ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಬಿ. ವಿ. ಪಂಡಿತರು


 ನಂಜನಗೂಡಿನ ಹಲ್ಲಿನಪುಡಿ ಮತ್ತು ಬಿ. ವಿ. ಪಂಡಿತರು


ಒಂದಾಣೆ ಹಲ್ಲುಪುಡಿ ಎಂದೇ ಖ್ಯಾತವಾಗಿದ್ದದ್ದು  ಬಿ.ವಿ. ಪಂಡಿತರ ನಂಜನಗೂಡಿನ ಹಲ್ಲಿನಪುಡಿ.  ಇದು 1913ರಲ್ಲಿ ಪ್ರಾರಂಭ ಆಗಿದ್ದು.  ಹಳೆ ಮೈಸೂರು ಭಾಗದಲ್ಲಿ ಈಗಲೂ ಜನಪ್ರಿಯವಾಗಿರುವ ನಂಜನಗೂಡಿನ ಹಲ್ಲಿನಪುಡಿ ಸದ್ಯ ಮೂರು ರೂಪಾಯಿಗೆ ಮಾರಾಟವಾಗುತ್ತಿದೆ.

ಮೈಸೂರಿನ ಆಯುರ್ವೇದ ಕಾಲೇಜಿನ ಮೊದಲ ಬ್ಯಾಚಿನ ವಿದ್ಯಾರ್ಥಿಯಾಗಿದ್ದ ಬಿ.ವಿ. ಪಂಡಿತರು ನಂಜನಗೂಡಿನಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಹೋಮ ನಡೆದ ನಂತರ ಅದರ ಬೂದಿಯನ್ನು ಕಂಡು ಹಲ್ಲಿನಪುಡಿಯಾಗಿ ತಯಾರಿಸಬಹುದು ಎಂದು ನಿರ್ಧರಿಸಿದರು. ನಂತರ ಭತ್ತದ ಹೊಟ್ಟನ್ನು ತರಿಸಿ ಅದನ್ನು ಬೂದಿ ಮಾಡಿದ ನಂತರ ಗಿಡಮೂಲಿಕೆಗಳನ್ನು ಮಿಶ್ರಣ ಮಾಡಿ ಹಲ್ಲಿನಪುಡಿ ಸಿದ್ಧಗೊಳಿಸಿದರು. ಹೀಗೆ 1913ರ ಫೆಬ್ರುವರಿ ತಿಂಗಳಲ್ಲಿ ನಂಜನಗೂಡಿನ ನಾರಾಯಣ ಅಗ್ರಹಾರದಲ್ಲಿಯ ತಮ್ಮ ಮನೆಯಲ್ಲಿ ಹಲ್ಲಿನಪುಡಿ  ತಯಾರಿಸಿ ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು. ಇದು ರಾಜ್ಯದಾದ್ಯಂತ ಅಲ್ಲದೇ ಆಂಧ್ರಪ್ರದೇಶ ಹಾಗೂ ತಮಿಳುನಾಡಿನಲ್ಲೂ ಪ್ರಸಿದ್ಧವಾಯಿತು.

ಬಿ.ವಿ. ಪಂಡಿತರ ಜತೆಗೆ ಅವರ ಪುತ್ರರಾದ ಬಿ.ವಿ. ನಂಜುಂಡಸ್ವಾಮಿ, ಬಿ.ವಿ. ರಾಮಸ್ವಾಮಿ, ಬಿ.ವಿ. ಬಾಲಸುಬ್ರಹ್ಮಣ್ಯ ಹಾಗೂ ಬಿ.ವಿ. ವೆಂಕಟೇಶಮೂರ್ತಿ ಅವರು ಹಲ್ಲಿನಪುಡಿ ತಯಾರಿಕೆ ಹಾಗೂ ಮಾರುಕಟ್ಟೆ ವ್ಯವಸ್ಥೆ  ನೋಡಿಕೊಂಡರು. ಇವರಲ್ಲಿ ನಂಜುಂಡಸ್ವಾಮಿ ಹಾಗೂ ವೆಂಕಟೇಶಮೂರ್ತಿ ಆಯುರ್ವೇದ ವೈದ್ಯರು. ಇದರೊಂದಿಗೆ ಸದ್ವೈದ್ಯ ಶಾಲಾ ಪ್ರೈವೇಟ್ ಲಿಮಿಟೆಡ್ ಕಂಪೆನಿ ಎಂದು ಕಟ್ಟಿಕೊಂಡು ಆಯುರ್ವೇದ ಔಷಧಿ ತಯಾರಿಕೆ ಹಾಗೂ ಮಾರಾಟ ಕೈಗೊಂಡರು.

