ಭಾರತಕಥಾಮಂಜರಿ28
ಕುಮಾರವ್ಯಾಸನ
ಕರ್ಣಾಟ ಭಾರತ ಕಥಾಮಂಜರಿ
ಸಭಾ ಪರ್ವ - ಎಂಟನೆಯ ಸಂಧಿ
ರಾಜಸೂಯದೊಳಗ್ರ ಪೂಜಾ
ರಾಜಿತನ ಶ್ರುತಿ ಮೌಳಿ ಮಣಿಯ ವಿ
ರಾಜಿತನ ಶಿಶುಪಾಲ ಜರೆದನು ಪೂರ್ವವೈರದಲಿ
----
ಕೇಳು ಜನಮೇಜಯ ಧರಿತ್ರೀ
ಪಾಲ ಮುನಿ ಮಧ್ಯದಲಿ ನಿಮ್ಮ ನೃ
ಪಾಲ ಭೀಷ್ಮಂಗೆಂದನತಿ ಗಂಭೀರ ನಾದದಲಿ
ಭಾಳ ನೇತ್ರಗೆ ಪಡಿಯೆನಿಪ ಭೂ
ಪಾಲರಿದರೊಳಗಗ್ರ ಪೂಜ್ಯನ
ಹೇಳೆನಲು ಗಾಂಗೇಯ ನುಡಿದನು ವೇದ ಸನುಮತವ ೧
ಆರು ತಾರಾಗ್ರಹದ ಮಧ್ಯದೊ
ಳಾರು ದಿನಕರನುಳಿಯೆ ಬಳಿಕಾ
ರಾರು ಸುರ ನಿಕರದಲಿ ಸೇವ್ಯರು ಶೂಲಧರನುಳಿಯೆ
ಆರು ನಿರ್ಜರ ನಿವಹದಲಿ ಜಂ
ಭಾರಿಯಲ್ಲದೆ ಮಾನನೀಯರ
ದಾರು ಜಗದಲಿ ಕೃಷ್ಣನಲ್ಲದೆ ಪೂಜ್ಯತಮರೆಂದ ೨
ಗಿರಿಗಳಲಿ ಹೇಮಾದ್ರಿ ಘನ ಸಾ
ಗರದೊಳಗೆ ದುಗ್ಧಬ್ಧಿ ದೇವಾ
ಸುರ ನರೋರಗ ನಿಕರದಲಿ ನಾರಾಯಣನೆ ಮಿಗಿಲು
ಅರಸ ಸಂಶಯವೇಕೆ ಕೃಷ್ಣನ
ಚರಣವನು ತೊಳೆ ರಾಜಸೂಯಾ
ಧ್ವರಕೆ ಪೂಜಾಪಾತ್ರ ನೀ ಹರಿಯೆಂದನಾ ಭೀಷ್ಮ ೩
ವ್ಯಾಸ ನಾರದ ರೋಮಶಾದಿಗ
ಳೀ ಸಮಸ್ತ ಮುನೀಂದ್ರರಿದೆ ಯೀ
ಕೇಶವನು ಪೂಜಾರುಹನೆಯೆಂದಿವರ ಬೆಸಗೊಳ್ಳೈ
ಲೇಸನಾಡಿದೆ ಭೀಷ್ಮ ಬಳಿಕೇ
ನೀ ಸಮಸ್ತ ಚರಾಚರದೊಳೀ
ವಾಸುದೇವನೆ ಪೂಜ್ಯನೆಂದುದು ಸಕಲ ಮುನಿ ನಿಕರ ೪
ತರಿಸಿದನು ನವ ಹೇಮ ಮಣಿ ಭಾ
ಸುರದ ಮಂಚದ ಮೇಲೆ ಲಲಿತಾ
ಸ್ತರಣದಡಿಕಿಲುವಾಸಗಳ ನಿರ್ಮಳನಿಕಾರಗಳ
ಮೆರೆದುದೆಳ ಬೆಳುದಿಂಗಳಿನ ಮೋ
ಹರದ ಮಾರೊಡ್ಡೆನಿಸಿ ಭೂಮೀ
ಶ್ವರ ಸಭಾ ಮಧ್ಯದಲಿ ಧರಣೀ ಪಾಲ ಕೇಳೆಂದ ೫
ವಿನಯದಲಿ ಸಹದೇವ ಕೈಗೊ
ಟ್ಟನುಪಮನ ತಂದನು ಪಿತಾಮಹ
ಜನಕ ಪಾಯವಧಾರು ಗಂಗಾ ಜನಕನವಧಾರು
ಧನುಜ ರಿಪುವವಧಾನವವಧಾ
ನೆನುತ ವಿಮಳ ಮಹಾರ್ಘ್ಯ ಸಿಂಹಾ
