ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ತಿರುಪ್ಪಾವೈ23


 ತಿರುಪ್ಪಾವೈ 23

ಸಿಂಹಪೀಠದಲಿ ಕುಳಿತಿರುವವನೆ ನಮ್ಮೆಡೆಗೆ ಕರುಣೆಯಿಂದಲಿ ನೋಡು

ಮಾರಿಮಲೈ ಮುಳಿಂಜಿಲ್ ಮುನ್ನಿಕ್ಕಿಡಂದುರಂಗುಂ 
ಶೀರಿಯ ಶಿಂಗಂ ಅರಿವುತ್ತು ತ್ತೀವಿಳಿತ್ತು ವೇರಿಮಯಿರ್ ಪೊಂಗ ವೆಪ್ಪಾಡುಂ ಪೇರ್‌ನ್ದುದರಿ
ಮೂರಿ ನಿಮಿರ್‌ನ್ದು ಮುಳಂಗಿ ಪ್ಪುರಪಟ್ಟು ಪೋದರುಮಾಪೋಲೇ ನೀ ಪೂವೈಪ್ಪೂವಣ್ಣಾ ಉನ್ 
ಕೋಯಿಲ್ ನಿನ್ರಿಂಗನೇ ಪೋಂದರುಳಿ ಕೋಪ್ಪುಡೈಯ್ 
ಶೀರಿಯ ಶಿಂಗಾಶನತ್ತಿರುನ್ದು ಯಾಂ ವಂದ ಕಾರಿಯಂಆರಾಯನ್ದು ಅರುಳೆಲೋರೆಂಬಾವಾಯ್

ಭಾವಾನುವಾದ - ೨೩

ಸಿಂಹಪೀಠವನೇರಿ ನಮ್ಮೆಡೆಗೆ ನೋಡಿ ಬಂದಿಹಿರೇನೆಂದು ಬೆಸಸಿದೊಡೆ ಭಾಗ್ಯೂದಯವೆಮಗೆಂದು ನಲಿಯುವೆವು ಪ್ರಾಣಜೀವವನೆ 
ನಿಜಭಕ್ತನನು ಸೇವಿಸುತ ಸತಿಯರೊಡಗೂಡಿ ಮೆರೆದೆ ನೀನತಿಶಯದಿ 
ಪುಂಡರೀಕ ವರದ ನೀನಾದೆ ಸಾರಥಿಯಾದೆ ಕೃಷ್ಣಯಳಲನು ನೀಗಿಸುತ ಮಣ್ಣು ತಿನ್ನುವ ನೆಪದಿ ನೀತೋರ್ದೆ ಬಾಯಲ್ಲಿ ಬ್ರಹ್ಮಾಂಡ ಸಿಂಹಪೀಠದಿಂದೆಮ್ಮೆಡೆಗೆ ನೋಡುತೆಮ್ಮನು ಬೆಸಸೊಲುಮೆಯಲಿ ಹೇಮಪುರಿಗೊಡೆಯ ಪೊಡವಿಪಾಲನೆ ಪುಣ್ಯಶ್ರವಣಕೀರ್ತನನೆ ಫಲಿಸಲಿಂತೆಲ್ಲರನುಪಮ ನೋಂಪಿ ತುಂಬುತೆಲ್ಲಡೆ ಮಂಗಳದ ಮುಂಬೆಳಕು

ತಿರುಪ್ಪಾವೈ 13
ಸಂಕ್ಷಿಪ್ತ ಭಾವಾರ್ಥ

ಹೇ ಜಗನ್ನಾತ, ನೀನು ಬರುತ್ತಿದ್ದರೆ, ಅನಂತಕೋಟಿ ರಾಯರ್ಗಳೂ ತಲೆ ತಗ್ಗಿಸಿ ನಿಲ್ಲುತ್ತಾರೆ. ನೀನು ಸಿಂಹಪೀಠದಲ್ಲಿ ಕುಳಿತು ಎಲ್ಲರೆಡೆಗೆ ಒಮ್ಮೆ ಕಣ್ಣು ಹಾಯಿಸಿದರೆ ಸಾಕು ತಾವು ಧನ್ಯರೆಂದುಕೊಳ್ಳುತ್ತಾರೆ. ಹೇ ಕೃಪಾನಿಧಿ, ನಾವೂ ಸಹ ನಿನ್ನೊಂದು ಕೃಪಾಕಟಾಕ್ಷಕ್ಕಾಗಿ ಧನುರ್ಮಾಸದ ಚಳಿಯಲ್ಲಿ ಯಮುನೆಯಲ್ಲಿ ಮಿಂದು ನಿನ್ನ ಧ್ಯಾನ ಮಾಡುತ್ತಾ ಕೇವಲ ಭಕ್ತಿರಸ ಪಾನದಿಂದ ಬಂದಿದ್ದೇವೆ. 

