ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ರೈಟ್ ಸಹೋದರರು


 ರೈಟ್ ಸಹೋದರರು



ವಿಶ್ವದ ಪ್ರಪ್ರಥಮ ಯಂತ್ರಶಕ್ತಿಚಾಲಿತ, ಗಾಳಿಗಿಂತ ಭಾರವಾದ ಹಾರುವ ಯಂತ್ರವನ್ನು ತಯಾರಿಸಿ ಅದರಲ್ಲಿ ಕುಳಿತು ಗಾಳಿಯಲ್ಲಿ ಸ್ವತಂತ್ರವಾಗಿ ಚಲಿಸುತ್ತಾ, ನಿಯಂತ್ರಣಕ್ಕೆ ಒಳಪಡಿಸಿಕೊಂಡು ಸಮತೋಲನದ ಹಾರಾಟ ನಡೆಸಿದ ವಿಲ್ಬರ್ ಮತ್ತು ಆರ್ವಲ್ ರೈಟ್ ಸಹೋದರರು ಮಾನವನ ಹಾರಾಟದ ಅನ್ವೇಷಕರು ಮತ್ತು ಹಾರುವ ಯಂತ್ರದ ನಿರ್ಮಾಪಕರು ಎಂದು ಪ್ರಸಿದ್ಧರಾಗಿದ್ದಾರೆ. 

ತಮ್ಮ ಮೂಲಭೂತ ವೈಜ್ಞಾನಿಕ ಸಂಶೋಧನೆಗಳನ್ನಾಧರಿಸಿ 1903ನೇ ಇಸವಿ ಡಿಸೆಂಬರ್ 17ನೇ ದಿನದಂದು ಅಮೆರಿಕಾದ ಉತ್ತರ ಕರೊಲಿನಾದಲ್ಲಿರುವ ಕಿಟ್ಟಿಹಾಕ್‍ನಲ್ಲಿ ನಡೆಸಿದ ಈ ಯಶಸ್ವಿ ಹಾರಾಟದಿಂದ ಅವರು ಮಾನವನಿಗೆ ಅಂತರಿಕ್ಷದಲ್ಲಿ ಹಾರುವುದನ್ನು ಕಲಿಸಿ, ವೈಮಾನಿಕ ಯುಗವನ್ನೇ ಆರಂಭಿಸಿದರಲ್ಲದೆ ಮುಂದೆ ಮಾದರಿಯಾದ ವಿಮಾನಗಳನ್ನು ತಯಾರಿಸುವಲ್ಲೂ ಸಫಲರಾದರು.

ಕ್ರಿ.ಶ.1850ರ ದಶಕದಲ್ಲಿ ಅಮೆರಿಕದ ಈಶಾನ್ಯ ಭಾಗದಲ್ಲಿರುವ ಇಂಡಿಯಾನಾ ರಾಜ್ಯದಲ್ಲಿದ್ದ ಸುಸನ್ ಕರ್ನರ್ ಮತ್ತು ಮಿಲ್ಟನ್ ರೈಟ್ ದಂಪತಿಗಳಿಗೆ 1867 ಏಪ್ರಿಲ್ 16 ರಂದು ವಿಲ್ಬರ್ ಮತ್ತು 19 ಆಗಸ್ಟ್ 1871ರಲ್ಲಿ ಆರ್ವಿಲ್ ಜನಿಸಿದರು. ಈ ಕುಟುಂಬದವರೆಲ್ಲರೂ ಒಳ್ಳೆಯ ಸ್ವಭಾವದ, ಹೊಸತನ್ನು ಕಲಿಯಲು ಮತ್ತು ಕಲಿತದ್ದನ್ನು ಅಳವಡಿಸಿಕೊಳ್ಳಲು ಪರಸ್ಪರ ಉತ್ತೇಜನ ನೀಡುವಂತಹ ಜೀವನ ನಡೆಸುತ್ತಿದ್ದರು. ರೈಟ್ ಸಹೋದರರ ತಂದೆ ಒಂದು ದಿನ ಸಂಜೆ ಅಲ್ಪಸ್ವಲ್ಪ ಮುಚ್ಚಿದ್ದ ಒಂದು ಪೊಟ್ಟಣವನ್ನು ಕೈಯಲ್ಲಿ ಹಿಡಿದು ಮನೆಗೆ ಬಂದರು. ಸಹೋದರರಿಬ್ಬರು ಅದು ಏನೆಂದು ಕೇಳುವಷ್ಟರಲ್ಲಿ ಅದನ್ನು ತೆಗೆದು ಗಾಳಿಯಲ್ಲಿ ಚಿಮ್ಮಿಸಿದರು. ಬಾಲಕರಿಬ್ಬರು ನಿರೀಕ್ಷಿಸಿದಂತೆ ಅದು ಕೆಳಕ್ಕೆ ಬೀಳುವ ಬದಲು ಕೋಣೆಯಲ್ಲಿ ಹಾರಲಾರಂಭಿಸಿತು. ಮೇಲೇರುತ್ತಿದ್ದಂತೆ ಛಾವಣಿಗೆ ತಗುಲಿ ಸ್ವಲ್ಪ ತಿರುಗಿ ಕೊನೆಗೆ ನೆಲಕ್ಕೆ ಕುಸಿಯಿತು. ಅದು ಒಂದು ಹಗುರ ಕಾರ್ಕ್ ಮರದ ಮತ್ತು ಬಿದಿರಿನ ಕಟ್ಟುಗಳಿಂದ ನಿರ್ಮಿಸಿ ಕಾಗದದಿಂದ ಮುಚ್ಚಲ್ಪಟ್ಟಿದ್ದ ಆಟಿಕೆಯ ಹೆಲಿಕಾಪ್ಟರ್ ಆಗಿತ್ತು. ಇದರಿಂದ ಸ್ಫೂರ್ತಿಗೊಂಡ ವಿಲ್ಬರ್ ಮತ್ತು ಆರ್ವಿಲ್ ಆ ಆಟಿಕೆಯಂತೆ ಆದೇ ರೀತಿ ಕೆಲವು ನಕಲುಗಳನ್ನು ಸೃಷ್ಟಿಸಿ ಹಾರಿಸಿದರು.

1884ರಲ್ಲಿ ಆಗತಾನೆ ಪ್ರೌಢಶಾಲೆಯನ್ನು ಮುಗಿಸಿದ ವಿಲ್ಬರ್, ಕ್ಷಯರೋಗಕ್ಕೆ ತುತ್ತಾದ ತನ್ನ ತಾಯಿಯ ಶುಶ್ರೂಷೆಗೆಂದು ಕಾಲೇಜು ಶಿಕ್ಷಣ ತ್ಯಜಿಸಿದನು. ಪ್ರೌಢಶಾಲೆಯಲ್ಲಿದ್ದ ತಮ್ಮನಾದ ಆರ್ವಿಲ್ ಕೂಡ ಶಾಲೆಯನ್ನು ತ್ಯಜಿಸಿ, ಒಂದು ಮುದ್ರಣ ಅಂಗಡಿಯನ್ನು ಸ್ಥಾಪಿಸಿದನು. 1890ರಲ್ಲಿ ಅಣ್ಣ ವಿಲ್ಬರ್ 'ವೆಸ್ಟ್ ಸೈಡ್ ನ್ಯೂಸ್' ಎಂಬ ವಾರಪತ್ರಿಕೆಯನ್ನು ಪ್ರಾರಂಭಿಸಿ, ಸಂಪಾದಕನಾಗಿ ಕಾರ್ಯನಿರ್ವಹಿಸ ತೊಡಗಿದನು. ಆದರೆ ದೊಡ್ಡ ದಿನಪತ್ರಿಕೆಗಳ ಪ್ರತಿಸ್ಪರ್ಧೆಯನ್ನು ಎದುರಿಸಲಾಗದೆ ಇದನ್ನು ಕೈಬಿಡಬೇಕಾಯಿತು. ಇಬ್ಬರೂ ಪ್ರೌಢಶಾಲಾ ಶಿಕ್ಷಣ ಮುಗಿಸದಿದ್ದರೂ ಹೊಸ ವಿಷಯಗಳನ್ನು ತಿಳಿಯಲು ಬಹಳ ಆಸಕ್ತಿ ಹೊಂದಿದ್ದರು. ಹೀಗಾಗಿ ತಮ್ಮ ಆಸಕ್ತಿಗೆ ಅನುಗುಣವಾಗಿಯೇ ಹಾರುವ ಯಂತ್ರಗಳ ಬಗ್ಗೆ ಬಹಳವಾದ ಮಾಹಿತಿಗಳನ್ನು ತಮ್ಮ ಪತ್ರಿಕೆಯಲ್ಲಿ ಪ್ರಕಟಿಸುತ್ತಿದ್ದರು. ಇದೇ ಚಿಂತೆಯಲ್ಲಿದ್ದ ವಿಲ್ಬರ್ ಮತ್ತು ಆರ್ವಿಲ್ ಆ ಪುರಾತನ ಹಾರುವ ಯಂತ್ರಗಳಿಗೆ ಅಗತ್ಯವಾದ ನಿಯಂತ್ರಣವಿಲ್ಲದಿರುವುದನ್ನು ಗಮನಿಸಿದರು. ಬೈಸಿಕಲ್ ಸವಾರನು ಬೈಸಿಕಲ್ಲನ್ನು ನಿಯಂತ್ರಿಸುತ್ತಾ ರಸ್ತೆಯ ಮೇಲೆ ಹೇಗೆ ಸಮತೋಲನವಾಗಿ ಚಲಿಸುತ್ತಾನೋ ಅದೇ ರೀತಿ ವಿಮಾನವನ್ನು ಗಾಳಿಯಲ್ಲಿ ನಿಯಂತ್ರಿಸಿ ಹಾರಿಸಬಹುದೇ ಎಂದು ಅಲೋಚಿಸತೊಡಗಿದರು.

1893ರಲ್ಲಿ ಸಹೋದರರಿಬ್ಬರೂ ತಮ್ಮ ತವರೂರಾದ ಓಹಿಯೊದ ಡೆಟೊನ್‍ನಲ್ಲಿ 'ರೈಟ್ ಸೈಕಲ್ ಕಂಪನಿ' ಎಂಬ ಮಳಿಗೆಯನ್ನು ತೆರೆದು ಅಲ್ಲಿ ಸೈಕಲ್‍ಗಳ ಮಾರಾಟ ಮತ್ತು ರಿಪೇರಿ ಮಾಡಲಾರಂಭಿಸಿದರು. ಆದರೆ ಹಿಂದಿನಿಂದಲೂ ವಿಮಾನಗಳ ಬಗ್ಗೆ ಹೆಚ್ಚು ಆಸಕ್ತಿ ಇದ್ದ ಬಾಲಕರ ದೃಷ್ಟಿಕೋನ 1896ರ ವೇಳೆಗೆ ಚಕ್ರಗಳನ್ನು ಬಿಟ್ಟು ರೆಕ್ಕೆಗಳೆಡೆಗೆ ಹಾರಿತು. ವಿಲ್ಬರನು ಮಾನವ ಹಾರಾಟದ ಬಗ್ಗೆ ಪುಸ್ತಕಗಳನ್ನು ಹುಡುಕಿ ಅವೆಲ್ಲವನ್ನೂ ಓದಲು ಪ್ರಾರಂಭಿಸಿದ. ಆ ಕಾಲದಲ್ಲಿ ಯೂರೋಪಿನ ಹಲವಾರು ವಿಜ್ಞಾನಿಗಳು ಗಾಳಿಯಲ್ಲಿ ತೇಲುವ ಮಾನವಸಹಿತ ಉಪಕರಣಗಳ ಬಗ್ಗೆ ಅಧ್ಯಯನ ಮತ್ತು ಪರೀಕ್ಷೆಗಳಲ್ಲಿ ತೊಡಗಿದ್ದರು. ಇವರಲ್ಲಿ ಪ್ರಮುಖವಾಗಿ ಜರ್ಮನಿಯ ಬಹಳ ಹೆಸರಾಂತ ವಿಜ್ಞಾನಿಯಾಗಿದ್ದ ಅಟ್ಟೊ ಲಿಲಿಯನ್‍ತಾಲ್ 1896ರಲ್ಲಿ ರೆಕ್ಕೆಗಳನ್ನು ನಿರ್ಮಿಸಿ ಅದರ ಸಹಾಯದಿಂದ ಹಕ್ಕಿಗಳಂತೆ ಹಾರಲು ಪ್ರಯತ್ನಿಸಿ ಅಸುನೀಗಿದನು. ಅಟ್ಟೊ ಲಿಲಿಯನ್‍ತಾಲ್ ಹದಿನೆಂಟು ಮಾದರಿಯ ಗ್ಲೈಡರ್‍ಗಳನ್ನು ವಿನ್ಯಸಿಸಿದ್ದನು. ಐದು ವರ್ಷಗಳ ಅವಧಿಯಲ್ಲಿ ಈತನು ಸುಮಾರು ಎರಡು ಸಾವಿರಕ್ಕಿಂತಲೂ ಹೆಚ್ಚು ಹಾರಾಟ ಪ್ರಯತ್ನಗಳನ್ನು ಮಾಡಿದನು ಎಂದು ಹೇಳಲಾಗಿದೆ. 

