ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಅಂತರತಮ ನೀ ಗುರು


ಅಂತರತಮ ನೀ ಗುರು
ಹೇ ಆತ್ಮ ತಮೋಹಾರಿ ||

ಜಟಿಲ ಕುಟಿಲ ತಮ ಅಂತರಂಗ
ಬಹು ಭಾವ ವಿಪಿನ ಸಂಚಾರಿ ||

ಜನುಮ ಜನುಮ ಶತ ಕೋಟಿ ಸಂಸ್ಕಾರ
ಪರಮ ಚರಮ ಸಂಸ್ಕಾರಿ || 

ಪಾಪ ಪುಣ್ಯ ನಾನಾ ಲಲಿತ ರುದ್ರ ಲೀಲ
ರೂಪ ಅರೂಪ ವಿಹಾರಿ || 

ಸಾಹಿತ್ಯ: ಕುವೆಂಪು

ನಮ್ಮ ಕನ್ನಡ ಸಂಪದದ ಬಂಧು ಒಬ್ಬರು ಈ ಕವನದ ಕುರಿತು ತಿಳಿಸಲು ಕೋರಿದ್ದರು.  ಹಾಗಾಗಿ ಈ ಕವಿತೆಯ ಕುರಿತಾಗಿ ಹೀಗೊಂದು ಚಿಂತನವನ್ನು ಇಲ್ಲಿ ಇಡುತ್ತಿದ್ದೇನೆ:

ಇದು ನಮ್ಮಲ್ಲಿ ಅಂತರ್ಗತವಾಗಿರುವ ಆತ್ಮ ಅಥವಾ ಸಾಕ್ಷಿ ಪ್ರಜ್ಞೆಯ ಕುರಿತಾಗಿ  ಕಾಣುವಂತಹ ಗೌರವಯುತ ಭಾವನೆಯಾಗಿದೆ.  ಸಾಕ್ಷಿ ಅಂದರೆ ಹೇಗಿದೆಯೋ ಹಾಗೆ ನೋಡುವಂತದ್ದು.  ಅಂದರೆ ಯಾವುದೇ judgement ಎಂಬುದಿಲ್ಲದೆ ನಮ್ಮನ್ನು ಗಮನಿಸುತ್ತಿರುವ ಶ್ರೇಷ್ಠತೆ.  ಅದು ಹಾಗೆ ಯಾವುದೇ ನಿರ್ಣಯಗಳಿಲ್ಲದೆ ಪಕ್ಷಪಾತವಿಲ್ಲದೆ ನೋಡುವಂತದ್ದಾದರಿಂದ ಅದು ಮಾರ್ಗದರ್ಶಿ.  ಎಲ್ಲಕ್ಕಿಂತ ಶ್ರೇಷ್ಠವಾದದ್ದು.  ಗುರು ಎಂಬ ಪದಕ್ಕೆ ಒಂದು ಅರ್ಥ ಮಾರ್ಗದರ್ಶಿ.  ಅದಕ್ಕೆ ಎಲ್ಲಕ್ಕಿಂತ ದೊಡ್ಡದು ಎಂದರ್ಥವೂ ಇದೆ ಎಂದು ತಿಳಿದವರು ಹೇಳುತ್ತಾರೆ.  ನಮ್ಮ ಈ ಕವನದ ಅರ್ಥೈಕೆಯ ಪ್ರಯತ್ನಕ್ಕಾಗಿ ಇದನ್ನೇ  ಆತ್ಮ ಎಂದು ಕರೆಯುತ್ತೇನೆ.  (ಭಗವದ್ಗೀತೆಯಲ್ಲಿ ನಮ್ಮೊಳಗಿಗೂ ಆತ್ಮ ಎಂಬ ಮಾತಿದೆ.  ನಮ್ಮ ಅಂತರಾತ್ಮಕ್ಕೂ ಆತ್ಮ ಎಂಬ ಮಾತಿದೆ.  ಉದಾಹರಣೆ ಉದ್ದರೇತ್ ಆತ್ಮನಾತ್ಮಾನಂ ನ ಆತ್ಮಾನಂ ಅವಸಾಧಯೇತ್ಎಂಬ ಶ್ಲೋಕ.  ನಿನ್ನ ಆತ್ಮವನ್ನು ಆತ್ಮದ ಸಹಾಯದಿಂದ ಉದ್ಧರಿಸಿಕೋ ಎಂಬ ಮಾತು.  ಇಲ್ಲಿ ಸುಲಭ ಆರ್ಥೈಕೆಗಾಗಿ ನಮ್ಮೊಳಗು ಮತ್ತು ಆತ್ಮ ಎಂಬ ಎರಡು ವಿಂಗಡನೆ ಮಾಡಿಕೊಳ್ಳೋಣ.)