ಸನಕೆ ಬಿಜಯಂಗೈಸಿದರು ಕುಳ್ಳಿರ್ದನಸುರಾರಿ ೬
ತಂದು ಮಣಿಮಯ ಪಡಿಗದಲಿ ಗೋ
ವಿಂದನಂಘ್ರಿಯ ತೊಳೆದು ಗಂಗೆಯ
ತಂದೆವೀಗಳೆ ತಾವೆನುತ ತಮ್ಮುತ್ತಮಾಂಗದಲಿ
ವಂದಿಸುತ ವೈದಿಕ ಪರಿವಿಡಿ
ಯಿಂದ ಮಧುಪರ್ಕಾದಿ ಪೂಜೆಗ
ಳಿಂದ ಸತ್ಕರಿಸಿದರು ಸಚರಾಚರ ಜಗತ್ಪತಿಯ ೭
ಆಯೆನುತ ಮನವುಕ್ಕಿ ಮುನಿಗಳು
ಘೇಯೆನಲು ನಿರ್ಜರರ ಭೇರಿ ನ
ವಾಯಿಯಲಿ ಮೊಳಗಿದವು ಸುರಿದವು ಮುಗುಳ ತನಿಮಳೆಯ
ರಾಯನಧ್ವರ ಕರ್ಮ ಸತ್ಕೃತ
ವಾಯಿತೀ ಭೂಪತಿ ಕೃತಾರ್ಥನ
ಲಾಯೆನುತ ಸಭೆ ಹೊಗಳಿತಂದು ಸಮುದ್ರ ಘೋಷದಲಿ ೮
ಈ ಮಹಾಧ್ವರ ಕರ್ಮವೇ ಸು
ತ್ರಾಮನವರಿಗೆ ಹವ್ಯ ಸಿದ್ಧಿ ಮ
ಹಾ ಮಹೀಸುರ ಮುನಿ ನಿಕರದೇಕತ್ರ ಸಮ್ಮಿಳಿತ
ಈ ಮಹೀಶರ ಬರವಿದೆಲ್ಲರೊ
ಳೀ ಮುಕುಂದನ ಪೂಜೆಗಿದುವೆ ಸ (೯
ಭಾ ಮನೋಹರವೆಂದು ಮಾರ್ಕಂಡೇಯ ಮುನಿ ನುಡಿದ
ಅವನಿಯಮರರ ಕಳಕಳವ ಪಾಂ
ಡವರ ಸುಮ್ಮಾನವನು ನೃಪ ಕೌ
ರವರ ಮಾತ್ಸರ್ಯೋಪಲಾಲಿತ ಹರುಷ ವಿಭ್ರಮವ
ಅವನಿಪಾಲರು ಕಂಡಿರೀಯು
ತ್ಸವವ ಕಂಡಿರೆ ನೀವೆನುತ ತ
ಮ್ಮವರೊಳೊಬ್ಬರನೊಬ್ಬರುರೆ ನೋಡಿದರು ಬೆರಗಾಗಿ ೧೦
ಕೆಲರು ಪಾಂಡವ ಮೈತ್ರಿಯಲಿ ಕೆಲ
ಕೆಲರು ಕೃಷ್ಣನ ಬಲುಮೆಯಲಿ ಕೆಲ
ಕೆಲರು ಧೀರತ್ವದಲಿ ಕೆಲರನುಚಿತದ ಭೀತಿಯಲಿ
ಕೆಲರಿದೇಕವಗೆಂದು ಧರಣೀ
ವಳಯದವನಿಪರಿದ್ದರವರೊಳು
ಖಳಶಿರೋಮಣಿ ಮಸಗಿದನು ಭೂಪಾಲ ಕೇಳೆಂದ ೧೧
ಹೊತ್ತಿತೆದೆ ಹೇರಾಳ ತಮದಲಿ
ಕೆತ್ತಿದವು ಮೀಸೆಗಳು ಕಂಗಳು
ಹೊತ್ತ ವರುಣಚ್ಛವಿಯನುಬ್ಬರಿಸಿದುದು ಗೋನಾಳಿ
ಕೆತ್ತುದರಿವಿನ ಕದ ಕಟಾಕ್ಷಿಸಿ
ಮಿತ್ತು ವೊಲಿದಳು ರೋಷ ಮಿಗೆ ಹೊಗ
ರೆತ್ತಿತೈ ಶಿಶುಪಾಲವೀರನ ವಚನಮಯ ಖಡುಗ ೧೨
ಏನೆಲವೊ ಸಹದೇವ ವಸುಧೆಯ
ಮಾನನಿಧಿಗಳ ಮುಂದೆ ನಂದನ
ಸೂನುವಿಗೆ ಸಿಂಹಾಸನದ ಮೇಲರ್ಘ್ಯ ಸತ್ಕೃತಿಯೆ
