ಪೂರ್ಣಾ ಸುರೇಶ್
ಪೂರ್ಣಾ ಸುರೇಶ್
ಡಾ. ಪೂರ್ಣಾ ಸುರೇಶ್ ಭರತನಾಟ್ಯ ಕಲಾವಿದೆ, ನೃತ್ಯ ಸಂಯೋಜಕಿ ಮತ್ತು ಶಿಕ್ಷಕಿ.
ನವೆಂಬರ್ 28 ಪೂರ್ಣಾ ಅವರ ಜನ್ಮದಿನ. ಬೆಂಗಳೂರಿನವರಾದ ಪೂರ್ಣಾ ಸುರೇಶ್ ಎಳವೆಯಲ್ಲೇ ನೃತ್ಯಕಲೆಯತ್ತ ಆಕರ್ಷಿತರಾದರು. ಗುರು ಎಸ್. ವಿ. ಶ್ರೀನಿವಾಸ್ ಹಾಗೂ ಶ್ರೀಮತಿ ಶುಭಾ ಧನಂಜಯ ಅವರ ಬಳಿ ಭರತನಾಟ್ಯ ಅಭ್ಯಾಸ ಮಾಡಿದ ಪೂರ್ಣಾ ಸುರೇಶ್, 1993 ರಲ್ಲಿ ವಿದ್ಯುಕ್ತವಾಗಿ ರಂಗಪ್ರವೇಶ ಮಾಡಿದರು.
ಮುಂದೆ ಭರತನಾಟ್ಯದಲ್ಲಿ ವಿದ್ವತ್ ಪದವಿ ಪಡೆದ ಪೂರ್ಣಾ ಸುರೇಶ್, ಬೆಂಗಳೂರು ವಿಶ್ವವಿದ್ಯಾಲಯದಿಂದ ಭರತ ನಾಟ್ಯದಲ್ಲಿ ಎಂ. ಎ, ಎಂ.ಫಿಲ್ ಪದವಿಗಳನ್ನು ಗಳಿಸಿ, "ಭರತನಾಟ್ಯ ಮತ್ತು ಯೋಗಶಾಸ್ತ್ರಗಳ ನಡುವಣ ಅಂತರ್ ಸಂಬಂಧ" ಎಂಬ ಪ್ರೌಢ ಪ್ರಬಂಧ ಮಂಡಿಸಿ ಪಿಎಚ್.ಡಿ ಸಾಧನೆ ಮಾಡಿದರು. ಪೂರ್ಣಾ ಸುರೇಶ್ ಅವರು ಪ್ರಸಿದ್ಧ ನಾಟ್ಯ ಗುರುಗಳಾದ ರೇವತಿ ನರಸಿಂಹನ್, ಉಷಾ ದಾತಾರ್, ಬಿ. ಕೆ. ವಸಂತಲಕ್ಷ್ಮಿ, ಸರ್ವೋತ್ತಮ ಕಾಮತ್ ಮುಂತಾದ ಮಹಾನ್ ಕಲಾವಿದರ ಮಾರ್ಗದರ್ಶನವನ್ನೂ ಗಳಿಸಿದರು.
ಪೂರ್ಣಾ ಸುರೇಶ್ ಅವರು ನೃತ್ಯ ಕಲಾವಿದರಾಗಿ ಭಾರತದ ಅನೇಕ ಪ್ರತಿಷ್ಠಿತ ಸಾಂಸ್ಕೃತಿಕ ವೇದಿಕೆಗಳಲ್ಲಿ ತಮ್ಮ ಪ್ರತಿಭೆ ಪ್ರಕಾಶಿಸಿದ್ದಾರೆ. ದಶಾವತಾರ, ಅಂತರ್ದನಿ, ಕಣ್ಮಣಿ ಕೃಷ್ಣ, ಪಾಂಚಾಲಿ, ಭಕ್ತಿಭಾವಲಹರಿ ಮುಂತಾದ ವಿಶಿಷ್ಟ ನೃತ್ಯರೂಪಕಗಳನ್ನು ಸಂಯೋಜಿಸಿದ್ದಾರೆ. ಮೈಸೂರು ಒಡೆಯರ್ ಮನೆತನದ ಆಳ್ವಿಕೆಯಲ್ಲಿ ಮಹತ್ವದ ಪಾತ್ರವಹಿಸಿದ ಮಹಾರಾಣಿಯರನ್ನು ಕುರಿತು ಇವರು ಪ್ರಸ್ತುತಪಡಿಸಿದ ಏಕವ್ಯಕ್ತಿ ನೃತ್ಯ ರೂಪಕವಾದ "ಮೈಸೂರಿನ ರಾಜ್ಯಲಕ್ಷ್ಮಿಯರು" ಸ್ವಯಂ ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಮತ್ತು ಕುಟುಂಬದವರ ಮೆಚ್ಚುಗೆಗೆ ಪಾತ್ರವಾಗಿದೆ.
ಪೂರ್ಣಾ ಸುರೇಶ್ ಅವರು ಕಲಾಸಂಕುಲ ಶಾಲೆಯ ಸಂಸ್ಥಾಪಕ ನಿರ್ದೇಶಕರಾಗಿ ನೂರಾರು ಎಳೆಯ ಪ್ರತಿಭೆಗಳನ್ನು ಪೋಷಿಸುತ್ತಾ ಬಂದಿದ್ದಾರೆ.
ಡಾ. ಪೂರ್ಣಾ ಸುರೇಶ್ ಅವರಿಗೆ ಆರ್ಯಭಟ ಕಲಾ ಸಂಸ್ಥೆಯ ಯುವ ಕಲಾವಿದೆ ಪ್ರಶಸ್ತಿ, ಕೇಂದ್ರ ಸರ್ಕಾರದ ಜೂನಿಯರ್ ಫೆಲೋಷಿಪ್, ಬಬ್ಬೂರು ಕಮ್ಮೆ ಸೇವಾ ಸಮಿತಿಯ ಸಾಧಕರತ್ನ ಪ್ರಶಸ್ತಿ, ವೈಕುಂಠ ನಾರಾಯಣ ದೇವಾಲಯದಿಂದ ನೃತ್ಯಕಲಾ ಕೌಸ್ತುಭ ಬಿರುದು ಸೇರಿದಂತೆ ಅನೇಕ ಗೌರವಗಳು ಸಂದಿವೆ.
ಪೂರ್ಣಾ ಸುರೇಶ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
Happy birthday Dr. Poorna Suresh
ಕಾಮೆಂಟ್‌ಗಳು