ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ನಾಗಲಕ್ಷ್ಮಿ ಕೆ. ರಾವ್


 ನಾಗಲಕ್ಷ್ಮಿ ಕೆ. ರಾವ್


ವಿದುಷಿ ನಾಗಲಕ್ಷ್ಮಿ ರಾವ್ ನಾಟ್ಯ ಕಲಾವಿದೆಯಾಗಿ, ಗುರುವಾಗಿ, ಬಹುಮುಖಿ ಶೈಕ್ಷಣಿಕ ಸಾಧಕಿಯಾಗಿ, ಪ್ರತಿಷ್ಠಿತ ಸಾಂಸ್ಕೃತಿಕ ಸಂಸ್ಥೆ ಮತ್ತು ವೇದಿಕೆಗಳ ನಿರ್ದೇಶಕಿಯಾಗಿ, ಕಾರ್ಯಕ್ರಮ ಆಯೋಜಕಿಯಾಗಿ, ಸಂಚಾಲಕಿಯಾಗಿ, ಹೀಗೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡುತ್ತಾ ಬಂದಿದ್ದಾರೆ. 

ಡಿಸೆಂಬರ್ 17 ನಾಗಲಕ್ಷ್ಮಿ ಅವರ ಹುಟ್ಟುಹಬ್ಬ. ಹಾಸನ ಜಿಲ್ಲೆಯ ಹೊಳೆನರಸೀಪುರ ಅವರ ಹುಟ್ಟೂರು. ಅವರು ತಮ್ಮ ಸ್ವಂತ ಊರಿನಲ್ಲಿ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು. 

ಚಿಕ್ಕಂದಿನಲ್ಲೇ ನಾಟ್ಯಕಲೆಗೆ ಬಂದ ನಾಗಲಕ್ಷ್ಮಿ ಅವರಿಗೆ ಭರತನಾಟ್ಯದಲ್ಲಿ ಗುರು ಗೀತಾ ಅನಂತನಾರಾಯಣ ಮತ್ತು ಕೂಚಿಪುಡಿಯಲ್ಲಿ ಗುರು ವೀಣಾ ಮೂರ್ತಿ ವಿಜಯ್ ಗುರುಗಳು.  ನಾಗಲಕ್ಷ್ಮಿ ಅವರು ರಾಜ್ಯ ಮಟ್ಟದ ವಿದ್ವತ್ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಭರತನಾಟ್ಯದ ಸಾಧನೆ ದಾಖಲಿಸಿದರು.  ಚಿತ್ರಕಲೆ, ಸಾಹಿತ್ಯ, ಚರಿತ್ರೆ, ವಾಸ್ತುಶಿಲ್ಪ ಮುಂತಾದ‍ ಶಾಖೆಗಳಲ್ಲೂ ಅವರ ಪರಿಣತಿ ವ್ಯಾಪಿಸಿದೆ.

ನಾಗಲಕ್ಷ್ಮಿ  ರಾವ್  ಅವರ ಶೈಕ್ಷಣಿಕ ಸಾಧನೆಗಳೂ ಅಪಾರ. ಇತಿಹಾಸ ಮತ್ತು ಪುರಾತತ್ವ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ, ಕಲಾ ಇತಿಹಾಸದಲ್ಲಿ ಪಿಜಿ ಡಿಪ್ಲೋಮಾ, ರೇಖಾಚಿತ್ರ ಮತ್ತು ಚಿತ್ರಕಲೆಯಲ್ಲಿ (ಎಜಿಎಮ್‍ಡಿ)ಮಾಸ್ಟರ್ಸ್, ಕರ್ನಾಟಕದ ಜಾನಪದ ಕಲೆಗಳಲ್ಲಿ ಡಿಪ್ಲೊಮಾ, ಇತಿಹಾಸಕಾರ ಮತ್ತು ಲೇಖಕ ಡಾ. ಗೋಪಾಲ್ ರಾವ್ ಅವರ ಮಾರ್ಗದರ್ಶನದಲ್ಲಿ ಎಪಿಗ್ರಫಿ ಮತ್ತು ಪ್ರಾಚೀನ ಸಾಹಿತ್ಯ ಕ್ಷೇತ್ರದಲ್ಲಿ ಸಂಶೋಧನಾ ಕಾರ್ಯ ಮುಂತಾದ ವೈವಿಧ್ಯತೆಗಳು ಇವುಗಳಲ್ಲಿ ಸೇರಿವೆ. ಉತ್ತರ ಕರ್ನಾಟಕ ದೇವಾಲಯಗಳ ವಾಸ್ತುಶಿಲ್ಪದ ಕುರಿತು ಅವರ ಪುಸ್ತಕವಾದ 'ಐಹೊಳಿಸ್' ಕೃತಿಯನ್ನು ಕರ್ನಾಟಕ ವಿಶ್ವವಿದ್ಯಾಲಯವು ಪ್ರಕಟಿಸಿದೆ.