ನೀನರಿಯದವ ನಿಮ್ಮ ಯಾಗಕೆ
ಹಾನಿಯಲ್ಲಾ ನಿಮ್ಮ ಹಿರಿಯರಿ
ದೇನ ನೆಗಳಿದರಕಟ ಖೂಳರು ಪಾಂಡು ಸುತರೆಂದ ೧೩
ಯದುಗಳಿವದಿರು ಮುನ್ನ ರಾಜ್ಯಾ
ಸ್ಪದದ ಸಿಂಹಾಸನಕೆ ಬಾಹಿರ
ರದರೊಳೀತನ ಖೋಡಿಯನು ಜಗವೆಲ್ಲ ಬಲ್ಲುದಲೆ
ಇದು ಮಹಾಧ್ವರವಿಲ್ಲಿ ನೆರೆದಿ
ದ್ದುದು ಮಹಾ ಕ್ಷತ್ರಿಯರು ಗೋವರ
ಸದೆಗನಿಲ್ಲಿಗೆ ಶ್ರೇಷ್ಠನೇ ಸಹದೇವ ಕೇಳೆಂದ ೧೪
ತ್ರಿದಶರಿಗೆ ಸರಿತೂಕ ಸಾಮ
ರ್ಥ್ಯದಲಿ ಶುದ್ಧ ಶ್ರೌತ ಸನ್ಮಾ
ರ್ಗದಲಿ ಶಿವಶಿವ ರಾಜ ಋಷಿಗಳಲಾ ಮಹೀತಳಕೆ
ಉದಯದಿನನಂದನಲಿ ನೃಪರಿ
ರ್ದುದು ಸತೇಜವ್ರಜರು ಗೋವರ
ಸದೆಗನಿಲ್ಲಿಗೆ ಶಿಷ್ಟನೇ ಸಹದೇವ ಹೇಳೆಂದ ೧೫
ಬಾಲಕನು ಸಹದೇವನೀತನು
ಹೇಳನಿಲ್ಲಿಯ ಹೆಚ್ಚು ಕುಂದು ನೃ
ಪಾಲ ನಿನ್ನದು ಧರ್ಮ ತತ್ವ ರಹಸ್ಯ ಸಂಗತಿಯ
ಕೇಳುವೆಗಳವು ಬೇರೆ ಚರಿತದ
ಪಾಳಿ ತಾನದು ಬೇರೆಲಾ ಪಶು
ಪಾಲರೀಯಧ್ವರಕೆ ಪೂಜ್ಯರೆ ಶಿವಶಿವಾಯೆಂದ ೧೬
ತರಳರಿವದಿರು ಪಾಂಡುಸುತರಂ
ತಿರಲಿ ನೀ ಸುಪ್ರೌಢನೆಂದಾ
ದರಿಸಿದೈ ವಸುದೇವ ಸುತನಲಿ ಶಿಷ್ಟಯೋಗ್ಯತೆಯ
ಧರಣಿಪಾಲರ ಮಧ್ಯದಲಿ ಭಾ
ಸ್ಕರನು ಗಡ ತುರು ಪಳ್ಳಿಕಾರರ
ಪುರದ ಭಾಸ್ಕರನೀತನಲ್ಲಾ ಭೀಷ್ಮ ಹೇಳೆಂದ ೧೭
ಶಿವನ ಸರಿಮಂಚದಲಿ ಸರಸಿಜ
ಭವನ ಸಮಗದ್ದುಗೆಗಳಲಿ ವಾ
ಸವನ ತೊಡೆ ಸೋಂಕಿನಲಿ ಕುಳ್ಳಿಹರೀ ಮಹೀಶ್ವರರು
ಇವರ ಸರಿಸಕೆ ಸಲ್ಲದೀ ಯಾ
ದವನನುದ್ದದಲಿರಿಸಿ ಬಹುಮಾ
ನವನು ಮಾಡಿದೆ ಭೀಷ್ಮ ಯಜ್ಞವನಳಿದೆ ನೀನೆಂದ ೧೮
ಸಕಲ ಶಾಸ್ತ್ರ ಶ್ರವಣ ವೇದ
ಪ್ರಕರ ಧರ್ಮ ವಿಚಾರ ಪೌರಾ
ಣಿಕ ಕಥಾಪ್ರಾಗಲ್ಭ್ಯವಿನಿತರ ಸಾರ ಸಂಗತಿಯ
ಅಕಟ ನೀರಲಿ ನೆರಹಿ ಪಶು ಪಾ
ಲಕನ ಪೂಜಾ ಸಾಧನಾರ್ಥ
ಪ್ರಕಟನಾದೈ ಭೀಷ್ಮ ಮೂರ್ಖಾಧಮನು ನೀನೆಂದ ೧೯
