ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಬ. ಲ. ಸುರೇಶ


 ಬ. ಲ. ಸುರೇಶ


ಡಾ. ಬಂದಗದ್ದೆ ಲಕ್ಷ್ಮಿನಾರಾಯಣ ಸುರೇಶ ಸಾಹಿತ್ಯ, ಕಿರುತೆರೆ ಮತ್ತು ಸಿನಿಮಾ ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದಾರೆ.

ಬ. ಲ. ಸುರೇಶ 1959ರ ಡಿಸೆಂಬರ್ 2ರಂದು ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ದಿಗಟೇಕೊಪ್ಪ-ಬಂದಗದ್ದೆ ಗ್ರಾಮದಲ್ಲಿ ಜನಿಸಿದರು.   ತಂದೆ ಲಕ್ಷ್ಮೀನಾರಾಯಣ ಭಟ್ಟ. ತಾಯಿ ಪದ್ಮಾವತಮ್ಮ. 

ಸುರೇಶ ಅವರು ಸೈನ್ಯದಲ್ಲಿ ಕೆಲಕಾಲ ಸೇವೆ ಸಲ್ಲಿಸಿದರು.   ಅನಾರೋಗ್ಯದ ಕಾರಣ ವೈದ್ಯಕೀಯ ನಿವೃತ್ತಿಹೊಂದಿ ಕರ್ನಾಟಕ ಜಲಮಂಡಳಿಯಲ್ಲಿ 21 ವರ್ಷಗಳ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದರು.  

ಬಾಲ್ಯದಿಂದಲೂ ಬರವಣಿಗೆ, ನಾಟಕ, ಯಕ್ಷಗಾನ, ಚಲನಚಿತ್ರಗಳತ್ತ ಆಕರ್ಷಿತರಾದ ಸುರೇಶ್ ಜೀವನಕ್ಕಾಗಿ ಉದ್ಯೋಗ ಮಾಡುತ್ತಾ ಹವ್ಯಾಸಕ್ಕಾಗಿ ಕಥೆ, ನಾಟಕ, ಕವನ, ಕಾದಂಬರಿ ಬರೆಯುತ್ತಾ, ವೃತ್ತಿ ಆರಂಭದಲ್ಲಿ ಊರೂರು ತಿರುಗಿ ಅಂತಿಮವಾಗಿ ಬೆಂಗಳೂರಿನಲ್ಲಿ ನೆಲೆಸಿದರು.

ಸುರೇಶ ಅವರು ಚಿತ್ರನಟ ಅನಿಲ್ ಕುಮಾರ್ ಅವರ ಒತ್ತಾಸೆಯಿಂದ 1986ರಲ್ಲಿ ಸಾಕ್ಷಚಿತ್ರ ಹಾಗೂ ಕಿರುಚಿತ್ರಕ್ಕೆ ಸಾಹಿತ್ಯ ಒದಗಿಸುವ ಕಾಯಕಕ್ಕೆ ಪ್ರವೇಶಿಸಿದರು. ಕೆ.ವಿ. ಜಯರಾಮ್ ಅವರ 'ಮೇಘಮಂದಾರ' ಚಿತ್ರಕ್ಕೆ ಸಂಭಾಷಣೆ ರಚಿಸುವುದರ ಮೂಲಕ ಚಲನಚಿತ್ರರಂಗಕ್ಕೂ ಬಂದರು. ನಿರಂತರ ಕಿರುಚಿತ್ರ, ಕಿರುತೆರೆ ಧಾರಾವಾಹಿ, ಚಲನಚಿತ್ರ ಬರವಣಿಗೆಗಳ ನಂತರ 1998ರಲ್ಲಿ ಪ್ರಸಾರವಾದ 'ಮನೆತನ' ಧಾರಾವಾಹಿಗೆ ಚಿತ್ರಕಥೆ-ಸಂಭಾಷಣೆ ಬರೆಯುವ ಮೂಲಕ ಮೆಗಾ ಧಾರಾವಾಹಿಗಳ ಕಾಯಕಕ್ಕೆ ಬಂದರು. ಅವರು ನೂರಾರು ಧಾರಾವಾಹಿಗಳ ಕತೆಗಾರರಾಗಿದ್ದಾರೆ. ಶ್ರೀರಾಘವೇಂದ್ರ ವೈಭವದಂತಹ ದೊಡ್ಡ ಸಾಹಸಗಳು ಅವರ ಸಾಧನೆಗಳಲ್ಲಿವೆ.

ಬ. ಲ. ಸುರೇಶ ಅವರು 2007-08 ರಲ್ಲಿ ಝಿ ಕನ್ನಡ ವಾಹಿನಿಯ ಫಿಕ್ಷನ್ ಹೆಡ್ ಆಗಿ ಕಾರ್ಯನಿರ್ವಹಿಸಿದರು.

