ರೊದ್ದಂ ನರಸಿಂಹ
ರೊದ್ದಂ ನರಸಿಂಹ ಸಂಸ್ಮರಣೆ
ಕನ್ನಡಿಗರಾದ ದಿವಂಗತ ರೊದ್ದಂ ನರಸಿಂಹ ನಮ್ಮ ಕಾಲಮಾನದಲ್ಲಿದ್ದ ಮಹಾನ್ ಭಾರತೀಯ ವಿಜ್ಞಾನಿ. ಪ್ರೊ. ರೊದ್ದಂ ನರಸಿಂಹರು ವೈಮಾನಿಕ ವಿಜ್ಞಾನ, ಫ್ಲೂಯಿಡ್ ಡೈನಮಿಕ್ಸ್ ಮತ್ತು ತತ್ಸಂಬಂಧಿತ ವಾತಾವರಣದಲ್ಲಿನ ತೊಂದರೆಗಳ ಕುರಿತು ಅಂತರ ರಾಷ್ಟ್ರೀಯ ಮಟ್ಟದ ಸಂಶೋಧನೆಗಳಲ್ಲಿ ವಿಶ್ವಖ್ಯಾತಿಗಳಿಸಿದ್ದರೂ ಸರಳ ಸನ್ನಡತೆಗಳಿಗೆ ಹೆಸರಾಗಿದ್ದವರು. ಕಳೆದ ವರ್ಷ ನಮ್ಮನ್ನಗಲಿದ ಅವರ ಸಂಸ್ಮರಣಾ ದಿನವಿದು.
ನರಸಿಂಹ ಅವರು 1933ರ ಜುಲೈ 20ರಂದು ಬೆಂಗಳೂರಿನಲ್ಲಿ ಜನಿಸಿದರು. ಬಾಲ್ಯದಲ್ಲೇ ವಿಜ್ಞಾನದ ಬಗ್ಗೆ ತಮ್ಮ ತಂದೆ ಹಾಗೂ ವಿಜ್ಞಾನದ ಹೆಸರಾಂತ ಲೇಖಕರಾಗಿದ್ದ ಆರ್. ಎಲ್. ನರಸಿಂಹಯ್ಯ ಅವರಿಂದ ಪ್ರಭಾವಿತರಾಗಿದ್ದರು. 1953ರಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದರು.
1955ರಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಏರೋನಾಟಿಕಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಮಾಡಿದರು. ಬೆಂಗಳೂರು ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಅವರು ಪ್ರೊ. ಸತೀಶ್ ಧವನ್ ಅವರ ಮಾರ್ಗದರ್ಶನ ಪಡೆದರು. ಕ್ಯಾಲಿಫೋರ್ನಿಯಾ ಇನ್ಸ್ಟಿಟ್ಯೂಟ್ನಲ್ಲಿ ಪ್ರೊ.ಹಾನ್ಸ್ ಲೀಪ್ಮನ್ ಅವರ ಮಾರ್ಗದರ್ಶನದಲ್ಲಿ ಸಂಶೋಧನಾತ್ಮಕ ಅಧ್ಯಯನ ಕೈಗೊಂಡು 1961ರಲ್ಲಿ ಪಿಎಚ್. ಡಿ ಗಳಿಸಿದರು.
ರೊದ್ದಂ ನರಸಿಂಹ 1962ರಿಂದ 1999 ರವರೆಗೆ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಏರೋಸ್ಪೇಸ್ ಎಂಜಿನಿಯರಿಂಗ್ ವಿಭಾಗದಲ್ಲಿ ಪ್ರೊಫೆಸರ್ ಆಗಿ ಸೇವೆ ಸಲ್ಲಿಸಿದರು. 1984ರಿಂದ 1993ರ ವರೆಗೆ ರಾಷ್ಟ್ರೀಯ ವೈಮಾನಿಕ ಪ್ರಯೋಗಾಲಯ(ಎನ್‌ಎಎಲ್)ದ ನಿರ್ದೇಶಕರಾಗಿದ್ದರು. ಐಎನ್ಎಸ್ಎ ಸಂಸ್ಥೆಯ ಜ್ಯೂಬಿಲಿ ರಿಸರ್ಚ್ ಪ್ರೊಫೆಸರರಾಗಿ ಮತ್ತು ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.
ರೊದ್ದಂ ನರಸಿಂಹರು 2000ದಿಂದ 2014ರ ವರೆಗೆ ಬೆಂಗಳೂರಿನ ಜವಹರಲಾಲ್ ನೆಹರೂ ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್ ಸಂಸ್ಥೆಯಲ್ಲಿ ಮೆಕ್ಯಾನಿಕಲ್ ಇಂಜನಿಯರಿಂಗ್ ವಿಭಾಗದ ಚೇರ್ಮನ್ನರಾಗಿ ಸೇವೆ ಸಲ್ಲಿಸಿದ್ದರು. ಇಂಗ್ಲೆಂಡಿನ ಕೆಂಬ್ರಿಡ್ಜ್ ವಿಶ್ವವಿದ್ಯಾಲಯ, ನಾಸಾ ಲಾಂಗ್ಲೆ, ಸ್ಟ್ರಾಥ್‍ಕ್ಲೈಡ್ ವಿಶ್ವವಿದ್ಯಾಲಯ, ಬ್ರಸೆಲ್ಸ್ ವಿಶ್ವವಿದ್ಯಾಲಯ, ಅಡಿಲೇಡ್ ವಿಶ್ವವಿದ್ಯಾಲಯಗಳಲ್ಲೂ ಅವರ ಪ್ರಾಧ್ಯಾಪನ ಸಂದಿತ್ತು.
