ವಿಷ್ಣುವರ್ಧನ್
ನನ್ನ ಪ್ರೀತಿಯ ವಿಷ್ಣುವರ್ಧನ್ ನೆನಪು
ಬೇಡವೆಂದರೂ ದಿನಗಳು ವರ್ಷಗಳು ಉರುಳುತ್ತವೆ. ವರ್ಷದ ಕೊನೆ ಬಂದು ಹೊಸ ವರ್ಷವೂ ಬರುತ್ತೆ. ಏನೋ ಹೊಸ ವರ್ಷ ಬಂದಿತು ಎಂಬ ಉತ್ಸಾಹವೂ ಇರುತ್ತೆ. ಹೀಗೆ ಒಂದು ವರುಷ ಮುಗಿಯಿತು ಮತ್ತೊಂದು ವರ್ಷ ಬಂದಿತು ಎಂದು ಸಂಭ್ರಮಿಸುವ ಹೊತ್ತಿನಲ್ಲಿ ಕೆಲವು ವರ್ಷ ಹಿಂದೆ, ನಮಗೆಲ್ಲ ಪ್ರಿಯರಾಗಿದ್ದ ನಟ ವಿಷ್ಣುವರ್ಧನ್ ಮತ್ತು ಮಹಾನ್ ಸಂಗೀತಗಾರ ಸಿ ಅಶ್ವಥ್ ಹೋಗಿಬಿಟ್ಟದ್ದು, ಡಿಸೆಂಬರ್ ತಿಂಗಳ ಮಂಜು ಕವಿದ ವಾತಾವರಣದ ಮಬ್ಬು, ನಮ್ಮ ಹೃದಯಾಂತರಾರಾಳಕ್ಕೂ ಹರಡಿದ ಅನುಭಾವ ಮೂಡಿಸುತ್ತದೆ. ಇತ್ತೀಚೆಗೆ ಅಂದೆ! ಆಗಲೇ 15 ವರ್ಷಗಳು ಕಳೆದು ಹೋಯಿತು. ಆತ್ಮೀಯ ಭಾವಗಳಲ್ಲಿ ಕಾಲಚಕ್ರ ಉರುಳಿದ್ದೇ ಅರಿವಾಗುವುದಿಲ್ಲ.
ಡಿಸೆಂಬರ್ 30, 2009, ಕನ್ನಡಿಗರು ಸುಂದರ, ಸಹೃದಯಿ, ಮೇರು ಅಭಿನೇತರಾದ ವಿಷ್ಣುವರ್ಧನರನ್ನು ಕಳೆದುಕೊಂಡ ದಿನ. "ಅವರ ಬಗ್ಗೆ ನನ್ನಲ್ಲಿ ಅದೇಕೆ ಅಷ್ಟೊಂದು ಪ್ರೀತಿ ಮೂಡಿತು? ಇಷ್ಟೊಂದು ವರ್ಷ ಕಳೆದು, ಅವರಿಲ್ಲದೆಯೇ ಅಷ್ಟೊಂದು ವರ್ಷಗಳಾದರೂ, ಆ ಪ್ರೀತಿ ಒಂದಿನಿತೂ ಕಡಿಮೆಯಾಗದೆ ಹಾಗೆಯೇ ಉಳಿದಿದೆ ಎಂಬುದಕ್ಕೆ ನನ್ನಲ್ಲಿ ಖಂಡಿತ ಉತ್ತರವಿಲ್ಲ!".
