ಸುಂಕಾಪುರ
ಎಂ. ಎಸ್. ಸುಂಕಾಪುರ
ಡಾ. ಎಂ. ಎಸ್. ಸುಂಕಾಪುರ ಕಳೆದ ಶತಮಾನದ ವಿದ್ವಾಂಸರಲ್ಲಿ ಒಬ್ಬರು.
ಸುಂಕಾಪುರ 1921ರ ಜನವರಿ 10ರಂದು ಮುಳಗುಂದದಲ್ಲಿ ಜನಿಸಿದರು. ತಂದೆ ಸಣ್ಣಬಸಪ್ಪ. ತಾಯಿ ಸಿದ್ಧಮ್ಮ. ಪ್ರಾಥಮಿಕ ಶಿಕ್ಷಣ ಮುಳಗುಂದದಲ್ಲಿ ನಡೆದು ಮುಂದೆ ಗದುಗಿನ ಮುನಿಸಿಪಲ್ ಹೈಸ್ಕೂಲಿನಲ್ಲಿ ಓದಿದರು.
ಸುಂಕಾಪುರ ಅವರ ಮನೆತನವೆ ಜನಪದಗಳ ತವರು. ಹೀಗಾಗಿ ಇವರಿಗೆ ಜನಪದ ಕಲೆಗಳ ಬಗ್ಗೆ ವಿಶೇಷವಾದ ಆಕರ್ಷಣೆ ಮೂಡಿತು. ಸುಗ್ಗಿ ಕುಣಿತ, ಸೋಬಾನಪದ, ಜಾನಪದ ಕಥೆ ಹೇಳುವ ಕಲೆ ಇವರಿಗೆ ಕರಗತವಾಗಿತ್ತು. ಬೆಳಗಾವಿಯ ಲಿಂಗರಾಜ ಕಾಲೇಜಿನಲ್ಲಿ ಓದಿ 1946ರಲ್ಲಿ ಮುಂಬೈ ವಿಶ್ವವಿದ್ಯಾಲಯದ ಬಿ.ಎ. ಪದವಿಯಲ್ಲಿ ರ‍್ಯಾಂಕ್ ವಿಜೇತರಾದರು. ಫೆಲೋಶಿಪ್‌ನಲ್ಲಿ ಎಂ.ಎ. ವ್ಯಾಸಂಗ ನಡೆಯಿತು. 1957ರಲ್ಲಿ “ಕನ್ನಡ ಸಾಹಿತ್ಯದಲ್ಲಿ ಹಾಸ್ಯ” ವಿಷಯದ ಬಗ್ಗೆ ಸಂಶೋಧನಾ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಗಳಿಸಿದರು.
ಡಾ. ಎಂ. ಎಸ್. ಸುಂಕಾಪುರ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ರೀಡರ್ ಆಗಿ ನೇಮಕಗೊಂಡರು. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕನ್ನಡ ಅಧ್ಯಯನ ಪೀಠ ಕಟ್ಟುವಲ್ಲಿ ಡಾ. ಆರ್.ಸಿ. ಹಿರೇಮಠರ ಸಹಯೋಗದಲ್ಲಿ ಅಹರ್ನಿಶಿ ದುಡಿದರು. ಗುಲಬರ್ಗ ಸ್ನಾತಕೋತ್ತರ ಕೇಂದ್ರದ ಆರಂಭ ಮಾಡಿ ಮುಖ್ಯಸ್ಥರಾಗಿ ಅಧಿಕಾರ ಸ್ವೀಕಾರ ಮಾಡಿದರು. ಕೆಲವರ್ಷಗಳ ನಂತರ ಧಾರವಾಡಕ್ಕೆ ಹಿಂದಿರುಗಿ ನಿವೃತ್ತಿಯವರೆಗೂ ಕರ್ನಾಟಕ ವಿಶ್ವವಿದ್ಯಾಲಯದ ಅಧ್ಯಯನ ಪೀಠದ ನಿರ್ದೇಶಕರಾಗಿ ಹೊಣೆ ನಿರ್ವಹಿಸಿದರು.