ರೊದ್ದಂ ನರಸಿಂಹರು ರಾಜೀವ್‌ಗಾಂಧಿ ಪ್ರಧಾನ ಮಂತ್ರಿ ಆಗಿದ್ದಾಗ ಅವರ ವೈಜ್ಞಾನಿಕ ಸಲಹಾ ಮಂಡಳಿಯ ಸದಸ್ಯರಾಗಿದ್ದರು. 1992–1994ರವರೆಗೆ ಇಂಡಿಯನ್ ಅಕಾಡೆಮಿ ಆಫ್ ಸೈನ್ಸಸ್‌ನ ಅಧ್ಯಕ್ಷರಾಗಿದ್ದರು. ಇಸ್ರೊ ಮತ್ತು ನಿಯಾಸ್‌ನಲ್ಲೂ ಅಮೂಲ್ಯ ಸೇವೆ ಸಲ್ಲಿಸಿದ್ದರು. ಭಾರತದಲ್ಲಿ ಸಾಮಾನ್ಯ ಜನರೂ ವಿಮಾನಯಾನ ಮಾಡಬೇಕು. ಸಣ್ಣ ನಗರಗಳ ಮಧ್ಯೆ ವಿಮಾನ ಸಂಚಾರ ಹೆಚ್ಚಾಗಬೇಕು ಎಂಬ ಉದ್ದೇಶದಿಂದ ವಿಮಾನಯಾನದ ವೆಚ್ಚ ಕಡಿಮೆ ಮಾಡುವ ನಿಟ್ಟಿನಲ್ಲಿ ಅದರ ರಚನೆ ಮತ್ತು ಏರೋಡೈನಮಿಕ್ಸ್‌ನಲ್ಲಿ ಸಾಕಷ್ಟು ಮಾರ್ಪಾಡುಗಳನ್ನು ಮಾಡಿದ್ದರು. ಭಾರತ ಸರ್ಕಾರದ ಉಡಾನ್ ಯೋಜನೆಗೂ ಸಲಹೆ ನೀಡಿದ್ದರು. ರೊದ್ದ ನರಸಿಂಹರು ತಮ್ಮ ಸೇವೆಯ ಕೊನೆಯ 15 ವರ್ಷಗಳಲ್ಲಿ ಮೋಡಗಳ ಬಗ್ಗೆ ಸಂಶೋಧನೆಯಲ್ಲಿ ನಿರತರಾಗಿದ್ದರು. ವಿಜ್ಞಾನ ಸಂಬಂಧಿತ ರಾಷ್ಟ್ರೀಯ ಭದ್ರತೆ ಮತ್ತು ಹಿತಾಸಕ್ತಿಗಳಲ್ಲಿ ಪ್ರಧಾನಮಂತ್ರಿಗಳ ಸಲಹೆಗಾರರಾಗಿಯೂ ಅವರ ಸೇವೆ ಸಂದಿತ್ತು. ಎಚ್‍ಎಎಲ್ ಸಂಸ್ಥೆಯ ನಿರ್ದೇಶಕ ಮಂಡಲಿಯಲ್ಲಿದ್ದರು.
ರೊದ್ದಂ ನರಸಿಂಹರು ಭಾರತೀಯ ತತ್ವಶಾಸ್ತ್ರ ಮತ್ತು ಪ್ರಾಚೀನ ಭಾರತದ ವಿಜ್ಞಾನಗಳ ಬಗ್ಗೆಯೂ ಸಾಕಷ್ಟು ಅಧ್ಯಯನ ನಡೆಸಿದ್ದರು.
ರೊದ್ದಂ ನರಸಿಂಹರು ಸುಮಾರು 200 ಮಹತ್ವದ ಸಂಶೋಧನಾ ಪ್ರಬಂಧಗಳನ್ನೂ 15 ಗ್ರಂಥಗಳನ್ನೂ ರಚಿಸಿದ್ದರು.
ರೊದ್ದ ನರಸಿಂಹರಿಗೆ ಭಾರತ ಸರ್ಕಾರದ ಪದ್ಮಭೂಷಣ, ಪದ್ಮವಿಭೂಷಣ, ಫೆಲೋ ಆಫ್ ದ ರಾಯಲ್ ಸೊಸೈಟಿ ಸೇರಿ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದ ಅನೇಕ ಶ್ರೇಷ್ಠ ಗೌರವಗಳು ಸಂದಿದ್ದವು.
ರೊದ್ದಂ ನರಸಿಂಹರು 2020ರ ಡಿಸೆಂಬರ್ 14ರಂದು ತಮ್ಮ 87ನೇ ವಯಸ್ಸಿನಲ್ಲಿ ಈ ಲೋಕವನ್ನು, ಪತ್ನಿ ನೀಲಿಮಾ ಹಾಗೂ ಪುತ್ರಿ ಮೈತ್ರೇಯಿ ಅವರನ್ನು ಅಗಲಿದರು. ಇಂತಹ ಶ್ರೇಷ್ಠತೆ ಇನ್ನೂ ಉದಯಿಸುತ್ತಲೇ ಇರಲಿ.
On Remembrance Day of great scientist Dr. Roddam Narasimha
ಕಾಮೆಂಟ್‌ಗಳು