ಅಮೃತ್ ಖಂಜಿರ
ಅಮೃತ್ ಖಂಜಿರ
ಖಂಜಿರ ವಾದ್ಯವಾದನದಲ್ಲಿ ಜಗತ್ಪಸಿದ್ಧಿ ಗಳಿಸಿರುವವರು ನಮ್ಮ ಕನ್ನಡಿಗರೇ ಆದ ಅಮೃತ್ ಖಂಜಿರ.
ಡಿಸೆಂಬರ್ 14 ಅಮೃತ್ ಖಂಜಿರ ಅವರ ಜನ್ಮದಿನ. ಅಮೃತ್ ಅವರು ವಯಲಿನ್ ವಿದ್ವಾನ್, ಕೀರ್ತಿಶೇಷ ಬಸವನಗುಡಿ ಜಿ.ನಟರಾಜ್ ಅವರ ಸುಪುತ್ರರು. ಇನ್ನೂ ಮೂರೂವರೆ ವಯಸ್ಸಿನಲ್ಲಿ ಮನೆಯಲ್ಲೇ ಸಂಗೀತ ಅಭ್ಯಾಸ ಪ್ರಾರಂಭಿಸಿ, ತಮ್ಮ 5ನೇ ವಯಸ್ಸಿಗೇ ವಿ. ಎಂ.ವಾಸುದೇವ ರಾವ್ ಅವರಲ್ಲಿ ಮೃದಂಗಾಭ್ಯಾಸ ಆರಂಭಿಸಿ 7ನೇ ವಯಸ್ಸಿಗೇ ವೇದಿಕೆಗಳಲ್ಲಿ ಪ್ರದರ್ಶನ ನೀಡುವಷ್ಟು ತಯಾರಾಗಿದ್ದರು. ನಂತರ ಮೃದಂಗ ವಿದ್ವಾನ್ ಎ.ವಿ. ಆನಂದ್ ಅವರಲ್ಲಿ ವಿದ್ವತ್ತನ್ನು ಹೆಚ್ಚಿಸಿಕೊಂಡರು. ಆದರೆ, ರಂಗವೇರುವ ಮೊದಲು ಘಟಂನಂತಹಾ ಪಕ್ಕ ವಾದ್ಯದಲ್ಲಿ ಮೊದಲು ಕುಳ್ಳಿರಿಸುವುದು ಸಂಪ್ರದಾಯ. ಆದರೆ, ಇಲ್ಲಿ ಅವರ ಮೇಷ್ಟ್ರು, 'ಅದು ಬೇಡ, ಖಂಜಿರ ಹಿಡಿಯಲಿ' ಅಂತ ಅಪ್ಪಣೆ ಕೊಡಿಸಿದರು. ಈ ರೀತಿಯಾಗಿ ಅಮೃತ್ ಅವರ ಖಂಜಿರ ಜತೆಗಿನ ಬಾಂಧವ್ಯ ಆರಂಭವಾಯಿತು.
ಕಾರೈಕುಡಿ ಮಣಿಯವರು ಹೊರತಂದಿದ್ದ 'ಶ್ರುತಿಲಯ' ಧ್ವನಿಸುರುಳಿಯಲ್ಲಿ ಖಂಜಿರದ ನಾದವು ಅಮೃತ್ ಅವರನ್ನು ಇನ್ನಿಲ್ಲದಂತೆ ಸೆಳೆಯಿತು. ಅದನ್ನು ಪುನಃ ಪುನಃ ಕೇಳುತ್ತಾ, ಮತ್ತೆ ಮತ್ತೆ, ಏಕಲವ್ಯನ ತೆರನಾಗಿ ಸಾಧನೆ ಮಾಡಿದರು. ಈ ಕ್ಯಾಸೆಟ್‌ಗಳಲ್ಲಿ ಖಂಜಿರವನ್ನು ನುಡಿಸಿದವರು ಪ್ರಖ್ಯಾತ ಖಂಜಿರ ವಾದಕ, ಚೆನ್ನೈನ ವಿದ್ವಾನ್ ಜಿ.