ಬೊಮನ್ ಇರಾನಿ
ಬೊಮನ್ ಇರಾನಿ
ಬೊಮನ್ ಇರಾನಿ ಇತ್ತೀಚಿನ ಕಳೆದ ಎರಡು ದಶಕಗಳ ಚಿತ್ರರಂಗ ಕಂಡ ಅದ್ಭುತ ಕಲಾವಿದ.
ಬೊಮನ್ ಇರಾನಿ 1959ರ ಡಿಸೆಂಬರ್ 2ರಂದು ಜನಿಸಿದರು. ಇವರದು ಜೊರಾಸ್ಟ್ರಿಯನ್ ಕುಟುಂಬ. ಈತ ಹುಟ್ಟುವ 6 ತಿಂಗಳ ಮೊದಲೇ ತಂದೆ ನಿಧನರಾಗಿದ್ದರು. ಇರಾನಿ ಡಿಸ್ಲೆಕ್ಸಿಕ್ ಆಗಿದ್ದರಂತೆ. ಅವರ ತಾಯಿ ಅಲೆಕ್ಸಾಂಡರ್ ಚಿತ್ರಮಂದಿರದಲ್ಲಿ ಪದೇ ಪದೇ ಚಲನಚಿತ್ರಗಳನ್ನು ವೀಕ್ಷಿಸಲು ಪ್ರೋತ್ಸಾಹಿಸುತ್ತಿದ್ದರಂತೆ. ಅಲ್ಲಿ ಅವರು ಶಾಲೆ ಮುಗಿದ ನಂತರ ಪ್ರತಿದಿನ ಛಾಯಾಗ್ರಹಣ ಮತ್ತು ಕಲೆಯನ್ನು ವೀಕ್ಷಿಸಲು ಹೋಗುತ್ತಿದ್ದರು. ತಮ್ಮ ಮಾಧ್ಯಮಿಕ ಶಿಕ್ಷಣವನ್ನು ಸೇಂಟ್ ಮೇರಿ ಶಾಲೆಯಲ್ಲಿ ಮುಗಿಸಿದ ನಂತರ ಮುಂಬೈನ ಮಿಥಿಬಾಯಿ ಕಾಲೇಜಿನಲ್ಲಿ 2 ವರ್ಷಗಳ ಹೋಟೆಲ್ ಮಾಣಿ ತರಬೇತಿ ಪಡೆದರು.
ಬೊಮನ್ ಇರಾನಿ ತಾಜ್ ಮಹಲ್ ಪ್ಯಾಲೇಸ್ ಅಂಡ್ ಟವರ್ ಅಲ್ಲಿ ಕೆಲಸಕ್ಕೆ ಸೇರಿದರು. ಜೊತೆಗೆ 32 ವರ್ಷ ವಯಸ್ಸಿನವರೆಗೂ ತಾಯಿ ನಡೆಸುತ್ತಿದ್ದ ಬೇಕರಿ ಮತ್ತು ನಮ್ಕೀನ್ ಅಂಗಡಿಯನ್ನು ಸಹ ನಿರ್ವಹಿಸುತ್ತಿದ್ದರು. ರುಚಿ ರುಚಿಯಾಗಿ ಆಲೂಗಡ್ಡೆ ಚಿಪ್ಸ್ ಮತ್ತು ಚಹಾವನ್ನು ತಯಾರಿಸಿ ಮಾರಾಟ ಮಾಡುತ್ತಿದ್ದರು.
ಬೊಮನ್ ಇರಾನಿ ತಾಜ್ ಹೋಟಲ್ನಲ್ಲಿ ತಮಗೆ ಬರುತ್ತಿದ್ದ ಟಿಪ್ಸ್ ಕೂಡಿಟ್ಟು ಕ್ಯಾಮೆರಾ ಕೊಂಡು ಕ್ರೀಡಾಳುಗಳ ಫೋಟೊ ತೆಗೆದು ಹತ್ತಿಪ್ಪತ್ತು ರೂಪಾಯಿಗೆ ಚಿತ್ರ ಮಾರುತ್ತಿದ್ದರು. ಇಂಟರ್ನಾಷನಲ್ ಬಾಕ್ಸಿಂಗ್ ಸ್ಪರ್ಧೆಯ ಚಿತ್ರಗಳನ್ನೂ ತೆಗೆಯುವಂತಾದರು.
ಬೊಮನ್ ಇರಾನಿ ಅವರಿಗೆ ಶಾಲಾ ಕಾಲೇಜು ದಿನಗಳಿಂದಲೂ ನಟನೆಯಲ್ಲಿ ಉತ್ಸಾಹ. ಅವರು 1981 ರಿಂದ 1983ರವರೆಗೆ ಹಂಸರಾಜ್ ಸಿದ್ಧಿಯಾ ಅವರ ಬಳಿ ತರಬೇತಿ ಪಡೆದರು.
