ಭಾರತಕಥಾಮಂಜರಿ26
ಕುಮಾರವ್ಯಾಸನ
ಕರ್ಣಾಟ ಭಾರತ ಕಥಾಮಂಜರಿ
ಸಭಾ ಪರ್ವ - ಆರನೆಯ ಸಂಧಿ
ನಕುಲ ಪಶ್ಚಿಮ ದೆಸೆಯ ಭೂಪಾ
ಲಕರ ಗೆಲಿದನು ನೆರೆದ ರತ್ನ
ಪ್ರಕರದಿಂದಳಕಾಪುರಿಗೆ ಮಿಗಿಲಾಯ್ತು ನೃಪನಗರ
---
ಕೇಳು ಜನಮೇಜಯ ಧರಿತ್ರೀ
ಪಾಲ ಪಶ್ಚಿಮ ದೆಸೆಯ ಭೂಮೀ
ಪಾಲಕರ ಮೇಲೆತ್ತಿ ನಡೆದನು ನಕುಲನೊಲವಿನಲಿ
ಧಾಳಿ ಹರಿದುದು ಮರು ಯವನ ನೇ
ಪಾಳ ರೋಹಿತರೆಂದೆನಿಪ ಭೂ
ಪಾಲಕರ ಮುರಿದವರ ಸಪ್ತಾಂಗವ ವಿಭಾಡಿಸಿದ ೧
ಹೇಮಕನ ಸೈರಿಭಕನೆಂಬ ಸ
ನಾಮರನು ಮುರಿದನು ಕಳಿಂಗದ
ಭೂಮಿಪರ ಸದೆದನು ತ್ರಿಗರ್ತರ ಶಿಬಿಯ ಸಂತತಿಯ
ಹೇಮ ಮಾತ್ರವನುಳುಹದವದಿರ
ಭೂಮಿಗಳನವರ್ಗಿತ್ತು ವಸ್ತು
ಸ್ತೋಮವನು ನೆರಹಿದನು ನಡೆದನು ಮುಂದೆ ಪಶ್ಚಿಮಕೆ ೨
ಮುರಿದನಗ್ಗದ ಚೇಕಿತಾನರ
ನೆರಗಿದನು ಬರ್ಬರ ತುರುಷ್ಕರ
ನೊರಗಿಸಿದನಾಹವದೊಳಾಭೀರಕರ ಬಾಹ್ಲಿಕರ
ಸೆರೆಯ ಹಿಡಿದನು ಪಾರ್ವತೇಯರ
ನುರುಕುಗೊಳಿಸಿದ ಜೀನರಂಬ
ಷ್ಠರನು ಸಿಂಧು ಸರಸ್ವತೀ ತೀರದ ಮಹೀಶ್ವರರ ೩
ರಣದ ಸಂಕೇತಗಳೊಳುತ್ಸವ
ರಣಸಮರ್ಥರ ಹಿಂಡಿದನು ಚಾ
ರಣರ ಖುರಸಾಣರನು ಪುಷ್ಕರ ವರ ನಿವಾಸಿಗಳ
ಹಣಿದನಲ್ಲಿಂದಿತ್ತ ಮಿಗೆ ಪಡು
ವಣ ದಿಗಂತದಲದಟರಸ ಪ
ಟ್ಟಣದವರ ಪಂಚನದ ಭೂಮಿಯ ಭೂಮಿಪರ ಗೆಲಿದ ೪
ಜ್ಯೋತಿಕರ ವಣ್ಣಕಟಕರ ಕೃತ
ಯಾತಿಕರ ಯೌಧೇಯ ಸಂವೀ
ರಾತಿಶಯ ಬಡಹಾರರಮಳ ದ್ವಾರಪಾಲಕರ
ಘಾತಿಸಿದನವರುಗಳ ವಿತ್ತ