ಹರಿಶಂಕರ್ ಎಂದು ತಿಳಿದು ಬೆಂಗಳೂರಿನಿಂದ ಚೆನ್ನೈಗೆ ಹುಡುಕಿಕೊಂಡು ಹೋಗಿ ಅವರ ಮನವೊಲಿಸಿ ಶಿಷ್ಯರಾದರು. ಅಮೃತ್ ಮಾಡಿದ ಸಾಧನೆಯನ್ನು ಕಂಡು ಹರಿಶಂಕರ್ ತಮ್ಮಲ್ಲಿನ ವಿದ್ವತ್ತನ್ನೆಲ್ಲ ಹಸ್ತಾಂತರಿಸಿದರು. ಖಂಜಿರ ಕಲಿಕೆಗಾಗಿಯೇ ಕೇಂದ್ರ ಸರಕಾರದಿಂದ ವಿದ್ಯಾರ್ಥಿವೇತನವೂ ಸಂದಿತು. ಅಮೃತ್ ಅವರು ಮೂರುವರೆ ವರ್ಷಗಳ ಕಾಲ ಹರಿಶಂಕರ್ ಅವರ ಬಳಿ ಕಲಿತರು. ಆ ವೇಳೆಗೆ ಹರಿಶಂಕರ್ ಅವರು ಅಕಾಲಿಕವಾಗಿ ನಿಧನರಾದರೂ, ಅವರು ತಾವು ನೆಟ್ಟ ಸಸಿ ಅಮೃತ್ ಹೆಮ್ಮರವಾಗುವಂತೆ ಸಮರ್ಥವಾಗಿ ಪೋಷಿಸಿದ್ದರು.
ಖಂಜಿರ ವಾದ್ಯವು ತಾಳ ವಾದ್ಯ ಗೋಷ್ಠಿಗಳಲ್ಲಿ ಕೇಂದ್ರ ಸ್ಥಾನವನ್ನು ಅಲಂಕರಿಸಲು ಕಾರಣರಾದವರಲ್ಲಿ ಅಮೃತ್ ಸಹಾ ಪ್ರಮುಖರು. ಬೆರಳುಗಳ ಮೂಲಕವೇ ನುಡಿಸಾಣಿಕೆ, ವೇಗದ ನುಡಿತ, ವೈವಿಧ್ಯ ಮತ್ತು ಶಾಸ್ತ್ರೀಯತೆ ಮೇಳೈಸಿ ಈ ವಾದನವನ್ನು ದೇಶ-ವಿದೇಶದ ಸಂಗೀತಪ್ರಿಯರಲ್ಲಿ ಹುಚ್ಚೆಬ್ಬಿಸುವಂತೆ ಮಾಡಿದ ಪ್ರಮುಖರಲ್ಲಿ ಅಮೃತ್ ಒಬ್ಬರು. ಆಕಾಶವಾಣಿಯ 'ಎ' ಶ್ರೇಣಿಯ ಮೃದಂಗ ಕಲಾವಿದರಾಗಿದ್ದರೂ, ಅವರು ಖಂಜಿರವಾದಕರೆಂದೇ ಪ್ರಸಿದ್ಧಿ ಪಡೆದಿದ್ದಾರೆ. ಖಂಜಿರದಲ್ಲಿ 'ಏ-ಟಾಪ್' ಶ್ರೇಣಿ ಪಡೆದ ಅತಿ ಕಿರಿಯ ಕಲಾವಿದರಾಗಿದ್ದಾರೆ. ಅಷ್ಟೇ ಅಲ್ಲ, ಹಲವಾರು ವಯಲಿನ್ ಕಛೇರಿಗಳನ್ನೂ ನಡೆಸಿಕೊಟ್ಟಿರುವ ಬಹುಮುಖಿ ಪ್ರತಿಭೆ.
ಕಲೆಯ ಮೇಲಿನ ಒಲವು ಮತ್ತು ಖಂಜಿರವೆಂಬ ಪುಟ್ಟ ತಾಳವಾದ್ಯಕ್ಕೆ ದೊಡ್ಡ ಹೆಸರು ತಂದುಕೊಡಬೇಕೆಂಬ ತುಡಿತ ಎಷ್ಟಿದೆಯೆಂದರೆ, ಅವರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಹೆಸರನ್ನೇ 'ಅಮೃತ್ ಖಂಜಿರ' ಎಂದೇ ಬದಲಿಸಿಕೊಂಡರು.