ಹಿರಿಯನೆಂದೀತನಲಿ ಪೂಜಾ
ವರಣವೇ ವಸುದೇವನೀ ಮುರ
ಹರನ ಪಿತನಿದ್ದಂತೆ ಮೇಣೀ ದ್ರುಪದಭೂಪತಿಯ
ವರಿಸಿ ನೀವಾಚಾರ್ಯನೆಂದಾ
ದರಿಸುವರೆ ರಾಯರಿಗೆ ಅಸ್ತ್ರದ
ಗುರುವಲಾ ದ್ರೋಣಂಗೆ ಪೂಜೆಯ ಮಾಡಿರೇಕೆಂದ ೨೦
ಈತನಿಲ್ಲಿ ಸದಸ್ಯನೇ ವಿ
ಖ್ಯಾತ ವೇದವ್ಯಾಸ ಋತ್ವಿ
ಗ್ಭೂತನಾಥಂಗಗ್ರ ಪೂಜೆಯನೇಕೆ ಮಾಡಿಸರಿ
ಈತ ನಿಮಗೆ ಪಿತಾಮಹನೆ ಗಂ
ಗಾತನುಜನೈದನೆ ವಿಶೇಷಕೆ
ಗೌತಮನಲಾ ಕೃಪನ ಮನ್ನಿಸಿರೇಕೆ ನೀವೆಂದ ೨೧
ವೀರರಿಗೆ ಕೊಡಬೇಹುದೇ ರಣ
ಧೀರನಶ್ವತ್ಥಾಮನೈದನೆ
ಸಾರನಲ್ಲಾ ಚಾಪಧರರೊಳಗೇಕಲವ್ಯ ನೃಪ
ಪೌರವೇಯರೊಳಧಿಕ ಬಾಹ್ಲಿಕ
ಗಾರು ಸರಿ ಕೊಡಿರೇಕೆ ಕೃಷ್ಣನಿ
ದರೊಳಗಾರೆಂದಗ್ರಪೂಜೆಯ ಕೊಟ್ಟಿರಕಟೆಂದ ೨೨
ನರನ ಸಖ ನೀ ಕೃಷ್ಣನೆಂದಾ
ದರಿಸುವರೆ ಗಂಧರ್ವ ನಿಮೀ
ನರನ ಸಖನಲ್ಲಾ ವಿರೋಧಿಯೆ ಚಿತ್ರರಥ ನಿಮಗೆ
ಅರಸನಲ್ಲಾ ದ್ರುಮನು ವರ ಕಿಂ
ಪುರುಷ ಮಾನ್ಯನು ನಿಮ್ಮ ಯಜ್ಜ ದೊ
ಳುರುಳುಕರಿಗಲ್ಲದೆ ವಿಶಿಷ್ಟರಿಗಿಲ್ಲ ಗತಿಯೆಂದ ೨೩
ಮಾನ್ಯರಿಗೆ ಮನ್ನಣೆಯಹರೆ ಸಾ
ಮಾನ್ಯನೇ ಭಗದತ್ತ ನಿಮಗೇ
ನನ್ಯನೇ ಸೌಬಲೇಯ ಜಯದ್ರಥನೇಕೆ ಮನ್ನಿಸರಿ
ಶೂನ್ಯ ವಿಭವನೆ ಮಗಧಸೂನು ಸು
ಮಾನ್ಯನಲ್ಲಾ ದಂತವಕ್ರ ವ
ದಾನ್ಯಭಟ್ಟನು ಕೃಷ್ಣನಿಲ್ಲಿಗೆ ಯೋಗ್ಯನಹನೆಂದ ೨೪
ಉರುವ ನೃಪನಲ್ಲಾ ಸುದಕ್ಷಿಣ
ನರಿಯಿರೇ ಮಾಳವನನೀತನ
ಮರೆದಿರೇ ಸಾಲ್ವನನು ಭೀಷ್ಮಕ ರುಗ್ಮ ಭೂಪತಿಯ
ಮೊರೆಯ ಮರೆದಿರೆ ಶಲ್ಯ ಭೂಪತಿ
ಹೊರಗಲಾ ವರರಾಜಸೂಯಕೆ
ಕರುವ ಕಾವವನಲ್ಲದುಳಿದರು ಯೋಗ್ಯರಲ್ಲೆಂದ ೨೫
ಭೂರಿ ಭೂರಿಶ್ರವರು ನಿಮ್ಮೊಳ
ಗಾರ ಹೊಯ್ದರು ಸೋಮದತ್ತ ಮ
ಹೀರಮಣನತಿ ಮಾನ್ಯನಲ್ಲಾ ಅಗ್ರಪೂಜೆಯಲಿ
ಸಾರಧರ್ಮವಿದೆಂದು ಬಂದೆವಿ
ದಾರು ಬಲ್ಲರು ಹಳ್ಳಿಕಾರರ
