ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಭಾರತಕಥಾಮಂಜರಿ25


 ಕುಮಾರವ್ಯಾಸನ
ಕರ್ಣಾಟ ಭಾರತ ಕಥಾಮಂಜರಿ 

ಸಭಾ ಪರ್ವ - ಐದನೆಯ ಸಂಧಿ

ನಡೆದು ವಿವಿಧ ದ್ವೀಪ ಪತಿಗಳ
ಜಡಿದು ಕಪ್ಪವ ಕೊಂಡು ತೆಂಕಣ
ಕಡಲ ವಳಯದ ನೃಪರ ಗೆಲಿದನು ವೀರ ಸಹದೇವ

————-

ಕೇಳು ಜನಮೇಜಯ ಧರಿತ್ರೀ
ಪಾಲ ಸಹದೇವನ ಸಗಾಢಿಕೆ
ಯಾಳುತನವಿವರಾರ ಹವಣಲ್ಲೆಂಬ ತೆರನಾಯ್ತು
ಆಳು ನಡೆದುದು ತೆಂಕಣವನೀ
ಪಾಲರೀತನ ಬಿರಿಸಿಗೀತನ
ದಾಳಿಗೀತನ ದೆಸೆಗೆ ದೆಸೆಗೆಟ್ಟುದು ದಿಗಂತದಲಿ ೧

ಶೂರಸೇನನ ಸದದು ನೆರೆ ಭಂ
ಡಾರವೆಲ್ಲವ ಕೊಂಡು ತೆಂಕಣ
ವೀರ ಮತ್ಸ್ಯನ ಗೆಲಿದು ಸರ್ವಸ್ವಾಪಹಾರದಲಿ
ಭೂರಿ ಬಲನಹ ದಂತವಕ್ತ್ರನ
ವಾರಣಾಶ್ವ ರಥಂಗಳನು ಕೊಂ
ಡಾರುಭಟೆಯಲಿ ಮುಂದೆ ನಡೆದನು ತೆಂಕಮುಖವಾಗಿ ೨

ಖಳ ನಿಶಾಚರ ಕೋಟಿಗಳನರೆ
ಗಳಿಗೆಯೊಳಗಾಕ್ರಮಿಸಿದನು ಮಂ
ಡಳಿಕ ಮನ್ನೆಯರಾಂಪರೇ ಚತುರಂಗ ಪದಹತಿಗೆ
ಹೊಳೆತಡಿಯ ಗಿರಿ ದುರ್ಗ ವಿಪಿನ
ಸ್ಥಳದ ಧರಣಿಪರಿದಿರುವಂದ
ಗ್ಗಳೆಯ ಗಜ ರಥಹಯಸಹಿತ ತೆತ್ತರು ಸುವಸ್ತುಗಳ ೩

ಬಂದು ಕುಂತೀಭೋಜ ಮೊಮ್ಮನ
ಮಂದಿರದ ಸುಕ್ಷೇಮ ಕುಶಲವ
ನಂದು ಕೇಳಿದು ಕೊಟ್ಟನತಿಶಯ ಸಾರವಸ್ತುಗಳ
ಮುಂದೆ ಚರ್ಮಣ್ವತಿಯ ಜಂಭಕ
ನಂದನನನಪ್ಪಳಿಸಿ ಗಜ ಹಯ
ವೃಂದವನು ಕೊಂಡೆತ್ತಿ ಬಿಟ್ಟನವಂತಿ ದೇಶದಲಿ ೪

ತರುಬಿದರೆ ವಿಂದಾನುವಿಂದರ
ಮುರಿದು ಕಪ್ಪವ ಕೊಂಡು ಭೀಷ್ಮಕ
ನರಪತಿಯ ಗೆಲಿದಲ್ಲಿ ಮನ್ನಿಸಿ ಕೊಂಡನುಚಿತದಲಿ
ಬರಬರಲು ಕುಂತಲ ನೃಪನನಾ
ಕರಿಸಿ ಕಪ್ಪವ ಕೊಂಡು ಖಳ ತಿ
ತ್ತಿರಿ ಕಿಳೀಂದ್ರಕರೆಂಬ ಬೇಡರ ಧುರದೊಳೋಡಿಸಿದ ೫

ಉರವಣಿಸಿ ದಳ ತುಂಗಭದ್ರಾ
ವರ ನದಿಯನುತ್ತರಿಸಿ ಪಂಪಾ
ಸರದ ತಡಿಯಲಿ ಬಿಟ್ಟನಾ ವಿರುಪಾಕ್ಷ ಸೀಮೆಯಲಿ
ಗಿರಿಚರರ ವನಚರರ ಬಿಂಕವ
ನೊರಸಿ ಕಿಷ್ಕಿಂಧಾದ್ರಿಯಲಿ ಸಂ
ಚರಿಸಿ ಬಿಟ್ಟುದು ಕಟಕ ಬಹುವಿಧ ವಾದ್ಯ ರಭಸದಲಿ ೬

ಕೇಳಿದನು ಕಿಷ್ಕಿಂಧಗಿರಿಯ ವಿ
ಶಾಲ ಶೃಂಗವನು ನೆರೆ ಘನ ನಿ
ಸ್ಸಾಳ ಮೊಳಗಿದರೊಡನೆ ಮೊಳಗಿತು ಗಿರಿ ಗುಹಾನಿಕರ
ಆಳಿದೆತ್ತಣದೆನುತ ಕಪಿ ಬಲ
ಜಾಲ ನೆರೆದುದು ಮುರಿದು ತರುಶಾ
ಖಾಳಿಗಳ ಕೈದುಗಳ ಕೈಯಲಿ ತರುಬಿದರು ಬಲವ ೭