ಇದು ನಮ್ಮೊಳಗೆ ಅಂತರ್ಗತವಾಗಿದೆ.  ನಮ್ಮೊಳಗಿದೆ ಅಂದರೆ ಸ್ವಲ್ಪ ವೆತ್ಯಾಸವಾದೀತು.  ಅದಕ್ಕೊಂದು ರೂಪ ಕೊಟ್ಟಂತಾದೀತು.  ಅದಕ್ಕೊಂದು ಸ್ಥಳ physical presence ಇದೆ ಎಂದ ಹಾಗಾದೀತು.  ಆದರೆ ಅದು ಹಾಗಲ್ಲ ಅಂತರ್ಗತವಾಗಿದೆ.   (ನೀರಿನೊಳಗೆ ಸಕ್ಕರೆ ಹಾಕಿದರೆ ಅದು ನೀರಿನೊಳಗೆ ಒಂದಾಗಿಬಿಟ್ಟಿರುತ್ತದೆ.  ಆದರೆ ಆ ಸಕ್ಕರೆ ಎಲ್ಲಿದೆ ಎಂದು ಹೇಳಲಾಗುವುದಿಲ್ಲ.  ಇದು ಅಂತರಾತ್ಮಕ್ಕೆ ಶ್ರೇಷ್ಠ ಉದಾಹರಣೆಯಲ್ಲದಿದ್ದರೂ ಸುಲಭವಾಗಿ ಅರ್ಥೈಸಿಕೊಳ್ಳಲಿಕ್ಕೆ ನಾನು ಹೇಳುತ್ತಿರುವ ಮಾತು.)  ನಮ್ಮೊಳಗೆ ಏನಿದೆ.  ನಮ್ಮೊಳಗೆ ಇರುವುದು ಕತ್ತಲು.  ಈ ಆತ್ಮವೇನಾದರೂ ಇದ್ದಿದ್ದರೆ ಅದೂ ಕತ್ತಲಿನ ಭಾಗವಾಗಿಬಿಟ್ಟಿರುತ್ತಿತ್ತು.  ಆದರೆ ಇದು ಕತ್ತಲಿನ ಭಾಗವಾಗದೆ ತಮ ಎಂಬ ಕತ್ತಲಿಗೆ ಅಂತರ ಹೊಂದಿದೆ.  ಹಾಗಾಗಿ ಇದು ಅಂತರತಮ ಗುರುವಾಗಿದ್ದು ನಮ್ಮೊಳಗಿನ ಕತ್ತಲನ್ನು ತೆಗೆಯುವಂತಹ ತಮೋಹಾರಿಯಾಗಿದೆ.

ಇದು ನಮ್ಮೊಳಗಿನ ಜಟಿಲತೆ, ತಮಗಳೆಂಬ ಭಾವನೆಗಳ ವಿಪಿನದೊಳಗೆ (ಕಾಡಿನೊಳಗೆ) ಅದನ್ನೇನೂ ಅಂಟಿಸಿಕೊಳ್ಳದ ಸಂಚಾರಿಯಾಗಿದೆ. ಎಷ್ಟೆಷ್ಟೋ ಜನ್ಮಗಳಿಂದ ಬಂದಿರುವ ನಡಾವಳಿಗಳು, ಮಾನಸಿಕ ಗೊಂದಲಗಳು ಮುಂತಾದ ಸಂಸ್ಕಾರಗಳಿಗೆ ಪರಮ ರೀತಿಯಲ್ಲಿ  ಚರಮ (ಮುಕ್ತಾಯ) ಗೀತೆ ಹಾಡುವಂತಹ ಸಂಸ್ಕಾರಿಯಾಗಿದೆ ಅಥವ ಸಂಸ್ಕರಣ ಶಕ್ತಿಯಾಗಿದೆ.

ಇದು ನಮ್ಮ ಪಾಪ ಪುಣ್ಯಗಳು, ಲಲಿತವಾದದ್ದು ಮತ್ತು ರೌದ್ರವಾಗಿದ್ದು ಇಂತಹ ಎಲ್ಲಾ ಆಟಗಳೆಂಬ ಲೀಲಾ ರೂಪಗಳಿಗೂ ಅತೀತವಾಗಿದ್ದು ಯಾವುದೇ ರೂಪವಿಲ್ಲದ ಅರೂಪ ವಿಹಾರಿಯಾಗಿದೆ.  ಇದು ಎಲ್ಲ ಬಗೆಯ ತಮಗಳಿಗೆ ಹೊರತಾಗಿ ಅಂತರತಮವಾಗಿರುವ ನಮ್ಮೊಳಗೆ ಅಂತರ್ಗತವಾಗಿರುವ ನಮ್ಮೊಳಗಿನ ತಮವನ್ನು ಕಳೆಯಬಲ್ಲಂತಹ ಅಂತರಾತ್ಮ.

(ಮೇಲೆ ಹೇಳಿದಂತೆ ನಮ್ಮ ಕನ್ನಡ ಸಂಪದದ ಬಂಧು ಒಬ್ಬರು ಇದರ ಕುರಿತು ಕೇಳಿದ್ದರಿಂದ ನನಗೆ ಅನಿಸಿದ್ದನ್ನು ಹೇಳಲು ಪ್ರಯತ್ನಿಸಿದ್ದೇನೆ.  ಇದರ ಬಗ್ಗೆ ತಿಳಿದವರು ನನ್ನ ಅನಿಸಿಕೆಗಳನ್ನು ತಿದ್ದಲು ಆತ್ಮೀಯ ಹಾಗೂ ಗೌರವಯುತವಾದ ಸ್ವಾಗತವಿದೆ).


Tag: Antaratama nee guru

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