ವ್ರಾತವನು ಹೇರಿಸಿದನೆಡ ಬಲ
ದಾತಗಳನಪ್ಪಳಿಸಿ ತೆಗೆದನು ಸಕಲ ವಸ್ತುಗಳ ೫
ಮಾವನಲ್ಲಿಗೆ ಬಂದಡಾ ಮಾ
ದ್ರಾವನೀಪತಿ ಶಲ್ಯ ಮಿಗೆ ಸಂ
ಭಾವಿಸಿದನೊಲಿದಿತ್ತ ನೀತಂಗಖಿಳ ವಸ್ತುಗಳ
ತೀವಿದರು ಭಂಡಿಯಲಿ ಮುಂದಣ
ಜಾವಟೆಯ ಚಪಳರಿಗೆ ಹರಿಯೆ ನೃ
ಪಾವಳಿಗಳಲ್ಲಲ್ಲಿ ತೆತ್ತರು ಕಂಡ ವಸ್ತುಗಳ ೬
ತಳಿತು ಬಿಟ್ಟುದು ಸೇನೆ ಪಡುವಣ
ಜಲಧಿಯ ಕರಾವಳಿಗಳಲಿ ಕೇ
ವಳಿಸಿದರು ಕೊಲ್ಲಣಿಗೆಯಲಿ ಕೊಂಡರು ಸುವಸ್ತುಗಳ
ಕಳಿವರಿದು ಹಿಮಗಿರಿಯ ಮೂಲೆಗೆ
ನಿಲುಕಿ ಸಕಲ ಮ್ಲೇಚ್ಛ ಭೂಪಾ
ವಳಿಯ ಭಂಗಿಸಿ ಹೇರಿಸಿದನೊಂಟೆಗಳಲಾ ಧನವ ೭
ಹೇರಿದವು ಬಹು ಧನವನೊಂಟೆಗ
ಳಾರು ಸಾವಿರ ಮಿಕ್ಕ ವಸ್ತುವ
ಹೇರಿದವುಯೆತ್ತುಗಳ ಹೂಡಿದ ಭಂಡಿ ಸಾವಿರವು
ಆರು ಲಕ್ಷ ತುರಂಗ ಉಷ್ಟ್ರಗ
ಳಾರು ಕೋಟಿಗಳಾನೆ ಗಣನೆಯ
ಮೀರಿದವು ಮೃಗ ಪಕ್ಷಿ ಕೋಣನ ಕುರಿಯ ಹಿಂಡುಗಳ ೮
ಮರಳಿತೀತನ ಸೇನೆ ಬಂದನು
ಪುರಕೆ ಕಂಡನು ಧರ್ಮಪುತ್ರನ
ಚರಣಕೆರಗಿದನಖಿಳ ವಸ್ತುವ ಬೇರೆ ತೋರಿಸಿದ
ಅರಸನುತ್ಸವವನು ವೃಕೋದರ
ನರ ನಕುಲ ಸಹದೇವನಂತಃ
ಪುರದ ಹರುಷದ ಸಿರಿಯನದನೇವಣ್ಣಿಸುವೆನೆಂದ ೯
ಕಳವು ಹುಸಿ ಹಾದರ ವಿರೋಧ
ಸ್ಖಲಿತವಾರಡಿ ಬಂದಿ ದಳದುಳ
ಬೆಳುಗವತೆಯನ್ಯಾಯ ಪರಿಭವ ಠಕ್ಕು ಡೊಳ್ಳಾಸ
ಹಳಿವು ವಂಚನೆ ಜಾತಿ ಸಂಕರ
ಕೊಲೆಯು ಡಾವರ ವಿಕೃತಿ ಮಾಯಾ
ವಳಿಗಳಡಗಿದವೀ ಯುಧಿಷ್ಠಿರ ನೃಪನ ರಾಜ್ಯದಲಿ ೧೦
ನೃಗನ ಭರತನ ದುಂದುಮಾರನ