ಬ. ಲ. ಸುರೇಶ ಅವರು ತಮ್ಮ 60ನೇ ವಯಸ್ಸಿನಲ್ಲಿ ವಿಶ್ವಧರ್ಮ ಮತ್ತು ವಿಶ್ವಶಾಂತಿಗೆ ಶಿರಡಿ ಸಾಯಿಬಾಬಾರ ಕೊಡುಗೆ, ಕ್ರಮಿಸಿದ ಮಾರ್ಗ, ಜೀವನ ದರ್ಶನ, ಸಾಧನ ಎಂಬ ವಿಷಯದ ಮೇಲೆ ವಿದ್ಯಾವಾಚಸ್ಪತಿ ಡಾ|| ಅರಳುಮಲ್ಲಿಗೆ ಪಾರ್ಥಸಾರಥಿಯವರ ಮಾರ್ಗದರ್ಶನದಲ್ಲಿ ಮಹಾಪ್ರಬಂಧ ಮಂಡಿಸಿ ಪಿಎಚ್.ಡಿ ಪದವಿಗೆ ಭಾಜನರಾದರು.

ಬ. ಲ. ಸುರೇಶರ ಕಾದಂಬರಿಗಳಲ್ಲಿ ಮರಳು ದಿಬ್ಬದ ಮೇಲೆ, ಬರುತ್ತಿದ್ದಾನೆ ಯುಗಪುರುಷ, ಶುಭೋದಯ, ವಿದ್ರೂಪ ಕಾಮನೆ, ಪ್ರಕ್ಷುಬ್ದ, ಆಯತನ ಸೇರಿವೆ. 

ಬ. ಲ. ಸುರೇಶರ ನಾಟಕಗಳಲ್ಲಿ ಒಡೇರಗುಡ್ಡ,  ಕಗ್ಗಳ್ಳಿಲೊಂದಿನ, ಒಂದು ವರ್ಗದವರು, ಉದ್ಯೋಗ, ಪದ್ದಿಯ ಪರಿಣಯ ಪ್ರಸಂಗ, ಬಲಿ, ಬದುಕ ಬಲ್ಲವರು, ಯುದ್ಧ ಛದ್ಮ, ಪಾಂಡವರ ಅಗ್ನಿಪ್ರವೇಶ, ಸಂಶೋಧಕರು, ಹಗಲುಗನಸು, ಕಾಲಕಣ್ರೋ ಕಾಲ, ಸಂಶೋಧಕರು, ಕಣ್ವ ಪುತ್ರಿ, ಬಂಧಮುಕ್ತೆ, ಲಿಂಗೋದ್ಭವ, ಗಂಗಾವತರಣ, ಓಂ ಬ್ರಹ್ಮವಿಷ್ಣುಶಿವಾತ್ಮಿಕಾಯೈ ನಮಃ ಮುಂತಾದವು ಇವೆ.  ನೀ ಹ್ಯಾಂಗ್ ಬಾಳ್ತಿ, ಬರ, ಅರ್ಧಸತ್ಯ, ಜನಜಾಗ್ರತಿ ಮುಂತಾದವು ಬ. ಲ ಸುರೇಶರ ಕಾವ್ಯ ಸಂಕಲನಗಳು. 'ಸಂಬಂಧಗಳು' , 'ಪರಿಹಾರ ಮತ್ತು ಇತರ ಕಥೆಗಳು' ಮುಂತಾದವು ಅವರ ಕಥಾಸಂಕಲನಗಳು. ಬ. ಲ. ಸುರೇಶರ ಇತರ ಬರಹಗಳೂ ಅನೇಕ ಇವೆ. ಇದಲ್ಲದೆ ಅವರ ವಿವಿಧ ಬರಹಗಳ ಸಮಗ್ರ ಸ್ವರೂಪದ ಕೃತಿಗಳೂ ಪ್ರಕಟಗೊಂಡಿವೆ.

ಬ. ಲ. ಸುರೇಶ ಅವರಿಗೆ ಹಂಸಪುರಸ್ಕಾರ ಪ್ರಶಸ್ತಿ, ಅರುಣೋದಯ ಪ್ರಶಸ್ತಿ ಆರ್ಯಭಟ ಪ್ರಶಸ್ತ್ತಿ (ಎರಡು ಬಾರಿ), ಆರ್.ಎನ್.ಜಯಗೋಪಾಲ್ ಸದ್ಭಾವನಾ ಪ್ರಶಸ್ತಿ, ಸಾಹಿತ್ಯ ಸಂಜೀವಿನಿ ಪ್ರಶಸ್ತಿ, ಶ್ರೀ ಗುರುರಾಘವೇಂದ್ರ ಸದ್ಭಾವನಾ ಪ್ರಶಸ್ತಿ (ಎರಡು ಬಾರಿ), ಕನ್ನಡ ರತ್ನ ರಾಜ್ಯಪ್ರಶಸ್ತಿ, ಶ್ರೀ ಪರಮೇಶ್ವರ ಪುಲಿಕೇಶಿ ಪ್ರಶಸ್ತಿ, ಶ್ರೀ ಗುರುಸಾರ್ವಭೌಮ ರಾಘವೇಂದ್ರ ಕಲಾ ರತ್ನ ಪ್ರಶಸ್ತಿ, ಅಂಕ ಗೌರವ ಸಾವಿರದ ಲೇಖಕ(ಕೆಟಿವಿ) ಮುಂತಾದ ಅನೇಕ ಗೌರವಗಳು ಸಂದಿವೆ.

On the birthday of novelist and playwright Dr. Ba La Suresh

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