ನಾಗಲಕ್ಷ್ಮಿ ಅವರು ವಿಶ್ವದ ಅನೇಕ ಪ್ರತಿಷ್ಠಿತ ವೇದಿಕೆಗಳಲ್ಲಿ ತಮ್ಮ ಮತ್ತು ತಮ್ಮ ತಂಡದ ಕಾರ್ಯಕ್ರಮ ನೀಡಿದ್ದಾರೆ.  ಅನೇಕ ನೃತ್ಯ ಸಂಯೋಜನೆಗಳನ್ನು ಮಾಡಿದ್ದಾರೆ.  ತಮ್ಮದೇ ಕೃಷ್ಣ ಫೌಂಡೇಷನ್ ಸ್ಥಾಪಿಸಿ ಸಹಸ್ರಾರು ಮಕ್ಕಳಿಗೆ ನೃತ್ಯ ಮತ್ತು ಚಿತ್ರಕಲಾ ಶಿಕ್ಷಣ ನೀಡಿದ್ದಾರೆ. ಮೈಸೂರು ದಸರಾ, ಹಂಪಿ ಉತ್ಸವ, ಭಾರತೀಯ ಸೇನೆಗೆ ಪ್ರದರ್ಶನ, ಬೆಂಗಳೂರು ರಾಜಭವನ, ತಂಜಾವೂರು, ಆನೆಗುಂಧಿ, ಚಾಲುಕ್ಯ ಹಬ್ಬ, ಜಾನಪದ ಜಾತ್ರೆ, ಚಂದನ ಪ್ರಶಸ್ತಿ, ಕನ್ನಡ ಸಾಹಿತ್ಯ ಸಮ್ಮೇಳನ, ಸಿಂಗಾಪುರ, ದುಬೈ, ಅಬುಧಾಬಿ, ಶಾರ್ಜಾ, ಬ್ಯಾಂಕಾಕ್, ಶ್ರೀಲಂಕಾದ ಕ್ಯಾಂಡಿ ಹೀಗೆ ಅನೇಕ ಪ್ರತಿಷ್ಟಿತ ವೇದಿಕೆಗಳಲ್ಲಿ ಅವರ ನೃತ್ಯ ಸಂಯೋಜನೆಗಳು ಕಲಾಪ್ರಿಯರ ಮನ ತಣಿಸಿವೆ.

ನಾಗಲಕ್ಷ್ಮಿ ರಾವ್ ಅವರು ಭಾರತೀಯ ವಿದ್ಯಾಭವನದ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಯೋಜನೆಗಳ ಜಂಟಿ ನಿರ್ದೇಶಕಿಯಾಗಿ ಅಲ್ಲಿನ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ ಮತ್ತು ವ್ಯವಸ್ಥಾಪನೆಗಳಲ್ಲಿ ಪಾತ್ರವಹಿಸುತ್ತಿದ್ದಾರೆ. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಸಾಂಸ್ಕೃತಿಕ ವಿಭಾಗದ ಸಂಚಾಲಕರಾಗಿ, ಐಸಿಸಿಆರ್ ದಕ್ಷಿಣ ಬೆಂಗಳೂರು ವಿಭಾಗದ ಸಲಹಾ ಸಮಿತಿ ಸದಸ್ಯರಾಗಿ, ಕೇಂದ್ರೀಯ ಮತ್ತು ರಾಜ್ಯ ಚಲನಚಿತ್ರ ಸೆನ್ಸಾರ್ ಮಂಡಳಿಗಳ ಸದಸ್ಯರಾಗಿ ಸಹಾ ಅವರ ಸೇವೆ ಸಂದಿದೆ.

ನಾಗಲಕ್ಷ್ಮಿ ಕೆ ರಾವ್ ಅವರಿಗೆ ಕೇಂದ್ರ ಸರ್ಕಾರದ ರಾಜೀವ್ ಗಾಂಧೀ ಸದ್ಭಾವನಾ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ರಾಘವೇಂದ್ರ ಸ್ವಾಮಿ ಸದ್ಭಾವನಾ ಪ್ರಶಸ್ತಿ, ದೇಶ ವಿದೇಶಗಳಲ್ಲಿನ ಕನ್ನಡ ಮತ್ತು ಸಾಂಸ್ಕೃತಿಕ ವೇದಿಕೆಗಳ ಅನೇಕ ಪ್ರಶಸ್ತಿ ಗೌರವಗಳು ಸಂದಿವೆ. 

ಕಲಾಸಾಧಕರೂ ಆತ್ಮೀಯರೂ ಆದ ನಾಗಲಕ್ಷ್ಮಿ ಕೆ ರಾವ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.

Happy birthday to Dance artiste, Guru, convener and multifaceted talent Nagalakshmi K Rao


ಕಾಮೆಂಟ್‌ಗಳು

  1. ನಮ್ಮ ಹೊಳೇನರಸೀಪುರದ ಮಗಳು ಚಿಕ್ಕ ವಯಸ್ಸಿನಲ್ಲೇ ಶ್ರದ್ಧೆ ಯಿಂದ ಸಾಧನೆ ಮುಂದುವರೆಸಿದ್ದರು.

    ಪ್ರತ್ಯುತ್ತರಅಳಿಸಿ
ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