ನಾರಿಯರ ನೆರೆ ಮಿಂಡನಲ್ಲದೆ ಯೋಗ್ಯನಲ್ಲೆಂದು ೨೬
ವಿಂದನನುವಿಂದಾ ಮಹೀಶರು
ಬಂದಿರೈ ಕಾಂಭೋಜ ನೃಪನೈ
ತಂದೆಲಾ ಗಾಂಧಾರ ಶಕುನಿ ಬೃಹದ್ರಥಾದಿಗಳು
ಬಂದರಿಲ್ಲಿಗೆ ಧರ್ಮಸಾಧನ
ವೆಂದು ಬಯಸಿದಿರಿವರ ಯಾಗಕೆ
ನಂದಗೋಪನ ಮಕ್ಕಳಲ್ಲದೆ ಯೋಗ್ಯರಿಲ್ಲೆಂದ ೨೭
ಈ ಋಷಿಗಳೀ ಮಂತ್ರವೀ ಸಂ
ಭಾರವೀ ಪೌರಾಣ ಕಥೆಯೀ
ಭೂರಿ ಭೋಜನವೀ ಮಹಾ ಗೋರತ್ನ ಧನ ಧಾನ್ಯ
ಸಾರತರ ವೇದೋಕ್ತಮಾರ್ಗವಿ
ಚಾರವಿದ್ದುದು ಹೊರಗೆ ಗೋಪೀ
ಜಾರ ಸತ್ಕೃತಿಯೊಳಗೆ ವಿಷವಿದನರಿದುದಿಲ್ಲೆಂದ ೨೮
ಸ್ನಾತಕವ್ರತಿಯಲ್ಲ ಋತ್ವಿಜ
ನೀತನಲ್ಲಾಚಾರ್ಯನಲ್ಲ ಮ
ಹೀತಳಾಧಿಪನಲ್ಲ ಗುರುವಲ್ಲಸುರರಿಪು ನಿಮಗೆ
ಈತನೇ ಪ್ರಿಯನೆಂದು ಕೃಷ್ಣಂ
ಗೋತು ಕೊಡುವರೆ ಬೇರೆ ಕೊಡುವುದು
ಭೂತಳೇಶರ ಮುಂದೆ ಮನ್ನಿಪುದುಚಿತವಲ್ಲೆಂದ ೨೯
ರಾಯ ನಿನಗಾವಿಂದು ದಿಟ ಸಿ
ದ್ಧಾಯವನು ನಾವ್ತೆತ್ತೆವಲ್ಲದೆ
ವಾಯುಜನ ಫಲುಗುಣನ ಬಿಲ್ಲಿನ ಬಲುಮೆಗಂಜಿದೆವೆ
ರಾಯ ಠಕ್ಕಿನ ನಿಧಿಯ ಠೌಳಿಯ
ಮಾಯಕಾರನ ತಂದು ಮನ್ನಿಸಿ
ರಾಯರಭಿಮಾನವ ವಿಭಾಡಿಸಿ ಕೊಂಡೆ ನೀನೆಂದ ೩೦
ಧರ್ಮಮಯವೀ ಯಜ್ಜ ನೀನೇ
ಧರ್ಮಸುತನೆಂದಿದ್ದೆವಿಲ್ಲಿ ವಿ
ಕರ್ಮವಾಯಿತಸೂಯವೇ ಶಿವನಾಣೆ ಜಗವರಿಯೆ
ಧರ್ಮವೇ ಅಪ್ರಾಪ್ತ ಕಾರ್ಯದ
ಕರ್ಮವೀ ನೃಪನಿಕರ ಮೆಚ್ಚಲ
ಧರ್ಮಸುತನೆಂದಾಯ್ತು ನಿನ್ನಭಿಧಾನವಿಂದಿನಲಿ ೩೧
ಆಯಿತಿದು ಜಡ ಧರ್ಮಜನು ಗಾಂ
ಗೇಯ ಜಡನೀ ತಾಗುದಟ್ಟಿನ
ದಾಯವರಿಯದೆ ನಿನ್ನ ಕರೆದರೆ ಕೃಷ್ಣ ಬೆರತೆಯಲ
ರಾಯ ರತುನದ ನಡುವೆ ನೀನನು
ಗಾಯಕವೊ ನಾಯಕವೊ ಮೇಣುಪ
ನಾಯಕವೊ ನೀನಾವನೆಂದನು ಜರೆದು ಮುರಹರನ ೩೨
ಈ ಋಷಿಗಳೇ ಬಣಗುಗಳು ಬಡ
ಹಾರುವರು ದಕ್ಷಿಣೆ ಸುಭೋಜನ
ಪೂರವಾದರೆ ಸಾಕು ಮಾನ್ಯರ ವಾಸಿವಟ್ಟದಲಿ
ಹೋರುವವರಿವರಲ್ಲ ನೆರೆದೀ