1899ರ ವೇಳೆಗೆ ವಿಲ್ಬರ್ ಈ ವಿಷಯಗಳಿಗೆ ಸಂಬಂಧಿಸಿದ ಮಾಹಿತಿಗಳಿಗಾಗಿ ಅನೇಕ ಗ್ರಂಥಗಳನ್ನು ಅಧ್ಯಯನ ಮಾಡಿ, 30 ಮೇ 1899ರಲ್ಲಿ ಹೆಚ್ಚಿನ ಅಧ್ಯಯನಕ್ಕೆ ಅವಕಾಶ ನೀಡಬೇಕೆಂದು ಸ್ಮಿತ್ಸೋನಿಯನ್ ಸಂಸ್ಥೆಯನ್ನು ಕೇಳಿಕೊಂಡನು. ಸುಮಾರು ಒಂದು ತಿಂಗಳ ನಂತರ 1899ರ ಬೇಸಿಗೆಯಲ್ಲಿ ಸಹೋದರರಿಬ್ಬರೂ ಎರಡು ಜೊತೆ ರೆಕ್ಕೆಗಳಿರುವ ತಮ್ಮ ಮೊದಲ ಹಾರುವ ಪಟವನ್ನು ತಯಾರಿಸಿದರು. ಈ ನೂತನ ವಿನ್ಯಾಸದ ಹಾರುಪಟದ ಹಾರಾಟದ ಫಲಿತಾಂಶ ತೃಪ್ತಿಕರವಾಗಿದ್ದಿರಬೇಕು. ಏಕೆಂದರೆ, ನವೆಂಬರ್ 1899ರಲ್ಲಿ ವಿಲ್ಬರನು ಅಮೆರಿಕದ ಹವಾಮಾನ ಕೇಂದ್ರಕ್ಕೆ ಪತ್ರ ಬರೆದು ಚಿಕಾಗೋ ಪ್ರದೇಶದಲ್ಲಿನ ವಾಯುಚಲನೆಯ ಬಗ್ಗೆ ಮಾಹಿತಿಯನ್ನು ಯಾಚಿಸಿದ್ದನು. ಆ ಪತ್ರದಲ್ಲಿ ಅವರು ಮಾನವರನ್ನು ಹೊರಬಲ್ಲಂತಹ ಗಾಳಿಪಟವನ್ನು ಹಾರಿಸಲು ಉದ್ದೇಶಿಸಿರುವುದಾಗಿ ಉಲ್ಲೇಖಿಸಲಾಗಿತ್ತು.
ಆಗಸ್ಟ್ 1900ರಲ್ಲಿ ರೈಟ್ ಸಹೋದರರು ತಮ್ಮ ಯೋಜನೆಯನ್ನು ಬದಲಿಸಿ ಉತ್ತರ ಕರೊಲಿನಾದ ಕಿಟ್ಟಿಹಾಕ್‍ಗೆ ಹೊರಡಲು ನಿರ್ಧರಿಸಿದರು. ಇಲ್ಲಿನ ಅಟ್ಲಾಂಟಿಕ್ ಸಮುದ್ರ ತೀರವು ಒಳ್ಳೆಯ ಗಾಳಿಯಿಂದ ಕೂಡಿದ್ದು ಮೆತ್ತನೆಯ ಮರಳಿನಿಂದಾಗಿ ಹಾರುಪಟಗಳನ್ನು ಇಳಿಸಲು ಅನುಕೂಲವಾಗಿತ್ತು. ಈ ಹೊತ್ತಿಗೆ ಅವರು ಸಿದ್ಧಪಡಿಸಿದ ತಮ್ಮ ಮೊದಲ ಪೂರ್ಣ ಗಾತ್ರದ ಹಾರುಪಟಕ್ಕೆ ಅಟ್ಟೊ ಲಿಲಿಯನ್‍ತಾಲ್ ನಿರೂಪಿಸಿದ್ದ ವೈಜ್ಞಾನಿಕ ಮಾಹಿತಿಗಳನ್ನು ಬಳಸಿ ಈ ಪಟದ ಗಾತ್ರ ಮತ್ತು ವಿನ್ಯಾಸವನ್ನು ರೂಪಿಸಿದರು.

1900ನೇ ಇಸವಿ ಸೆಪ್ಟೆಂಬರ್ 6ನೇ ದಿನಾಂಕದಂದು ವಿಲ್ಬರ್ ಡೆಟೊನ್ ಬಿಟ್ಟು ಉತ್ತರ ಕರೊಲಿನಕ್ಕೆ ಪ್ರಯಾಣ ಬೆಳೆಸಿದನು. ಆದರೆ ಆರ್ವಿಲ್ ಡೆಟೊನ್‍ನಲ್ಲಿಯೇ ಉಳಿದು ತಮ್ಮ ಸೈಕಲ್ ವ್ಯವಹಾರವನ್ನು ನೋಡಿಕೊಂಡು, ನಂತರ ಒಂದು ತಿಂಗಳ ಹೊತ್ತಿಗೆ ವಿಲ್ಬರ್‍ನನ್ನು ಸೇರಲು ನಿರ್ಧರಿಸಿದನು. ಸೆಪ್ಟೆಂಬರ್ 28ರಂದು ಆರ್ವಿಲ್ ಕಿಟ್ಟಿಹಾಕ್‍ಗೆ ಬಂದಾಗ ವಿಲ್ಬರನು ಒಂದು ಗ್ಲೈಡರ್‍ನ ರಚನೆಯನ್ನು ಬಹುತೇಕ ಪೂರ್ಣಗೊಳಿಸಿದ್ದ. ಈ ಹಾರಾಟ ಸಾಧನದ ರೆಕ್ಕೆಯ ಆಯಕಟ್ಟನ್ನು ಬೂದಿ ಮರದಿಂದ ನಿರ್ಮಿಸಿ, ಅದರ ಕವಚಕ್ಕೆ ಉತ್ಕೃಷ್ಟ ಗುಣಮಟ್ಟದ ಫ್ರೆಂಚ್ ಸ್ಯಾಟಿನ್ ಬಟ್ಟೆಯನ್ನು ಬಳಸಲಾಗಿತ್ತು. ಗ್ಲೈಡರ್‍ನ ಇತರ ಭಾಗಗಳನ್ನು ಬಿಳಿಯ ಪೈನ್ ಮರದಿಂದ ನಿರ್ಮಿಸಲಾಗಿತ್ತು. ಇದರ ರೆಕ್ಕೆಯು 17 ಅಡಿ ಉದ್ದ ಮತ್ತು 5 ಅಡಿ ಅಗಲ ವಿಸ್ತೀರ್ಣ ಹೊಂದಿತ್ತು. ಕೆಳ ರೆಕ್ಕೆಯ ಮಧ್ಯಭಾಗದಲ್ಲಿ ಒಬ್ಬ ವ್ಯಕ್ತಿಯು ಮಲಗಲು ಸ್ಥಳವನ್ನು ಮಾಡಲಾಗಿತ್ತು. ಸಹೋದರರಲ್ಲಿ ಒಬ್ಬರನ್ನು ಹೊತ್ತ ಈ ಗ್ಲೈಡರ್‍ನ ಒಟ್ಟಾರೆ ತೂಕ 190 ಪೌಂಡುಗಳಾಗಿತ್ತು (86.4 ಕೆ.ಜಿ).
ಅದೇ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಮಾನವನನ್ನು ಹೊತ್ತೊಯ್ಯಬಲ್ಲ ಈ ಪಟವನ್ನು ಸಹೋದರರು ಹಾರಿಸಿದರು. ಆದರೆ ಒಬ್ಬ ಮನುಷ್ಯನನ್ನು ಹೊರಲು ಗಾಳಿಯಲ್ಲಿ ಸಾಕಷ್ಟು ಶಕ್ತಿ ಇಲ್ಲದಿರುವುದನ್ನು ಅರಿಯಲು ಅವರಿಗೆ ಹೆಚ್ಚು ಸಮಯ ಬೇಕಾಗಲಿಲ್ಲ. ಗಂಟೆಗೆ 15 ರಿಂದ 20 ಮೈಲಿಗಳ ವೇಗದ ಗಾಳಿಯಲ್ಲಿ, ಒಬ್ಬ ವ್ಯಕ್ತಿಯನ್ನು ಹೊತ್ತೊಯ್ಯಬಲ್ಲದ್ದಾಗಿದ್ದ ಈ ಸಾಧನವು ಗಾಳಿಪಟದ ರೀತಿಯಲ್ಲಿ ಹಾರುವಂತೆ ವಿನ್ಯಾಸಗೊಳಿಸಲಾಗಿತ್ತು. ಕೆಲವು ಪರೀಕ್ಷೆಗಳ ನಂತರ, ಮಾನವನನ್ನು ಹೊರಲು ಅತಿಹೆಚ್ಚು ಗಾಳಿಯ ವೇಗ ಬೇಕಾಗುತ್ತದೆ ಎಂದು ಅರಿತ ಅವರು ಮೊದಲಿಗೆ ಮಾನವರಹಿತ ಹಾರಾಟ ಸಾಧನವನ್ನು ಭೂಮಿಯಿಂದಲೇ ಹಗ್ಗಗಳ ಸಹಾಯದಿಂದ ನಿಯಂತ್ರಿಸಲು ನಿರ್ಧರಿಸಿದರು. ಹೀಗೆ ತಾವು ವಿನ್ಯಾಸಪಡಿಸಿ ಅಭಿವೃದ್ಧಿಗೊಳಿಸಿದ, ಮಾನವರಹಿತವಾಗಿ ಗಾಳಿಪಟದಂತೆ ಹಾರುವ ಸಾಧನವನ್ನು ಪರೀಕ್ಷಿಸುವಲ್ಲಿ ಅವರು ಯಶಸ್ವಿಯಾದರು. ಆದರೆ ಈ ಹಾರಾಟ ಸಾಧನವು ಅತಿ ಹೆಚ್ಚು ಗಾಳಿಯ ಹೊಡೆತಕ್ಕೆ ಸಿಕ್ಕಿ ಭಿನ್ನವಾಯಿತು. 10 ಜುಲೈ 1901 ರಂದು ಸಹೋದರರು ಮರಳಿ ಕಿಟ್ಟಿಹಾಕ್‍ಗೆ ಬಂದು ತಮ್ಮ ಮತ್ತೊಂದು ಹೊಸ ಹಾರಾಟ ಸಾಧನವನ್ನು ಅಭಿವೃದ್ಧಿಗೊಳಿಸಿದರು. ಈ ಹೊಸ ವಿನ್ಯಾಸದ, ಮಾನವನು ಹಾರಬಹುದಾದ ಗ್ಲೈಡರ್‍ನ ಆಕಾರವು ಈ ಹಿಂದೆ ಅಭಿವೃದ್ಧಿಪಡಿಸಿದ್ದ ಹಾರಾಟ ಸಾಧನಕ್ಕಿಂತ ಬಹುತೇಕ ದುಪ್ಪಟ್ಟಾಗಿತ್ತು. ಹೀಗೆ ಬದಲಾದ ವಿನ್ಯಾಸದೊಡನೆ ಸಿದ್ಧವಾದ ಗ್ಲೈಡರನ್ನು ಜುಲೈ 27ರಂದು ಹಾರಿಸಲು ಪ್ರಯತ್ನಿಸಿದರು. ಮೊದಲ ಕೆಲವು ಪ್ರಯತ್ನಗಳು ವಿಫಲವಾಗಿ ಗ್ಲೈಡರ್ ನೆಲಕ್ಕೆ ಕುಸಿಯಿತು

