ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಗೀತಾ ಬಿ. ಯು.

 ಗೀತಾ ಬಿ. ಯು. 

ಗೀತಾ ಬಿ. ಯು. ಜನಪ್ರಿಯ ಕಥೆಗಾರ್ತಿಯಾಗಿ, ಕಿರುತೆರೆ ಧಾರಾವಾಹಿಗಳ ಚಿತ್ರಕಥೆ ಸಂಭಾಷಣೆ ರಚನೆಗಾರ್ತಿಯಾಗಿ, ಕಾರ್ಯಕ್ರಮ ಸಂಯೋಜಕಿಯಾಗಿ, ಅಂಕಣಗಾರ್ತಿಯಾಗಿ .... ಹೀಗೆ ಬಹುಮುಖಿ ಪ್ರತಿಭೆಗಳಿಂದ ಜನಪ್ರಿಯರಾಗಿದ್ದಾರೆ. ಹಲವಾರು ವೈಶಿಷ್ಟ್ಯಗಳಿಗೆ ಹೆಸರಾದ ಹೋಟೆಲ್ ಉದ್ಯಮಿಯಾಗಿಯೂ ಅವರು ಖ್ಯಾತರು. ಸದಾ ಹಸನ್ಮುಖಿಯಾಗಿ,  ಸರಳ ಸಹೃದಯಿಯಾಗಿ,  ಪ್ರಸನ್ನತೆಯಿಂದಿರುವ ಅವರು ನೀಡುವ ಆಪ್ತತೆ ಅಪ್ಯಾಯಮಾನವಾದದ್ದು. 

ಡಿಸೆಂಬರ್ 2 ಗೀತಾ ಅವರ ಜನ್ಮದಿನ.  ಅವರು ಜನಿಸಿದ್ದು ಬೆಂಗಳೂರಿನಲ್ಲಿ.  ತಂದೆ ಎಚ್.ಎಸ್. ಉಪೇಂದ್ರರಾವ್.‍ ತಾಯಿ ಶಾಂತಾ. ಪ್ರಾರಂಭಿಕ ಶಿಕ್ಷಣ ಬೆಂಗಳೂರಿನಲ್ಲಿ ನಡೆಯಿತು. ತಂದೆಯವರಿಗೆ  ವರ್ಗವಾಗುತ್ತಿದ್ದುದರಿಂದ ಪ್ರೌಢಶಾಲಾ ವಿದ್ಯಾಭ್ಯಾಸ ಚಿಂತಾಮಣಿ ಮತ್ತು ಚೆನ್ನರಾಯಪಟ್ಟಣಗಳಲ್ಲಿ ನಡೆಯಿತು. ನ್ಯಾಷನಲ್ ಕಾಲೇಜಿನಲ್ಲಿ ಬಿ.ಎ. ಪದವಿ ಮತ್ತು ಬೆಂಗಳೂರು ವಿಶ್ವವಿದ್ಯಾಲಯದಿಂದ ಸಂವಹನದಲ್ಲಿ ಬಿ.ಎಸ್. ಪದವಿ ಗಳಿಸಿದರು. ಇದಲ್ಲದೆ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಕನ್ನಡರತ್ನ ಪದವಿ ಪಡೆದರು. 

ಗೀತಾ ಅವರಿಗೆ ಚಿಕ್ಕಂದಿನಿಂದಲೂ ಕಥೆ ಕೇಳುವುದು ಮತ್ತು ಕಥೆ ಹೇಳುವುದು ಇಷ್ಟವಾದ ಸಂಗತಿ.   ಹೀಗೆ ಅವರಲ್ಲಿ ಓರ್ವ ಸಹಜ ಕಥೆಗಾರ್ತಿ ಅಂತರ್ಗತವಾಗಿರುವುದರಲ್ಲಿ ಅಚ್ಚರಿಯಿಲ್ಲ.  