ನಾವು ಬೆಳೆಯುವ ದಿನಗಳಲ್ಲಿ ‘ನಾಗರಹಾವು’ ಚಿತ್ರ ಎಲ್ಲರ ಬಾಯಲ್ಲೂ ತೇಲುವ ಒಂದು ಅಲೆಯಾಗಿ ಮಾರ್ದನಿಸತೊಡಗಿತ್ತು. ವಂಶವೃಕ್ಷದಲ್ಲಿ ಸಣ್ಣ ಪಾತ್ರದಲ್ಲಿ ಮೂಡಿದ ನಂತರದಲ್ಲಿ, ನಾಯಕನಟನಾದ ಪ್ರಥಮ ಚಿತ್ರದಲ್ಲೇ ವಿಷ್ಣುವರ್ಧನರು ಕನ್ನಡದ ಚಿತ್ರಾಭಿಮಾನಿಗಳ ಹೃದಯದಲ್ಲಿ ಇನ್ನಿಲ್ಲದಂತೆ ಕುಳಿತರು. ಆ ನಂತರದಲ್ಲಿ ಸುಮಾರು ನಾಲ್ಕು ದಶಕಗಳ ಕಾಲದಲ್ಲಿ ಬೂತಯ್ಯನ ಮಗ ಅಯ್ಯು, ಜಿಮ್ಮಿ ಗಲ್ಲು, ದೇವರ ಗುಡಿ, ಗಲಾಟೆ ಸಂಸಾರ, ಭಾಗ್ಯಜ್ಯೋತಿ, ಕಳ್ಳ ಕುಳ್ಳ, ಸಿಂಗಾಪುರದಲ್ಲಿ ರಾಜಾ ಕುಳ್ಳ, ಸಹೋದರರ ಸವಾಲ್, ಸೊಸೆ ತಂದ ಸೌಭಾಗ್ಯ, ಹೊಂಬಿಸಿಲು, ಸಾಹಸ ಸಿಂಹ, ಬಂಧನ, ಬಂಗಾರದ ಜಿಂಕೆ, ಗುರು ಶಿಷ್ಯರು, ಇಂದಿನ ರಾಮಾಯಣ, ಮಕ್ಕಳ ಸೈನ್ಯ, ಅವಳ ಹೆಜ್ಜೆ, ನೀ ಬರೆದ ಕಾದಂಬರಿ, ಕರ್ಣ, ಸುಪ್ರಭಾತ, ಲಾಲಿ, ಹಾಲುಂಡ ತವರು, ಹಬ್ಬ, ಸೂರ್ಯವಂಶ, ಯಜಮಾನ, ಸಾಮ್ರಾಟ್, ಆಪ್ತ ಮಿತ್ರ, ಆಪ್ತರಕ್ಷಕ ಹೀಗೆ ವಿಭಿನ್ನ ಪಾತ್ರಗಳಲ್ಲಿ ವಿಜ್ರಂಭಿಸಿದ ಅವರ ಚಿತ್ರಗಳ ಸಂಖ್ಯೆ ಕನ್ನಡದಲ್ಲೇ ಇನ್ನೂರು. ಅವರು ಹಿಂದಿ, ತಮಿಳು, ತೆಲುಗು, ಮಲಯಾಳಂನ ಹಲವು ಚಿತ್ರಗಳಲ್ಲೂ ಶಂಕರನಾಗ್ ನಿರ್ದೇಶನದ ಮಾಲ್ಗುಡಿ ಡೇಸ್ ದೂರದರ್ಶನದ ಕಥಾನಕದಲ್ಲೂ ಅಭಿನಯಿಸಿದ್ದರು.