ಸಗರ ಪೂರೂರವ ಸನಾತನ
ಮಗನ ನಹುಷನ ಕಾರ್ತವೀರ್ಯನ ನಳನ ದಶರಥನ
ಹಗಲಿರುಳ ವಲ್ಲಭರ ವಂಶದ
ವಿಗಡರಲಿ ಯಮಸೂನು ಸರಿಯೋ
ಮಿಗಿಲೊ ಬಲ್ಲವನಾರೆನಲು ಸಲಹಿದನು ಭೂತಳವ ೧೧
ದ್ವಾಪರದ ಮರೆ ಜವನಿಕೆಯಲೀ
ದ್ವಾಪರವೊ ಕೃತಯುಗವೊ ಧರ್ಮದ
ರೂಪು ನಾನಾ ಮುಖದಲವತರಿಸಿತೊ ದಿಗಂತದಲಿ
ಸ್ಥಾಪಿಸಿತು ವರ್ಣಾಶ್ರಮದ ಧ
ರ್ಮೋಪಚಯವೆರಡಂಘ್ರಿ ಮುರಿದು ವಿ
ರೂಪವಾದುದಧರ್ಮವೀ ಧರ್ಮಜನ ರಾಜ್ಯದಲಿ ೧೨
ಬಡಗಲುತ್ತರ ಕುರುಗಳಿತ್ತಲು
ಪಡುವಲುದಧಿ ವಿಭೀಷಣನ ಪುರ
ಗಡಿ ಕೃತಾಂತನ ದೆಸೆಗೆ ಮೂಡಲು ದಿನಪನುದಯಾದ್ರಿ
ಪೊಡವಿಯದರಲಿ ಯಮಜನಾಟಗೆ
ನಡುಗುವುದು ರಾಯಂಗೆ ತೆತ್ತುದು
ಗಡ ಸುವಸ್ತುವನೇನಸಾಧ್ಯವು ಕೈಷ್ಣನೊಲಿದರಿಗೆ ೧೩
ಕಳನ ಸವೆದರು ಮೂರು ಯೋಜನ
ವಳಯದಲಿ ಪಡಿಯಗಳು ಕೋಟಾ
ವಳಯ ಸುಯ್ಧಾನದಲಿ ಹೊಯ್ದರು ರತ್ನ ಕಾಂಚನವ
ಕೆಲದೊಳೈಗಾವುದದೊಳಿಕ್ಕಿದ
ತಳಿಯ ಮಧ್ಯದೊಳಖಿಳ ವಸ್ತ್ರಾ
ವಳಿಯನೊಟ್ಟಿದರದರ ಕೆಲದಲಿ ರಾಯಕೇಳೆಂದ ೧೪
ಹತ್ತು ಯೋಜನ ವಳಯದಲಿ ಮಿಗೆ
ಸುತ್ತು ಬೇಲಿಯ ಮಧ್ಯದಲಿ ಹಯ
ಮತ್ತಗಜ ರಥ ಗೋಮಹಿಷಿ ವರ ಸೈರಿಭದ ಚಯಕೆ
ಉತ್ತಮಾಂಗನೆಯರಿಗೆ ಭವನಗ
ಳಿತ್ತ ಬೇರಿರವಾಯ್ತು ನೃಪ ಯಾ
ಗೋತ್ತಮಕೆ ಪರುಠವಿಸಿದರು ಭೂಪಾಲ ಕೇಳೆಂದ ೧೫
ಬಳಿದ ಸೊದೆಗಳ ಬಾವಿನೂರರ
ವಳಯ ತುಂಬಿತು ತೈಲ ಘೃತ ಮಧು
ಗಳಲಿ ವರ ಗುಡ ಶರ್ಕರಾದಿಯ ಕಣಜ ಕೋಟಿಗಳು