ಇರಾನಿಯವರ ಮಾರ್ಗದರ್ಶಕ ಅಲಿಕ್ ಪದಮ್‌ಸೀ ಅವರು ಹಿರಿಯ ರಂಗಭೂಮಿ ನಟರಾಗಿ ಗಾಂಧಿ ಚಿತ್ರದಲ್ಲಿ ಮೊಹಮ್ಮದ್ ಅಲಿ ಜಿನ್ನಾ ಪಾತ್ರಕ್ಕೆ ಹೆಸರುವಾಸಿಯಾದವರು. ಇರಾನಿಯವರ ಆರಂಭಿಕ ರಂಗಭೂಮಿ ಪರಿಣತಿ 'ರೋಶ್ನಿ'ಯಲ್ಲಿ ಕಾಣಬಂತು. ಫ್ಯಾಮಿಲಿ ಟೈಸ್, ಮಹಾತ್ಮ ವರ್ಸಸ್ ಮಹಾತ್ಮ ಮುಂತಾದ ಪ್ರಮುಖ ನಾಟಕಗಳಲ್ಲಿ ನಟಿಸಿದರು. ‘ಐ ಅಮ್ ನಾಟ್ ಬಾಜಿರಾವ್' ಅವರ ಅತ್ಯಂತ ಸುಪ್ರಸಿದ್ಧ ನಾಟಕವಾಗಿದ್ದು ನಿರಂತರ 10 ವರ್ಷಗಳ ಕಾಲ ನಡೆಯಿತು.
ಬೊಮನ್ ಇರಾನಿ 2000ದ ವರ್ಷದಲ್ಲಿ ತೆರೆಯಮೇಲೆ ನಟನೆಗೆ ಬಂದರು. ಅವರು ಫ್ಯಾಂಟಾ, ಸಿಯಟ್ ಮತ್ತು ಕ್ರಾಕ್‌ಜಾಕ್ ಬಿಸ್ಕೆಟ್‌ಗಳಂತಹ ಹಲವಾರು ಜಾಹೀರಾತುಗಳಲ್ಲಿ ಅಭಿನಯಿಸಲು ಪ್ರಾರಂಭಿಸಿದರು. 'ಡರ್ನಾ ಮನ ಹೈ' ಚಿತ್ರದಲ್ಲಿ ನಿರ್ವಹಸಿದ ಕಿರು ಪಾತ್ರ ಮೆಚ್ಚುಗೆಯನ್ನು ಗಳಿಸಿತು.
2003ರ ಪ್ರಸಿದ್ಧ ಹಾಸ್ಯಚಿತ್ರ ಮುನ್ನಾ ಭಾಯ್ ಎಂ.ಬಿ.ಬಿ.ಎಸ್' ನಲ್ಲಿನ
ಅಭಿನಯದಿಂದ ಬೊಮನ್ ಇರಾನಿ ಪ್ರಸಿದ್ಧರಾದರು. ನಂತರ ಇವರ 'ಲಗೇ ರಹೋ ಮುನ್ನಾ ಭಾಯ್' ಅಭಿನಯ ಕೂಡಾ ಪ್ರಸಿದ್ಧಿ ಪಡೆಯಿತು . '3 ಈಡಿಯಟ್ಸ್'ನಲ್ಲಿನ ಅಭಿನಯಕ್ಕಾಗಿ ಫಿಲ್ಮ್‌ಫೇರ್ ಮತ್ತು ಅನೇಕ ಪ್ರಶಸ್ತಿ ಗಳಿಸಿದರು.
ಬೊಮನ್ ಇರಾನಿ ದೋಸ್ತಾನಾ, ಖೋಸ್ಲಾ ಕಾ ಘೋಸ್ಲಾ, ವಕ್ತ್: ದಿ ರೇಸ್ ಎಗೇನ್ಸ್ಟ್ ಟೈಮ್, ನೋ ಎಂಟ್ರಿ, ಹೌಸ್‌ಫುಲ್, ಏಕ್ ಮೇನ್ ಔರ್ ಏಕ್ ತು, ಹೌಸ್‌ಫುಲ್ 2, ಮತ್ತು ಕಾಕ್‌ಟೈಲ್‌ನಂತಹ ಅನೇಕ ಚಿತ್ರಗಳಲ್ಲಿ ಹಾಸ್ಯ ಪಾತ್ರಗಳನ್ನು ನಿರ್ವಹಿಸಿದರು. ವೀರ್ ಜಾರಾ, ಮೈನೆ ಗಾಂಧಿ ಕೊ ನಹಿಂ ಮಾರಾ, ಲಕ್ಷ್ಯ, ಹನಿಮೂನ್ ಟ್ರಾವೆಲ್ಸ್ ಪ್ರೈ. ಲಿಮಿಟೆಡ್., ಸಾರಿ ಭಾಯ್!, ಪೇಜ್ 3, ಅಂಡ್ ಮೈ ವೈಫ್ಸ್ ಮರ್ಡರ್ ಮುಂತಾದ ಚಿತ್ರಗಳಲ್ಲಿ ಪೋಷಕ ಪಾತ್ರ ನಿರ್ವಹಿಸಿದರು.
ಡಾನ್: ದಿ ಚೇಸ್ ಬಿಗಿನ್ಸ್ ಎಗೇನ್, ಡಾನ್ 2: ದಿ ಕಿಂಗ್ ಈಸ್ ಬ್ಯಾಕ್, ಏಕಲವ್ಯ ಮುಂತಾದ ಚಿತ್ರಗಳಲ್ಲಿ ನಕಾರಾತ್ಮಕ ಪಾತ್ರವಹಿಸಿದರು. ತೆಲುಗಿನಲ್ಲೂ, ಕನ್ನಡದಲ್ಲೂ ನಟಿಸಲು ಆಹ್ವಾನಿತರಾದರು.
ಬೊಮನ್ ಇರಾನಿ 'ಇರಾನಿ ಮೂವಿಟೋನ್' ಎಂಬ ತಮ್ಮದೇ ನಿರ್ಮಾಣ ಸಂಸ್ಥೆಯನ್ನೂ ಸ್ಥಾಪಿಸಿದ್ದಾರೆ.
On the birthday of my favorite Boman Irani
ಕಾಮೆಂಟ್‌ಗಳು