ರನಿಗೆ ರಾಜ್ಯವನ್ನು ಹಿಂದಿರುಗಿವಹಿಸಿಕೊಳ್ಳುವಂತೆ ಪ್ರಾರ್ಥಿಸಿಕೊಂಡು ಒಪ್ಪಿಸಿದನು. ಕಡೆಗೆ ಎಲ್ಲರೂ ಶೃಂಗಾರವಾದ ಅಯೋಧ್ಯೆಯನ್ನು ಪ್ರವೇಶಿಸಿದರು. ರಾಮನು ತನ್ನ ತಾಯಿಯಾದ ಕೌಸಲ್ಯೆಗೂ ಗುರುಹಿರಿಯರಿಗೂ ನಮಸ್ಕರಿಸಿ ಎಲ್ಲರಿಗೂ ಆನಂದವನ್ನು ತಂದನು.
ಮುಂದೆ ಶ್ರೀರಾಮಚಂದ್ರನ ಪಟ್ಟಾಭಿಷೇಕದ ಸಮಸ್ತ ಸಿದ್ಧತೆಗಳೂ ನಡೆದವು. ವಾನರ ಶ್ರೇಷ್ಠರಿಂದ ಸುಗ್ರೀವನು ಪುಣ್ಯನದೀ ಸಮುದ್ರಗಳಿಂದ ಅಭಿಷೇಕಕ್ಕೆ ಜಲವನ್ನು ತರಿಸಿದನು. ಅನಂತರ ವಸಿಷ್ಠರು ಶ್ರೀರಾಮನನ್ನು ಸೀತಾದೇವಿಯೊಡನೆ ರತ್ನಸಿಂಹಾಸನದಲ್ಲಿ ಕುಳ್ಳಿರಿಸಿ ಪುಣ್ಯೋದಕಗಳಿಂದ ಸ್ನಾನ ಮಾಡಿಸಿದರು. ಶಾಸ್ತ್ರವಿಧಿಯಂತೆ ಶ್ರೀರಾಮನಿಗೆ ರತ್ನಕಿರೀಟಧಾರಣೆಯೊಡನೆ ಪಟ್ಟಾಭಿಷೇಕವು ವಿಜ್ರಂಭಣೆಯಿಂದ ನೆರವೇರಿತು. ಇಂತಹ ಸಂತೋಷಸಮಯದಲ್ಲಿ ಶ್ರೀರಾಮನು ಸುಗ್ರೀವ ಹನುಮಂತ ವಿಭೀಷಣಾದಿಗಳಿಗೆಲ್ಲಾ ತಕ್ಕ ಬಹುಮಾನಗಳನ್ನು ಕೊಡಿಸಿ ದಾನಧರ್ಮಾದಿಗಳನ್ನು ನಡೆಸಿದನು. ಶ್ರೀರಾಮನು ಭರತನಿಗೆ ಯುವರಾಜ ಪಟ್ಟವನ್ನು ಕಟ್ಟಿದನು. ಅಯೋಧ್ಯೆಯಲ್ಲಿ ಸತ್ಯ ಪರಾಕ್ರಮಿಯಾದ ಶ್ರೀರಾಮಚಂದ್ರನು ಒಂದು ಸಾವಿರ ವರ್ಷಗಳ ಕಾಲ ಧರ್ಮದಿಂದ ರಾಜ್ಯವಾಳುತ್ತಾ ಸುಖದಿಂದಿದ್ದನು.
(ನಾಳೆ ಮುಂದುವರೆಯುವುದು)

ಕಾಮೆಂಟ್‌ಗಳು