ಕವಿದುದೀ ಚತುರಂಗ ಬಲ ಸಂ
ತವಿಸಿ ಲಗ್ಗೆಯ ಮಾಡಿ ವಾನರ
ನಿವಹದಲಿ ಕರೆದುದು ಶರಾಳಿಯ ಸುಭಟ ಮೇಘಚಯ
ತಿವಿದರಂಬಿನ ಸೋನೆಗಳುಕದೆ
ಸವಡಿ ಮರನಲಿ ಸದೆದು ಹೊಕ್ಕ ದು
ರವಿಸುತನ ಸಂತತಿ ಸುಷೇಣನು ವೀರ ವೃಷಸೇನ ೮

ದೊರೆಗೆ ದೊರೆಯಿದಿರಾಗಿ ಕಾದಿತು
ತೆರಳದಿದು ದಿನವೇಳು ಪರಯಂ
ತರ ವಿಘಾತಿಯೊಳೊದಗೆ ಮೆಚ್ಚಿದರುಭಯ ವಾನರರು
ಅರಸ ನೀನಾರೆನೆ ಯುಧಿಷ್ಠಿರ
ನರಪತಿಯ ಕಥೆವೇಳೆ ಕೊಟ್ಟರು
ಪರಮ ವಸ್ತುಪ್ರಚಯವನು ಮಾದ್ರೀಕುಮಾರಂಗೆ ೯

ತೆರಳುತಲ್ಲಿಂ ಬಳಿಕ ತೆಂಕಣ
ನರಪತಿಗಳಾನುವರೆ ಸೇನೆಯ
ಖುರಪುಟಕೆ ನುಗ್ಗಾಗಿ ತೆತ್ತರು ಸಕಲ ವಸ್ತುಗಳ
ಉರವಣಿಸಿ ಬಲ ನಡೆದು ನದಿಗಳ
ನರಸಿ ಕಾವೇರಿಯಲಿ ಬಿಟ್ಟುದು
ಹರಿದುದಲ್ಲಿಂ ಧಾಳಿ ಘನ ಮಾಹಿಷ್ಮತೀಪುರಕೆ ೧೦

ಧಾಳಿಯೆನಲಿದಿರಾಗಿ ಹೊರವಂ
ಟಾಳು ತಾಗಿದುದಲ್ಲಿಗಧಿಪತಿ
ನೀಲನೆಂಬಾತನು ಮಹಾಹವವಾಯ್ತು ಚೂಣಿಯಲಿ
ಹೇಳಲದ್ಭುತವುರಿದುದಧಿಕ
ಜ್ವಾಲೆಯಲಿ ಚತುರಂಗ ಬಲ ಹರ
ಭಾಳನಯನ ಕವಾಟ ತೆರೆದಂತಾಯ್ತು ನಿಮಿಷದಲಿ ೧೧

ಉರಿ ಸಮುದ್ರದೊಳದ್ದುದೋ ಮೋ
ಹರವು ತೆಗೆತೆಗೆ ಕುನ್ನಿಗಳ ಕಾ
ತರಿಸಲೀಯದಿರಾನೆ ಮುರಿಯಲಿ ಹೊಕ್ಕ ಕುದುರೆಗಳು
ಮರಳಿಚಲಿ ತೇರುಗಳ ಸೂತರ
ಕರೆದು ವಾಘೆಯ ಸೆಳೆ ಪದಾತಿಯ (೧೨

ತಿರುಗ ಹೊಯ್ ಹೊಯ್ಯೆನುತ ಮಿಗೆ ಗಜರಿದನು ಸಹದೇವ
ರಾಯ ದಳವೇಕುರಿದುದೇ ನಿದ
ರಾಯಸವು ಹೊಸತಾಯ್ತು ವೈಶಂ
ಪಾಯ ಮುನಿ ಹೇಳೆನಲು ನಗುತಿಂತೆಂದನಾ ಮುನಿಪ
ರಾಯ ಕೇಳೈ ಪೂರ್ವದಲಿ ಕಮ
ಲಾಯತಾಕ್ಷಿಯರುಂಟು ಹಲಬರು
ವಾಯುಸಖ ಪರದಾರ ಗಮನವ ಮೆಚ್ಚಿದನು ಬಳಿಕ ೧೩

ಪಾವಕ ದ್ವಿಜ ವೇಷದಲಿ ಬಂ
ದಾ ವಧುಗಳೊಡನಿರಲು ನಗರವ
ಕಾವವರು ಹಾದರವ ಹಿಡಿದರು ಹವ್ಯವಾಹನನ
ಕೋವಿದರ ಮುಂದಿಕ್ಕಿದರೆ ಧ
ರ್ಮಾವಲಂಬನ ಶಾಸ್ತ್ರಗಳನು
ದ್ಭಾವಿಸಲು ಭುಗಿಲೆಂದು ತೋರಿದನಗ್ನಿ ನಿಜತನುವ ೧೪