ಸಹೋದರರಿಬ್ಬರೂ ಸೇರಿ ಇನ್ನೊಂದು ಪ್ರಯತ್ನದಲ್ಲಿ ವಿಭಿನ್ನ ವಿನ್ಯಾಸದ ರೆಕ್ಕೆಗಳನ್ನು ನಿರ್ಮಿಸಿ ಹಾರಿಸಿದಾಗ ಆ ಗ್ಲೈಡರ್ 389 ಅಡಿಗಳಷ್ಟು ದೂರ ಕ್ರಮಿಸಿ ಅತ್ಯುತ್ತಮ ಫಲಿತಾಂಶ ದೊರಕಿತು. 

ಮುಂದೆ 1900 ಮತ್ತು 1901ರ ಘಟನೆಗಳನ್ನು ಯೋಚಿಸುತ್ತಾ ಲಿಲಿಯನ್‍ತಾಲ್‍ನ ಲೆಕ್ಕಾಚಾರದ ಪಟ್ಟಿಯೆಲ್ಲಾ ತಪ್ಪೆಂಬ ನಿರ್ಧಾರಕ್ಕೆ ಬಂದರು. ಲಿಲಿಯನ್‍ತಾಲ್‍ನು ಹಾರುವ ಸಾಧನಗಳ ಮೇಲೆ ಬೀಳುವ ಒತ್ತಡಗಳನ್ನು ಚೆನ್ನಾಗಿ ಅರಿತ ಒಬ್ಬ ಅಂತಾರಾಷ್ಟ್ರೀಯ ವಿಜ್ಞಾನಿ ಎಂದು ಹೆಸರು ಪಡೆದಿದ್ದನು. ವಿಲ್ಬರ್ ಒಬ್ಬ ಸಾಧಾರಣ ಹವ್ಯಾಸಿಯಾದರೂ ಲಿಲಿಯನ್‍ತಾಲ್‍ನು ತನ್ನ ತರ್ಕಶಕ್ತಿಯನ್ನು ಬಳಸಿ ಸಿದ್ಧಪಡಿಸಿದ್ದ ವಿನ್ಯಾಸ ಮಾಹಿತಿಗಳೆಲ್ಲವೂ ನಿಷ್ಫಲವೆಂದು ಅರಿತುಕೊಂಡನು. ಈ ನಿಟ್ಟಿನಲ್ಲಿ ಅನೇಕರು ಮಾಡಿದ್ದ ಪ್ರಯತ್ನಗಳೆಲ್ಲಾ ವ್ಯರ್ಥ ಪ್ರಯತ್ನಗಳೆಂದು ನಿರ್ಧರಿಸಿದ ವಿಲ್ಬರ್ ತನ್ನದೇ ಆದ ಲೆಕ್ಕಾಚಾರಗಳನ್ನು ಮಾಡಲು ಗ್ಲೈಡರ್ ಮಾದರಿಗಳ ಮೇಲೆ ಪ್ರಯೋಗಗಳನ್ನು ಪ್ರಾರಂಭಿಸಿದನು. ವಿಲ್ಬರ್ ಹೀಗೆ ಕೇವಲ ಹವ್ಯಾಸಿಯಾಗಿ ಉಳಿಯದೇ ನಿರ್ದಿಷ್ಟ ಫಲಿತಾಂಶಗಳನ್ನು ನೀಡುವ ತಾರ್ಕಿಕ ವಿಚಾರಗಳನ್ನು ರೂಢಿಸಿಕೊಂಡು, ಹೊಸ ವಿನ್ಯಾಸಗಳಿಗೆ ರೂವಾರಿಯಾಗಿ ಹಾರಾಟ ಕ್ಷೇತ್ರದಲ್ಲಿ ಇಡೀ ಪ್ರಪಂಚವನ್ನೇ ಬದಲಿಸಲು ತಯಾರಾದನು.

1901ರ ಕೊನೆಯಲ್ಲಿ ರೈಟ್ ಸಹೋದರರು ಗ್ಲೈಡರ್‍ನ ರೆಕ್ಕೆಗಳ ತಿರುವುಗಳ ಮೇಲ್ಮೈಯಲ್ಲಿ ಹಾಯುವ ಗಾಳಿಯ ವೇಗವನ್ನು ಬದಲಿಸಿ ಮತ್ತು ಚಲನೆಯ ದಿಕ್ಕನ್ನು ಶೂನ್ಯದಿಂದ ಹಿಡಿದು ತೊಂಬತ್ತು ಡಿಗ್ರಿ ಕೋನಗಳವರೆಗೆ ಬದಲಿಸಿ ನಿಖರವಾದ ಅಂಕಿ ಅಂಶಗಳನ್ನು ಪಡೆಯಲು ಹಲವಾರು ಪ್ರಯೋಗಗಳನ್ನು ಮಾಡಿದರು. ಇದಕ್ಕಾಗಿ ಅವರು ಒಂದು ಉದ್ದನೆಯ ಚೌಕಾಕಾರದ ವಾಯು ಸುರಂಗವನ್ನು ಮರದಲ್ಲಿ ರಚಿಸಿದರು. ಇದರ ಸಹಾಯದಿಂದ ತಾವು ವಿನ್ಯಸಿಸಿದ ರೆಕ್ಕೆಗಳ ಮೇಲೆ ನೂರಾರು ಪ್ರಯೋಗಗಳನ್ನು ಮಾಡಿದರು. ಕೆಲವು ತಿಂಗಳುಗಳೊಳಗೆ ರೆಕ್ಕೆಯನ್ನು ಮೇಲೆತ್ತಿ ಹಿಡಿಯಬಹುದಾದ ಶಕ್ತಿಯ ಬಗೆಗಿನ, ಇಡೀ ವಿಶ್ವದಲ್ಲೇ ಅತ್ಯುತ್ತಮವಾದ ಅಂಕಿ ಅಂಶಗಳು ಈ ಸಹೋದರರ ಕೈಯಲ್ಲಿದ್ದವು. ಈ ಮಾಹಿತಿಗಳನ್ನು ಆಧರಿಸಿ ತಾವುಗಳು ಸಂಪಾದಿಸಿದ ನೂತನ ಜ್ಞಾನದಿಂದ ಅವರು ಒಂದು ವಿಭಿನ್ನ ಗ್ಲೈಡರನ್ನು ತಯಾರಿಸಿದರು ಮತ್ತು ಸೆಪ್ಟಂಬರ್ 1902ರಲ್ಲಿ ತಾವು ನಿರ್ಮಿಸಿದ ಗ್ಲೈಡರನ್ನು ಗಾಳಿಪಟದಂತೆ ಎಚ್ಚರಿಕೆಯಿಂದ ಹಾರಿಸಿದರು. ಇದರ ಹಾರಾಟದಿಂದ ತೃಪ್ತಿಗೊಂಡ ಸಹೋದರರು ಅದಕ್ಕೆ ಕಟ್ಟಿದ್ದ ಹಗ್ಗವನ್ನು ಕತ್ತರಿಸಿ ಗಾಳಿಯಲ್ಲಿ ತೇಲಿಬಿಟ್ಟರು. ಕೆಲವು ದಿನಗಳ ಕಾಲ ಈ ಸಾಧನವನ್ನು ಯಾವುದೇ ತೊಂದರೆಯಿಲ್ಲದೆ 150 ಬಾರಿ ಹಾರಿಸಿದಾಗ ಪ್ರತಿ ಹಾರಾಟದಲ್ಲೂ ಯಂತ್ರವು ಸುರಕ್ಷಿತವಾಗಿ ಭೂಮಿಗೆ ಬಂದಿಳಿಯಿತು.
1902ನೇ ಇಸವಿ ಅಕ್ಟೋಬರ್ 23ನೇ ದಿನಾಂಕದಂದು ವಿಲ್ಬರ್ ತನ್ನ ಗ್ಲೈಡರ್‍ನಲ್ಲಿ ಕುಳಿತು ಇಪ್ಪತ್ತಾರು ಸೆಕೆಂಡುಗಳ ಕಾಲ ಆಗಸದಲ್ಲಿ ತೇಲಿ 622.5 ಅಡಿಗಳಷ್ಟು ದೂರ ಕ್ರಮಿಸಿದನು. ಆಗ ಇದೊಂದು ಅತಿ ದೊಡ್ಡ ಹಾರುವ ಸಾಧನವಾಗಿತ್ತು. ಇದು ಉರುಳು, ಏರಿಳಿತ ಮತ್ತು ಪಾಶ್ರ್ವತಿರುವು ನಿಯಂತ್ರಣಗಳನ್ನು ಹೊಂದಿದ ಪ್ರಥಮ ಗ್ಲೈಡರ್ ಆಗಿತ್ತು. ಹೆಚ್ಚು ಕಾಲ ಗಾಳಿಯಲ್ಲಿ ತೇಲಿ, ಅತಿ ಹೆಚ್ಚು ವಾಯುವೇಗದಲ್ಲಿ ಸುರಕ್ಷಿತವಾಗಿ ಕೆಳಗಿಳಿದುದರಿಂದ ಇದೊಂದು ದಾಖಲೆ ಸೃಷ್ಟಿಸಿತು. 

