ಧರಣೇಂದ್ರಯ್ಯ
ಕೆ. ಎಸ್. ಧರಣೇಂದ್ರಯ್ಯ
ಕೆ. ಎಸ್. ಧರಣೇಂದ್ರಯ್ಯ ಕನ್ನಡ ನಾಡಿಗೆ ದುಡಿದ ಮಹನೀಯರಲ್ಲೊಬ್ಬರು. ಆಡಳಿತಗಾರರಾಗಿ ಮತ್ತು ಬರಹಗಾರರಾಗಿ ಅವರು ಕನ್ನಡ ನಾಡು, ನುಡಿ, ಸಾಹಿತ್ಯ, ಸಂಸ್ಕೃತಿಗಳಿಗೆ ಸಲ್ಲಿಸಿದ ಸೇವೆ ಅಪಾರ.
ಧರಣೇಂದ್ರಯ್ಯನವರು 1903ರ ಡಿಸೆಂಬರ್ 31ರಂದು ತುಮಕೂರು ಜಿಲ್ಲೆಯ ಉರುಡುಗೆರೆ ಹೋಬಳಿ ತಾಳೇನಹಳ್ಳಿಯಲ್ಲಿ ಜನಿಸಿದರು. ತಂದೆ ಸಣ್ಣ ಅಂಬಣ್ಣ. ಪ್ರಾರಂಭಿಕ ಶಿಕ್ಷಣ ಎಲೆಕ್ಯಾತನಹಳ್ಳಿಯಲ್ಲಿ ನಡಯಿತು. ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ., ಬಿ.ಟಿ. ಪದವಿಗಳನ್ನು ಗಳಿಸಿದರು.
ಧರಣೇಂದ್ರಯ್ಯನವರಿಗೆ ಪಂಪ, ರನ್ನ, ಜನ್ನ, ರತ್ನಾಕರರ ಪದ್ಯಗಳನ್ನು ಸರಾಗವಾಗಿ ಹಾಡಿ ಕೇಳುಗರನ್ನು ಮುಗ್ದಗೊಳಿಸುವ ಕಲೆ ಕರಗತವಾಗಿತ್ತು.
ಧರಣೇಂದ್ರಯ್ಯನವರು ಪದವಿಯ ನಂತರ ಶಿಕ್ಷಣ ಇಲಾಖೆಯಲ್ಲಿ ಉದ್ಯೋಗಕ್ಕೆ ಸೇರಿದರು. ಕರ್ನಾಟಕ ಸರಕಾರದ ಸಾಹಿತ್ಯ, ಸಂಸ್ಕೃತಿ, ಅಭಿವೃದ್ಧಿ ಇಲಾಖೆಯ ನಿರ್ದೇಶಕರಾಗಿ ಭದ್ರ ಬುನಾದಿ ಹಾಕಿದರು. ಕನ್ನಡ ವಿಶ್ವಕೋಶ, ಕುಮಾರವ್ಯಾಸ ಭಾರತ, ಕನ್ನಡ-ಕನ್ನಡ ಕೋಶಗಳ ಯೋಜನೆಯನ್ನು ಕಾರ‍್ಯರೂಪಕ್ಕೆ ತರುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು. ಕನ್ನಡಿಗರ ಕಲ್ಪನೆಯ ಸುಂದರ ಕನಸಾದ ರವೀಂದ್ರ ಕಲಾಕ್ಷೇತ್ರ ವಾಸ್ತವಕ್ಕೆ ಇಳಿದುದು ಇವರ ಪ್ರಯತ್ನದಿಂದ. ಧರ್ಮಸ್ಥಳದಲ್ಲಿ ಜರುಗಿದ ಸರ್ವಧರ್ಮ, ಸಾಹಿತ್ಯ, ಸಮ್ಮೇಳನಗಳ ಕಾರ‍್ಯದರ್ಶಿಯಾಗಿ ಅಸಾಧಾರಣ ಕಾರ‍್ಯಕೌಶಲ ತೋರಿದರು.
ಧರಣೇಂದ್ರಯ್ಯನವರು 1951ರಲ್ಲಿ ಮುಂಬಯಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಗೋವಿಂದ ಪೈರವರನ್ನು ಒಪ್ಪಿಸಿ ಹೊರನಾಡಿನಲ್ಲಿ ಸರ್ವಾಂಗ ಸುಂದರವಾಗಿ ನಡೆಸುವುದರಲ್ಲಿ ಪ್ರಮುಖ ಪಾತ್ರವಹಿಸಿದರು.
ಧರಣೇಂದ್ರಯ್ಯನವರು ರಚಿಸಿದ ಕೃತಿಗಳು ಹಲವಾರು. ವನಮಾಲೆ ಕಾದಂಬರಿ ಅನೇಕ ಮರು ಮುದ್ರಣ ಕಂಡ ಕೃತಿ. ಭಾರತ ರೈತನ ಜೀವನ, ಭಾರತ ವಸ್ತು ಪ್ರದರ್ಶನ, ಪಂಪ ಆದಿಪುರಾಣ, ಕಾರ್ಕಳ, ವೇಣೂರು, ಜಿನದತ್ತರಾಯ, ಭಕ್ತಿ ಕುಸುಮಾಂಜಲಿ, ಭಗವಾನ್ ಮಹಾವೀರ,
ಪದ್ಮಾವತಿ ಮಹಾತ್ಮೆ ಮುಂತಾದ ಅನೇಕ ಕೃತಿ ರಚಿಸಿದರು. ಆಡಳಿತ ಶಬ್ದಗಳ ಕನ್ನಡ ಕೋಶ ಇವರ ಸಂಪಾದನೆ. 1 ರಿಂದ 6ನೇ ತರಗತಿವರೆಗೆ ಪಠ್ಯಪುಸ್ತಕ; ಉಪಾಧ್ಯಾಯ ಶಿಕ್ಷಣ ತರಗತಿಗಳಿಗೆ ಪಠ್ಯಪುಸ್ತಕ ಮುಂತಾದ ಯೋಜನೆಗಳಲ್ಲೂ ಅಪಾರವಾಗಿ ಕೊಡುಗೆ ನೀಡಿದ್ದರು.
ಕೆ. ಎಸ್. ಧರಣೇಂದ್ರಯ್ಯನವರಿಗೆ ಜೈನಶಾಸ್ತ್ರ ವಿಶಾರದ, ಸಾಹಿತ್ಯ ಸುಧಾಕರ, ಸಾಹಿತ್ಯ ವಿಭೂಷಣ, ಕರ್ನಾಟಕ ಸಾಹಿತ್ಯ ವಿಭೂಷಣ, ಆಶುಕವಿತಾ ವಿಶಾರದ ಮುಂತಾದ ಅನೇಕ ಗೌರವಗಳು ಸಂದಿದ್ದವು.
ಕೆ. ಎಸ್. ಧರಣೇಂದ್ರಯ್ಯನವರು 1971ರ ಆಗಸ್ಟ್ 13ರಂದು ಈ ಲೋಕವನ್ನಗಲಿದರು.
On the birth anniversary of administrator and writer K. S. Dharanendraiah
ಅವರ ಜನ್ಮಗ್ರಾಮ ಕಾಳೇನ ಹಳ್ಳಿ,,ತಾಳೇನಹಳ್ಳಿ ಅಲ್ಲ. ಅದು ಇರುವ ಹೋಬಳಿ ಊರ್ಡಿಗೆರೆ. ಆಗಸ್ಟ್ ೧೩ ಅವರು ತೀರಿಕೊಂಡ ದಿನ.
ಪ್ರತ್ಯುತ್ತರಅಳಿಸಿ