ಧರಣಿಸುರರಲಿ ಸುಪ್ರಧಾನರು
ವೆರೆಸಿ ಬಂದಗ್ನಿಯ ಪದತ್ರಯ
ಕೆರಗಿ ಕೋಪಸ್ತಂಭವನು ಮಾಡಿದರು ದೈನ್ಯದಲಿ
ಪುರದಲದು ಮೊದಲಾಗಿ ಕಾಮಿನಿ
ಯರಿಗೆ ಹಾದರ ಸಲವುದಿದು ವಿ
ಸ್ತರಣವೆಂದು ಕೃಶಾನು ವರವನು ಕೊಟ್ಟನಾ ನೃಪಗೆ ೧೫

ಅದುವೆ ಮೊದಲಾಗೀಗಳಲ್ಲಿಯ
ಸುದತಿಯರು ಸ್ವಚ್ಛಂದಚಾರಿಯ
ರಿದರಿನಾ ನೃಪತಿಗೆ ಸಹಾಯವನಗ್ನಿ ಮಾಡುವನು
ಇದನರಿತು ಸಹದೇವನುಪವಾ
ಸದಲಿ ಮಿಂದು ಕುಶಾಗ್ರ ಸಂಸ್ತರ
ಣದಲಿ ಪವಡಿಸಿ ಬೇಡಿಕೊಂಡನು ವಹ್ನಿಸೂಕ್ತದಲಿ ೧೬

ಯಾಗವಿದು ನಿನಗೋಸುಗವೆ ನೃಪ
ಯಾಗ ಸಿದ್ಧಿಗೆ ಬಂದೆವಲ್ಲದೆ
ಮೇಗೆ ತಾನರಿಯದೆ ಧನಾಶೆಯಲಿವನ ಮುರಿಯವಲೆ
ಈಗ ನೀನಡ್ಡೈಸಲೆಮ್ಮಯ
ಯಾಗವುಳಿಯಲಿ ನಿನಗೆ ಮಾಣಲಿ
ಯಾಗ ಪೌರೋಹಿತ್ಯವೆಂದನು ನಗುತ ಸಹದೇವ ೧೭

ಎಂದು ನಾನಾವಿಧ ವರಸ್ತುತಿ
ಯಿಂದ ಹೊಗಳಿದರಗ್ನಿ ಮೆಚ್ಚಿದ
ರಿಂದು ಬಿಡಿಯೆನೆ ಬಿಟ್ಟೆನೀತನ ಮಾರಿದೆನು ನಿನಗೆ
ಎಂದು ಶಿಖಿ ಹಿಮ್ಮೆಟ್ಟಲಾ ದಳ
ಮುಮದೆ ನಡೆದುದು ನೀಲ ಪುರದಲಿ
ಸಂದಣಿಸಿ ಬಳಿಕಾತನೀತನ ಕಂಡು ಪೊಡವಂಟ ೧೮

ತೆತ್ತನವ ಸರ್ವಸ್ವವನು ತಾ
ನೆತ್ತಿ ಬಂದನು ಕೂಡೆ ಬಳಿಕಿನೊ
ಳುತ್ತರೋತ್ತರವಾಯ್ತು ಸಹದೇವನಿಗೆ ದಿಗ್ವಿಜಯ
ಮತ್ತೆ ಸಹ್ಯಾಚಲದ ಕೊಳ್ಳದ
ಗುತ್ತರಿನ ಭೂಪರ ವಿಭಾಡಿಸಿ
ಸುತ್ತಿ ಬಂದಾದರಿಸಿದನು ತದ್ಗಿರಿ ನಿವಾಸಿಗಳ ೧೯

ಇಳಿದು ಕೊಂಕಣ ಗೌಳವರ ಕೇ
ರಳರ ಸದೆದು ಮಹಾರ್ಘ ರತ್ನಾ
ವಳಿಯ ಹೇರಿಸಿದನು ಸುಚಿತ್ರಾಂಬರ ವಿಲೇಪನವ
ಜಲಧಿಯಂತರ್ದ್ವೀಪ ಪತಿಗಳ
ಕುಲವ ಶೋಧಿಸಿ ಚೋಳ ಪಾಂಡ್ಯರ
ದಳವ ಧಟ್ಟಿಸಿ ಕೊಂಡನನುಪಮಸಾರ ವಸ್ತುಗಳ ೨೦

ಕಳುಹಿದನು ಮಿಗೆಯಾಪ್ತ ಪತ್ರಾ
ವಳಿಯ ತನುಜನ ಬಳಿಗೆ ತತ್‌ಕ್ಷಣ
ದೊಳಗೆ ಹೇಳಿಕೆಯಾಯ್ತು ಪರಿವಾರಕೆ ಘಟೋತ್ಕಚನ
ತಿಳಿದ ಕಾರಿರುಳೆರಕವೋ ಮೇಣ್
ಖಳ ಜನದ ಹೃದಯಾಂಧಕಾರದ
ಹೊಳಕೆಯೋ ತಾನೆನುತಿರಲು ನಡೆತಂದನಾ ದನುಜ ೨೧