ವೀರ ನೃಪರಭಿಮಾನಿಗಳು ನೆರೆ
ಸೈರಿಸಿದರಿದು ನಿನಗೆ ಸದರವೆ ಕೃಷ್ಣ ಹೇಳೆಂದ ೩೩
ಅರಿಯದವರಾದರಿಸಿದರೆ ನೀ
ನರಿಯ ಬೇಡವೆ ನಿನ್ನ ಕುಂದಿನ
ಕೊರತೆಗಳನಾರರಿಯರೀ ಭೂಪಾಲ ಮಧ್ಯದಲಿ
ಕುರುಬರೂರಲಿ ಗಾಜು ಮಾಣಿಕ
ವರಿಯದವರಿಗೆ ಕೃಷ್ಣ ನೀ ಕಡು
ಬೆರತೆಲಾ ನೆರೆ ಮರೆದೆಲಾ ನಿನ್ನಂತರವನೆಂದ ೩೪
ಕುಲದಲಧಿಕರು ರಾಜ್ಯದಲಿ ವೆ
ಗ್ಗಳರು ಭುಜ ಸತ್ವದಲಿ ಸೇನಾ
ಬಲದಲುತ್ತಮರಿವರ ಭಂಗಿಸಿ ನಿನಗೆ ಮನ್ನಣೆಯೆ
ಕುಲವು ಯದುಕುಲ ರಾಜ್ಯವೇ ಕಡ
ಲೊಳ ಕುರುವ ನಿನ್ನೋಟಗುಳಿತನ
ದಳವ ಮಾಗಧ ಕಾಲ ಯವನರು ಬಲ್ಲರವರೆಂದ ೩೫
ಬೇವಿನಾರವೆಯೊಳಗೆ ಕಳಹಂ
ಸಾವಳಿಗೆ ರಮ್ಯವೆ ಜಪಾಕುಸು
ಮಾವಳಿಗಳಲಿ ಮಧುಕರನ ಮೋಹರಕೆ ಮನ್ನಣೆಯೆ
ಈ ವಿಕಾರದ ಯಜ್ಜದಲಿ ರಾ
ಜಾವಳಿಗೆ ಮನ್ನಣೆಯೆ ಶಿವಶಿವ
ನೀವು ಗೋಪೀಜಾರರಿಲ್ಲಿಗೆ ಶಿಷ್ಟರಹರೆಂದ ೩೬
ಜರಡುಮಖವೀ ಮಖಕೆ ಹೋಲುವ
ಧರಣಿಪತಿಯೀ ಮಖಕೆ ಧರಣೀ
ಶ್ವರಗೆ ಪಾಸಟಿ ಭೀಷ್ಮನೀ ಮಖಭೂಪ ಭೀಷ್ಮರಿಗೆ
ಸರಿಸನಾದನು ಕೃಷ್ಣನೀ ಮಖ
ಧರಣಿಪತಿ ಭೀಷ್ಮಂಗೆ ಕೃಷ್ಣಗೆ
ಸರಿಯ ಕಾಣೆನು ನಿಮ್ಮೊಳೊಬ್ಬರಿಗೊಬ್ಬರೆಣೆಯೆಂದ ೩೭
ಸೀಳಿವನ ಹೆಡತಲೆಯೊಳಗೆ ತೆಗೆ
ನಾಲಗೆಯನೆಲೆ ಕುನ್ನಿಗಳಿರಿದ
ಕೇಳುವರೆ ಪತಿನಿಂದೆಯನು ಪಾತಕಕೆ ಗುರುವಲ್ಲ
ಏಳೆನುತ ಕೃತವರ್ಮ ಸಾಂಬ ನೃ
ಪಾಲ ಮೊದಲಾದಖಿಳ ಯಾದವ
ಜಾಲವೆದ್ದುದು ಬಿಗಿದ ಬಿಲುಗಳ ಸೆಳೆದಡಾಯುಧದಿ ೩೮
ಕದಡಿತಾ ಆಸ್ಥಾನ ಹೋಯೆಂ
ದೊದರಿ ಋಷಿಗಳ ತಾಳಿಗೆಗಳೊಣ
ಗಿದವು ಹಲ್ಲಣಿಸಿದವು ರಥ ಮಾತಂಗ ವಾಜಿಗಳು
ಕೆದರಿತೀಚೆಯ ದೆಸೆ ಸುನೀತನ
ಸದೆದು ತೆಗೆ ಸುಂಟಿಗೆಯನೆನುತಲಿ
ಯದು ನೃಪಾಲರು ಗಜಬಜಿಸಲೆಡೆವೊಕ್ಕನಾ ಭೀಷ್ಮ ೩೯
ನಿಲಿಸಿದನು ಕಳಕಳವನೀ ಯದು