ತವಿಲ್‌ನಂತಹ ತಾರಸ್ಥಾಯಿಯ ವಾದ್ಯದ ಜೊತೆಗಿನ ಜುಗಲ್‌ಬಂದಿಯಲ್ಲಿ ಸುಮಧುರ ಖಂಜಿರವನ್ನೂ ಮೆರೆಸಿದ ಸಂದರ್ಭದಲ್ಲಿ ವಿಶ್ವವಿಖ್ಯಾತ ತವಿಲ್ ವಾದಕ, ಏ. ಕೆ. ಪಳನಿವೇಲ್ ಹಾಗೂ ತಬಲ ಮಾಂತ್ರಿಕ ಉಸ್ತಾದ್ ಜಾಕಿರ್ ಹುಸೇನ್ ಅಂತಹವರು ಅಮೃತ್ ಅವರಿಗೆ ಶಹಬ್ಬಾಸ್ ಹೇಳಿದರು.
2019ರಲ್ಲಿ ನಡೆದ 'ಗ್ಲೋಬಲ್ ಸಾಯಿ ಸಿಂಫೋನಿ'ಯಲ್ಲಿ ಘಟಾನುಘಟಿಗಳಾದ ಕಾರೈಕುಡಿ ಮಣಿ (ಮೃದಂಗ), ಗಣೇಶ್-ಕುಮರೇಶ್ (ವಯಲಿನ್), ರಾಜೇಶ್ (ಮ್ಯಾಂಡೊಲಿನ್), ಸುರೇಶ್ ವೈದ್ಯನಾಥನ್ (ಘಟಂ), ಶಶಾಂಕ ಸುಬ್ರಹ್ಮಣ್ಯಂ (ಕೊಳಲು), ಪಂ.ದೇಬಶಿಷ್ ಭಟ್ಟಾಚಾರ್ಯ (ಗಿಟಾರ್), ಸುಧಾ ರಘುನಾಥನ್ (ಹಾಡುಗಾರಿಕೆ), ಜರ್ಮನಿಯ ಹೈನರ್ ವಿಬೆರ್ನಿ, ಸೆನೆಗಲ್‌ನ ಪೇಪ್ ಸಮೋರಿ ಸೆಕ್ (ಆಫ್ರಿಕನ್ ಕಾಂಗೋ), ಮೌರಿಟಾನಿಯಾ ಶೆಯಿಕ್ ಲೇಬ್ಲಾಡ್ ಮುಂತಾದವರೊಂದಿಗೆ ಅಮೃತ್ ಅವರೂ ಖಂಜಿರದ ನುಡಿಸುವ ಮೂಲಕ ತಮ್ಮ ಕೈಚಳಕ ಮೆರೆದಿದ್ದಾರೆ. ಯೂಟ್ಯೂಬ್‌ನಲ್ಲಿರುವ ಈ ವಿಡಿಯೊವನ್ನು ಸುಮಾರು 50 ಲಕ್ಷಕ ಮಂದಿ ವೀಕ್ಷಿಸಿದ್ದಾರೆ.
ಜೋರ್ಡಾನ್‌ನಲ್ಲಿ ಮೆಹಮೆಟ್ ಅಕಟೆ, ರಿಶ್ಲೂ ಲಾಹಿರಿ ಹಾಗೂ ನಾಸಿರ್ ಸಲಾಮೇ ಅವರಿಂದ ಅಲ್ಲಿನ ವಾದ್ಯಗಳ ಜುಗಲ್‌ಬಂದಿ ಕಾರ್ಯಕ್ರಮದಲ್ಲಿ ಅಮೃತ್ ತಮ್ಮ ಖಂಜಿರ ವಾದನ ವೈಖರಿಯಿಂದ ಕಲಾವಿದರನ್ನು, ಪ್ರೇಕ್ಷಕರನ್ನು ನಿಬ್ಬೆರಗಾಗಿಸದಾಗ ಚಪ್ಪಾಳೆ-ಶಿಳ್ಳೆಗಳಿಂದಲೇ ತುಂಬಿಹೋಗಿತ್ತು ಸಭಾಂಗಣ.
