ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸುಚಿತ್ರಾ ಹೆಗಡೆ



 ಸುಚಿತ್ರಾ ಹೆಗಡೆ


ಸುಚಿತ್ರಾ ಹೆಗಡೆ ನಮ್ಮ ನಡುವಿನ ವಿಶಿಷ್ಟ ಬರಹಗಾರ್ತಿ ಮತ್ತು ವಿಶ್ವದೆಲ್ಲೆಡೆಯನ್ನೂ ನಮ್ಮ ಕಣ್ಮುಂದಿರಿಸುತ್ತಿರುವ ಸಾಂಸ್ಕೃತಿಕ ಚಿಂತಕಿ.

ಡಿಸೆಂಬರ್ 30, ಸುಚಿತ್ರಾ ಹೆಗಡೆ ಅವರ ಜನ್ಮದಿನ. ಅವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ, ಕುಮಟಾದ, ಕತಗಾಲ ಗ್ರಾಮದವರು. ತಾಯಿ ಶಾರದಾ ಭಟ್.  ತಂದೆ ಪಿ.ಆರ್ ಭಟ್ಟರು ಹೈಸ್ಕೂಲು  ಉಪಾಧ್ಯಾಯರಾಗಿದ್ದರು. ಕುಮಟಾದ ಬಾಳಿಗಾ ಕಾಲೇಜಿನಲ್ಲಿ ಆಂಗ್ಲ ಸಾಹಿತ್ಯದಲ್ಲಿ ಶ್ರೇಷ್ಠ ದರ್ಜೆಯಲ್ಲಿ ಪದವಿ ಪಡೆದ ಸುಚಿತ್ರಾ, ಕಮಲಾ ಬಾಳಿಗಾ ಕಾಲೇಜಿನಿಂದ ರ್‍ಯಾಂಕ್ ಸಾಧನೆಯೊಂದಿಗೆ ಬಿ.ಎಡ್ ಪದವಿ ಪಡೆದರು. ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಿಂದ ಆಂಗ್ಲ ಸಾಹಿತ್ಯದಲ್ಲಿ  ಮತ್ತೊಂದು ರ್‍ಯಾಂಕ್ ಕಿರೀಟದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಈಗ ಅವರು ಮೈಸೂರು ನಿವಾಸಿಯಾಗಿದ್ದಾರೆ. 

ಎರಡು ದಶಕಗಳಿಗೂ ಹೆಚ್ಚು ಕಾಲ ಹೈಸ್ಕೂಲು, ಕಾಲೇಜುಗಳಲ್ಲಿ ಉಪಾಧ್ಯಾಯಿನಿಯಾಗಿ, ಪ್ರಾಂಶುಪಾಲೆಯಾಗಿ, ಆಂಗ್ಲ ವಿಭಾಗದ ಮುಖ್ಯಸ್ಥೆಯಾಗಿ  ಸೇವೆ ಸಲ್ಲಿಸಿದ ಸುಚಿತ್ರಾ ಮುಂದೆ ತಮ್ಮದೇ ಆದ ಸ್ವಯಂ ಉದ್ಯೋಗ ನಿರ್ವಹಣೆಯ ಜೊತೆಗೆ,  ಸೃಜನಶೀಲ ಆಸಕ್ತಿಗಳತ್ತ ಕಾರ್ಯಪ್ರವೃತ್ತರಾಗಿದ್ದಾರೆ.

ಸುಚಿತ್ರಾ ಹೆಗಡೆ ಅವರ ಅನೇಕ ಕವಿತೆಗಳು, ಪ್ರವಾಸ ಕಥನ, ಅಂಕಣ ಬರಹ, ಅಗ್ರಲೇಖನಗಳು, ಲಲಿತ ಪ್ರಬಂಧಗಳು ಮತ್ತು ವಿಮರ್ಶಾ ಲೇಖನಗಳು  ನಿರಂತರವಾಗಿ ಪ್ರಸಿದ್ಧ ನಿಯತಕಾಲಿಕಗಳಲ್ಲಿ ಮೂಡಿಬರುತ್ತಿವೆ. ಕಾಲೇಜು ದಿನಗಳಲ್ಲಿ ತುಷಾರ ಮಾಸಪತ್ರಿಕೆಯ ರಾಜ್ಯಮಟ್ಟದ ಕವನ ರಚನಾ ಸ್ಪರ್ಧೆಯಲ್ಲಿ ಅವರಿಗೆ ಪ್ರಥಮ ಬಹುಮಾನ ಬಂದಾಗ  ತೀರ್ಪುಗಾರರಾಗಿದ್ದವರು ಮಹಾನ್  ವಿಮರ್ಶಕರಾದ ಡಾ.  ಜಿ. ಎಸ್. ಆಮೂರ ಅವರು. ಬಿ ಎಡ್ ಓದುತ್ತಿರುವಾಗ ಕರ್ನಾಟಕ ಲೇಖಕಿಯರ ಸಂಘದ ಅಮೇರಿಕನ್ನಡ ದತ್ತಿನಿಧಿ ಕಾವ್ಯಸ್ಪರ್ಧೆಯಲ್ಲಿ ಬಹುಮಾನ ಗಳಿಸಿದ್ದರು. 

