ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ನಾ.ಸು. ಭರತನಹಳ್ಳಿ


 ನಾ.ಸು. ಭರತನಹಳ್ಳಿ


ನಾ.ಸು. ಭರತನಹಳ್ಳಿ ಪತ್ರಕರ್ತರಾಗಿ, ಶಿಕ್ಷಕರಾಗಿ, ಅಂಕಣಕಾರರಾಗಿ, ಸಾಹಿತಿಗಳಾಗಿ, ರಂಗಭೂಮಿ ಕಲಾವಿದರಾಗಿ, ಪ್ರಕಾಶಕರಾಗಿ, ಸಮಾಜ ಸೇವಕರಾಗಿ, ಹೀಗೆ ಬಹುಮುಖಿ ಸಾಧಕರು. ಅವರ ಮೂಲ ಹೆಸರು ನಾರಾಯಣ ಹೆಗಡೆ. ಇಂದು ಈ ಮಹನೀಯರ ಸಂಸ್ಮರಣಾ ದಿನ. 

ನಾ.ಸು. ಭರತನಹಳ್ಳಿ 1937ರ ಜುಲೈ 22ರಂದು  ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲ್ಲೂಕಿನ ಭರತನಹಳ್ಳಿಯಲ್ಲಿ ಜನಿಸಿದರು. ತಂದೆ ಸುಬ್ರಾಯ ಹೆಗಡೆಯವರು ಪುರಾಣ, ಪ್ರವಚನ,  ಯಕ್ಷಗಾನ, ತಾಳಮದ್ದಲೆ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಕ್ರಿಯರು. 

ನಾ.ಸು. ಭರತನಹಳ್ಳಿ ಅವರ ಪ್ರಾರಂಭಿಕ ಶಿಕ್ಷಣ ದೂರದ ಕನೇಹ ಹಳ್ಳಿಯ ಮಾಕಾಣೆ ಗುಡ್ಡದ ಮೇಲಿನ ಸೋಗೆ ಝೋಪಡಿಯ ಶಾಲೆಯಲ್ಲಿ ನಡೆಯಿತು. ಮಂಚಿಕೇರಿ ಶಾಲೆಯಲ್ಲಿ ಮಾಧ್ಯಮಿಕ ಶಿಕ್ಷಣ ನಡೆಯಿತು. ಮುಲ್ಕಿ ಪರೀಕ್ಷೆ ಪಾಸಾಗಿ ದೂರದ ಊರಿನ ಹೈಸ್ಕೂಲಿಗೆ ಸೇರಲಾಗದೆ ನಾ.ಸು. ರವರು ಇವರ ತಂದೆಯವರೇ ಪ್ರಾರಂಭಿಸಿದ ಗಾಂವಠಿ ಶಾಲೆಯಲ್ಲಿ ಮಾಸ್ತರಿಕೆ ಕೆಲಸ ಆರಂಭಿಸಿದರು.  ಮಂಜಿಕೇರಿ ಎಂಬಲ್ಲಿ ಪ್ರೌಢಶಾಲೆ ಪ್ರಾರಂಭವಾದ ನಂತರ ಇವರಿಗೂ ಕಲಿಯಲು ಅವಕಾಶವಾಗಿ ಎಸ್‌.ಎಸ್‌.ಎಲ್‌.ಸಿ. ಪರೀಕ್ಷೆಯಲ್ಲಿ ಅತಿ ಹೆಚ್ಚಿನ ಅಂಕ ಗಳಿಸಿ ತೇರ್ಗಡೆಯಾದ ವಿದ್ಯಾರ್ಥಿ ಎನಿಸಿಕೊಂಡಿದ್ದಲ್ಲದೆ ಹಿಂದಿ ಭಾಷೆಯ ಉನ್ನತ ಶಿಕ್ಷಣ ಪಡೆದು ಸರಕಾರಿ ಶಾಲೆಯಲ್ಲಿ ಅಧಿಕೃತ ಹಿಂದಿ ಶಿಕ್ಷಕರೆನಿಸಿದರು. 

