ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ನಾನು ಬಡವಿ


 
ನಾನು ಬಡವಿ ಆತ ಬಡವ
ಒಲವೆ ನಮ್ಮ ಬದುಕು
ಬಳಸಿಕೊಂಡೆವದನೆ ನಾವು
ಅದಕು ಇದಕು ಎದಕು.

ಹತ್ತಿರಿರಲಿ ದೂರವಿರಲಿ
ಅವನೆ ರಂಗಸಾಲೆ
ಕಣ್ಗೆ ಕಟ್ಟುವಂತ ಮೂರ್ತಿ
ಕಿವಿಗೆ ಮೆಚ್ಚಿನೋಲೆ.

ಚಳಿಗೆ ಬಿಸಿಲಿಗೊಂದೆ ಹದನ
ಅವನ ಮೈಯ ಮುಟ್ಟೆ
ಅದೇ ಗಳಿಗೆ ಮೈಯ ತುಂಬ
ನನಗೆ ನವಿರು ಬಟ್ಟೆ.

ಆತ ಕೊಟ್ಟ ವಸ್ತು ವಡವೆ
ನನಗೆ ಅವಗೆ ಗೊತ್ತು
ತೋಳುಗಳಿಗೆ ತೋಳ ಬಂದಿ
ಕೆನ್ನೆ ತುಂಬ ಮುತ್ತು.

ಕುಂದು ಕೊರತೆ ತೋರಲಿಲ್ಲ
ಬೇಕು ಹೆಚ್ಚಿಗೇನು?
ಹೊಟ್ಟೆಗಿತ್ತ ಜೀವ ಫಲವ
ತುಟಿಗೆ ಹಾಲು ಜೇನು.

ಸಾಹಿತ್ಯ: ದ. ರಾ. ಬೇಂದ್ರೆ

ಟಿಪ್ಪಣಿ:  ಬೇಂದ್ರೆಯವರು ಜೈಲುವಾಸ ಅನುಭವಿಸಿ, ಅನಂತರದಲ್ಲಿ ಪೋಲೀಸ್ ಕಾವಲಿನ ಮಧ್ಯದಲ್ಲಿ ಕೆಲವು ದಿವಸ ಮುಗದ ಎಂಬ ಹಳ್ಳಿಯಲ್ಲಿ ವಾಸ ಮಾಡಿದರು.  ಆಗ  ಅವರು ಅನುಭವಿಸಿದ ಬಡತನದ ಅನುಭೂತಿ ಇಲ್ಲಿ ಒಂದು ನಾಟ್ಯಗೀತವಾಗಿದೆ.  ಹಣದಿಂದ ಬಡತನ ಬಂದರೂ, ಪತಿ-ಪತ್ನಿಯರಲ್ಲಿಯ ಪ್ರೀತಿಗೆ ಬಡತನ ಬರದಿದ್ದರೆ ಸಾಕು.  ಅದು ಅಕ್ಷಯ ಶ್ರೀಮಂತಿಕೆ. 

(ನಮ್ಮ 'ಕನ್ನಡ  ಸಂಪದ'ದಲ್ಲಿ ಮೂಡಿಬರುತ್ತಿರುವ ಬರಹಗಳನ್ನು ನಮ್ಮ 'ಸಂಸ್ಕೃತಿ ಸಲ್ಲಾಪ' ತಾಣವಾದ www.sallapa.comನಲ್ಲಿ ಆಸ್ವಾದಿಸಲು ತಮ್ಮನ್ನು ಆದರದಿಂದ ಸ್ವಾಗತಿಸುತ್ತಿದ್ದೇವೆ.  ನಮಸ್ಕಾರ)

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