ಸುಚಿತ್ರಾ ಅವರ ಮೊದಲ ಕವನ ಸಂಕಲನ ‘ ಈ ಚಿಟ್ಟೆ ಕಾಡಿದ ಹಾಗೆ’ ಮೈಸೂರಿನ ‘ಮಡಿಲು’ ಪ್ರಕಾಶನದಿಂದ  2021ರಲ್ಲಿ ಪ್ರಕಟವಾಗಿದೆ.  ಸುಮಾರು ಮೂವತ್ತಕ್ಕೂ ಹೆಚ್ಚು ದೇಶಗಳನ್ನು ಸುತ್ತಿರುವ ಇವರ ಪ್ರವಾಸ ಕಥನ ‘ಜಗವ ಸುತ್ತುವ ಮಾಯೆ’ ಜೂನ್ 2022 ರಲ್ಲಿ ಕವಿತಾ ಪ್ರಕಾಶನದಿಂದ ಪ್ರಕಟವಾಗಿ ಅನೇಕ ಪ್ರಸಿದ್ಧ ಲೇಖಕರ, ವಿಮರ್ಶಕರ ಮತ್ತು ಓದುಗರ ಪ್ರಶಂಸೆಗೆ  ಪಾತ್ರವಾಗಿರುವುದಲ್ಲದೇ ಅನೇಕ ಪ್ರಶಸ್ತಿ ಪುರಸ್ಕಾರಗಳು ಸಂದಿವೆ.

ಸುಚಿತ್ರಾ ಅವರಿಗೆ ಸಂದಿರುವ ಗೌರವಗಳಲ್ಲಿ
ರಾಜ್ಯಮಟ್ಟದ ಪ್ರತಿಷ್ಠಿತ ‘ಅಮ್ಮ ಪ್ರಶಸ್ತಿ’ -2023 ‘ಜಗವ ಸುತ್ತುವ ಮಾಯೆ’ ಪ್ರವಾಸ ಕಥನಕ್ಕೆ;. 2022 ನೇ ಸಾಲಿನ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ನಿಧಿ ಪ್ರಶಸ್ತಿ- ‘ಜಗವ ಸುತ್ತುವ ಮಾಯೆ’ ಪ್ರವಾಸ ಕಥನಕ್ಕೆ ; ರಾಜ್ಯಮಟ್ಟದ ಭೂಮಿ ಸಾಹಿತ್ಯ ಪುರಸ್ಕಾರ 2023- ‘ಜಗವ ಸುತ್ತುವ ಮಾಯೆ’ ಪ್ರವಾಸ ಕಥನಕ್ಕೆ;  ಮೈಸೂರಿನ ಜನನಿ ಸೇವಾ ಟ್ರಸ್ಟ್ ನಿಂದ  ಸಾಹಿತ್ಯ ಕ್ಷೇತ್ರದಲ್ಲಿ ಅಪರೂಪದ ಸಾಧನೆಗಾಗಿ ‘ದಿಟ್ಟ ಮಹಿಳೆ’ ಪುರಸ್ಕಾರ; 
ಲೇಖಿಕಾ ಸಾಹಿತ್ಯ ವೇದಿಕೆಯ ‘ತ್ರಿವೇಣಿ’ ಮನೋವೈಜ್ಞಾನಿಕ ಕಥಾಸ್ಪರ್ಧೆಯಲ್ಲಿ ಬಹುಮಾನ;  ವೀರಲೋಕ-ಕಥಾ ಸಂಕ್ರಾಂತಿ ಕಥಾಸ್ಪರ್ಧೆಯಲ್ಲಿ ಬಹುಮಾನ;  ಲೇಖಿಕಾ ಸಾಹಿತ್ಯ ವೇದಿಕೆಯ ‘ವಾಣಿ’ ಕೌಟುಂಬಿಕ ಕಥಾಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ;  ಅಮೇರಿಕದ ನ್ಯೂಜೆರ್ಸಿಯ ಬೃಂದಾವನ ಕನ್ನಡ ಕೂಟದ ವಿಂಶತಿ ವೈಭವ -2024 ಕಥಾಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಮುಂತಾದವು ಸೇರಿವೆ. 

ಸುಚಿತ್ರಾ ಅವರು 2023 ರಲ್ಲಿ ಧಾರವಾಡದಲ್ಲಿ ಉತ್ತರ ಕರ್ನಾಟಕ ಲೇಖಕಿಯರ ಸಂಘ ಆಯೋಜಿಸಿದ್ದ ‘ ರಾಷ್ಟ್ರೀಯ ಪ್ರವಾಸ ಸಾಹಿತ್ಯ ಸಂಕಿರಣ’ದಲ್ಲಿ ‘ಕಡಲಾಚೆಯ ಸಂಕಥನಗಳು’ ಎಂಬ ಪ್ರಬಂಧ ಮಂಡಿಸಿದ್ದಾರೆ.  2024ರಲ್ಲಿ ಬೆಳಗಾವಿಯಲ್ಲಿ ಕರ್ನಾಟಕ ಲೇಖಕಿಯರ ಸಂಘ ಆಯೋಜಿಸಿದ್ದ ನಾಲ್ಕು ದಿನಗಳ ಏಕವ್ಯಕ್ತಿ ನಾಟಕ ರಚನಾ ಶಿಬಿರದಲ್ಲಿ  ಮೈಸೂರು ಜಿಲ್ಲೆಯ ಪ್ರತಿನಿಧಿಯಾಗಿ ಭಾಗವಹಿಸಿದ್ದಾರೆ. 

ಸದಾ ಅರಿವಿನ ಜ್ಞಾನದತ್ತ ಮೊಗಮಾಡಿ ನೋಡುವ ಸುಚಿತ್ರಾ ಹೆಗಡೆ ಅವರ ಓದು ನಮಗೆ ಹೊಸ ಹೊಸದನ್ನು ಕಾಣಸಿಗುವಂತೆ ಮಾಡುತ್ತಿರಲಿ.

ಆತ್ಮೀಯರಾದ ಸುಚಿತ್ರಾ ಹೆಗಡೆ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.

Suchitra Hegde

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