ಪಾಳೆಯವ ಹೊಕ್ಕನು ಘಟೋತ್ಕಚ
ನಾಳು ಸಹಿತಯ್ಯಂಗೆ ನಮಿಸಿದ
ನೂಳಿಗವ ಹೇಳೆನಗೆ ಬೆಸಸಾ ರಾಜಕಾರಿಯವ
ವೀಳೆಯವ ತಾಯೆನಲು ನಗುತ ವಿ
ಶಾಲ ವಿನಯಕೆ ಮೆಚ್ಚಿದನು ಬಲು
ದೋಳಿನಲಿ ಸೆಳೆದಪ್ಪಿ ಮುಂಡಾಡಿದನು ನಂದನನ ೨೨

ಮಗನೆ ಲಂಕೆಗೆ ಪೋಗು ಮಾನವ
ರಿಗೆ ಮಹೋದಧಿ ಗಮ್ಯವಲ್ಲತಿ
ವಿಗಡತನ ಬೇಡಲ್ಲಿ ವಿನಯದಲೆನ್ನು ಕಾರಿಯವ
ಸೊಗಸಿತೇ ಸಾಮದಲಿ ಕಪ್ಪವ
ತೆಗೆವುದವಗಡಿಸಿದರೆ ಬಳಿಕ
ಲ್ಲಿಗೆ ಶರಾಳಿಗಳಿವೆ ವಿಘಾತಿಗೆ ದೋಷವಿಲ್ಲೆಂದ ೨೩

ಎನೆ ಹಸಾದವ ಹಾಯ್ಕಿ ಭೀಮನ
ತನಯ ಕಳುಹಿಸಿಕೊಂಡು ತೆಂಕಲು
ಮನದಿ ಮುನ್ನವೆ ಬಂದ ರಾಮೇಶ್ವರದ ಶಿವಗೃಹಕೆ
ವಿನಯ ಮಿಗೆ ಪೊಡವಂಟು ರಘು ನಂ
ದನನ ಕೀರ್ತಿ ಸ್ತಂಭ ಡಂಬರ
ವೆನಿಪ ಸೇತುವ ಕಂಡು ನಡೆದನು ತೆಂಕ ಮುಖವಾಗಿ ೨೪

ತೋರಿತತಿ ದೂರದಲಿ ಲಂಕೆಯ
ಮೂರು ಶಿಖರದ ದುರ್ಗವುದಧಿಗೆ
ಮಾರುದಧಿಯೆನೆ ಮೆರೆದುದಂದು ಮಣಿಪ್ರಭಾವದಲಿ
ನೂರು ಯೋಜನ ಸೇತು ಮೂಲವ
ಮೀರಿ ನಡೆದನು ಬಡಗವಾಗಿಲ
ಕೀರಿದಗಳಿನ ಪಡಿಮೊಗವ ದಾಟಿದನು ವಹಿಲದಲಿ ೨೫

ಕೇರಿ ಕೇರಿಗಳೊಳಗೆ ನಿಜ ಪರಿ
ವಾರ ಸಹಿತ ವೃಕೋದರಾತ್ಮಜ
ನಾರಿವನು ತಾನಾರೆನಲು ಡನೆತಂದನೊಲವಿನಲಿ
ವೀರ ದಾನವ ವರ್ಗದಲಿ ಬಹ
ತೋರಹತ್ತನ ಕಂಡಪೂರ್ವ ವಿ
ಕಾರಿ ಮಾನಿಸನಲ್ಲೆನುತ ಮುತ್ತಿದುದು ಪೌರಜನ ೨೬   

ಬಂದನರಮನೆಗಾಗಿ ಬಾಗಿಲ
ಮುಂದಣೆಡ ಬಲ ಹೇಮ ವೇದಿಯ
ಸಂದಣಿಯ ಜನ ನೋಡಲೆಂದನು ದೋರಪಾಲರಿಗೆ
ಇಂದು ನಾವುತ್ತರದ ಭೂಮಿಪ
ರಿಂದ ಬಂದೆವು ಪೇಳು ನಿಜ ಪತಿ
ಗೆಂದಡವ ಬಂದನು ವಿಭೀಷಣ ದೇವನೋಲಗಕೆ ೨೭

ಜೀಯ ಬಿನ್ನಹ ಬಂದನುತ್ತರ
ರಾಯನಟ್ಟಿದ ದೂತನೆನೆ ತ
ಪ್ಪಾಯಿತೇ ಹೊಗಿಸೆನಲು ಕರೆದನು ಕಲಿ ಘಟೋತ್ಕಚನ
ವಾಯುತನುಜನ ಸುತನು ತನ್ನ ಪ
ಸಾಯತರು ಸಹಿತೊಳಗೆ ಹೊಕ್ಕು ನ
ವಾಯೆಯಲಿ ನಡೆತಂದು ಕಾಣಿಕೆ ಕೊಟ್ಟು ಪೊಡವಂಟ ೨೮

ಬಿಗಿದ ಮರಕತ ಮಣಿಯ ನೆಲಗ
ಟ್ಟುಗಳ ಹವಳದ ಹಲಗೆಗಳ ಮಾ
ಳಿಗೆಯ ವೈಡೂರ‍್ಯದ ಕವಾಟದ ವಜ್ರ ಭಿತ್ತಿಗಳ
ಹೊಗರಿಡುವ ಹರಿ ನೀಲಮಣಿ ವೇ
ದಿಗಳ ಮುತ್ತಿನ ಲಂಬಳದ ಲೋ
ವೆಗಳ ಕಾಂತಿಯ ಲಳಿಯ ಲಹರಿಯೊಳೆದ್ದನಮರಾರಿ ೨೯