ಬಲವ ತೆಗೆದನು ಮತ್ತೆ ಮೌನದ
ಜಲಧಿಯಾಯ್ತಾಸ್ಥಾನದಿದಿರಲಿ ನಿಂದು ಸಹದೇವ
ಎಲೆ ಸುನೀತ ವೃಥಾ ವಿರೋಧ
ಸ್ಖಲಿತನಾದೆ ಮುರಾರಿ ಮಾನ್ಯರ
ತಿಲಕನೀತನ ಪೂಜೆ ಯಾಗಕೆ ಕಳಸವಾಯ್ತೆಂದ ೪೦
ಧರಣಿಪತಿಯೇ ಸಕಲ ಧರ್ಮದ
ಪರಮಸೀಮೆ ಮುಕುಂದನೇ ಮಾ
ನ್ಯರಿಗೆ ಗುರು ವಂದ್ಯರಿಗೆ ವಂದ್ಯನು ದೈವಕಧಿದೈವ
ಸುರನದೀನಂದನರು ಸಾಕ್ಷಾ
ತ್ಪರಮಶಿವನೀ ಯಜ್ಞ ಲೋಕೋ
ತ್ತರದ ಮಖವಿದು ನಿನ್ನ ಕುಮತಿಗೆ ಸಾಧ್ಯ ವಲ್ಲೆಂದ ೪೧
ನಿನ್ನನೆನ್ನನು ಚೈದ್ಯ ಕೃಷ್ಣನ
ಮನ್ನಣೆಗೆ ಸೆಣಸುವರಿಗಿದೆ ತೊಡ
ರೆನ್ನ ಪಾದದಲೆನುತ ಧರಣಿಯ ನೊದೆದನಂಘ್ರಿಯಲಿ
ಇನ್ನು ನೀನು ಸುಲೋಚನಾಂಧಕ
ನಿನ್ನೊಡನೆ ಫಲವೇನು ಕದನಕೆ
ಬನ್ನಿ ಮಿಡುಕುಳ್ಳವರೆನುತ ಗಜರಿದನು ಸಹದೇವ ೪೨
ನುಡಿಯದದು ಮೌನಗ್ರಹದ ಹೆಡ
ಗುಡಿಯಲಿದ್ದುದು ರಾಯ ಕುಲವವ
ಗಡೆಯನೆದ್ದನು ಸಿಂಹ ಪೀಠದಿ ನೋಡಿ ಕೆಲಬಲನ
ಕಡೆಯ ಝಣಝಣ ರವ ಮಸಗಲಿವ
ನೊಡನೆ ಹೊರವಂಟುದು ನೃಪಾಲಕ
ರೊಡಮುರುಚಿದರು ಹಿಡಿವ ಸಚಿವಪಸಾಯ್ತಮಂತ್ರಿಗಳ ೪೩
ಶಿವಶಿವಾ ತಪ್ಪಾಯ್ತು ನಮ್ಮು
ತ್ಸವಕೆ ಬಂದವನಿಪನ ಗುಣ ದೋ
ಷವನು ನಾವೀಕ್ಷಿಸುವುದನುಚಿತವೆಂದು ವಿನಯದಲಿ
ಅವನಿಪತಿ ಬೆಂಬತ್ತಿ ಗಮನಕೆ
ತವಕಿಸುವ ಶಿಶುಪಾಲಕನ ಹಿಡಿ
ದವುಚಿದನು ಮಧುರೋಕ್ತಿಯಲಿ ನುಡಿಸಿದನು ಬೋಳೈಸಿ ೪೪
ಅರಿಯರೇ ಮುನಿ ಮುಖ್ಯರೀತನ
ನುರುವ ದೈವವಿದೆಂದು ನೀ ಕ
ಟ್ಟಿರಿತಗಾರನೆ ರಾಯರಿದೆಲಾ ಸಕಲ ಗುಣಯುತರು
ಕುರುಬತನದಲಿ ನೀನಕಟ ತೆರ
ನರಿಯದೆಂಬರೆ ಬಾರೆನುತ ಮುಂ
ಜೆರಗ ಹಿಡಿದೆಳೆದವನ ತಂದನು ಭೂಪ ಜನ ಸಹಿತ ೪೫
ಎಲೆ ಮರುಳೆ ಭೂಪಾಲ ನೊರಜಿನ
ಕಳಕಳಕೆ ಕರಿ ಬೆಚ್ಚುವುದೆ ಮಂ
ಡಳಿಯ ಮರಿ ಮಿಡುಕಿದರೆ ಕಳವಳಿಸುವುದೆ ಕಲಿ ಸಿಂಹ
ಗಿಳಿಯ ಮುರಕಕೆ ಗಿಡಗನುಗಿದ