ವಿಷ್ಣುವರ್ಧನರ ಅಭಿನಯದ ಚಿತ್ರಗಳೆಲ್ಲಾ ಶ್ರೇಷ್ಠ ಚಿತ್ರಗಳು ಎಂದೇನಲ್ಲ. ಬಹಳಷ್ಟು ವೇಳೆ ಅವರ ಇಮೇಜನ್ನು ಉಪಯೋಗಿಸಿಕೊಂಡು ರೀಲು ಸುತ್ತವ ಚಿತ್ರಗಳು ಬಹಳಷ್ಟು ಬಂದವು. ಕೆ. ಬಾಲಚಂದರ್ ಅವರು ಹೆಚ್ಚು ಕಾಲ ಕಮಲಹಾಸನ್ ಮತ್ತು ರಜನೀಕಾಂತ್ ಅವರನ್ನು ಬೆಳೆಸಿದಂತೆ ಪುಟ್ಟಣ್ಣ ಕಣಗಾಲರು ವಿಷ್ಣುವರ್ಧನರನ್ನು ಬೆಳೆಸಲಿಲ್ಲ. ಅವರನ್ನು ‘ನಾಗರಹಾವು’ ಚಿತ್ರಕ್ಕೆ ಮಾತ್ರ ಸೀಮಿತಗೊಳಿಸಿದರು. ಸಿದ್ಧಲಿಂಗಯ್ಯನವರು ಅವರನ್ನು ‘ಬೂತಯ್ಯನ ಮಗ ಅಯ್ಯು’ ಚಿತ್ರವಾದ ಮೇಲೆ ‘ಬಿಳಿಗಿರಿಯ ಬನದಲ್ಲಿ’ ಬಳಸಿದರೂ ಒಟ್ಟಾರೆಯಾಗಿ ಆ ಚಿತ್ರ ಪೂರ್ಣ ಉತ್ತಮ ಚಿತ್ರದ ಸ್ವರೂಪ ಹೊಂದಿರಲಿಲ್ಲ. ಕೆ. ಎಸ್. ಎಲ್. ಸ್ವಾಮಿ ಮತ್ತು ರಾಜೇಂದ್ರ ಸಿಂಗ್ ಬಾಬು, ಗೀತಪ್ರಿಯ, ಪಿ ವಾಸು, ದಿನೇಶ್ ಬಾಬು, ನಾಗಾಭರಣ ಮುಂತಾದವರು ವಿಷ್ಣುವರ್ಧನರನ್ನು ಅಲ್ಲಲ್ಲಿ ಉತ್ತಮ ಪಾತ್ರಗಳಲ್ಲಿ ಕಾಣುವಂತೆ ಮಾಡಿದರು ನಿಜ. ಇನ್ನು ಕೆಲವು ನಿರ್ದೇಶಕರು ವಿಷ್ಣುವರ್ಧನರಿಂದ ದೂರದಲ್ಲೇ ಇದ್ದುಬಿಟ್ಟರು. ಹೀಗಾಗಿ ವಿಷ್ಣುವರ್ಧನರ ಬೆಳವಣಿಗೆಯ ಕಾಲದಲ್ಲಿ ಬರಬಹುದಾಗಿದ್ದ ಮಹತ್ವದ ಪಾತ್ರಗಳು ಕನ್ನಡಿಗರಿಗೆ ಅಲಭ್ಯವಾದವು. ಒಂದು ರೀತಿಯಲ್ಲಿ ವಿಷ್ಣುವರ್ಧನರೂ ತಮ್ಮದೇ ಆದ ಇಮೇಜಿನ ಬಂಧನದಲ್ಲಿ ಸಿಲುಕಿ ಈಚೆ ಬರಲಾರದಂತವರಿದ್ದು, ಇದ್ದ ಸೀಮಿತ ಸಾಧ್ಯತೆಗಳಲ್ಲೇ ತಮ್ಮ ಪ್ರತಿಭೆಯನ್ನು ಮೆರೆಸುವ ಪ್ರಯತ್ನದಲ್ಲಿ ತಮ್ಮನ್ನು ತಾವು ಕಟ್ಟಿಹಾಕಿಕೊಂಡಿದ್ದರು. ಅವರು ಸ್ವಲ್ಪ ಮನಸ್ಸು ಮಾಡಿದ್ದರೆ ಗಿರೀಶ್ ಕಾಸರವಳ್ಳಿ, ಗಿರೀಶ್ ಕಾರ್ನಾಡ್, ಪಿ ಶೇಷಾದ್ರಿ ಅಂತಹ ಶ್ರೇಷ್ಟರ ಜೊತೆಯಲ್ಲಿ ಕೆಲಸ ಮಾಡುವುದು ಸಾಧ್ಯವಿತ್ತು. ಹಾಗೆಂದ ಮಾತ್ರಕ್ಕೆ ಅವರು ಚಿತ್ರರಂಗದಲ್ಲಿ ನಟಿಸಿದ ಉತ್ತಮ ಚಿತ್ರಗಳು, ತೋರಿದ ಸುಂದರ ಅಭಿನಯ, ಅವರಲ್ಲಿದ್ದ ತೇಜಸ್ಸು, ಹಲವು ಚಿತ್ರಗಳಲ್ಲಿ ಎತ್ತರಕ್ಕೆ ಮುಟ್ಟಿದ ಅವರ ಅಭಿನಯದ ಉತ್ತಮತೆಗಳಿಗೆ ಯಾವ ಕುಂದೂ ಇಲ್ಲ.