ಇತ್ತ ಬಾರೈ ಕುಳ್ಳಿರೆತ್ತಣ
ದೆತ್ತ ಬರವಾರಟ್ಟಿದರು ನೀ
ವೆತ್ತಣವರೇನೆಂದು ನಿಮ್ಮ ಭಿಧಾನವೇನಹುದು
ಬಿತ್ತರಿಸಿ ಹೇಳೆನಲು ಕೈಮುಗಿ
ವುತ್ತ ನುಡಿದನು ರಾವಣಾನುಜ
ಚಿತ್ತವಿಪುದೆಮ್ಮಖಿಳ ಪೂರ್ವೋತ್ತರದ ಸಂಗತಿಯ ೩೦

ಸೋಮ ವಂಶದಲರಸುಗಳು ನಿ
ಸ್ಸೀಮರಿದ್ದರು ಪಲಬರದರೊಳು
ಭೂಮಿಗಧಿಪತಿ ಪಾಂಡುವಾತಂಗೈವರಾತ್ಮಜರು
ಆ ಮಹೀಪತಿ ಧರ್ಮನಂದನ
ಭೀಮ ಫಲುಗುಣ ನಕುಲನಲ್ಲಿ ಸ
ನಾಮ ಸಹದೇವಾಖ್ಯನಿನಿಬರು ಚಿತ್ತವಿಸಿಯೆಂದ ೩೧

ಅರಸನೆಂದರೆ ಸಕಲ ಧರ್ಮಕೆ
ಕರ ಚರಣವಾದಂತೆಯಾತನ
ಕಿರಿಯರಿಹರು ಚತುರ್ವಿಧೋಪಾಯ ಸ್ವರೂಪದಲಿ
ಸುರಮುನಿಯ ಮತದಿಂದ ಯಾಗೋ
ತ್ಕರುಷಕಾದುದು ಬುದ್ಧಿ ಜನಪಾ
ಧ್ವರದ ದಿಗ್ವಿಜಯಾಭಿಸಂಧಿಗೆ ಮಾಡಿದನು ಮನವ ೩೨

ಬಡಗಲರ್ಜುನನುತ್ತರಾಬ್ಧಿಯ
ತಡಿಯ ನೆಲ ಪರಿಯಂತ ವಸ್ತುವ
ಜಡಿದು ತಂದನು ಮೂಡಲಾವರಿಸಿದನು ಕಲಿ ಬೀಮ
ಪಡುವಲರ್ಜುನನುಜ ತೆಂಕಣ
ಕಡೆಗೆ ಸಹದೇವಾಖ್ಯನೀ ಪರಿ
ನಡೆವುತಿದ್ದು ತಾ ಘಟೋತ್ಕಚ ಭೀಮಸುತನೆಂದ ೩೩

ಅರಸನೊಂದು ನಿಮಿತ್ತ ದೇಶಾಂ
ತರ ಪರಿಭ್ರಮಣದಲಿ ವಿಪಿನಾಂ
ತರದೊಳಿರೆ ಬಂದನು ಹಿಡಿಂಬಕನೆಂಬನಸುರಪತಿ
ಕೆರಳಿಚಿದೊಡಾ ಭೀಮನಾತನ
ನೊರಸಿದನು ಖಳನನುಜೆಯಾತಂ
ಗರಸಿಯಾದಳು ಸತಿ ಹಿಡಿಂಬಿಕೆ ಮಾತೆ ತನಗೆಂದ ೩೪

ಇನಿಬರಿಗೆ ಪತಿ ದೇವಕೀ ನಂ
ದನನಘಾಸುರ ಮಥನ ಮಧು ಸೂ
ದನ ಮುರಾಂತಕ ದೈತ್ಯ ಮರ್ದನ ಭಕ್ತಸುರಧೇನು
ಮುನಿಹೃದಯ ಪರ್ಯಂಕ ಕರುಣಾ
ವನಧಿ ರಾವಣ ಕಂಠ ಕಾನನ
ಘನ ಪರಶುವೀ ಕೃಷ್ಣನೈವರ ಜೀವಸಖನೆಂದ ೩೫

ಕ್ರತುವಿದಸುರಾರಾತಿಗೀ ಕ್ರತು
ಪತಿ ಯುಧಿಷ್ಠಿರ ದೂತ ನಾನಿದ
ರತಿಶಯವ ನೀ ಬಲ್ಲೆಯೆನೆ ನೋಡಿದನು ತನ್ನವರ
ಇತರ ವಿಧದಿಂದಧಿಕ ಪುಣ್ಯ
ಪ್ರತತಿಯುಂಟೇ ರಾಮಚಂದ್ರನ
ವಿತತ ಕೀರ್ತಿ ತ್ರೇತೆಯೀ ದ್ವಾಪರದಲಾಯ್ತೆಂದ ೩೬

ತಾವು ಮರ್ತ್ಯರು ಪೂರ್ವಯುಗದವ
ರಾವು ತಮ್ಮಂತರವ ನೋಡದೆ
ದೇವರೆದೆ ದಲ್ಲಣದ ಲಂಕೆಯ ತಾವನೀಕ್ಷಿಸದೆ
ಆವುದುಚಿತಾನುಚಿತವೆಂಬುದ
ಭಾವಿಸದ ಗರ್ವಿತರ ನೋಡಿ
ನ್ನಾವ ಸದರವೊ ನಾವೆನುತ ಗರ್ಜಿಸಿತು ಖಳನಿಕರ ೩೭