ಆದರೆ ಈ ಗ್ಲೈಡರ್ ಸುಮ್ಮನೆ ಗಾಳಿಯಲ್ಲಿ ತೇಲುವುದರಿಂದ ಏನೂ ಸಾಧಿಸಿದಂತಾಗುವುದಿಲ್ಲ ಎಂದು ತಿಳಿದ ಸಹೋದರರು ಯಂತ್ರಶಕ್ತಿಚಾಲಿತ ಹಾರುವ ಸಾಧನವನ್ನು ನಿರ್ಮಿಸುವ ಕನಸನ್ನು ಹೊತ್ತು ಕಿಟ್ಟಿಹಾಕ್ ಬಿಟ್ಟು ಡೆಟೊನ್‍ಗೆ ಮರಳಿದರು.
ಡೆಟೊನಿನಲ್ಲಿ ರೈಟ್ ಸಹೋದರರಿಬ್ಬರೂ ಪೆಟ್ರೋಲ್‍ನಿಂದ ಚಲಿಸುವ, 80 ಕೆಜಿಗಿಂತ ಕಡಿಮೆ ತೂಕವುಳ್ಳ ಹಾಗೂ ಕಡಿಮೆ ಕಂಪನವುಳ್ಳ ಒಂದು ಎಂಜಿನನ್ನು ಹುಡುಕಲು ಪ್ರಾರಂಭಿಸಿದರು. ಇಂತಹ ಎಂಜಿನ್ ಮಾರುಕಟ್ಟೆಯಲ್ಲಿ ಲಭಿಸುವುದಿಲ್ಲವೆಂದು ಅರಿತು ತಾವೇ ಒಂದು ಸ್ವಂತ ಎಂಜಿನ್ನನ್ನು ತಯಾರಿಸಲು ನಿರ್ಧರಿಸಿ, ಯಂತ್ರಗಳ ತಯಾರಿಕೆಯಲ್ಲಿ ನಿಪುಣನಾದ ಚಾರ್ಲಿ ಟೇಲರನನ್ನು ತಮ್ಮ ಸಹಾಯಕ್ಕೆ ಕರೆದರು. ಫೆಬ್ರವರಿ 1903ರ ಹೊತ್ತಿಗೆ ಈ ಮೂವರೂ ಸೇರಿ, ತಮ್ಮ ಬೈಸಿಕಲ್ ಕಾರ್ಯಾಗಾರದಲ್ಲಿ 12 ಅಶ್ವ ಶಕ್ತಿಯುಳ್ಳ ಹಾಗೂ 81.36 ಕೆ.ಜಿ. ತೂಕವುಳ್ಳ ಒಂದು ಎಂಜಿನ್ನನ್ನು ತಯಾರಿಸಿದರು. ಇದರೊಂದಿಗೆ ಒಂದು ಪ್ರೊಪೆಲರನ್ನು ಕೂಡ ತಾವೇ ತಯಾರಿಸಬೇಕಾಯಿತು. ಸಹೋದರರಿಬ್ಬರೂ ಕೂಡಿ ಹಾರುವ ಯಂತ್ರದ ಈ ಪ್ರಮುಖ ಅಂಗವನ್ನು ನಿರ್ಮಿಸಲು ಪ್ರಯೋಗಮಾಡುವುದರಲ್ಲಿ ಹಲವಾರು ವಾರಗಳನ್ನು ಕಳೆದರು. ಕೊನೆಗೆ ಜೂನ್ ತಿಂಗಳಿನಲ್ಲಿ 8.5 ಅಡಿಯ ಒಂದು ಪ್ರೊಪೆಲರನ್ನು ತಯಾರಿಸಿದರು. 25 ಸೆಪ್ಟಂಬರ್ 1903ರಂದು ವಿಲ್ಬರ್ ಮತ್ತು ಆರ್ವಿಲ್ ಕಿಟ್ಟಿಹಾಕ್‍ಗೆ ಹಿಂತಿರುಗಿ ಅವರು ತಯಾರಿಸಿದ ರೆಕ್ಕೆಯು 40.4 ಅಡಿ ಉದ್ದ ಮತ್ತು 6.6 ಅಡಿ ಅಗಲವಿತ್ತು. ಎಂಜಿನ್, ಪ್ರೊಪೆಲರ್ ಮತ್ತು ಸರಪಳಿಗಳು ಸೇರಿದ ಮಾನವರಹಿತವಾದ ಈ ಹಾರುಯಂತ್ರದ ಒಟ್ಟು ತೂಕ 275 ಕೆ.ಜಿ ಆಗಿತ್ತು. 

ಪ್ರಪ್ರಥಮವಾದ ವಿಮಾನವೆಂದು ಕರೆಯಬಹುದಾದ ಈ ಮೊಟ್ಟಮೊದಲ ಯಂತ್ರಚಾಲಿತ ಹಾರುವ ಯಂತ್ರವನ್ನು ಆಗಸಕ್ಕೆ ಏರಿಸಲು ಸಹೋದರರಿಬ್ಬರೂ ಸಿದ್ಧರಾಗಿ 13 ಡಿಸೆಂಬರ್ 1903 ಸೋಮವಾರದಂದು ತಮ್ಮ ಈ ವಿಮಾನವನ್ನು ಹಾರಿಸಲು ನಿರ್ಧರಿಸಿ ಅದನ್ನು ಹೊತ್ತೊಯ್ದು ಪಥದ ಮೇಲಿರಿಸಿದರು. ತಮ್ಮಲ್ಲಿ ಮೊದಲು ಯಾರು ಹಾರುವುದೆಂದು ನಿರ್ಧಿರಿಸಲು ಒಂದು ನಾಣ್ಯವನ್ನು ಚಿಮ್ಮಿದ ನಂತರ ವಿಲ್ಬರನಿಗೆ ಮೊಟ್ಟ ಮೊದಲ ಹಾರಾಟದ ಅದೃಷ್ಟ ದೊರಕಿತು. ವಿಮಾನವು ಮೊದಲು ನೆಲದ ಪಥದಲ್ಲಿ ಚಲಿಸುತ್ತಿದ್ದಂತೆ ಎಂಜಿನ್ನಿನ ಮತ್ತು ಪ್ರೊಪೆಲರ್‍ನ ಸಹಾಯದಿಂದ ಹಾರಲಾರಂಭಿಸಿತು; ಆದರೆ ತಕ್ಷಣ ನೆಲಕ್ಕೆ ಕುಸಿಯಿತು. ಇದರಿಂದ ವಿಮಾನಕ್ಕೆ ಸ್ವಲ್ಪಮಟ್ಟಿನ ಹಾನಿಯಾದರೂ ಅದನ್ನು ಶುಕ್ರವಾರದೊಳಗೆ ಸರಿಪಡಿಸಲಾಯಿತು. ಸಹೋದರರಿಬ್ಬರೂ ಸ್ವಲ್ಪ ಮಟ್ಟಿಗೆ ನಿರಾಶರಾದರೂ, ತಮ್ಮ ಕನಸು ಕೈಗೆಟಕುವುದೆಂದು ಅರಿತಿದ್ದರು.

17 ಡಿಸೆಂಬರ್ 1903ರಂದು ಇಡೀ ವಿಶ್ವವೇ ಎಂದೆಂದಿಗೂ ಮರೆಯಲಾರದ ಸುದಿನ. ಅಂದು ಬೆಳಗ್ಗೆ 10.35 ಗಂಟೆಯ ವೇಳೆಗೆ ರೈಟ್ ಸಹೋದರರು ತಮ್ಮ ಕನಸನ್ನು ಸಾಕಾರಗೊಳಿಸಿದರು. ಅಂದು ಆರ್ವಿಲ್ ವಿಮಾನದಲ್ಲಿ ಮೊದಲು ಹಾರಿದನು. ವಿಮಾನವು ಹಾರುವಾಗ ಬಹಳ ಅಡ್ಡಾದಿಡ್ಡಿಯಾಗಿ ಮೇಲಕ್ಕೂ ಕೆಳಕ್ಕೂ ಹಾರುತ್ತ ಸಾಗಿತು. ಬಹುಶಃ ಒಂದೇ ಸಮನೆ ಗಾಳಿ ಬೀಸದಿದ್ದುದು ಒಂದು ಕಾರಣವಾದರೆ, ಅವನಿಗೆ ವಿಮಾನವನ್ನು ನಿಯಂತ್ರಿಸುವುದರಲ್ಲಿ ಅನುಭವವಿಲ್ಲದಿರುವುದು ಮತ್ತೊಂದು ಕಾರಣವಾಯಿತು. ವಿಮಾನವು ಒಂದು ಸೆಕೆಂಡಿಗೆ 45 ಅಡಿಗಳಷ್ಟು ದೂರ ಹಾರಿ, ಒಟ್ಟು 12 ಸೆಕೆಂಡುಗಳು ಹಾರಾಟ ನಡೆಸುವಲ್ಲಿ ಸಫಲವಾಯಿತು. ಮಾನವನನ್ನು ಹೊತ್ತ ಈ ಯಂತ್ರಚಾಲಿತ ವಿಮಾನ ತನ್ನ ಯಂತ್ರಶಕ್ತಿಯಿಂದಲೇ ಮೇಲಕ್ಕೆ ಏರಿ ಒಂದು ಇತಿಹಾಸವನ್ನೇ ನಿರ್ಮಿಸಿತು.