ಜೆರುಸಲೆಂನ ಅಬ್ಬೋಸ್ ಕೊಸಿಮೊವ್, ಮಾರ್ಕ್ ಮೋಶಾಯೆವ್, ಅಲೆಕ್ಸ್ ಟೋಬಿಯಸ್, ಆಂಡ್ರೀ ಪಿಕ್ಕಿಯೋನಿ ಜೊತೆಗೆ ಖಂಜಿರದ ತಾಳವಾದ್ಯ ಒಡನಾಟವನ್ನು ಸಂಯೋಜಿಸುವಲ್ಲಿ ಮತ್ತು ಆ ಕಾರ್ಯಕ್ರಮ ಯಶಸ್ವಿಯಾಗಿಸುವುದರಲ್ಲಿ ಅಮೃತ್ ಪಾತ್ರ ಹಿರಿದು. ಇಂಥದ್ದೇ ಅದೆಷ್ಟೋ ಪ್ರದರ್ಶನಗಳ ಮೂಲಕ ಸಂಗೀತಕ್ಕೆ ಎಲ್ಲೆ ಇಲ್ಲ ಎಂಬುದು ಸಾಬೀತಾಗುವುದರೊಂದಿಗೆ, ಹೋದಲ್ಲೆಲ್ಲಾ ಖಂಜಿರ ಕುರಿತ ಉಪನ್ಯಾಸ, ಪ್ರದರ್ಶನಗಳ ಮೂಲಕ ಪುಟ್ಟ ವಾದ್ಯದ ಸಾಧ್ಯತೆಗಳು ಅಪರಿಮಿತ ಎಂಬುದನ್ನು ಲೋಕಮುಖಕ್ಕೆ ತೋರಿಸಿಕೊಟ್ಟವರು ಅಮೃತ್.
ಡಾ. ಆರ್. ಕೆ. ಶ್ರೀಕಂಠನ್, ಪ್ರೊ. ಟಿ.ಎನ್. ಕೃಷ್ಣನ್, ಡಾ. ಎಂ. ಬಾಲಮುರಳೀಕೃಷ್ಣ, ಡಾ. ಎನ್. ರಮಣಿ, ಡಾ. ಟಿ. ಕೆ. ಮೂರ್ತಿ, ಪಾಲ್ಘಾಟ್ ಆರ್. ರಘು, ಉಮಯಾಳಪುರಂ ಕೆ. ಶಿವರಾಮನ್, ಪ್ರೊ. ಟಿ.ವಿ. ಗೋಪಾಲಕೃಷ್ಣನ್, ಪ್ರೊ. ತ್ರಿಚಿ ಶಂಕರನ್, ಪ್ರೊ.ಎಲ್ಲಾ ವೆಂಕಟೇಶ್ವರ ರಾವ್, ಟಿ.ವಿ. ಶಂಕರನಾರಾಯಣನ್, ಡಾ. ಎಲ್. ಸುಬ್ರಮಣ್ಯಂ, ಮಧುರೈ ಟಿ. ಎನ್. ಶೇಷಗೋಪಾಲನ್, ಡಾ. ಕದ್ರಿ ಗೋಪಾಲನಾಥ್, ಕುಮಾರಿ ಎ. ಕನ್ಯಾಕುಮಾರಿ, ಅರಿದ್ವಾರಮಂಗಲಂ, ಎ.ಕೆ. ಪಳನಿವೇಲ್ (ತವಿಲ್), ತಂಜಾವೂರು ಗೋವಿಂದರಾಜನ್ (ತವಿಲ್), ತಿರುಪುಂಗೂರು ಮುತ್ತುಕುಮಾರಸ್ವಾಮಿ, ಚಿತ್ರವೀಣಾ ರವಿಕಿರಣ್, ಮೈಸೂರು ಎಂ. ನಾಗರಾಜ್, ಮೈಸೂರು ಡಾ. ಎಂ. ಮಂಜುನಾಥ್ ಮುಂತಾದ ಪ್ರಮುಖ ಕಲಾವಿದರೊಂದಿಗೆ ಅಮೃತ್‌ರವರು ಕಛೇರಿ ನೀಡಿದ್ದಾರೆ.