ನೊಸಲಿನಲಿ ಕಣ್ಣುಳ್ಳ ದೇವನು
ವೊಸೆದು ಲಂಕಾದ್ವೀಪ ಸೀಮೆಗೆ
ಮಿಸುಕಲಮ್ಮನು ಬಂದು ಕಂಡವರಿಲ್ಲ ಪಟ್ಟಣವ
ಬಿಸಜಸಂsವನಾದಿ ದೇವ
ಪ್ರಸರ ಮಿಗೆ ನಡುಗುತ್ತಲಿಪ್ಪುದು
ನುಸಿಗಳಹ ಮಾನವರ ಪಾಡೇನೆನುತ ಗರ್ಜಿಸಿತು ೩೮

ಕಾಳಗದೊಳಿಂದೆಮಗೆ ದಿವಿಜೇಂ
ದ್ರಾಳಿಯಲಿ ಸಮಭಟರ ಕಾಣೆವು
ಮೇಳವೇ ಮಝ ಪೂತು ಮರ್ತ್ಯರ ಸಹಸವೆಮ್ಮೊಡನೆ
ತೋಳನಳವಿಗೆ ಮಲೆತ ಕುರಿಗಳ
ಜಾಲದಂತಿಹುದೆಂದು ಮಂದಕ
ರಾಳಮತಿಗಳು ನಗಲು ಕಂಡನು ಕಲಿಘಟೋತ್ಕಚನು ೩೯

ನಾಲಗೆಯ ನೆಣಗೊಬ್ಬುಗಳಲಿ ಛ
ಡಾಲಿಸಿದರೇನಹುದು ಸಭೆಯಲಿ
ಕಾಳಗದೊಳಿದಿರಾರು ಭೀಮಾರ್ಜುನರ ಭಾರಣೆಗೆ
ಆಳುತನವಂತಿರಲಿ ವೈಷ್ಣವ
ಮೌಳಿ ಬೆಸಸಲಿ ಕೇಳ್ವೆನೆನೆ ಕ
ಟ್ಟಾಳುಗಳ ದೇವನು ವಿಭೀಷಣ ನಗುತಲಿಂತೆಂದ ೪೦

ಕಾಲವಾವುದು ತನ್ನ ಶಕ್ತಿಯ
ಕೀಳು ಮೇಲಾವುದು ಸಹಾಯದ
ಮೇಲು ಸೆರಗೇನೆಂದು ನೋಡದೆ ಬಯಲ ಗರ್ವದಲಿ
ಸೋಲುವುದು ಜಗವಿಹಪರದ ಗತಿ
ಕಾಳಹುದು ಖಳರರಿಯರದನು
ಬ್ಬೇಳುವರು ಬರಿದೆಂದು ಜರೆದನು ತನ್ನ ಮಂತ್ರಿಗಳ ೪೧

ಅದರಿನೀ ದ್ವಾಪರದಲೀ ಹರಿ
ಯುದಯಿಸಿದನಾ ಕಾಲದಲಿ ಸಲ
ಹಿದನು ನಮ್ಮನು ಹಿಡಿದನಿವರನು ವರ್ತಮಾನದಲಿ
ಪದದ ದರ್ಪದಲಂಬುಜಾಕ್ಷನ
ಪದವ ಮೆರೆದರೆ ಪಾತಕದ ದು
ರ್ಗದಲಿ ಕೆಡಹನೆ ನಮ್ಮನೆಂದು ವಿಭೀಷಣನು ನುಡಿದ ೪೨

ತರಿಸಿದನು ಭಂಡಾರದಲಿ ಪರಿ
ಪರಿಯ ಪೆಟ್ಟಿಗೆಗಳನು ಕಂಠಾ
ಭರಣ ಕಂಕಣ ವಜ್ರಮಾಣಿಕ ಮರಕತಾವಳಿಯ
ಚರಣ ನೂಪುರ ಝಳವಟಿಗೆಯುಂ
ಗುರ ಕಿರೀಟಾಂಗದ ಸುಕರ್ಣಾ
ಭರಣವನು ತೆಗೆಸಿದನು ಭೀಮಕುಮಾರ ನೋಡೆನುತ ೪೩

ನೀಲಮಣಿ ಕಾಂತಿಗಳ ಹೊಯ್ಲಲಿ
ಕಾಳ ರಜನಿಯೊಲಾಯ್ತು ಮುತ್ತಿನ
ಢಾಳ ಢವಳಿಸಲಾಯ್ತು ಚಂದ್ರಿಕೆ ತನುವ ಡೊಕ್ಕರಿಸಿ
ಮೇಲೆ ಹೊಂಬಿಸಿಲಾಯ್ತು ಮಾಣಿಕ
ದೇಳಿಗೆಯ ಲಹರಿಯಲಿ ವರರ
ತ್ನಾಳಿ ರುಚಿಯಲಿ ಚಂಡಿಯಾಯಿತು ದಿವಸವಂದಿನಲಿ ೪೪