ಕಳವೆಯಕ್ಕಿಯ ಗೋಧಿ ಕಡಲೆಯ
ವಿಳಸ ರಾಶಿಯದೇಸು ಯೋಜನ
ದಳತೆಯೆಂದಾರರಿವರೆಂದನು ಮುನಿ ನೃಪಾಲಂಗೆ ೧೬
ನೆರೆದುದರ್ಥವನಂತವವನೀ
ಶ್ವರರು ವಶವಾದರು ಚತುಸ್ಸಾ
ಗರದ ಮಧ್ಯದಲಾಣೆ ಸಂದುದು ಧರ್ಮನಂದನನ
ಕರೆಸು ಬೇಹವರನು ಮಹೀಶಾ
ಧ್ವರಕೆ ಸಮಯವಿದೆಂದು ಪಾರಾ
ಶರಿಯ ಧೌಮ್ಯರು ಮಂತ್ರ ಶಾಲೆಯೊಳೆಂದರವನಿಪಗೆ ೧೭
ಹೋಗು ಫಲುಗುಣ ಕಂಸಮಥನನ
ಬೇಗ ಬಿಜಯಂಗೈಸಿ ತಾ ನೃಪ
ಯಾಗವಾತನ ಹೊರೆ ಮದೀಯ ಜಯಾಭಿವೃದ್ಧಿಗಳು
ಆಗ ಹೋಗಾತನದು ತಟ್ಟಯ
ವಾಗದೀ ಕ್ಷಣವೆನಲು ಮನದನು
ರಾಗದಲಿ ಕಲಿಪಾರ್ಥ ಬಂದನು ಕಂಡನಚ್ಯುತನ ೧೮
ಬಿನ್ನವಿಸಿದನು ದಿಗ್ವಿಜಯ ಸಂ
ಪನ್ನ ವಸ್ತು ವಿಧಾನವನು ಮೇ
ಲಿನ್ನು ದೇವರು ಬಲ್ಲಿರುತ್ತರ ಕಾರ್ಯ ಸಂಗತಿಯ
ನಿನ್ನ ಕೃಪೆಯಲಿ ರಾಜಮಖನಿ
ಷ್ಪನ್ನವಾದರೆ ಬೊಪ್ಪನಿಂದ್ರನ
ಮನ್ನಣೆಯ ಮೈ ಸೋಂಕಿನೋಲಗ ಸುಲಭವಹುದೆಂದ ೧೯
ಕರೆಸಿ ಯಾದವ ನಾಯಕರ ಸಂ
ಹರಣೆಯನು ನಿಜಪುರದ ಕಾಹಿಂ
ಗಿರಿಸಿ ಬಲದೇವಂಗೆ ನೇಮಿಸಿ ಸಕಲ ರಕ್ಷಣವ
ತರಿಸಿ ಭಂಡಾರದಲಿ ವಿವಿಧಾ
ಭರಣ ವಸನಾದಿಗಳ ಹೇರಿಸಿ
ಹರಿ ಧನಂಜಯನೊಡನೆ ಬಂದನು ಬಂಧುಜನ ಸಹಿತ ೨೦
ಇದಿರುವಂದನು ಧರ್ಮಸುತ
ಪದ ಪಯೋಜದಲೆರಗಿದನು ನಿನ
ಗಿದು ವಿನೋದವಲೇ ವಿಮುಕ್ತಗೆ ಭಕ್ತಸಂಸ್ತರಣ
ಕುದಿದು ಮರುಗಿದವರಸಿ ನಿನ್ನಯ
ಪದವ ಕಾಣದೆ ಶ್ರುತಿಗಳೆಮ್ಮಯ
ಸದನವಖಿಳಾಮ್ನಾಯ ನಿಕರವನೇಡಿಸುವದೆಂದ ೨೧
ನಗುತ ಸಾಕೇಳೆಂದು ರಾಯನ