ಇಪ್ಪತ್ತು ನಿಮಿಷಗಳ ವಿಶ್ರಾಂತಿಯ ನಂತರದ ಎರಡನೆಯ ಹಾರಾಟವು ಬಹುತೇಕ ಹಿಂದಿನ ಹಾರಾಟದಂತೇ ಬಹಳ ಏರಿಳಿತಗಳಿಂದ ಕೂಡಿತ್ತು. ಈ ಬಾರಿ ಗಾಳಿಯ ವೇಗ ಸ್ವಲ್ಪ ಕಡಿಮೆ ಇದ್ದುದರಿಂದ ವಿಮಾನವು ಸ್ವಲ್ಪ ಸಲೀಸಾಗಿ ಹಾರಿತು; ಮೊದಲ ಹಾರಾಟಕ್ಕಿಂದ 75 ಅಡಿಗಳಷ್ಟು ಹೆಚ್ಚು ದೂರ ಹಾರಾಟ ನಡೆಸಿತು. ಆರ್ವಿಲ್ ಮತ್ತೊಮ್ಮೆ ಪ್ರಯತ್ನಿಸಲು ಇಚ್ಛಿಸಿ ಒಂದು ಗಂಟೆಯ ನಂತರ ನಡೆಸಿದ ಹಾರಾಟ ಸ್ವಲ್ಪ ಮಟ್ಟಿಗೆ ಅಪಾಯಕಾರಿಯೇ ಆಗಿತ್ತು. ಪ್ರಾರಂಭದಲ್ಲಿ, ಮೊದಲ ಪ್ರಯತ್ನಗಳಿಗಿಂತ ವಿಮಾನವು ಹೆಚ್ಚು ಅಲುಗಾಡದೆ ನಿಯಂತ್ರಣದಲ್ಲಿತ್ತು. ಆದರೇ ಮುಂದೆ ಹೋಗುತ್ತಿದ್ದಂತೆ ತಕ್ಷಣ ಬೀಸಿದ ಭಾರೀ ಗಾಳಿಯು ತನ್ನ ಹೊಡೆತದಿಂದ ಬಲಬದಿಯ ರೆಕ್ಕೆಯನ್ನು ಹನ್ನೆರಡರಿಂದ ಹದಿನೈದು ಅಡಿಗಳವರೆಗೆ ಮೇಲಕ್ಕೆತ್ತಿ ವಿಮಾನವು ಪೂರ್ಣ ವಾಲುವಂತೆ ಮಾಡಿತು. ಆರ್ವಿಲ್‍ನು ವಿಮಾನವನ್ನು ನಿಯಂತ್ರಿಸಲು ಪ್ರಯತ್ನ ಪಟ್ಟಾಗ ತಾನು ಅಂದುಕೊಂಡಿದ್ದಕ್ಕಿಂತ ಹೆಚ್ಚು ನಿಯಂತ್ರಣ ಪಡೆಯುವಲ್ಲಿ ಸಫಲನಾಗಿ ವಿಮಾನವನ್ನು ಬೇಗನೆ ಧರೆಗಿಳಿಸಿದನು. ಆದರೆ ಬಲ ರೆಕ್ಕೆಯು ಸ್ವಲ್ಪ ಕೆಳಕ್ಕೆ ವಾಲಿದ್ದರಿಂದ ಅದು ಮೊದಲು ಭೂಸ್ಪರ್ಶ ಮಾಡಿತು. ಈ ಬಾರಿ ವಿಮಾನವು 15 ಸೆಕೆಂಡುಗಳ ಕಾಲ ಆಗಸದಲ್ಲಿದ್ದು 200 ಅಡಿಗಳವರೆಗೆ ಹಾರುವಲ್ಲಿ ಯಶಸ್ವಿಯಾಯಿತು. ಪುನಃ ಮಧ್ಯಾಹ್ನದ ವೇಳೆಗೆ ವಿಲ್ಬರನು ಅಂದಿನ ನಾಲ್ಕನೆಯ ಮತ್ತು ಅಂತಿಮ ಹಾರಾಟವನ್ನು ನಡೆಸಿದನು. ಮೊದಲ ನೂರು ಅಡಿಗಳ ದೂರದವರೆಗಿನ ಹಾರಾಟವು ಸ್ವಲ್ಪ ಏರಿಳಿತದಿಂದ ಕೂಡಿದ್ದರೂ ಕ್ರಮೇಣ 300 ಅಡಿ ದೂರವನ್ನು ಕ್ರಮಿಸಿದಾಗ ವಿಮಾನವು ಬಹುತೇಕ ನಿಯಂತ್ರಣದಲ್ಲಿತ್ತು. ವಿಮಾನವು ನೆಲಕ್ಕಿಳಿಯುವ ಹೊತ್ತಿಗೆ 59 ಸೆಕೆಂಡುಗಳ ಕಾಲ ಹಾರಿದ್ದು ಅದು ಕ್ರಮಿಸಿದ ದೂರವನ್ನು ಅಳೆದಾಗ ಅದು 852 ಅಡಿಗಳಾಗಿತ್ತು. ಆಹಾ ಅದೆಂತಹ ದಿನ. ಆ ಡಿಸೆಂಬರ್ ತಿಂಗಳಿನಲ್ಲಿ ಈ ಇಬ್ಬರು ಯುವಕರು ಇಡೀ ಪ್ರಪಂಚವನ್ನೇ ಚಿಕ್ಕದಾಗಿಸಿ ಮಾನವನ ಜೀವನದ ಹಾದಿಯನ್ನು ಬದಲಿಸಿ ಹಕ್ಕಿಗಳಂತೆ ಆಗಸದಲ್ಲಿ ಹಾರಾಡಿ ಒಂದು ಚಿರ ಇತಿಹಾಸವನ್ನೇ ಸೃಷ್ಟಿಸುವಲ್ಲಿ ಸಫಲರಾದರು. ಆದರೆ ವಿಲ್ಬರನು ಸುರಕ್ಷಿತವಾಗಿ ಧರೆಗಿಳಿದ ಮೇಲೆ ದುರದೃಷ್ಟವಶಾತ್ ಇದ್ದಕ್ಕಿದ್ದಂತೆ ಗಾಳಿಯು ರಭಸವಾಗಿ ಬೀಸಿ ವಿಮಾನವನ್ನು ಅಡ್ಡಾದಿಡ್ಡಿ ಎಳೆದೊಯ್ಯಿತು. ಅಲ್ಲಿದ್ದ ಜನರು ಅದನ್ನು ರಕ್ಷಿಸಲು ಧಾವಿಸಿದರಾದರೂ ಸಫಲರಾಗದೆ ವಿಮಾನದ ರೆಕ್ಕೆಗಳು ಮುರಿದು ಅದರ ಎಂಜಿನ್ ಹಾಳಾಗಿ ವಿಮಾನಕ್ಕೆ ಬಳಸಿದ್ದ ಸಲಾಕೆಗಳು ಬಾಗಿದವು. ಈ ಸ್ಥಿತಿಯನ್ನು ಕಂಡ ಸಹೋದರರಿಬ್ಬರಿಗೂ ಆ ವರ್ಷದಲ್ಲಿ (1903) ಇನ್ನಾವುದೇ ಹಾರಾಟ ಮಾಡಲು ಅಸಾಧ್ಯವೆಂದು ತಕ್ಷಣ ಅರಿತುಕೊಂಡರು. 17 ಡಿಸೆಂಬರ್ 1903ರಂದು ಆರ್ವಿಲ್ ತನ್ನ ಪ್ರಪ್ರಥಮ ಯಶಸ್ವಿ ಹಾರಾಟ ನಡೆಸಿದಾಗ ತನ್ನ ಸಹೋದರ ವಿಲ್ಬರ್‍ನನ್ನು ಹೊರತುಪಡಿಸಿ ಕಿಟ್ಟಿಹಾಕ್‍ನ ಸಮೀಪದಲ್ಲೇ ವಾಸಿಸುತ್ತಿದ್ದ ಕೇವಲ ಐದು ಮಂದಿ ಮಾತ್ರ ಈ ಹಾರಾಟದ ಪ್ರತ್ಯಕ್ಷ ಸಾಕ್ಷಿಗಳಾಗಿದ್ದರು. ಅಂದು ಬಹಳ ಚಳಿಯಾಗಿದ್ದುದರಿಂದ ಈ ಐದು ಜನ ಮಾತ್ರ ಈ ಹಾರಾಟದ ದೃಶ್ಯವನ್ನು ವೀಕ್ಷಿಸಲು ಮುಂದೆ ಬಂದರು.

ಈ ಅದ್ಭುತ ಸಾಧನೆಯನ್ನು ಕಣ್ಣಾರೆ ನೋಡದೆ ಸುಮ್ಮನೆ ಕಿವಿಯಲ್ಲಿ ಕೇಳಿದರೆ ನಂಬುವುದು ಕಷ್ಟವಾಗುತ್ತದೆ. ಆದ್ದರಿಂದ ಆರ್ವಿಲ್ ತನ್ನ ಕ್ಯಾಮರಾವನ್ನು ಅಲ್ಲಿಯೇ ಇದ್ದ ಡೇನಿಯಲ್ಸ್ ಎಂಬುವವರಿಗೆ ಕೊಟ್ಟು ಛಾಯಾಚಿತ್ರವನ್ನು ತೆಗೆಸಿದನು. ಆದರೆ, ಈ ಚಿತ್ರವನ್ನು ನೋಡಿಯೂ ಕೆಲವರು ನಂಬುವುದು ಕಷ್ಟವಾಗಿತ್ತು. ಆದ್ದರಿಂದ ರೈಟ್ ಸಹೋದರರು ಅಸಾಧ್ಯವಾದ ಕಾರ್ಯವನ್ನು ಸಾಧ್ಯವಾಗಿಸಿ, ನಿಯಂತ್ರಣವುಳ್ಳ, ಯಂತ್ರಚಾಲಿತ ವಿಮಾನವನ್ನು ರಚಿಸಿ, ತಾವೇ ಆ ವಿಮಾನದೊಂದಿಗೆ ಹಾರಿ ತಮ್ಮ ಈ ಸಾಧನೆಯನ್ನು ಸಾಬೀತುಪಡಿಸಲು ಹೊರಟರು. ಇದರೊಂದಿಗೆ ತಮ್ಮ ಮುಂದಿನ ವಿಮಾನದ ಬಗ್ಗೆಯೂ ಚಿಂತಿಸತೊಡಗಿದರು.
1903ರಲ್ಲಿ ಅಭಿವೃದ್ಧಿಗೊಳಿಸಿದ್ದ ಈ ವಿಮಾನವು ಹಾರುವುದರಲ್ಲಿ ಸಫಲವಾಗಿದ್ದರೂ, ಸಾಕಷ್ಟು ಶಕ್ತಿಯಿಲ್ಲದೆ ಅದನ್ನು ನಿಯಂತ್ರಿಸುವುದು ಕಷ್ಟವಾಗಿತ್ತು. ಇಷ್ಟಕ್ಕೆ ಸಮಾಧಾನರಾಗದ ರೈಟ್ ಸಹೋದರರು ತಮ್ಮ ಅವಿಷ್ಕಾರವನ್ನು ನಿಖರವಾಗಿ ಹಾಗೂ ದೋಷರಹಿತವಾಗಿ ಮಾಡಬೇಕೆಂದು ಅರಿತು ಡೆಟೊನ್‍ಗೆ ಮರಳಿದರು. ಡೆಟೊನ್‍ನ ಈಶಾನ್ಯ ದಿಕ್ಕಿನಲ್ಲಿರುವ ಹಫ್‍ಮನ್ ಪ್ರೇರಿ ಎಂಬಲ್ಲಿ ಸಹೋದರರಿಬ್ಬರೂ ವಿಶ್ವದಲ್ಲೇ ಮೊಟ್ಟಮೊದಲಾದ ವಿಮಾನ ಪರೀಕ್ಷಣಾ ಘಟಕವನ್ನು ಸ್ಥಾಪಿಸಿದರು (ಈ ಸ್ಥಳವು ಇಂದು ರೈಟ್ ಪ್ಯಾಟರ್ಸನ್ ವಾಯುನೆಲೆಯಾಗಿದೆ). ಎರಡು ವರ್ಷಗಳ ಕಾಲ ಸತತವಾಗಿ ವಿಮಾನವನ್ನು ಹಲವಾರು ಬಾರಿ ಹಾರಿಸಿ ಅದರ ನಿಯಂತ್ರಣ, ಎಂಜಿನ್, ಪ್ರೊಪೆಲರ್ ಮತ್ತು ಇತರ ಭಾಗಗಳನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿ ಸರಿಪಡಿಸುತ್ತಾ ಹೋದರು. ಮೊದಲಿಗೆ ಅವರು ನೇರವಾಗಿ ಕೇವಲ ಒಂದು ನಿಮಿಷ ಕಾಲ ಮಾತ್ರ ಹಾರಬಲ್ಲವರಾಗಿದ್ದರು. 1905ರ ಅಂತ್ಯದ ಹೊತ್ತಿಗೆ ಅವರು ಆಂಗ್ಲ ಅಂಕಿ ಎಂಟರ (8) ಆಕಾರದಲ್ಲಿ ಹಾರಿ, ಸುಮಾರು ಅರ್ಧ ಗಂಟೆಗಳ ಕಾಲ ಆಗಸದಲ್ಲಿರಲು ಸಾಧ್ಯವಾಯಿತು. 1905ರ ವಿಮಾನವು ಸಂಪೂರ್ಣವಾಗಿ ನಿಯಂತ್ರಣಕ್ಕೆ ಒಳಪಟ್ಟು ಹಾರಾಡಬಲ್ಲಂತಹ ವಿಶ್ವದಲ್ಲಿಯೇ ಮೊದಲ ವಿಮಾನವೆನಿಸಿಕೊಂಡಿತು.
ತಮ್ಮ ಈ ಸಾಧನೆಯಿಂದ ರೈಟ್ ಸಹೋದರರಿಬ್ಬರೂ ಅಮೆರಿಕದ ರಕ್ಷಣಾ ಇಲಾಖೆಯನ್ನು ಹಾಗೂ ಇಂಗ್ಲೆಂಡ್, ಫ್ರಾನ್ಸ್, ಜರ್ಮನಿ ಮತ್ತು ರಷ್ಯ ದೇಶಗಳ ಸರ್ಕಾರಿ ಸಂಸ್ಥೆಗಳನ್ನು ಮತ್ತು ಕೆಲವು ಪ್ರಭಾವಿ ವ್ಯಕ್ತಿಗಳನ್ನು ಸಂಪರ್ಕಿಸಿ ತಾವು ತಯಾರಿಸಿರುವ ಹಾರುವ ಯಂತ್ರವನ್ನು ಕೊಂಡುಕೊಳ್ಳಲು ಕೋರಿದರು. 1907ರಲ್ಲಿ ಅಮೆರಿಕೆಯ ಸೇನೆಯ ಸಂಕೇತ ಪಡೆಯು (ಸಿಗ್ನಲ್ ಕಾಪ್ರ್ಸ್) ಒಂದು ವಿಮಾನವನ್ನು ಕೊಂಡುಕೊಳ್ಳಲು ನಿರ್ಧರಿಸಿತು. ಇದಾದ ಕೆಲವು ತಿಂಗಳುಗಳಲ್ಲಿ, ಅಂದರೆ 1908ರ ಪ್ರಾರಂಭದಲ್ಲಿ, ಫ್ರಾನ್ಸ್ ದೇಶದ ಒಂದು ವ್ಯಾಪಾರಿ ಸಂಸ್ಥೆಯು ಮತ್ತೊಂದು ವಿಮಾನವನ್ನು ಕೊಳ್ಳಲು ಒಪ್ಪಿಗೆಯನ್ನು ನೀಡಿತು.