ನಾ.ಸು. ಭರತನಹಳ್ಳಿ ಅವರು 'ಭರತನಹಳ್ಳಿ ಸೀಮಾ ಕಲಾ ಸಂಘ' ಎಂಬ ಸಂಸ್ಥೆಯನ್ನು ಸ್ಥಾಪಿಸಿ ಹಲವಾರು ನಾಟಕಗಳನ್ನೂ ನಿರ್ದೇಶಿಸಿದ್ದಲ್ಲದೆ ನಟರಾಗಿಯೂ ಪ್ರಸಿದ್ಧರಾದರು. ಟಿಪ್ಪುಸುಲ್ತಾನ್‌ ನಾಟಕದ ಕಾರನ್‌ವಾಲೀಸ್‌ ಪಾತ್ರ, ಕಂದಗಲ್‌ ಹನುಮಂತರಾಯರ ಅಕ್ಷಯಾಂಬರದ ಅಭಿಮನ್ಯು, ಜಿ.ಜಿ. ಹೆಗಡೆಯವರ ದೇವತಾನಾಟಕದಲ್ಲಿ ಸ್ತ್ರೀ ಪಾತ್ರ, ಇನಾಮದಾರ್ ನಾಟಕ ‘ಅಗ್ನಿಕುಂಡ’ ನಾಟಕದಲ್ಲಿನ ಪ್ರಮುಖ ಪಾತ್ರ ನಾ.ಸು. ರವರಿಗೆ ಪ್ರಖ್ಯಾತಿಯನ್ನು ತಂದುಕೊಟ್ಟ ನಾಟಕದ ಪಾತ್ರಗಳು. ಇದಲ್ಲದೆ ಆಧುನಿಕ ತಂತ್ರವನ್ನುಪಯೋಗಿಸಿಕೊಂಡು ಯುವ ಕಲಾವಿದರ ತಂಡಕಟ್ಟಿ ರಥಮುಸಲ, ಆವಾಹನೆ, ಅಶೋಕ, ಕಾಲಾಯತಸ್ಮೈನಮಃ ಮುಂತಾದ ನವ್ಯ ನಾಟಕಗಳನ್ನೂ ನಿರ್ದೇಶಿಸಿದರು. 

ನಾ.ಸು. ಭರತನಹಳ್ಳಿ ಅವರು ಬರೆದ ಕಥೆಗಳು ಪ್ರಜಾಮತ, ಕರ್ಮವೀರ, ಪತ್ರಿಕೆಗಳಲ್ಲಿ ಬೆಳಕು ಕಾಣುವುದರ ಜೊತೆಗೆ ಸ್ಥಳೀಯ ಪತ್ರಿಕೆಗಳಾದ ಪಾಂಡೇಶ್ವರ ಅವರ ‘ಜನತಾ’ ಪತ್ರಿಕೆ ಹಾಗೂ 'ನಾಗರಿಕ ಪತ್ರಿಕೆ'ಗಳಲ್ಲೂ ಪ್ರಕಟವಾಗತೊಡಗಿದುವು. ಕಾಲುದಾರಿಯಷ್ಟೆ ಅಗಲದ ಕಾಡುಹಾದಿಯಲ್ಲಿ ಕೆರೆಹೊಸಳ್ಳಿ ಶಾಲೆಗೆ ಶಿಕ್ಷಕರಾಗಿ ಸೈಕಲ್‌ ತುಳಿಯುತ್ತಿದ್ದಾಗ, ಕಾಲುದಾರಿಯಲ್ಲಿ ಹರಡಿದ್ದ ಹೂಗಳ ಮೇಲೆ ಸೈಕಲ್‌ ಚಕ್ರ ಹರಿದು ‘ಹಿಚುಕಲ್ಪಟ್ಟ ಹೂಗಳ ವ್ಯಥೆಯನ್ನಾಧರಿಸಿ’ ಪದ್ಯಗಳನ್ನೂ ಬರೆದರು. ಸುತ್ತಮುತ್ತಲ ಪ್ರಕೃತಿಯಲ್ಲಿ ಕಂಡದ್ದೇ ಇವರ ಕಾವ್ಯದ ವಸ್ತುವಾದವು. 