ತೆಗೆದು ತಳ್ಕಿಸಿ ಕೈಯ್ಯ ತಳುಕಿನೊ
ಳಗಧರನು ನೃಪಸಭೆಗೆ ಬಿಜಯಂಗೈದನೊಲವಿನಲಿ
ಮುಗಿದ ಕರದಲಿ ವ್ಯಾಸ ಧೌಮ್ಯಾ
ದಿಗಳು ಮೈಯಿಕ್ಕಿದರಖಿಳ ಮಂ
ತ್ರಿಗಳು ಸಚಿವರು ನೆರೆದುದಾಳೋಚನೆಯ ಭವನದಲಿ ೨೨
ಕಳುಹಿದನು ನಾನಾ ನೃಪರ ಮಂ
ಡಲಕೆ ದೂತರನಖಿಳ ಋಷಿ ಸಂ
ಕುಳಕೆ ಶಿಷ್ಟರ ಪರುಠವಿಸಿದನು ಹಸ್ತಿನಾಪುರಿಗೆ
ಕಳುಹಿದನು ನಕುಲನನು ಬಳಿಕಿ
ತ್ತಲು ನೃಪಾಧ್ವರ ಶಾಲೆಗಲ್ಲಿಯ
ನೆಲನ ಶೋಧಿಸೆ ಕರೆಸಿದರು ಬಹುವಿಧದ ಶಿಲ್ಪಿಗರ ೨೩
ಮಯನ ಮತದಲಿ ವಿಶ್ವಕರ್ಮನ
ನಯ ವಿವೇಕದಲಮಲ ಮಖಶಾ
ಲೆಯನು ನಿರ್ಮಿಸಿದರು ಸುಲಕ್ಷಣ ಶಾಸ್ತ್ರ ಸೂತ್ರದಲಿ
ನಿಯತ ಪತ್ನೀ ಶಾಲೆ ಜನವೇ
ದಿಯ ವರಾಂತರ‍್ವೇದಿ ಮಖವೇ
ದಿಯ ಬಹಿರ್ವೇದಿಗಳನಳವಡಿಸಿದರು ವಹಿಲದಲಿ ೨೪
ಬಿಗಿದ ಬಿಂಗಾರಿಗಳ ಮೇಲ್ಕ
ಟ್ಟುಗಳ ಮಣಿಮಯ ಸೂಸಕದ ಲೋ
ವೆಗಳ ಮುಖಮಂಟಪ ಚೌರಿಯ ನವ ಫಲಾವಳಿಯ
ಹೊಗರ ನೀಲದ ಸರಿಯ ನೆಲಗ
ಟ್ಟುಗಳ ಚಪ್ಪರದೆಡೆಯೆಡೆಯ ಚೌ
ಕಿಗೆಯ ಚತುರಂಗದ ವಿಚಿತ್ರದ ರಚನೆ ಚೆಲುವಾಯ್ತು ೨೫
ಪುರದ ಹೊರವಳಯದಲಿ ಯಮುನಾ
ವರನದಿಯ ತೀರದಲಿ ಧರಣೀ
ಶ್ವರರಿಗರಮನೆ ಮಾಡಿದರು ನವ ರತುನಮಯಮಾಗಿ
ಸುರಪುರದ ಮಾರಾಂಕ ಭುಜಗೇ
ಶ್ವರನ ಭೋಗಾವತಿಯ ಶಿಲ್ಪದ
ಗರುವೆನಿಸಿತೀ ನಗರ ನಾರಾಯಣನ ಕರುಣದಲಿ ೨೬
ಸಂಕ್ಷಿಪ್ತ ಭಾವ
ನಕುಲನ ಪರಾಕ್ರಮ. ರಾಜಸೂಯಯಾಗಕ್ಕೆ ಯಾಗಶಾಲೆಯ ಮತ್ತು ಇತರ ಭವನಗಳ ನಿರ್ಮಾಣ.