ಒಬ್ಬ ವ್ಯಕ್ತಿಯನ್ನು ಹೊತ್ತೊಯ್ಯಬಲ್ಲದ್ದಾಗಿದ್ದ ಈ ವಿಮಾನವನ್ನು ರೈಟ್ ಸೋದರರು ಎರಡು ವ್ಯಕ್ತಿಗಳೊಂದಿಗೆ ಹಾರಲು ಸಾಧ್ಯವಾಗುವಂತಹ ಸಾಮರ್ಥ್ಯ ಪಡೆಯಲು ಹೆಚ್ಚು ಶಕ್ತಿಶಾಲಿಯಾದ ಎಂಜಿನ್ನನ್ನು ಅಳವಡಿಸಿ ಅಭಿವೃದ್ಧಿಪಡಿಸಿದರು. ನಂತರ ಸಹೋದರರಿಬ್ಬರು ತಾತ್ಕಾಲಿಕವಾಗಿ ಬೇರೆಯಾಗಿ ವಿಲ್ಬರ್ ಫ್ರಾನ್ಸಿಗೆ ಮತ್ತು ಆರ್ವಿಲ್ ಅಮೆರಿಕದ ವರ್ಜೀನಿಯ ಪ್ರಾಂತಕ್ಕೆ ತೆರಳಿದರು. 1908 ಮತ್ತು 1909ರಲ್ಲಿ ವಿಲ್ಬರ್ ಯೂರೋಪ್‍ನಲ್ಲಿ ಹಾಗೂ ಆರ್ವಿಲ್ ವರ್ಜಿನಿಯಾದ ಫೋರ್ಟ್ ಮಿಯರ್‍ನಲ್ಲಿ ತಮ್ಮ ವಿಮಾನದ ಹಾರಾಟವನ್ನು ಪ್ರದರ್ಶಿಸಿದರು. ಬಹಳ ಚೆನ್ನಾಗಿಯೇ ಹಾರಾಟ ನಡೆಸುತ್ತಿದ್ದ ಆರ್ವಿಲ್‍ನ ವಿಮಾನದ ಪ್ರೊಪೆಲರ್ ಇದ್ದಕ್ಕಿದ್ದಂತೆ ತುಂಡಾಗಿ ಅದು ನೆಲಕ್ಕುರುಳಿತು. ಈ ಅಪಘಾತದಲ್ಲಿ ಆರ್ವಿಲ್‍ನ ಕಾಲೊಂದು ಮುರಿಯಿತು ಮತ್ತು ಸಹಪ್ರಯಾಣಿಕನಾದ ಲೆಫ್ಟಿನೆಂಟ್ ಥಾಮಸ್ ಸೆಲ್ಫ್‍ರಿಡ್ಜ್ ಎಂಬುವವರು ಅಸುನೀಗಿದರು. 

ಆರ್ವಿಲ್ ಚೇತರಿಸಿಕೊಳ್ಳುತ್ತಿದ್ದಂತೆ ಅತ್ತ ಫ್ರಾನ್ಸಿನಲ್ಲಿ ವಿಲ್ಬರ್ ಹಾರಾಟಗಳ ನಂತರ ಹಾರಾಟಗಳನ್ನು ಮಾಡುತ್ತಾ ಎಲ್ಲಾ ದಾಖಲೆಗಳನ್ನು ಮುರಿಯತೊಡಗಿದನು. ಆರ್ವಿಲ್ ತನ್ನ ತಂಗಿಯೊಂದಿಗೆ ಫ್ರಾನ್ಸಿಗೆ ಹೋಗಿ ಅಲ್ಲಿದ್ದ ವಿಲ್ಬರ್‍ನೊಂದಿಗೆ ಸೇರಿ ಮೂವರೂ ಡೆಟೊನ್‍ನ ತಮ್ಮ ಮನೆಗೆ ಹಿಂತಿರುಗಿದಾಗ ಅಲ್ಲಿ ಅವರಿಗೆ ಅದ್ಧೂರಿಯಾದ ಸ್ವಾಗತ ಕಾದಿತ್ತು. ಆರ್ವಿಲ್ ಮತ್ತು ವಿಲ್ಬರ್ ಒಟ್ಟಿಗೆ ತಮ್ಮ ನೂತನ ಮಿಲಿಟರಿ ವಿಮಾನದಲ್ಲಿ ಫೋರ್ಟ್ ಮಿಯರ್‍ಗೆ ಹಿಂತಿರುಗಿದರು. ಇದರೊಂದಿಗೆ ಅವರು ಅಮೆರಿಕಾ ದೇಶದ ಸೇನೆಗೆ ನೀಡಿದ ಈ ವಿಮಾನದ ಹಾರಾಟ ಪರೀಕ್ಷೆಗಳನ್ನು ಪೂರ್ಣಗೊಳಿಸಿದಂತಾಯಿತು. ಕೆಲವು ತಿಂಗಳ ನಂತರ ವಿಲ್ಬರ್ ಮೊಟ್ಟಮೊದಲಬಾರಿಗೆ ನ್ಯೂಯಾರ್ಕ್‍ನ ಸಮುದ್ರ ತೀರದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಸೇರಿದ್ದ ಪ್ರೇಕ್ಷಕರ ಸಮ್ಮುಖದಲ್ಲಿ ತಮ್ಮ ವಿಮಾನದ ಆಕರ್ಷಕ ಪ್ರದರ್ಶನಾ ಹಾರಾಟವನ್ನು ನಡೆಸಿದನು. ಈ ಪ್ರದರ್ಶನದಿಂದ ಅಲ್ಲಿ ನೆರೆದಿದ್ದ ಎಲ್ಲರ ಮನಸೂರೆಗೊಂಡಿದ್ದಲ್ಲದೆ ಇಡೀ ವಿಶ್ವದ ಗಮನವನ್ನು ತನ್ನೆಡೆಗೆ ಸೆಳೆಯುವಲ್ಲಿ ಸಫಲನಾಗಿ ಇಪ್ಪತ್ತನೆಯ ಶತಮಾನದಲ್ಲಿ ಒಂದು ಮಹತ್ಸಾಧನೆಗೈದ ಒಬ್ಬ ಪ್ರಮುಖ ವ್ಯಕ್ತಿಯಾದನು.

ರೈಟ್ ಸಹೋದರರ ಖ್ಯಾತಿ ಬೆಳೆಯುತ್ತಿದ್ದಂತೆ ವಿಮಾನಗಳಿಗೆ ಬೇಡಿಕೆ ಹೆಚ್ಚುತ್ತಾ ಹೋಯಿತು. ಈ ಸಹೋದರರು ವಿಮಾನ ತಯಾರಿಕಾ ಘಟಕ ಮತ್ತು ಹಾರಾಟ ಶಾಲೆಯನ್ನು ಅಟ್ಲಾಂಟಿಕ್ ಸಾಗರದ ಎರಡೂ ಬದಿಗಳಲ್ಲಿ ಸ್ಥಾಪಿಸಿದರು. ಅತ್ಯಂತ ಶ್ರಮ ವಹಿಸಿ ಅತಿ ಹೆಚ್ಚು ಸಮಯ ವಿನಿಯೋಗಿಸಿ ಜೀವದ ಹಂಗನ್ನು ತೊರೆದು ಅಭಿವೃದ್ಧಿಪಡಿಸಿದ ಅವರ ವಿಮಾನ ಹಾರಾಟದ ಸಾರ್ವಜನಿಕ ಪ್ರದರ್ಶನ ಒಮ್ಮೆ ಕಂಡ ಕೂಡಲೆ ಕೆಲವರು ಅದನ್ನು ಸುಲಭವಾಗಿ ನಕಲು ಮಾಡತೊಡಗಿದರು. ಈ ಸಮಸ್ಯೆಯನ್ನು ನಿವಾರಿಸಲೆಂದೇ ರೈಟ್ ಸಹೋದರರು ತಮ್ಮ ಯಂತ್ರಚಾಲಿತ ವಿಮಾನದ ವಿನ್ಯಾಸಕ್ಕೆ ಪೇಟೆಂಟ್ ಪಡೆಯಲು ತಮ್ಮ ಮೊದಲ ಹಾರಾಟಕ್ಕೆ ಸುಮಾರು ಹತ್ತು ತಿಂಗಳ ಮುಂಚೆಯೇ ಅಂದರೆ, 23 ಮಾರ್ಚ್ 1903ರಲ್ಲಿ ಅರ್ಜಿ ಸಲ್ಲಿಸಿದ್ದರು. ಅಮೆರಿಕೆಯ ಪೇಟೆಂಟ್ ಕಛೇರಿಯು ಇವರ ಹಾರುವ ಯಂತ್ರಕ್ಕೆ 22 ಮೇ 1906ರಲ್ಲಿ ಪೇಟೆಂಟ್ ನೀಡಿತು.

ಹೊರಗಿನ ಪ್ರಪಂಚ ರೈಟ್ ಸಹೋದರರು ಅಂದುಕೊಂಡಂತೆ ಸುಲಭವಾಗಿ ಇರಲಿಲ್ಲ. ಇವರ ಬಹುತೇಕ ಹಣವೆಲ್ಲಾ ಪ್ರದರ್ಶನ ಹಾರಾಟಗಳಿಗೇ ವೆಚ್ಚವಾಗತೊಡಗಿತು. ಸಾರ್ವಜನಿಕರು ಈ ಮೈನಿವಿರೇಳಿಸುವ ಪ್ರದರ್ಶನಗಳ ಸಾಹಸವನ್ನು ನೋಡಿ ಸಂತೋಷಪಟ್ಟು ಚಪ್ಪಾಳೆತಟ್ಟಿ ಹೊರಟು ಹೋಗುತ್ತಿದ್ದರು. ತಮ್ಮ ರೈಟ್ ಸಂಸ್ಥೆಯಿಂದ ತರಬೇತಿ ಪಡೆದ ವಿಮಾನ ಚಾಲಕರ ತಂಡಗಳ ಮೂಲಕ ಪ್ರದರ್ಶನದಲ್ಲಿ ನೆರೆದಿರುವ ಜನರನ್ನು ತೃಪ್ತಿಪಡಿಸಲು ವಿಮಾನವನ್ನು ಅತ್ಯಂತ ಎತ್ತರಕ್ಕೆ ಕೊಂಡೊಯ್ಯುವ, ವೇಗವಾಗಿ ಚಲಿಸುವ ಹಾಗೂ ಇತರ ಅಪಾಯಕಾರಿ ಸಾಹಸಗಳ ಪ್ರದರ್ಶನಗಳನ್ನು ಮಾಡುತ್ತಿದ್ದರು. ದುರದೃಷ್ಟವಶಾತ್, ಒಬ್ಬರ ನಂತರ ಒಬ್ಬರಂತೆ ಕೆಲವು ವಿಮಾನ ಚಾಲಕರು ಅಪಘಾತಗಳಿಂದ ಸಾವನ್ನಪ್ಪುತ್ತಿದ್ದುದರಿಂದ ರೈಟ್ ಸಹೋದರರ ಮೇಲೆ ಅತ್ಯಂತ ಹೆಚ್ಚು ಒತ್ತಡ ಪ್ರಾರಂಭವಾಯಿತು. ಅವರು ತಮ್ಮ ವೃತ್ತಿ ಮತ್ತು ಪ್ರವೃತ್ತಿಯ ಬಗ್ಗೆ ಕಾಳಜಿವಹಿಸುವ ಬದಲು ಕಾನೂನು ಸಮರಗಳನ್ನು ಎದುರಿಸಬೇಕಾಯಿತು. 