ನಾ.ಸು. ಭರತನಹಳ್ಳಿ ಅವರ ಪ್ರಕಟಿತ ಕೃತಿಗಳಲ್ಲಿ ಪ್ರಕೃತಿ-ವಿಕೃತಿ (ಕವನ ಸಂಕಲನ), ಬಯಲು ಬತ್ತಲೆ (ಕಥಾ ಸಂಕಲನ), ಭೂಮಿಕೆ, ಪರಿವೃತ, ಕಾಳಿದಾಸ ನಂದಿನಿ (ಕಾದಂಬರಿ), ಹೆಜ್ಜೆಗುರುತು (ಪತ್ರಿಕಾಚರಿತ್ರೆ), ಪಂಜರದಲ್ಲಿ ಹುಲಿ, ಆಕಾಶ ಹರಿದು ಬೀಳುತ್ತದೆ,  ರೊಬೊಟೊ ಮತ್ತು ಇತರ ಚಿಹ್ನೆಗಳು (ಮಕ್ಕಳ ನಾಟಕ), ಚಿಂತನೆಯ ತುಣುಕು, ಅರಿವಿನ ಬೆಳಕಿನೆಡೆಗೆ (ಚಿಂತನೆಯ ಕೃತಿಗಳು), ಅವಾಂತರ (ಪ್ರೌಢನಾಟಕ) ಪ್ರಕೃತಿ-ವಿಕೃತಿ ಮತ್ತು ಶರಣೆಂಬೆತಾಯಿಗೆ (ಭಾವಗೀತೆಗಳು), ನಾಮ ಭಗವಂತ (ದಿವ್ಯಚರಿತ್ರೆ-ಅನುವಾದ), ಶ್ರೀನುಡಿಯೊಳು (ತತ್ತ್ವಚಿಂತನೆ), ಡಾ. ಗೌರೀಶ ಕಾಯ್ಕಿಣಿ (ಜೀವನ ಚರಿತ್ರೆ), ತಾಲಿಬಾನ್‌ ಅಪಘಾನ್‌ ಮತ್ತು ನಾನು (ಅನುವಾದ) ಮುಂತಾದವು ಸೇರಿವೆ.

ನಾ.ಸು. ಭರತನಹಳ್ಳಿ ಅವರು ಪತ್ರಿಕೋದ್ಯಮಿಯಾಗಿ ‘ಮುನ್ನಡೆ’ ಮತ್ತು ‘ಸ್ವರ್ಣವಲ್ಲೀಪ್ರಭಾ’ ಪತ್ರಿಕೆಗಳ ಪ್ರಧಾನ ಸಂಪಾದಕರಾಗಿ ಕಾರ್ಯನಿರ್ವಹಣೆ ಮಾಡಿದರು.  ಇದಲ್ಲದೆ ಡೆಕ್ಕನ್‌ ಹೆರಾಲ್ಡ್‌, ಪ್ರಜಾವಾಣಿ ಪತ್ರಿಕೆಗಳಿಗೆ ವರದಿಗಾರರಾಗಿ, ಧಾರವಾಡದ ಆಕಾಶವಾಣಿಗಾಗಿ ಜಿಲ್ಲಾವಾರ್ತಾಪತ್ರದ ಬಾತ್ಮೀದಾರರಾಗಿ, ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಗ್ರಂಥವಿಮರ್ಶಕರಾಗಿ ಸಾಹಿತ್ಯ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರು. ವಿಜಯವಾಣಿಯಲ್ಲಿ ಮೂಡಿಬರುತ್ತಿದ್ದ ಅವರ 'ಪರಂಪರೆ' ಅಂಕಣ ಭಾರತೀಯ ಸಾಂಸ್ಕೃತಿಕ ಪರಂಪರೆಗಳ ಮೇಲೆ ಬೆಳಕು ಚೆಲ್ಲುತ್ತಿತ್ತು.