ಆಳ್ವಾರರೂ ತಿರುನಾಮಗಳಿಂದ ಶೋಭಿತರಾಗಿ ನಾಲಾಯಿರ ಪ್ರಬಂಧ ಪಾರಾಯಣ ಮಾಡುತ್ತಿದ್ದಾರೆ.

ಮುಕುಂದಾ, ನೀನು ಸುಧಾಮನಿಗೆ ಒಲಿದು ಆತನ ಪಾದಪೂಜೆಯನ್ನು ಸತಿಯರೊಡಗೂಡಿ ಮಾಡಿ ನಿನ್ನ ಕೀರ್ತಿಯನ್ನು ಹೆಚ್ಚಿಸಿಕೊಂಡೆ. ಭಕ್ತ ಪುಂಡರೀಕನಿಗೆ ಒಲಿದು ಭೀಮಾ ನದಿಯ ತಟದಲ್ಲಿ ಭಕ್ತರಿಗೆ ಭವಬಂಧನದಿಂದ ಪಾರುಮಾಡಲು ಕಟಿಬದ್ಧನಾಗಿ ಕಟಿಯಲ್ಲಿ ಕರವಿಟ್ಟು ನಿಂತವನು ನೀನು. 

ಮಣ್ಣು ತಿನ್ನುವ ನೆಪದಲ್ಲಿ ತಾಯಿಗೆ ಬಾಯಲ್ಲಿ ಬ್ರಹ್ಮಾಂಡವನ್ನು ತೋರಿಸಿ ಭಯ ಹುಟ್ಟಿಸಿ, ಮತ್ತೆ ತಾಯ ಮಡಿಲಲ್ಲಿ ಏನೂ ಅರಿಯದ ಕಂದಮ್ಮನಂತೆ ನಲಿದ ಲೀಲಾ ವಿನೋದಿ. ತಂಗಿ ದ್ರೌಪದಿ ಅನಾಥರಕ್ಷಕಾ, ಅಣ್ಣಾ ಎಂದು ಕರೆದಾಗ ಅಕ್ಷಯ ವಸನವನ್ನು ನೀಡಿ ಪಾರ್ಥಸಾರಥಿಯಾಗಿ ದುಷ್ಟ ಸಂತಾನವನ್ನೇ ನಾಶಮಾಡಿದ ಭಕ್ತರನ್ನು ಉಳಿಸಿಕೊಂಡ ವಿಶ್ವರೂಪಿ ನೀನು. 

ನಿನ್ನದು ಅನಂತ ಅವತಾರಗಳು, ಅವುಗಳನ್ನು ವರ್ಣಿಸಲು ಆದಿಶೇಷನಿಗೂ ಅಸಾಧ್ಯ. ಇನ್ನು ನಾವು ವರ್ಣಿಸಲು ಸಾಧ್ಯವೇ ?
ನಂದ ನಂದನ ನೀನು ಕರುಣಾಳು. ಕರುಣಾಳು ಬಾ ಬೆಳಕೆ ಕೈ ಹಿಡಿದು ನಡೆಸೆಮ್ಮ ಈ ಇರುಳ ಬಾಳಿನಲಿ.
ಇದರಿಂದ ನಮ್ಮ ವ್ರತವೂ ಈಡೇರಿ ಸಕಲ ಲೋಕಕ್ಕೂ ಮಂಗಳವಾಗಲಿ.

ಕೃಪೆ: ದಾಸಗೋಪಾಲ ಕಾವ್ಯನಾಮದ ಅರ್ಚಕ ವೇಣುಗೋಪಾಲ್ ಬಿ. ಎಸ್ ಅವರ ಶ್ರೀಗೋದಾದೇವಿ ಅನುಗ್ರಹಿಸಿದ ತಿರುಪ್ಪಾವೈ ಗೀತಮಾಲೆ

Thiruppavai 23

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