1911ರ ಹೊತ್ತಿಗೆ ರೈಟ್ ವಿಮಾನವು ಒಂದು ಒಳ್ಳೆಯ ಹೆಸರು ಗಳಿಸುವುದರಲ್ಲಿ ವಿಫಲವಾಯಿತು. ವಿಲ್ಬರ್ ರೈಟ್ ಈ ಕಾನೂನಿನ ಮತ್ತು ತಮ್ಮ ವ್ಯವಹಾರಿಕ ಸಮಸ್ಯೆಗಳಿಂದ ಬೇಸತ್ತು, ದೈಹಿಕವಾಗಿ ಕುಗ್ಗಿ ಕೊನೆಗೆ ಟೈಫಾಯಿಡ್ ಕಾಯಿಲೆಗೆ ತುತ್ತಾಗಿ 1912ನೇ ಇಸವಿ ಮೇ 30ನೇ ದಿನಾಂಕದಂದು ತನ್ನ 45ನೆಯ ವರ್ಷ ವಯಸ್ಸಿನಲ್ಲಿ ವಿಶ್ವವು ತನ್ನ ಸಾಧನೆಯನ್ನು ಗುರುತಿಸಿದ್ದನ್ನು ನೋಡುವ ಮುನ್ನವೇ ದೈವಾಧೀನನಾದನು. ಈ ಅನಿರೀಕ್ಷಿತ ಘಟನೆಯಿಂದ ಜರ್ಜರಿತನಾದ ಆರ್ವಿಲ್‍ನ ಮನಸ್ಸು ವೈಮಾನಿಕ ವ್ಯವಹಾರದಲ್ಲಿ ಆಸಕ್ತಿ ಕಳೆದುಕೊಂಡು ಕೊನೆಗೆ 1916 ತಮ್ಮ ರೈಟ್ ಕಂಪನಿಯನ್ನು ಮಾರಿ, ತನ್ನನ್ನು ಕೇವಲ ಸಂಶೋಧನೆಯಲ್ಲಿ ತೊಡಗಿಸಿಕೊಂಡನು. 

ಪೇಟೆಂಟ್‍ನ ಸಮರ ಮತ್ತು ವ್ಯವಹಾರಿಕ ಸಮಸ್ಯೆಗಳು ಬೆಂಬಿಡದ ಬೇತಾಳದಂತೆ ಕಾಡುತ್ತಿದ್ದಂತೆ, ಆರ್ವಿಲ್ ಡೆಟೊನಿನ ಪಶ್ಚಿಮ ಭಾಗದ ಒಂದು ಸ್ಥಳದಲ್ಲಿ ಚಿಕ್ಕ ಪ್ರಯೋಗಶಾಲೆಯನ್ನು ಸ್ಥಾಪಿಸಿದನು. ಅಲ್ಲಿ ತನ್ನ ಆಸಕ್ತಿಗೆ ನಿಲುಕಿದ ಎಲ್ಲಾ ಕೆಲಸಗಳಲ್ಲಿ ತೊಡಗಿಸಿಕೊಂಡನು. ವೈಮಾನಿಕ ಕ್ಷೇತ್ರದಲ್ಲಿ ಸ್ವಲ್ಪ ಕೆಲಸ ಮಾಡಿ ಸ್ಪರ್ಧೆಗೆ ಯೋಗ್ಯವಾದ ಒಂದು ವಿಮಾನ, ನಿರ್ದೇಶಿತ ಕ್ಷಿಪಣಿ ಹಾಗೂ ವಿಮಾನವು ಕೆಳಕ್ಕೆ ಧುಮುಕುವಾಗ ಅದರ ವೇಗವನ್ನು ಕಡಿಮೆಗೊಳಿಸುವುದಕ್ಕೆ ಸಹಾಯಕವಾಗುವ ತುಂಡು ಬಾಗುರೆಕ್ಕೆಯನ್ನು ಅಭಿವೃದ್ಧಿಪಡಿಸಿದನು. ಇದರೊಂದಿಗೆ ಸ್ವಯಂ ಚಾಲಿತ ಧ್ವನಿಗ್ರಾಹಕ ಉಪಕರಣ, ಟೋಸ್ಟರ್ ಮತ್ತು ಮಕ್ಕಳ ಆಟಿಕೆಗಳ ತಯಾರಿಕೆಯಲ್ಲಿ ತೊಡಗಿದನು. ಸಮಾಧಾನಕರ ವಿಷಯವೆಂದರೆ, ಸುಮಾರು ಹತ್ತು ವರ್ಷಗಳ ಕಾಲ ರೈಟ್ ಸಹೋದರರ ಅಸಾಧಾರಣ ಸಾಧನೆಯನ್ನು ಜಗತ್ತು ಗುರುತಿಸದಿದ್ದರೂ 1914ರಲ್ಲಿ ಫ್ರಾಂಕ್ಲಿನ್ ಇನ್‍ಸ್ಟಿಟ್ಯೂಟ್ ಎಂಬ ಪ್ರಮುಖ ವೈಜ್ಞಾನಿಕ ಸಂಸ್ಥೆಯು ಈ ಸಹೋದರರ ಸಾಧನೆಯನ್ನು ಪ್ರಪ್ರಥಮವಾಗಿ ಗಮನಿಸಿ, ಅವರ ವೈಜ್ಞಾನಿಕ ಸಂಶೋಧನೆಗೆ ಪ್ರತಿಷ್ಠಿತ ಕ್ರಿಸನ್ ಪದಕವನ್ನು ಪ್ರದಾನ ಮಾಡಿ ಪುರಸ್ಕರಿಸಿತು. ಆರ್ವಿಲ್ ಫಿಲಡೆಲ್‍ಫಿಯಾಕ್ಕೆ ತೆರಳಿ ಈ ಹೆಮ್ಮೆಯ ಪ್ರಶಸ್ತಿಯನ್ನು ಸ್ವೀಕರಿಸಿದನು. ಆದರೆ ಈ ಸಂತೋಷಕರ ಸಂಗತಿಯನ್ನು ನೋಡಲು ವಿಲ್ಬರ್ ಬದುಕುಳಿದಿರಲಿಲ್ಲ.

1903ರಲ್ಲಿ ವಿಶ್ವದ ಮೊಟ್ಟಮೊದಲ 
ಯಂತ್ರಚಾಲಿತ ವಿಮಾನವನ್ನು ನಿರ್ಮಿಸಿ ಹಾರಿಸಿದ ಸವಿನೆನಪಿಗೆ 2 ಮಾರ್ಚ್ 1927ರಂದು ಅಂದಿನ ಅಮೆರಿಕದ ರಾಷ್ಟ್ರಪತಿಯಾಗಿದ್ದ ಕ್ಯಾಲ್ವಿನ್ ಕೂಲಿಡ್ಜ್ ಅವರು ಕಿಲ್ ಡೆವಿಲ್ ಶಿಖರದಲ್ಲಿ ಒಂದು ಸ್ಮಾರಕವನ್ನು ನಿರ್ಮಿಸಲು ಆದೇಶಿಸಿದರು. ಈ 60 ಅಡಿಗಳ ಸ್ಮಾರಕವನ್ನು ಗ್ರಾನೈಟ್ ಕಲ್ಲಿನಲ್ಲಿ ನಿರ್ಮಿಸಿದ್ದು ಇದನ್ನು 19 ನವೆಂಬರ್ 1932ರಲ್ಲಿ ಪೂರ್ಣಗೊಳಿಸಲಾಯಿತು.
ಯಂತ್ರಶಕ್ತಿಚಾಲಿತ, ಮಾನವಸಹಿತ ವಿಮಾನದ ಸೃಷ್ಟಿಗೆ ವಿಲ್ಬರ್‍ನ ಜೊತೆಗೆ ಜೊತೆಜೊತೆಯಾಗಿ ಶ್ರಮಿಸಿದ ಆರ್ವಿಲ್‍ನ ಹೆಸರು, ಖ್ಯಾತಿ ಗಳಿಸಿದ್ದಲ್ಲದೆ ಆತನಿಗೆ ಅಮೆರಿಕದ `ರಾಷ್ಟ್ರೀಯ ವೈಮಾನಿಕ ಸಲಹಾ ಸಮಿತಿ'ಯ ಮೂಲ ಸದಸ್ಯತ್ವ ಲಭಿಸಿತು. ಆರ್ವಿಲ್ಲನು ಈ ಸಮಿತಿಯಲ್ಲಿ ಮಿಕ್ಕ ಎಲ್ಲರಿಗಿಂತಲೂ ಅತಿ ಹೆಚ್ಚು ಕಾಲ ಇದ್ದು ತನ್ನ ಸೇವೆಯನ್ನು ಸಲ್ಲಿಸಿದನು. ಅಮೆರಿಕ ದೇಶವು ವೈಮಾನಿಕ ಕ್ಷೇತ್ರದಲ್ಲಿ ವಿಶ್ವದ ಭೂಪಟದಲ್ಲಿ ಮುಂಚೂಣಿಯಲ್ಲಿರುವುದಕ್ಕೆ ಸಹಕಾರಿಯಾಗಲೆಂದು ವೈಮಾನಿಕ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗಾಗಿ ಆರ್ವಿಲ್ 1930ರಲ್ಲಿ ಗುಗನ್‍ಹೈಮ್ ಫಂಡ್ ಎಂಬ ಹೆಸರಿನಲ್ಲಿ ನಿಧಿಯನ್ನು ಸ್ಥಾಪಿಸಿದನು. ಇದರೊಂದಿಗೆ ಇತರೇ ಬೇರೆ ಬೇರೆ ಕ್ಷೇತ್ರಗಳಲ್ಲಿ ಅನ್ವೇಷಣೆ ಮಾಡಿದ ಎಲ್ಲಾ ವ್ಯಕ್ತಿಗಳನ್ನು ಬೆಳಕಿಗೆ ತರುವಲ್ಲಿ ಹಾಗೂ ಅವರ ಅನ್ವೇಷಿತ ವಸ್ತುಗಳನ್ನು ಮಾರುಕಟ್ಟೆಗೆ ತರುವುದಕ್ಕೆ ಅವಿರತ ಸಹಾಯ ಹಸ್ತ ನೀಡಿದನು.
ಮೊದಲ ಮಹಾಯುದ್ಧದ ನಂತರ ಸ್ಮಿತ್‍ಸೋನಿಯನ್ ಸಂಸ್ಥೆಯು ರೈಟ್ ಸಹೋದರರ ಕಾರ್ಯವನ್ನು ಅಪಮೌಲ್ಯಗೊಳಿಸಲು ಉದ್ದೇಶಿಸಿ ವಾಯುಯಾನ ಕ್ಷೇತ್ರಕ್ಕೆ ಲ್ಯಾಂಗ್ಲೇಯ ಅಲ್ಪ ಕೊಡುಗೆಗಳನ್ನು ಹಿಗ್ಗಿಸಿ ಹಿರಿದಾಗಿಸುವ ಕ್ಷುಲ್ಲಕ ಕಾರ್ಯದಲ್ಲಿ ತೊಡಗಿತು. ಆರ್ವಲ್‍ನ ಮಿತ್ರರು ರೈಟ್ ಸಹೋದರರ ಮಹತ್ಕಾರ್ಯವನ್ನು ಸರಿಯಾಗಿ ಪ್ರತಿಬಿಂಬಿಸಿದರೂ ಸ್ಮಿತ್‍ಸೋನಿಯನ್ ಸಂಸ್ಥೆಯು ತನ್ನ ಕುಯುಕ್ತಿಯನ್ನೇ ಮುಂದುವರೆಸಿತು. ಇದನ್ನು ಪ್ರತಿಭಟಿಸುವ ಮತ್ತು ನೈಜ ವಿಚಾರಗಳನ್ನು ತಿಳಿಯಪಡಿಸುವ ಉದ್ದೇಶಗಳಿಂದ ಆರ್ವಿಲ್‍ನು ತಾನು ಮತ್ತು ವಿಲ್ಬರ್ ಇಬ್ಬರೂ 1903ರಲ್ಲಿ ಕಿಟ್ಟಿಹಾಕ್‍ನಲ್ಲಿ ಯಾನಮಾಡಿ ಯಶಸ್ವಿಯಾದ ವಿಶ್ವದ ಪ್ರಪ್ರಥಮ ಯಂತ್ರಶಕ್ತಿಚಾಲಿತ ರೈಟ್ ಫ್ಲೈಯರ್ ಎಂದು ಹೆಸರು ಪಡೆದ ವಿಮಾನವನ್ನು ಲಂಡನ್ನಿನ ವಿಜ್ಞಾನ ಸಂಗ್ರಹಾಲಯದಲ್ಲಿ ಪ್ರತಿಷ್ಠಾಪಿಸಿದನು.

