ಟಿ. ಎನ್. ಕೃಷ್ಣನ್
ಟಿ. ಎನ್. ಕೃಷ್ಣನ್
ಟಿ. ಎನ್. ಕೃಷ್ಣನ್ ಮಹಾನ್ ವಯೊಲಿನ್ ವಾದಕರು.
ತ್ರಿಪ್ಪುಣಿತ್ತುರ ನಾರಾಯಣಯ್ಯರ್ ಕೃಷ್ಣನ್ ಅವರು ಕೇರಳದ ತ್ರಿಪ್ಪುನಿತುರ ಗ್ರಾಮದಲ್ಲಿ 1928ರ ಅಕ್ಟೊಬರ್ 6ರಂದು ಜನಿಸಿದರು. ಅವರ ತಂದೆ ನಾರಾಯಣ ಅಯ್ಯರ್ ಹಾಗೂ ಅಮ್ಮ ಅಮ್ಮಿಣಿ ಅಮ್ಮಾಳ್ ಕೂಡ ಸಂಗೀತ ಕಲಾವಿದರಾಗಿದ್ದರು. ಅವರ ಆರಂಭಿಕ ಸಂಗೀತಾಭ್ಯಾಸಕ್ಕೆ ತಂದೆಯೇ ಗುರುವಾಗಿದ್ದರು. ಬಳಿಕ ಅಲೆಪ್ಪಿ ಕೆ.ಪಾರ್ಥಸಾರಥಿ, ಅರಿಯಾಕುಡಿ ರಾಮಾನುಜ ಅಯ್ಯಂಗಾರ್, ಶೆಮ್ಮಂಗುಡಿ ಶ್ರೀನಿವಾಸ ಅಯ್ಯಂಗಾರ್ ಅವರಂಥ ದಿಗ್ಗಜರ ಬಳಿ ಸಂಗೀತಾಭ್ಯಾಸ ಮಾಡಿದ್ದರು. ಕೃಷ್ಣನ್ ಅವರ ಸಹೋದರಿ ಎನ್. ರಾಜಂ ಅವರು ಸಹಾ ವಯೊಲಿನ್ ವಾದನ ಕ್ಷೇತ್ರದ ಬಹುದೊಡ್ಡ ಹೆಸರು.
ಕೃಷ್ಣನ್ ಸುದೀರ್ಘ ಕಾಲದ ಶಿಸ್ತಿನ ಕಲಿಕೆಯಿಂದಾಗಿ ಒಬ್ಬ ಶ್ರೇಷ್ಠ ಪಿಟೀಲು ವಾದಕರಾಗಿ ರೂಪುಗೊಂಡರು. ತಮ್ಮ ಎಂಟನೇ ವಯಸ್ಸಿನಿಂದಲೇ ಕಛೇರಿ ಮಾಡತೊಡಗಿದ ಅವರು, ಹನ್ನೊಂದನೇ ವಯಸ್ಸಿನಲ್ಲಿ ತಮ್ಮ ಪ್ರಧಾನ ಕಛೇರಿ ನೀಡಿದರು. ಅವರಿಗೆ ತಿರುವಾಂಕೂರು ರಾಜರ ಆಸ್ಥಾನದ ಬೆಂಬಲವೂ ದೊರಕಿತು.
