ಸಿಲ್ಕ್ ಸ್ಮಿತಾ
ಸಿಲ್ಕ್ ಸ್ಮಿತಾ
ಸಿಲ್ಕ್ ಸ್ಮಿತಾ ಚಲನಚಿತ್ರರಂಗದ ಪ್ರಖ್ಯಾತ ನಟಿ. ಮೂನ್ರಾಂ ಪಿರೈ, ಹಳ್ಳಿ ಮೇಷ್ಟ್ರು ಅಂತಹ ಚಿತ್ರಗಳಲ್ಲಿ ಮೂಡಿಬಂದ ಮಾದಕತೆಯ ಅಭಿವ್ಯಕ್ತಿಗಳಲ್ಲಿ ನೆನಪಾಗುವ ಆಕೆ, ಬದುಕಿನ ದುರಂತವಾಗಿಯೂ ನೆನಪಾಗುತ್ತಾರೆ.
ವಿಜಯಲಕ್ಷ್ಮಿ ವಡ್ಲಪಟ್ಲ ಎಂಬುದು ಸಿಲ್ಕ್ ಸ್ಮಿತಾ ಮೂಲಹೆಸರು. ಆಕೆ ಜನಿಸಿದ್ದು 1960ರ ಡಿಸೆಂಬರ್ 2ರಂದು, ಆಂಧ್ರಪ್ರದೇಶದ ಎಲೂರಿನ ಕೊವ್ವಳ್ಳಿ ಗ್ರಾಮದಲ್ಲಿ. ತಂದೆ ರಾಮಲ್ಲು. ತಾಯಿ ಸರಸಮ್ಮ. ಬಡತನದ ಕುಟುಂಬದಲ್ಲಿ ಅಕೆ ಓದಿದ್ದು ನಾಲ್ಕನೇ ತರಗತಿವರೆಗೆ ಮಾತ್ರಾ. ಬೆಳೆಯುತ್ತಿದ್ದ ಹೆಣ್ಣುಮಗಳು ಆಸುಪಾಸಿನಲ್ಲಿ ಅನಾಹ್ವಾನಿತ ಗಮನಗಳ ಕೇಂದ್ರವಾದಾಗ ಹೆತ್ತವರು ಚಿಕ್ಕವಯಸಲ್ಲೇ ಮದುವೆ ಮಾಡಿ ಕೈತೊಳೆದುಕೊಂಡರು. ಗಂಡ ಮತ್ತು ಮನೆಯವರ ಹಿಂಸೆ ತಾಳಲಾರದೆ ಹುಡುಗಿ ಮನೆಬಿಟ್ಟು ಓಡಿದಳು.
ಸ್ಮಿತಾ ಮೊದಮೊದಲು ಒಬ್ಬ ನಟಿಗೆ ಟಚ್-ಅಪ್ ಕಲಾವಿದೆಯಾಗಿ ಬಂದು ಕೆಲವು ಸಣ್ಣಪುಟ್ಟ ಅಭಿನಯದ ಅವಕಾಶಗಳನ್ನು ಗಳಿಸಿದರು. ಎವಿಎಮ್ ಸ್ಟುಡಿಯೋ ಬಳಿ ಹಿಟ್ಟಿನ ಗಿರಣಿಯಲ್ಲಿದ್ದ ವಿನು ಚಕ್ರವರ್ತಿ ಎಂಬುವರು ಈಕೆಗೆ ಸ್ಮಿತಾ ಎಂಬ ಹೆಸರು ನೀಡಿ ಆಶ್ರಯ ನೀಡಿದರು. ಅವರ ಪತ್ನಿ ಈಕೆಗೆ ಇಂಗ್ಲಿಷ್ ಮತ್ತು ನೃತ್ಯ ಕಲಿಕೆಯ ವ್ಯವಸ್ಥೆ ಮಾಡಿದರು. ಆದರೆ ಆಕೆಗಿದ್ದ ಲೈಂಗಿಕ ಆಕರ್ಷಣಾ ನೋಟಕ್ಕಿದ್ದ ಬೇಡಿಕೆಯ ದೆಸೆಯಿಂದಾಗಿ, ಕ್ಯಾಬರೆ ನೃತ್ಯ ಮತ್ತು ಮೋಹಕ ಹೆಣ್ಣಿನ ಪಾತ್ರಗಳು ದಕ್ಕಿ, ಆಕೆ ಅಂತಹ ಪಾತ್ರಗಳಿಗೇ ಮೀಸಲಾದ ಅಭಿನೇತ್ರಿಯಾಗಿಬಿಟ್ಟರು.