ತೆಗೆಸಿದನು ಗಜದಂತಮಯ ಪೆ
ಟ್ಟಿಗೆಗಳನು ಕರ್ಪುರದ ತವಲಾ
ಯಿಗಳ ಹವಳದ ಮಂಚವನು ಮಣಿಖಚಿತ ರಚನೆಗಳ
ಬಿಗಿದ ವಜ್ರಪ್ರಭೆಯ ಹೊನ್ನಾ
ಯುಗದ ಖಡ್ಗ ಕಠಾರಿಗಳ ಝಗ
ಝಗಿಪ ಹೊಂಗೆಲಸದ ವಿಚಿತ್ರದ ಜೋಡು ಸೀಸಕವ ೪೫

ಗುಳವ ರೆಂಚೆಯ ಹಕ್ಕರಿಕೆ ಹ
ಲ್ಲಳವ ಮಣಿ ಕಾಂಚನಮಯಂಗಳ
ಕೆಲಸ ಗತಿಗಳ ಹೇಮರೇಖೆಯ ವಿವಿಧ ಚಿತ್ರಗಳ
ಬಿಳಿಯ ಚೌರಿಯ ಹೊರೆಗಳುರು ಹ
ತ್ತಳದ ಕಟ್ಟಿಗೆ ಬೇಂಟೆಗಳ ಹದ
ವಿಲು ತದೀಯ ಶರಾಳಿಗಳ ತಂದಿಳುಹಿದರು ಚರರು ೪೬

ಬಲಮುರಿಯ ಶಂಖಗಳ ಗಂಧದ
ಬಲು ಹೊರೆಯ ಕೃಷ್ಣಾಗರುವಿನೊ
ಟ್ಟಿಲ ಸುರಂಗಿನ ಪಟ್ಟಿಪಟ್ಟಾವಳಿಯ ದಿಂಡುಗಳ
ಪುಲಿದೊಗಲ ಕಷ್ಣಾಜಿನಂಗಳ
ಹೊಳೆವ ಹೊಂಗೊಪ್ಪರಿಗೆ ಚಿತ್ರಾ
ವಳಿಯ ಸತ್ತಿಗೆ ಹೇಮಘಟ ಸಂತತಿಯನೊಟ್ಟಿದರು ೪೭

ಕೀಳಿಸಿದನರಮನೆಯ ಹೇಮದ
ತಾಳಮರ ಹದಿನಾಲ್ಕ ನಧ್ವರ
ಶಾಲೆಯಿದಿರಲಿ ತೋರಣಸ್ತಂಭಂಗಳಹವೆಂದು
ಮೇಲೆ ರಾಕ್ಷಸ ಟಂಕದಚ್ಚಿನ
ತಾಳಿಗೆಗಳನು ತರಿಸಿ ಕಟ್ಟಿಸಿ
ಮೇಲು ಮುದ್ರೆಗಳಿಕ್ಕಿದವು ಕರೆಸಿದನು ಹೊರೆಯವರ ೪೮

ಕುಲಗಿರಿಯನೊಡೆ ಮೀಟಿ ತಮ್ಮಯ
ತಲೆಯೊಳಾನುವ ಕರ್ಕಶಾಂಗದ
ಕಲುದಲೆಯ ಹೇರೊಡಲ ಮಿಡುಕಿನ ಕಾಳ ರಕ್ಕಸರು
ಸೆಳೆದು ಹೊತ್ತರು ಹೊರೆಯನಿವರಿ
ಟ್ಟಳಿಸಿ ಹೊರವಂಟರು ವಿಭೀಷಣ
ಕಳುಹಿದನು ಪವಮಾನ ಸುತ ನಂದನನ ಸತ್ಕರಿಸಿ ೪೯

ದನುಜನಬ್ಧಿಯ ದಾಟಿ ಸಹದೇ
ವನ ಸಮೀಪಕೆ ಬಂದು ರಾವಣ
ನನುಜ ಮಾಡಿದ ಬಹಳ ಸತ್ಕಾವರನು ಬಿನ್ನವಿಸಿ
ಅನಿಬರನು ಕಾಣಿಸಿದನಾ ಕಾಂ
ಚನಮಯದ ಹೊರೆ ಲಕ್ಕ ಸಂಖ್ಯೆಗ
ಳನುಪಮಿತ ರಕ್ಕಸರ ಕಂಡಂಜಿದುದು ನೃಪಕಟಕ ೫೦

ಲಾಲಿಸಿದನಾ ಖಳರನೆತ್ತಿತು
ಪಾಳೆಯವು ನಡೆತಂದು ಪಯಣದ
ಮೇಲೆ ಪಯಣವನೈದಿ ಬಂದನು ತಮ್ಮ ಪಟ್ಟಣಕೆ
ಮೇಲೊಗುವ ಸುಮ್ಮಾನ ಸಿರಿಯ ಚ
ಢಾಳದಲಿ ತಂದಖಿಳ ವಸ್ತುವ
ನಾಲಯದೊಳೊಪ್ಪಿಸಿದನವನೀಪತಿಗೆ ಸಹದೇವ ೫೧

ಸಂಕ್ಷಿಪ್ತ ಭಾವ


ದಕ್ಷಿಣ ದಿಕ್ಕಿನತ್ತ ನಡೆದ ಸಹದೇವನು ದಂತವಕ್ತ್ರನಿಂದ ವಾರಣಾಶ್ವಗಳನ್ನು ಕೊಂಡು ಮುಂದುವರಿದನು. ಕುಂತೀಭೋಜನು ಮೊಮ್ಮಗನನ್ನು ಕಂಡು ಆದರಿಸಿದನು. 