ಕೃಷ್ಣನ್ ತಮ್ಮ ಕಾಲದ ಎಲ್ಲ ಮೇರು ವಿದ್ವಾಂಸರುಗಳಿಗೂ ಅನೇಕ ದಶಕಗಳ ಕಾಲ ಪಕ್ಕವಾದ್ಯ ನುಡಿಸುತ್ತಾ ಒಬ್ಬ ದಕ್ಷ ಪಕ್ಕವಾದ್ಯಗಾರರಾಗಿ ಶೋಭಾಯಮಾನರೆನಿಸಿದರು. ಪ್ರಧಾನ ಕಲಾವಿದರನ್ನು ನೆರಳಿನಂತೆ ಅನುಸರಿಸುತ್ತಾ, ಗಾಯನದ ಸ್ವಾದ ಹೆಚ್ಚಿಸುತ್ತಾ, ಹಿತ-ಮಿತವಾಗಿ ಪಸರಿಸುತ್ತಾ ವಾದ್ಯ ಧರ್ಮವನ್ನು ಎತ್ತಿ ಹಿಡಿಯುತ್ತಾ ನುಡಿಸುವರಾಗಿ ಅವರು ಎಲ್ಲರಿಗೂ ಪ್ರಿಯರಾಗಿದ್ದರು. ಅರಿಯಾಕುಡಿ ರಾಮಾನುಜ ಅಯ್ಯಂಗಾರ್, ಮುಸುರಿ ಸುಬ್ರಹ್ಮಣ್ಯ ಅಯ್ಯರ್, ಆಲತ್ತೂರು ಸಹೋದರರು, ಚೆಂಬೈ ವೈದ್ಯನಾಥ ಭಾಗವತರ್, ಮಹಾರಾಜಪುರಂ ವಿಶ್ವನಾಥ ಅಯ್ಯರ್ ಮುಂತಾದ ಹಿರಿಯರಿಗೆಲ್ಲಾ ಪಿಟೀಲು ಪಕ್ಕವಾದ್ಯ ನುಡಿಸಿ ಜನಪ್ರಿಯರಾದರು. ತಮ್ಮದೇ ಪ್ರಧಾನ ಕಛೇರಿಗಳು ಮತ್ತು ಉತ್ತರಾದಿ ಸಂಗೀತಗಾರರೊಂದಿಗೆ ಜುಗಲ್ಬಂದಿ, ಸಹೋದರಿ ಮತ್ತು ಮಕ್ಕಳೊಂದಿಗೆ ಜಂಟಿ ಕಛೇರಿಗಳು ಮತ್ತು ಶ್ರವ್ಯ ಮಾಧ್ಯಮಗಳ ಸಂಗೀತದಲ್ಲೂ ಅವರು ಬಹಳಷ್ಟು ವ್ಯಾಪ್ತಿ ಪಡೆದಿದ್ದರು.
ಕೃಷ್ಣನ್ ಅವರು ಚೆನ್ನೈ ಹಾಗೂ ದೆಹಲಿಯ ಸಂಗೀತ ಕಾಲೇಜುಗಳಲ್ಲಿ ಸಂಗೀತ ಪ್ರಾಧ್ಯಾಪಕರಾಗಿಯೂ ಕಾರ್ಯನಿರ್ವಹಿಸಿದ್ದರು. ಕೇಂದ್ರ ಸಂಗೀತ ನಾಟಕ ಅಕಾಡಮಿಯ ವೈಸ್ ಚೇರ್ಮನ್ನರಾಗಿಯೂ ಕಾರ್ಯನಿರ್ವಹಿಸಿದರು.
ಕೃಷ್ಣನ್ ಅವರ ಶಿಷ್ಯವೃಂದದಲ್ಲಿ ಮಗಳು ವಿಜಿ ಕೃಷ್ಣನ್, ಮಗ ಶ್ರೀರಾಮ ಕೃಷ್ಣನ್, ಚಾರುಮತಿ ರಘುರಾಮನ್ ಸೇರಿದಂತೆ ಅನೇಕರು ಜನಪ್ರಿಯರಾಗಿದ್ದಾರೆ.
ಪದ್ಮಶ್ರೀ, ಪದ್ಮಭೂಷಣ, ಕೇಂದ್ರ ಸಂಗೀತ ನಾಟಕ ಅಕಾಡಮಿ ಗೌರವ, ಸಂಗೀತ ಕಲಾನಿಧಿ, ಸಂಗೀತ ಕಲಾಶಿಖಾಮಣಿ, ತಿರುಪತಿ ದೇವಸ್ಥಾನದ ಆಸ್ಥಾನ ವಿದ್ವಾನ್ ಸೇರಿದಂತೆ ಅನೇಕ ಪ್ರಶಸ್ತಿ ಗೌರವಗಳು ಕೃಷ್ಣನ್ ಅವರಿಗೆ ಸಂದಿದ್ದವು.
ಟಿ. ಎನ್. ಕೃಷ್ಣನ್ ಅವರು 2020ರ ನವೆಂಬರ್ 2ರಂದು ತಮ್ಮ 92ನೇ ವಯಸ್ಸಿನಲ್ಲಿ ನಿಧನರಾದರು. ಈ ಮಹಾನ್ ಚೇತನಕ್ಕೆ ನಮನ.
T. N. Krishnan
ಕಾಮೆಂಟ್‌ಗಳು