ವಿಷ್ಣುವರ್ಧನರು ಹಲವು ಚಿತ್ರಗಳಲ್ಲಿ ಸಾಮಾನ್ಯರಾಗಿಯೂ, ಕೆಲವೊಂದು ಚಿತ್ರಗಳಲ್ಲಿ ಉತ್ತಮ ಕಲಾವಿದರಾಗಿಯೂ, ಹಲವಾರು ಚಿತ್ರಗಳಲ್ಲಿ ಸೂಪರ್ ಸ್ಟಾರ್ ಎಂಬ ಪಟ್ಟದಲ್ಲೂ ಬೆಳಗಿದ್ದರು. ಆದರೆ ಸೂಪರ್ ಸ್ಟಾರ್ ಪಟ್ಟಗಳಲ್ಲಿ ಸಾಮಾನ್ಯವಾಗಿ ಅಪರೂಪವಾಗಿಬಿಡುವ ಪ್ರಸನ್ನತೆ ಅವರ ಹಲವಾರು ಚಿತ್ರಗಳಲ್ಲಿ ಜೀವಂತವಾಗಿದ್ದದ್ದು ಆತನನ್ನು ಉತ್ತಮ ಕಲಾವಿದರ ಸಾಲಿನಲ್ಲಿ ನಿಚ್ಚಳವಾಗಿ ಉಳಿಸುವಂತದ್ದು. ಇಂತಹ ಕಲಾವಿದನಿಗೆ ರಾಷ್ಟ್ರಮಟ್ಟದ ಪದ್ಮಶ್ರೀ, ಪದ್ಮಭೂಷಣದಂತಹ ಪ್ರಶಸ್ತಿಗಳನ್ನು ನೀಡದಿದ್ದುದು ಇಡೀ ಪ್ರಶಸ್ತಿ ಎಂಬ ವ್ಯವಸ್ಥೆಗೇ ಶಾಶ್ವತವಾಗಿ ಕಳಂಕವಾಗಿ ಉಳಿಯುತ್ತದೆ. ನಮ್ಮ ಅನಂತನಾಗ್ ಅಂತಹ ಶ್ರೇಷ್ಠ ನಟರಿಗೆ ಕೂಡಾ ಅದನ್ನು ನೀಡಲಾಗಿಲ್ಲ ಎಂಬುದನ್ನು ಈಗಲಾದರೂ ಸಂಬಂಧಪಟ್ಟವರು ಅರಿತರೆ ಒಳಿತು.
ವಿಷ್ಣುವರ್ಧನರು ತುಂಬಾ ಮೂಡಿ, ಅಧ್ಯಾತ್ಮದ ಚಿಂತಕ ಇತ್ಯಾದಿಗಳ ಮಾತುಗಳೆಲ್ಲಾ ಜನ ಜನಿತವಾಗಿದ್ದಂತಹವು. ಸಾಹಸಸಿಂಹನಾಗಿ ವೀರಾವೇಶದಿಂದ ಕೇಡಿಗಳನ್ನು ತೆರೆಯಮೇಲೆ ಸದೆಬಡಿಯುತ್ತಿದ್ದ ವಿಷ್ಣುವರ್ಧನರು ವಿಮಾನದಲ್ಲಿ ಹೋಗುವುದಕ್ಕೆ ಭಯ, ನೀರುಕಂಡ್ರೆ ಭಯ ಅದಕ್ಕೇ ವಿದೇಶದಲ್ಲಿ ಚಿತ್ರಿತವಾಗುವ ಪಾತ್ರಗಳಲ್ಲಿ ಅಭಿನಯಿಸುವುದಿಲ್ಲ ಎಂದಿದ್ದು, ಇಂತಹ ಅಧ್ಯಾತ್ಮವಾದಿಗೂ, ಇಂತಹ ಸಾಹಸಸಿಂಹನಿಗೂ ಭಯವೇ ಎಂಬಂತಹ ವೈರುಧ್ಯಗಳನ್ನು ತೋರಿದವು. ಯಾಕೆ ಹೀಗೆ ಎಂದು ಬುದ್ದಿವಂತಿಕೆಗಳು