ತುಂಗಭದ್ರಾ ನದಿಯ ಪ್ರದೇಶ, ಕಿಷ್ಕಿಂದೆಗಳಲ್ಲಿ ಸಹದೇವನ ಪರಾಕ್ರಮ ಮೊಳಗಿತು. ವಾನರರು ಮೆಚ್ಚಿ ಸಕಲ ವಸ್ತುಗಳನ್ನು ಕೊಟ್ಟು ಸನ್ಮಾನಿಸಿದರು. ಮಾಹಿಷ್ಮತೀಪುರದಲ್ಲಿ ನೀಲನೆಂಬ ರಾಜನೊಂದಿಗೆ ಹೋರಾಡುವಾಗ ಸೈನ್ಯದಲ್ಲಿ  ಉರಿಯಿಂದ ಹಾಹಾಕಾರವೆದ್ದಿತು. ಕಾರಣವೇನೆನ್ನಲು ವೈಶಂಪಾಯನರು ಆ ರಾಜ್ಯದ ನಾರಿಯರಿಗೆ ಅಗ್ನಿಯ ಸಖ್ಯವುಂಟೆಂದೂ, ಅವರು ಸ್ವಚ್ಛಂದ ಪ್ರವೃತ್ತಿಯವರೆಂದೂ, ಅದರಿಂದ ಅಗ್ನಿಯು ಅಲ್ಲಿನ ದೊರೆಗೆ ಸಹಾಯ ಮಾಡುವನೆಂದೂ ಹೇಳಿದರು. ಸಹದೇವನು ಅಗ್ನಿಯನ್ನು ಪೂಜಿಸಿ ಒಲಿಸಿಕೊಂಡನು.

ನಂತರ ಭೀಮನ ಮಗನಾದ
ಘಟೋತ್ಕಚನು ಬಂದು ನಮಿಸಿದನು. ಅವನನ್ನು ಲಂಕಾನಗರಕ್ಕೆ ಹೋಗಿ ರಾಜಸೂಯದ ಬಗ್ಗೆ ಹೇಳಿ ಕಾಣಿಕೆ ತರುವಂತೆ ಆದೇಶಿಸಿ ಕಳಿಸಿದನು.
ಇವನನ್ನು ಕಂಡು ಲಂಕೆಯ ದಾನವಸೈನ್ಯ ಬೆರಗಾಗಿ ಮುತ್ತಿಗೆ ಹಾಕಿತು. ಆದರೆ ಇವನ ಪರಿಚಯ ತಿಳಿದ ವಿಭೀಷಣ ಓಲಗಕ್ಕೆ ಬಂದು ಇವನನ್ನು ಯಥೋಚಿತವಾಗಿ ಸತ್ಕರಿಸಿ ಶ್ರೀರಾಮನನ್ನು ನೆನೆದನು. ತನ್ನಲ್ಲಿದ್ದ ಅತ್ಯಂತ ಬೆಲೆಬಾಳುವ ವಸ್ತುಗಳನ್ನು ಕಾಣಿಕೆಯಾಗಿ ನೀಡಿದನು. ಘಟೋತ್ಕಚನು ತನ್ನ ಪರಿಚಯ ಮತ್ತು ಪಾಂಡವರ ಬಗ್ಗೆ, ರಾಜಸೂಯದ ಬಗ್ಗೆ ವಿವರವಾಗಿ ಹೇಳಿದನು. ಇದನ್ನರಿಯದೆ ಕಾಳಗಕ್ಕೆ ಸಿದ್ಧವಾಗಿದ್ದ ತನ್ನ ಸೈನ್ಯಕ್ಕೆ ವಿಭೀಷಣ ಸಮಾಧಾನ ಹೇಳಿದನು. ತನ್ನಲ್ಲಿದ್ದ ಸಕಲ ಸಂಪತ್ತನ್ನೂ ನೀಡಿದ್ದಲ್ಲದೆ ಅರಮನೆಯ ತಾಳಮರಗಳನ್ನು ಯಾಗಶಾಲೆಯ ತೋರಣಗಂಬಗಳನ್ನಾಗಿ ನಿಲ್ಲಿಸಲು  ಸಿದ್ಧಗೊಳಿಸಿ ಎಲ್ಲವನ್ನೂ ಹೊರೆ ಹೊರಿಸಿ ಕಳಿಸಿಕೊಟ್ಟನು.

ಘಟೋತ್ಕಚನು ಸಹದೇವನಿಗೆ ಇದೆಲ್ಲವನ್ನೂ ಒಪ್ಪಿಸಿ ರಾವಣನ ತಮ್ಮನು ಮಾಡಿದ ಸತ್ಕಾರವನ್ನು ವಿವರಿಸಿದನು.  ನಂತರ ಸಹದೇವನು ರಥಗಳಲ್ಲಿ ಸಂಪತ್ತನ್ನು ಹೇರಿಕೊಂಡು ಮರುಪಯಣ ಕೈಕೊಂಡು ಇಂದ್ರಪ್ರಸ್ಥಪುರವನ್ನು ಸೇರಿ ಅಣ್ಣನಿಗೆ ಎಲ್ಲವನ್ನೂ ಸಮರ್ಪಿಸಿದನು.



ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