1975ರಲ್ಲಿ ಬಿ.ವಿ. ಪಂಡಿತರು ವಿಧಿವಶರಾದ ನಂತರ ಅವರ ಪುತ್ರರು ಹಲ್ಲಿನಪುಡಿ ವಹಿವಾಟು ಮುಂದುವರಿಸಿದರು. ಎಂಬತ್ತರ ದಶಕದವರೆಗೆ ಪ್ರಸಿದ್ಧವಾಗಿದ್ದ ಹಲ್ಲಿನಪುಡಿ, ಟೂತ್ ಪೇಸ್ಟ್‌ಗಳು ಮಾರುಕಟ್ಟೆಗೆ ಬಂದ ಪರಿಣಾಮ ಬೇಡಿಕೆ ಕುಸಿಯಿತು. ಆದರೆ ಈಗಲೂ ಮಾರುಕಟ್ಟೆಯಲ್ಲಿ ಲಭ್ಯ.

ಸದ್ಯ ಮೂರನೇ  ತಲೆಮಾರಿನ ಬಿ.ಎಸ್. ಜಯಂತ್ ಕಾರ್ಯನಿರ್ವಾಹಕ ನಿರ್ದೇಶಕರಾಗಿ, ಅವರ ಸೋದರರಾದ ರಾಜೇಶ್ ಹಾಗೂ ರಾಮಗೋಪಾಲ್ ಕಂಪೆನಿಯ ನಿರ್ದೇಶಕರಾಗಿ ದುಡಿಯುತ್ತಿದ್ದಾರೆ.

“ಈಗಲೂ ಭತ್ತದ ಹೊಟ್ಟಿನ ಬೂದಿಯಿಂದಲೇ ಹಲ್ಲಿನಪುಡಿಯನ್ನು ತಯಾರಿಸಲಾಗುತ್ತಿದೆ. ಕೈಬೆರಳಿನಿಂದ ತಿಕ್ಕುವುದರಿಂದ ಹಲ್ಲುಗಳು ಸ್ವಚ್ಛಗೊಳ್ಳುತ್ತವೆ ಎನ್ನುತ್ತಾರೆ” ಸಂಸ್ಥೆಯ ನಿರ್ವಾಹಕರಲ್ಲೊಬ್ಬರಾದ ರಾಮಗೋಪಾಲ್.

"ಪುಡಿಯಲ್ಲಿ ಗಿಡಮೂಲಿಕೆಗಳ ಮಿಶ್ರಣ ಇರುವುದರಿಂದ ಒಸಡಿನ ನೋವು ನಿವಾರಣೆಯಾಗುತ್ತದೆ. ಎಲೆ-ಅಡಿಕೆ, ತಂಬಾಕು ಸೇವನೆಯಿಂದ ಹಲ್ಲಿನ ಮೇಲೆ ಉಂಟಾಗುವ ಕೆಂಪು ಬಣ್ಣ ಕೂಡಾ ಹೋಗುತ್ತದೆ. ಬೆಳಿಗ್ಗೆ ಹಾಗೂ ರಾತ್ರಿ ಮಲಗುವ ಮುನ್ನ ಉಜ್ಜುವುದರಿಂದ ಹಲ್ಲುಗಳು ಸುರಕ್ಷಿತವಾಗಿರುತ್ತವೆ. ಮುಖ್ಯವಾಗಿ ಯಾವುದೇ ಅಡ್ಡಪರಿಣಾಮಗಳಿಲ್ಲ" ಎಂದು ಅವರು ಸ್ಪಷ್ಟಪಡಿಸುತ್ತಾರೆ.

1887ರಲ್ಲಿ ಜನಿಸಿದ್ದ ಬಿ.ವಿ. ಪಂಡಿತರ ಜನ್ಮಶತಮಾನೋತ್ಸವವನ್ನು 1988ರಲ್ಲಿ ಆಚರಿಸಲಾಗಿತ್ತು.

ಮಾಹಿತಿ ಕೃಪೆ: ಕೆಲವು ವರ್ಷದ ಹಿಂದೆ ಗಣೇಶ ಅಮೀನಘಡ ಅವರ ಪ್ರಜಾವಾಣಿ ಬರಹ

B V Pandit known for Nanjangud Toothpowder famous during last century

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