ನಾ.ಸು. ಭರತನಹಳ್ಳಿ  ಅವರು ಉತ್ತರಕನ್ನಡ ಜಿಲ್ಲಾ ಪತ್ರಿಕಾ ಮಂಡಲಿ, ರಾಜ್ಯ ಸಣ್ಣ ಪತ್ರಿಕಾ ಸಂಪಾದಕರ ಮಂಡಲಿ, ಕಾರ್ಯನಿರತ ಪತ್ರಕರ್ತರ ಸಂಘ, ಉತ್ತರ ಕನ್ನಡ ಜಿಲ್ಲಾ ಪತ್ರಿಕೆಗಳ ಪ್ರಕಾಶಕ-ಮುದ್ರಕರ ಸಂಘ ಮುಂತಾದವುಗಳ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು. 

ನಾ. ಸು.  ಭರತನಹಳ್ಳಿಯವರು ಆರು ದಶಕಗಳಿಗೂ ಹೆಚ್ಚು ಕಾಲ ಸಾಹಿತ್ಯ ಸೇವೆ ಮಾಡಿದ್ದರು. ಹಲವು ಶ್ರೇಷ್ಠ ಹಿಂದಿ ಗ್ರಂಥಗಳನ್ನು ಕನ್ನಡಕ್ಕೆ ಭಾಷಾಂತರಿಸಿದ್ದರು. ಕಳೆದ ಎರಡು ದಶಕಗಳ ಹಿಂದೆ ರಾಜ್ಯದಲ್ಲೇ ಮೊದಲ ಬಾರಿಗೆ ತಾಲೂಕು ಕೇಂದ್ರವೊಂದರಲ್ಲಿ ಕನ್ನಡ ಸಾಹಿತ್ಯ ಭವನವನ್ನು ಕಟ್ಟಿನಿಲ್ಲಿಸಿದ ಹೆಗ್ಗಳಿಕೆ ಇವರದ್ದಾಗಿತ್ತು. 

ನಾ.ಸು. ಭರತನಹಳ್ಳಿ ಅವರ ಸಾಹಿತ್ಯ ಮತ್ತು ಪತ್ರಿಕೋದ್ಯಮದಲ್ಲಿನ ಕೊಡುಗೆಗಾಗಿ ಕೆ.ಶಾಮರಾವ್ ದತ್ತಿ ‘ಶ್ರೇಷ್ಠಪತ್ರಕರ್ತ’ ಪ್ರಶಸ್ತಿ, ಅರುವತ್ತು ತುಂಬಿದ ಸಂದರ್ಭದಲ್ಲಿ ಸನ್ಮಾನ, ಮೂಡಬಿದಿರೆಯಲ್ಲಿ ನಡೆದ 71ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ, ರಾಜ್ಯ ಮಾಧ್ಯಮ ಅಕಾಡಮಿ ಪ್ರಶಸ್ತಿ, ಹಳಿಯಾಲ ತಾಲ್ಲೂಕು ಸಮ್ಮೇಳನದಲ್ಲಿ ವಿಶೇಷ ಪುರಸ್ಕಾರ, ಕರ್ನಾಟಕಶ್ರೀ ಪ್ರಶಸ್ತಿ, ಕಾಸರಗೋಡಿನ ಕಯ್ಯಾರ ಕಿಞ್ಞಣ್ಣ ರೈ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡಮಿ ಗೌರವ ಸೇರಿದಂತೆ ಅನೇಕ ಗೌರವಗಳು ಸಂದಿದ್ದವು. ಯಲ್ಲಾಪುರ ತಾಲ್ಲೂಕು ಮೊದಲ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ,
ನಾಸು ಅವರು ಉತ್ತರ ಕನ್ನಡ ಜಿಲ್ಲಾ 14ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರ ಗೌರವವವನ್ನೂ ಪಡೆದಿದ್ದರು. 

ನಾ.ಸು. ಭರತನಹಳ್ಳಿ ಅವರು  2020ರ ಡಿಸೆಂಬರ್ 25ರಂದು ತಮ್ಮ 84ನೇ ವಯಸ್ಸಿನಲ್ಲಿ ನಿಧನರಾದರು. 

On rembrance day  of N. S. Bharathanahalli

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