ಕೇಳಬಹುದು. ಸಮಾಜದ ಒಂದು ವರ್ಗ ಅವರಿಗೆ ಬಹಳಷ್ಟು ಎಡರು ತೊಡರುಗಳನ್ನು, ಕಷ್ಟ ಕೋಟಲೆಗಳನ್ನು ಸೃಷ್ಟಿಸಿತ್ತು. ಕೆಂಡದ ಮೇಲೆ ನಡೆದವರಿಗಷ್ಟೇ ಆ ಬಿಸಿಯ ಅನುಭವ ಗೊತ್ತಿರಲಿಕ್ಕೆ ಸಾಧ್ಯ! ಆದರೆ, ಅವರು ತಮ್ಮ ಕಾಯಕದಲ್ಲಿ ತೋರುತ್ತಿದ್ದ ಶ್ರದ್ಧೆ, ಸಮಯಪ್ರಜ್ಞೆ, ಸಾಮರ್ಥ್ಯಗಳು ಕೂಡಾ ಅಷ್ಟೇ ಪ್ರಸಿದ್ಧ. ಚಿತ್ರರಂಗದಲ್ಲಿ ಅವರು ಎಷ್ಟೇ ಪ್ರಸಿದ್ಧಿ ಪಡೆದಿದ್ದಾಗಲೂ ಸಭ್ಯರೆಂದು ಹೆಸರು ಪಡೆದದ್ದು ಕೂಡಾ ಜನಜನಿತ.
ಮನುಷ್ಯ ತನಗೆ ಯಶಸ್ಸು ಬೇಕು ಎಂದು ಹಂಬಲಿಸುವಾಗ ಆತ ಬುಗುರಿಯಂತೆ ತಿರುಗುತ್ತಾ ಇರುತ್ತಾನೆ. ಅದು ಬರುವ ವೇಳೆಗೆ ಅದು ಇಷ್ಟೇನೆ ಎಂಬ ವೈರಾಗ್ಯ ಮೂಡಿರುತ್ತದೆ. ಆಗ ಆತ ತನ್ನನ್ನು ಅತೀ ಸಾಮಾನ್ಯನಾಗಿ ಭಾವಿಸಿ ಲೋಕದ ಕಣ್ಣಿಗೆ ದೊಡ್ಡವನಾಗಿ ಕಾಣತೊಡಗುತ್ತಾನೆ. ಲೋಕವೆಲ್ಲ ಇವ ನಮ್ಮವ ಇವ ನಮ್ಮವ ಎಂದು ಭೀಗುತ್ತಿರುವಾಗ ಅಯ್ಯೋ ಭ್ರಮಾ ಪ್ರಪಂಚವೇ ಎಂದು ವಿಷಾದ ನಗೆ ನಕ್ಕು ಪ್ರಪಂಚ ಬಿಟ್ಟು ಹೊರಟಿರುತ್ತಾನೆ. ಯಾಕೋ ವಿಷ್ಣುವರ್ಧನ ಅವರ ಬದುಕು ಮತ್ತು ಅವರನ್ನು ನಡೆಸಿಕೊಂಡ ಸಮಾಜವನ್ನು ನೋಡಿದಾಗ ಈ ಸತ್ಯ ತುಂಬಾ ರಾಚುತ್ತದೆ. ವಿಷ್ಣು ಸಾರ್, ನೀವು ವರ್ಧಿಸಿದ್ದು ಮತ್ತು ನಮ್ಮಿಂದ ಅಸ್ತಮಿಸಿದ್ದು ಎರಡೂ ಮರೆಯಲಾಗದ್ದು. ನಿಮ್ಮ ನೆನಪು ನಿಮ್ಮ ಕಾಲದಲ್ಲಿದ್ದವರಿಗೆಲ್ಲಾ ಅಳಿಯದಂತದ್ದು.
On Remembrance Day of my favorite hero Vishnuvardhan
ಕಾಮೆಂಟ್‌ಗಳು