ಸುಂಕಾಪುರ ಅವರಲ್ಲಿ ವಿದ್ಯಾರ್ಥಿ ದೆಸೆಯಿಂದಲೇ ಸಾಹಿತ್ಯ ರಚನೆಯ ಗೀಳು ಹತ್ತಿತ್ತು. ಹರಟೆ, ನಾಟಕಗಳ ರಚನೆಯ ಹವ್ಯಾಸ ಮೂಡಿತ್ತು. ಅವರು ನಾಟಕಕಾರರು ಮಾತ್ರವಲ್ಲದೆ ಶ್ರೇಷ್ಠನಟರೂ ಆಗಿದ್ದರು. ಶೋಭಮಾಲ ಎಂಬ ಸ್ವತಂತ್ರ ಪ್ರಕಾಶನ ಸಂಸ್ಥೆಯ ಪ್ರಾರಂಭ ಮಾಡಿದರು.
ಸುಂಕಾಪುರ ಅವರು ಪ್ರಭುಲಿಂಗಲೀಲೆ, ಶಬರ ಶಂಕರ ವಿಲಾಸ ಮುಂತಾದ ಹನ್ನೊಂದು ಕೃತಿಗಳನ್ನು ಸಂಪಾದಿಸಿದರು. ಸೋಮನಾಥ ಚರಿತೆ, ರಾಜಶೇಖರ ವಿಳಾಸ ಮೊದಲಾದ ಹನ್ನೆರಡು ಕೃತಿಗಳ ಸಹಸಂಪಾದನೆ ಮಾಡಿದರು. ಒಂಬತ್ತು ವಚನ ಸಾಹಿತ್ಯ ಕೃತಿಗಳನ್ನು ಮೂಡಿಸಿದರು. ಗುಮ್ಮಟ ಶತಕ, ರಕ್ಷಾಶತಕ, ಚನ್ನವೀರೇಶ್ವರ ಶತಕ, ನಿಜಲಿಂಗಶತಕ ಮುಂತಾದ ಏಳು ಶತಕಗಳನ್ನು ಸಂಪಾದಿಸಿದರು. ಚೌಪದನಗಳು, ಹೋಳಿ ಹಾಡು ಮೊದಲಾದ 9 ಜಾನಪದ ಕೃತಿಗಳನ್ನು ಸಂಪಾದಿಸಿದರು. ಶ್ರೀಕೃಷ್ಣ ಪಾರಿಜಾತ, ಅಲ್ಲಮಪ್ರಭು ಸಣ್ಣಾಟ ಮೊದಲಾದ 6 ಯಕ್ಷಗಾನ ಬಯಲಾಟ ಕೃತಿಗಳನ್ನು ಮೂಡಿಸಿದರು. ಇವರ 'ನಗೆಹೊಗೆ’ ಏಕಾಂಕ ಸಂಗ್ರಹ, 'ಗಪ್‌ಚಿಪ್' ಹರಟೆಗಳ ಸಂಗ್ರಹ. ನಗೆಗಾರ ನಯಸೇನ, ಜೀವನದಲ್ಲಿ ಹಾಸ್ಯ, ರೇಡಿಯೋ ನಾಟಕಗಳು ಮುಂತಾದ ಕೃತಿಗಳನ್ನೂ ಪ್ರಕಟಿಸಿದರು.
ಡಾ. ಎಂ. ಎಸ್. ಸುಂಕಾಪುರ ಅವರು 1992ರ ಜೂನ್ 30ರಂದು ಈ ಲೋಕವನ್ನಗಲಿದರು.
On the birth anniversary of great scholar Dr. M. S. Sunkapura
ಕಾಮೆಂಟ್‌ಗಳು