ಪಶ್ಚಿಮ ದಿಕ್ಕಿನತ್ತ ಸೈನ್ಯದೊಂದಿಗೆ ನಡೆದ ನಕುಲನು ತನ್ನ ಪರಾಕ್ರಮದಿಂದ ಅಲ್ಲಿದ್ದ ಸಕಲ ರಾಜರುಗಳನ್ನೂ ಗೆಲಿದನು. ಚೇಕಿತಾನರು, ಕಳಿಂಗದರಸು, ಪಾರ್ವತೇಯರು, ಚಾರಣರು, ಪಂಚನದ ಭೂಮಿಪರು, ಇತ್ಯಾದಿ ಸಕಲ ರಾಜರುಗಳಿಂದ ಧನಕನಕ ವಸ್ತುಗಳನ್ನು ಸಂಗ್ರಹಿಸಿ, ಆನೆ, ಕುದುರೆ, ರಥ, ಒಂಟೆಗಳ ಮೇಲೆ ಹೇರಿಸಿಕೊಂಡು ಮುಂದೆ ಸಾಗಿದನು. ತನ್ನ ಸೋದರಮಾವ ಶಲ್ಯನ ಭೇಟಿ ಮಾಡಿ ಅವನಿಂದ ಉಪಚರಿಸಿಕೊಂಡು ದಾರಿಯಲ್ಲಿ ಎದುರಾದವರೆಲ್ಲರನ್ನೂ ಜಯಿಸಿ ಇಂದ್ರಪ್ರಸ್ಥಪುರಕ್ಕೆ ಬಂದಿಳಿದ. ಧರ್ಮಜನಿಗೆ ಸಂತಸವಾಯಿತು.
ಧರ್ಮಜನ ರಾಜ್ಯದಲ್ಲಿ ಯಾವ ವಿದವಾದ ಲೋಪವೂ ಇಲ್ಲದಂತೆ ರಾಜ್ಯಭಾರ ನಡೆಯುತ್ತಿತ್ತು. ಎಲ್ಲರೂ ಅವನ ಆಜ್ಞೆಯಂತೆ ನಡೆಯುತ್ತಿದ್ದರು. ಕೃಷ್ಣನೊಲಿದವರಿಗೆ ಇದು ಸಹಜವೇ ಸರಿ.
ಯಾಗವು ಆರಂಭವಾಗಲು ಕೃಷ್ಣನನ್ನು ಕರೆಸು ಎಂದು ಮುನಿಗಳು ಹೇಳಲು ಅರ್ಜುನನು ಹೋಗಿ ಕೃಷ್ಣನನ್ನು ಬಂಧುಗಳೊಡನೆ ಕರೆತಂದನು. ಯಾಗದ ಸಂಪೂರ್ಣ ಹೊಣೆಯನ್ನು ಅವನಿಗೆ ಅರ್ಪಿಸಿದ ಧರ್ಮಜನನ್ನು ಮುಂದಿನ ಸಿದ್ಧತೆಗಳನ್ನು ಮಾಡಲು ತಿಳಿಸಿದನು ಶ್ರೀ ಕೃಷ್ಣ.
ವಿಸ್ತಾರವಾದ ಯಾಗಶಾಲೆ, ಅದಕ್ಕೆ ಸಂಬಂಧಿಸಿದ ವಿವಿಧ ಭವನಗಳು, ಸಂಗ್ರಹಿಸಿದ ವಸ್ತುಗಳನ್ನಿಡಲು ದೊಡ್ಡ ಭವನ, ಬರುವ ರಾಜರುಗಳಿಗೆ ಉಳಿಯಲು ಭವನಗಳು.ಹೀಗೆ ಸಕಲವೂ ಮಯನ ನೇತೃತ್ವದಲ್ಲಿ ಚತುರ ಶಿಲ್ಪಿಗಳಿಂದ ನಿರ್ಮಾಣವಾದವು. ರಾಜರುಗಳಿಗೆ ಆಮಂತ್ರಣದ ಓಲೆಗಳು ಹೋದವು. ಹಸ್ತಿನಾಪುರಕ್ಕೆ ನಕುಲನನ್ನು ಕಳಿಸಿದರು. ಹೀಗೆ ಇಡೀ ನಗರವು ಇಂದ್ರನ ಅಮರಾವತಿಯೋ ಎಂಬಂತೆ ಮಿನುಗತೊಡಗಿತು.
ಕಾಮೆಂಟ್‌ಗಳು