ಗೀತಾ ಅವರ ಕಾದಂಬರಿಗಳು ಪ್ರಮುಖ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿವೆ. ಸೋಲು ಗೆಲುವಿನ ಹಾದಿಯಲ್ಲಿ (ಪ್ರಜಾಮತ), ಮರೀಚಿಕೆ (ಉಷಾಪತ್ರಿಕೆ), ಹೊಂಗೆ ನೆರಳು (ಮಲ್ಲಿಗೆ) ತಮಸೋಮ ಜ್ಯೋತಿರ್ಗಮಯ (ತರಂಗ), ಸಂಕೋಲೆ (ಕರ್ಮವೀರ), ಅವರ‍್ನ ಬಿಟ್ಟು ಇವರ‍್ನ ಬಿಟ್ಟು ಇವರ‍್ಯಾರು (ಸುಧಾ), ವಾರಸುದಾರ (ತರಂಗ), ಮಿಥ್ಯ (ಸುಧಾ), ಇರುವುದೆಲ್ಲವ ಬಿಟ್ಟು ಮುಂತಾದವುಗಳನ್ನು ಈ ನಿಟ್ಟಿನಲ್ಲಿ ಹೆಸರಿಸಬಹುದು.  ಹಾಲಲ್ಲಿ ಕೆನೆಯಾಗಿ ಅವರ ಇತ್ತೀಚಿನ ಕಾದಂಬರಿ.
ಇವರ ಕಥೆಗಳು ಆರದಿರಲಿ ಬೆಳಕು, ಕೈ ಹಿಡಿದು ನಡೆಸೆನ್ನನು, ಮತ್ತದೇ ಸಂಜೆ, ಸೆಕೆಂಡ್ ಇನ್ನಿಂಗ್ಸ್, ಕಟ್ಟಿಕೊಂಡ ಬುತ್ತಿ, ಏನ ಬೇಡಲಿ ಏಕೆ ಕಾಡಲಿ, ತಮಸೋಮ ಜ್ಯೋತಿರ್ಗಮಯ  ಮುಂತಾದ ಕಥಾ ಸಂಕಲನಗಳಲ್ಲಿ ಮೂಡಿವೆ.  ಇವರ 'ಬದುಕು' ಅಂಕಣ ಕರ್ಮವೀರದಲ್ಲಿ ಮತ್ತು 'ಚೌಕಟ್ಟಿನಾಚೆ' ಅಂಕಣಗಳು ಡಿಜಿಟಲ್ ಕನ್ನಡದಲ್ಲಿ ಮೂಡಿ ಹೆಸರಾಗಿವೆ. 'ಅಮ್ಮನ ನೆನಪು ಸದಾ' ಇವರ ಮತ್ತೊಂದು ಜನಪ್ರಿಯ ಕೃತಿ. 

ಗೀತಾ ಅವರು ಕಿರುತೆರೆಯ ಪ್ರಸಿದ್ಧ ಧಾರಾವಾಹಿಗಳಾದ ಮನ್ವಂತರ, ಮುಕ್ತಾ, ಮೌನರಾಗ, ಗುಪ್ತಗಾಮಿನಿ, ಜಗಳಗಂಟಿಯರು ಮುಂತಾದ ಧಾರಾವಾಹಿಗಳಿಗೆ ಕಥೆ, ಸಂಭಾಷಣೆ ಹೆಣೆದಿದ್ದಾರೆ. ಅವರು ಜಿ ಟಿ.ವಿ. ವಾಹಿನಿಯ 'ಸ್ಪಂದನ' ಕಾರ‍್ಯಕ್ರಮದ ರೂವಾರಿಯೂ ಅಗಿದ್ದರು.  

ಸಾಹಿತ್ಯ ಮಾತ್ರವಲ್ಲದೆ ಉದ್ಯಮ, ಸಾರ್ವಜನಿಕ ಬದುಕು, ಕುಟುಂಬ, ಸ್ನೇಹವಲಯ ಹೀಗೆ ಎಲ್ಲದರಲ್ಲೂ ಸಕ್ರಿಯ ಆಸಕ್ತಿ ತಳೆದಿರುವ ಗೀತಾ ಅವರು, ಪ್ರತಿನಿತ್ಯ ಒಂದಲ್ಲ ಒಂದು ವಿಚಾರಗಳನ್ನು ಮುಕ್ತವಾಗಿ, ಮನನಯೋಗ್ಯವಾಗಿ, ಹೃದಯವಂತಿಕೆಯಿಂದ ತೆರೆದಿಡುವ ರೀತಿ ಓದಲು ಆಪ್ತವೆನಿಸತ್ತದೆ. ಅವರಿಗೆ ಅ.ನ.ಕೃ ಪ್ರಶಸ್ತಿಯೂ ಸೇರಿ ಅನೇಕ ಪ್ರಶಸ್ತಿ ಗೌರವಗಳು ಸಂದಿವೆ. 

ಹಸನ್ಮುಖತೆ, ಸರಳತೆ, ಸಜ್ಜನಿಕೆಗಳ ಜೊತೆಗೆ ಬಹುಮುಖಿ ಪ್ರತಿಭೆಯಾಗಿ ಮೇಳೈಸಿರುವ ಆತ್ಮೀಯ ಸಹೃದಯಿ ಗೀತಾ ಬಿ. ಯು. ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.

Geetha B U

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