1979ರಲ್ಲಿ ಮೂಡಿಬಂದ 'ವಂಡಿಚಕ್ರಮ್’ ಚಿತ್ರದಲ್ಲಿನ ಪಾತ್ರವಾದ 'ಸಿಲ್ಕ್' ಹೆಸರಿನಿಂದ ಸಿಲ್ಕ್ ಸ್ಮಿತಾ ಎಂಬ ಹೆಸರು ಪ್ರಖ್ಯಾತಗೊಂಡಿತು. ತಮಿಳು,ಮಲಯಾಳಂ, ತೆಲುಗು, ಕನ್ನಡ ಮತ್ತು ಹಿಂದಿ ಚಿತ್ರಗಳಲ್ಲಿ ಈಕೆಗೆ ಬಹಳ ಬೇಡಿಕೆ ಬಂತು. ಅಮರನ್, ಹಳ್ಳಿ ಮೇಷ್ಟ್ರು ಚಿತ್ರಗಳಲ್ಲಿನ ಐಟಂ ನಂಬರುಗಳು ಬಾಕ್ಸ್ ಆಫೀಸ್ ಸಂಭ್ರಮ ಮೆರೆದವು. ಅಲೈಗಳ್ ಓಯುವುದಿಲ್ಲೈ, ಲಾವಣ್ಯಮ್ (ಹಿಂದಿಯಲ್ಲಿ 'ರೇಷ್ಮಾ ಕಿ ಜವಾನಿ'), ಮೂನ್ರಾಂ ಪಿರೈ (ಹಿಂದಿಯಲ್ಲಿ 'ಸದ್ಮಾ') ಇವೆಲ್ಲದರಲ್ಲಿ ಈಕೆಯನ್ನು ಟೈಪ್ ಕ್ಯಾಸ್ಟ್ ಮಾಡಿ ಲಾಭ ಮಾಡಿಕೊಂಡವರು ಪ್ರಸಿದ್ಧ ನಿರ್ದೇಶಕರು. ಚಲನಚಿತ್ರ ಇತಿಹಾಸಕಾರರಾದ ರಂಡಾರ್ ಗೈ"ಸಿಲ್ಕ್ ಸ್ಮಿತಾಳ ಅಭಿನಯದ ಕೇವಲ ಒಂದೇ ಒಂದು ಹಾಡಿನ ಸೇರ್ಪಡೆಯಿಂದ ಅನೇಕ ವರ್ಷಗಳ ಕಾಲ ವ್ಯಾಪಾರವಿಲ್ಲದೆ ಕ್ಯಾನುಗಳಲ್ಲಿದ್ದ ಚಿತ್ರಗಳು ಮರುಜೀವ ಪಡೆದವು" ಎಂದು ಅಭಿಪ್ರಾಯಿಸುತ್ತಾರೆ.
ಸಿಲ್ಕ್ ಸ್ಮಿತಾ ತಮ್ಮ 17ವರ್ಷದ ಚಿತ್ರಜೀವನದಲ್ಲಿ 450 ಚಿತ್ರಗಳಲ್ಲಿ ನಟಿಸಿದ್ದರು. ಸಹಜ ಸುಂದರಿಯಾಗಿದ್ದ ಆಕೆ ವೃತ್ತಿಯಲ್ಲಿ ಸಮಯಪಾಲನೆಯ ಶಿಸ್ತಿಗೆ, ಕಡಿಮೆ ಮಾತಿಗೆ ಮತ್ತು ನೇರ ಅಭಿಪ್ರಾಯಗಳಿಗೆ ಹೆಸರಾಗಿದ್ದರಂತೆ.
ಅಂತರ್ಮುಖಿಯಾಗಿದ್ದ ಸಿಲ್ಕ್ ಸ್ಮಿತಾ 1996ರ ಸೆಪ್ಟೆಂಬರ್ 23ರಂದು ತಮ್ಮ ಜೀವನವನ್ನು ಕಡೆಗಾಣಿಸಿಕೊಂಡರು. ಆಕೆಯ ಕುರಿತು ಚಿತ್ರಬರುತ್ತದೆ ಎಂಬ ಮಾತಿತ್ತು. ಚಿತ್ರ, ಕತೆ ಇವುಗಳೆಲ್ಲ ವ್ಯಕ್ತಿಯೊಬ್ಬರ ಕಾಣುವ ಬದುಕಿನ ಅಂಶಗಳ ಕುರಿತು ಹೇಳುತ್ತೆ. ಒಬ್ಬ ವ್ಯಕ್ತಿಯ ಅಂತರಂಗದ ಅಳಲನ್ನು ಅವು ಕಾಣಲಾರವೇನೊ.
On birth anniversary of Silk Smitha
ಕಾಮೆಂಟ್‌ಗಳು