ಕಳೆದ ಮೂರುವರೆ ದಶಕಗಳಲ್ಲಿ ಅಮೃತ್ ದೇಶದ ಎಲ್ಲ ಪ್ರಮುಖ ಸಂಗೀತೋತ್ಸವಗಳು, ಆಕಾಶವಾಣಿ, ದೂರದರ್ಶನ, ಸಂಗೀತ ಸಭಾಗಳಲ್ಲಿ ಸಂಗೀತ ಕ್ಷೇತ್ರದ ಬಹುತೇಕ ಹಿರಿಯರಿಗೆ ಮೃದಂಗಕ್ಕೆ ಜೊತೆ ನೀಡಿದ್ದಾರೆ.
ಸಂಗೀತ ಕಛೇರಿಗಳಲ್ಲಿ ಪಕ್ಕ ವಾದ್ಯವಾಗಿದ್ದ ಖಂಜಿರಕ್ಕೆ ಪ್ರಧಾನ ತಾಳವಾದ್ಯದ ಹೊಳಪು ನೀಡಿ, ಏಕಮಾತ್ರ ತಾಳವಾದ್ಯದ ಪ್ರತ್ಯೇಕ ಕಛೇರಿಯನ್ನೇ ನುಡಿಸಿ, ಸಾಧಿಸಿ ತೋರಿಸಿದವರು ಅಮೃತ್. ಫ್ಯೂಶನ್ ಸಂಗೀತದಲ್ಲಿ ಖಂಜಿರವನ್ನು ಅನ್ಯರು ಬಳಸಿದ್ದಾರಾದರೂ, ಶಾಸ್ತ್ರೀಯ ಸಂಗೀತದಲ್ಲಿ ಖಂಜಿರದ ಸೋಲೋ ಕಛೇರಿಯಲ್ಲಿ ಸದ್ಯ ಅಮೃತ್ ಹೆಸರು ಮಾತ್ರ ಕೇಳಿಬರುತ್ತಿದೆ. ಎರಡು ದಶಕಗಳ ಕಾಲ ಕಾರೈಕುಡಿ ಆರ್.ಮಣಿ ಅವರ 'ಶ್ರುತಿಲಯ' ತಾಳವಾದ್ಯ ಸಮೂಹದಲ್ಲಿ ಪ್ರಮುಖ ಸದಸ್ಯರಾಗಿ ಖಂಜಿರವನ್ನು ಮೆರೆಸಿದರಲ್ಲದೆ, ಜಾಗತಿಕ ಸಿಂಫೋನಿಯಲ್ಲಿ ಸೋಲೋ ಕಲಾವಿದರಾಗಿ ಜರ್ಮನಿ, ಚೀನಾ, ಮೆಕ್ಸಿಕೋ, ಜೆರುಸಲೇಂ, ಓಹಿಯೋ, ಬೋಸ್ಟನ್, ಅರಿಜೋನಾಗಳಲ್ಲಿ ಪ್ರದರ್ಶನ ನೀಡಿದ್ದಾರೆ.
ಅಮೃತ್ಆಸಕ್ತಿ ಉಳ್ಳವರಿಗೆ ನೇರವಾಗಿ ಮತ್ತು ಅನ್ಲೈನ್ ಮಾಧ್ಯಮಗಳಲ್ಲಿ ಕಲಿಸುತ್ತಲೂ ಇದ್ದಾರೆ.
ಅಮೃತ್ ಖಂಜಿರ ಅವರಿಗೆ ಆರ್ಯಭಟ ಯುವ ಪ್ರಶಸ್ತಿ, ಖಂಜಿರ ಪ್ರವೀಣ, ಅನನ್ಯ ಯುವ ಪುರಸ್ಕಾರ, ಸಲ್ಲರಿ ಗಾನ ಲಯ ವಿಟಗಾರ, ಯುವ ಕಲಾ ಭಾರತಿ, ಲಯ ಪ್ರತಿಭಾಮಣಿ, ನಾದ ಜ್ಯೋತಿ ಪುರಸ್ಕಾರ, ಗುರು ಕಲಾಶ್ರೀ, ಸತ್ಯಶ್ರೀ, ಲಲಿತ ಕಲಾ ಸುಮ ಮುಂತಾದ ಗೌರವಗಳು ಸಂದಿವೆ.
ಅಮೃತ್ ಖಂಜಿರ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
Happy birthday to our great Rhythm master Amrit Khanjira II Sir
ಕಾಮೆಂಟ್‌ಗಳು