1930ರಲ್ಲಿ ನ್ಯೂಯಾರ್ಕ್‍ನಿಂದ ಪ್ಯಾರಿಸ್‍ವರೆಗೆ ಪ್ರಥಮ ಬಾರಿಗೆ ತಡೆರಹಿತ ವಿಮಾನಯಾನ ನಡೆಸಿದ ಸಾಹಸಿ ಚಾಲ್ರ್ಸ್ ಲಿಂಡ್ಬರ್ಗನು ಸ್ಮಿತ್‍ಸೋನಿಯನ್ ಸಂಸ್ಥೆ ಮತ್ತು ಆರ್ವಿಲ್ ನಡುವೆ ಸಂಧಾನಕ್ಕೆ ಪ್ರಯತ್ನಿಸಿ ವಿಫಲನಾದನು. ಹನ್ನೆರಡು ವರ್ಷಗಳಷ್ಟು ದೀರ್ಘಕಾಲದ ನಂತರ ಆರ್ವಿಲ್ ರೈಟ್‍ನ ಮಿತ್ರ ಹಾಗೂ ಜೀವನ ಚರಿತ್ರಕಾರ ಫ್ರೆಟ್ ಕೆಲ್ಲಿಯು ಸ್ಮಿತ್‍ಸೋನಿಯನ್ ಸಂಸ್ಥೆಯು ತನ್ನ ತಪ್ಪನ್ನು ಸರಿಪಡಿಸಿಕೊಂಡು ಸತ್ಯವನ್ನು ಪ್ರಕಟಿಸಿ ಅನುಸರಿಸಲು ಒಪ್ಪಿಸಿದನು. ಇದಾದ ನಂತರ ಆರ್ವಿಲ್‍ನು ತನ್ನ 1903ರ ವಿಮಾನವನ್ನು ಇಂಗ್ಲೆಂಡಿನಿಂದ ಮತ್ತೆ ಅಮೆರಿಕಾಗೆ ಮರಳಿ ತರಿಸಿಕೊಳ್ಳಲು ಯತ್ನಿಸಿದನಾದರೂ ಎರಡನೇ ಮಹಾಯುದ್ಧದ ಕಾರಣದಿಂದಾಗಿ ಈ ಕಾರ್ಯವು ತಡವಾಗಿ 1948ರಲ್ಲಿ ಇದು ಸಾಧ್ಯವಾಯಿತು.

1905ಲ್ಲಿ ವಿಲ್ಬರ್‍ನೊಂದಿಗೆ ಹಫ್‍ಮನ್ ಪ್ರೇರಿಯಲ್ಲಿ ಸಿದ್ಧಪಡಿಸಿದ ಸರ್ವ ರೀತಿಯಲ್ಲೂ ನಿಯಂತ್ರಿಸಲು ಸಾಧ್ಯವಾಗಿದ್ದ ಹಾಗೂ ಹಾರಾಟ ನಡೆಸಲು ಉತ್ತಮವಾಗಿದ್ದ ರೈಟ್ ವಿಮಾನ-3ರ ಪುನರ್ ನಿರ್ಮಾಣವು ಆರ್ವಿಲ್‍ನ ಕೊನೆಯ ದೊಡ್ಡ ಯೋಜನೆಯಾಯಿತು. ಈ ವಿಮಾನವನ್ನು 1950ರಲ್ಲಿ ಓಹಿಯೋದ ಡೆಟೊನ್ ನಲ್ಲಿರುವ ಡೀಡ್ಸ್ ಕಾರಿಲ್ಲಾನ್ ಪಾರ್ಕಿನಲ್ಲಿ ಪ್ರದರ್ಶನ ಮಾಡಲಾಯಿತು. ಆದರೆ ಆರ್ವಿಲ್ 30 ಜನವರಿ 1948ರಲ್ಲಿ ತನ್ನ ಮನೆಯ ಬಾಗಿಲಿಗೆ ಕರೆಗಂಟೆಯನ್ನು ಅಳವಡಿಸುವಾಗ ದುರದೃಷ್ಟವಶಾತ್ ಹೃದಯಾಘಾತದಿಂದ ಅಸುನೀಗಿದನು. ಆರ್ವಿಲ್ ತನ್ನ ಉಯಿಲಿನಲ್ಲಿ ಬಹುತೇಕ ಉಪಕರಣಗಳನ್ನು ಮತ್ತು ರೇಖಾಚಿತ್ರಗಳನ್ನು ಫ್ರಾಂಕ್ಲಿನ್ ಸಂಸ್ಥೆಗೆ ಕೊಡುಗೆಯಾಗಿ ಕೊಟ್ಟನು. ಇಂದು ರೈಟ್ ಸಹೋದರರ ವಸ್ತುಗಳನ್ನು ಸಂಗ್ರಹಿಸಿಟ್ಟಿರುವ ವಿಶ್ವದಲ್ಲಿಯೇ ಅತಿ ದೊಡ್ಡ ವಸ್ತುಸಂಗ್ರಹಾಲಯ ಫ್ರಾಂಕ್ಲಿನ್ ಸಂಸ್ಥೆಯಲ್ಲಿದೆ. 1903ರಲ್ಲಿ ನಿರ್ಮಿಸಿದ ಹಾರುವ ಯಂತ್ರದ ಪಳೆಯುಳಿಕೆಗಳನ್ನು ಸ್ಮಿತ್‍ಸೋನಿಯನ್ ರಾಷ್ಟ್ರೀಯ ವೈಮಾನಿಕ ಮತ್ತು ಅಂತರಿಕ್ಷ ಸಂಗ್ರಹಾಲಯದಲ್ಲಿ ಇರಿಸಲಾಗಿದೆ.

ವೈಮಾಂತರಿಕ್ಷ ಕ್ಷೇತ್ರದ ಆರಂಭ, ಬೆಳವಣಿಗೆಗಳ ಸಿಂಹಾವಲೋಕನ ಮಾಡಿದಾಗ ವಿಮಾನದ ಏರಿಳಿತಕ್ಕೆ ಮತ್ತು ಸಮತೋಲನದ ನಿರ್ವಹಣೆಗೆ ಉತ್ಕರ್ಷ, ಪ್ರತಿರೋಧ, ಮುನ್ನೂಕು ಹಾಗೂ ಗುರುತ್ವ ಬಲಗಳನ್ನು ಗುರುತಿಸಿ ಅವುಗಳ ಪ್ರಮಾಣಗಳನ್ನು ಕಂಡುಹಿಡಿದು ವಿಮಾನದ ವೈವಿಧ್ಯಮಯ ಹಾರಾಟಕ್ಕೆ ಅಗತ್ಯವಾಗುವಂತೆ ಅವುಗಳನ್ನು ಬದಲಿಸುವಿಕೆಗೆ ವಿಮಾನದ ಸುರಕ್ಷಿತ ಹಾರಾಟ, ನಿಲ್ದಾಣದಿಂದ ಆಗಸಕ್ಕೆ ಚಿಮ್ಮುವ ಹಾಗೂ ಆಗಸದಿಂದ ನಿಲ್ದಾಣಕ್ಕೆ ಬಂದಿಳಿಯುವ ಕ್ರಿಯೆಗಳಿಗೆ ಅಗತ್ಯವಾದ ತಾಂತ್ರಿಕತೆ, ರೆಕ್ಕೆ-ಪುಕ್ಕಗಳು ಮುಂತಾದ ಹಲವಾರು ಭಾಗಗಳ ಬಳಕೆ ಹಾಗೂ ಅನೇಕ ವಿಚಾರಗಳನ್ನು ಕುರಿತು ಮೊಟ್ಟಮೊದಲಿಗೆ ಗಂಭೀರವಾಗಿ ಚಿಂತಿಸಿ, ಸಂಶೋಧಿಸಿ, ಅಭಿವೃದ್ಧಿಗೊಳಿಸಿ ಯಶಸ್ವಿಯಾಗಿ ಬಳಕೆಗೆ ತಂದ ಹಿರಿಮೆ ರೈಟ್ ಸಹೋದರರಿಗೆ ಸಲ್ಲುತ್ತದೆ. ಅವರು ಹಾಕಿಕೊಟ್ಟ ಮಾರ್ಗದಲ್ಲೇ ಕ್ರಮಿಸಿದ ವೈಮಾನಿಕ ಕ್ಷೇತ್ರದ ತಂತ್ರಜ್ಞರು, ವಿಜ್ಞಾನಿಗಳು ಮುಂತಾದವರು ಅನೇಕ ಸುಧಾರಣೆಗಳನ್ನೂ, ಪರಿಷ್ಕರಿತ ವಿಚಾರಗಳನ್ನೂ, ತಾಂತ್ರಿಕತೆಯನ್ನೂ ಕಾಲದಿಂದ ಕಾಲಕ್ಕೆ ಅಳವಡಿಸುತ್ತಾ ಇಂದಿನ ವೈಮಾನಿಕ ಕ್ಷೇತ್ರದ ಮಹೋನ್ನತಿಗೆ ಕಾರಣರಾಗಿದ್ದಾರೆ. ಇಂತಹ ಎಲ್ಲ ಬೆಳವಣೆಗೆಗಳಿಗೆ ಬುನಾದಿಯನ್ನು ಹಾಕಿಕೊಟ್ಟ ರೈಟ್ ಸಹೋದರರು ವೈಮಾಂತರಿಕ್ಷ ಕ್ಷೇತ್ರದಲ್ಲಿ ಧೃವತಾರೆಗಳಂತೆ ಮೆರೆಯುತ್ತಿದ್ದಾರೆ.

ಮಾಹಿತಿ ಕೃಪೆ: ಮೈಸೂರು ವಿಶ್ವಕೋಶ

The Wright brothers – Orville and Wilbur 


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