ವ್ವಳಿಸುವುದೆ ಹರಿಗಿವನು ಗಣ್ಯನೆ
ಗಳಹನಿವನೊಡನಾವುದನುನಯವೆಂದನಾ ಭೀಷ್ಮ ೪೬
ಗರುವ ಗರುವನನಖಿಳ ವಿದ್ಯಾ
ಪರಿಣತನ ಪರಿಣತನು ವೀರನು
ಧುರದ ವೀರನನರಿವನಿಂತಿದು ಲೋಕ ವಿಖ್ಯಾತ
ಗರುವನಲ್ಲ ಸುನೀಲ ವಿದ್ಯಾ
ಪರಿಣತನು ತಾನಲ್ಲ ಘನ ಸಂ
ಗರದೊಳಿವನಾಳಲ್ಲ ಕೃಷ್ಣನನರಿವನೆಂತೆಂದ ೪೭
ಅರಸನರಸನು ಕಾದಿ ಹಿಡಿದಾ
ದರಿಸಿ ಬಿಟ್ಟು ತದೀಯ ರಾಜ್ಯದೊ
ಳಿರಿಸಿದರೆ ಗುರುವಾತನಾತಂಗಿದುವೆ ಶ್ರುತಿಸಿದ್ಧ
ಅರಸುಗಳನನಿಬರನು ಸೋಲಿಸಿ
ಮರಳಿ ರಾಜ್ಯದೊಳಿರಿಸನೇ ಮುರ
ಹರನು ಗುರುವಲ್ಲಾ ಮಹೀಶಂಗೆಂದನಾ ಭೀಷ್ಮ ೪೮
ಮಗಧಸುತನೀ ಸಾಲ್ವ ಹಂಸನ
ಮಗ ನಿಶುಂಭನ ಸೂನು ನರಕನ
ಮಗನು ಪೌಂಡ್ರಕ ದಂತವಕ್ರನ ತನುಜರಿವರೆಲ್ಲ
ಹಗೆಯ ಮಾಡಿ ಮುರಾಂತಕನ ಕಾ
ಳಗದೊಳೆಲ್ಲರ ನಿಕ್ಕಿ ಪಟ್ಟವ
ಬಿಗಿಸಿಕೊಂಡವರಲ್ಲವೇ ಹೇಳೆಂದನಾ ಭೀಷ್ಮ ೪೯
ಜ್ಞಾನವೃದ್ಧರು ವಿಪ್ರರಲಿ ಸ
ನ್ಮಾನನೀಯರು ಶೌರ್ಯವೃದ್ಧರು
ಮಾನವೇಂದ್ರರೊಳಧಿಕವಿದು ಪೌರಾಣ ಸಿದ್ಧವಲೆ
ಜ್ಞಾನವೃದ್ಧನು ಕೃಷ್ಣನಾಹವ
ದೀನನೇ ಘನ ಶೌರ‍್ಯನೆಂಬುದ
ತಾನರಿಯನೇ ಚೈದ್ಯ ಭೂಪತಿಯೆಂದನಾ ಭೀಷ್ಮ ೫೦
ಏನ ಹೇಳ್ವುದು ಧರ್ಮತತ್ವ ನಿ
ಧಾನದಲಿ ಮುನಿಮುಖ್ಯರಿವರ
ಜ್ಞಾನಿಗಳು ಶಿಶುಪಾಲ ತತ್ವಜ್ಞಾನಪಂಡಿತನು
ಆ ನಿಶಾಟರು ಮೆಚ್ಚರಗ್ಗದ
ಭಾನು ರಶ್ಮಿಯನಂಧಕಾರ
ಜ್ಞಾನನಿಷ್ಠರು ನಿಪುಣರೈಸಲೆಯೆಂದನಾ ಭೀಷ್ಮ ೫೧
ಈತ ಸಚರಾಚರದ ಗುರು ವಿ
ಖ್ಯಾತ ಋತ್ವಿಜನೀ ತನಾಚಾ
ರ‍್ಯಾತಿಶಯನೀತನು ಮಹಾಪ್ರಿಯನೀತ ನೃಪನೀತ
ಸ್ನಾತಕವ್ರತಿಯೀತನೀತನ
ಮಾತು ನಿನಗೆತ್ತಣದು ನವ ಖ
ದ್ಯೋತಕೆತ್ತಣ ಸೂರ್ಯಮಂಡಲವೆಂದನಾ ಭೀಷ್ಮ ೫೨
ಕರುಣಿಸೈ ಗಾಂಗೇಯ ಕೃಷ್ಣನ
ಚರಿತವನು ಶಿಶುಪಾಲ ಭೂಪನ
ಕರಣವೃತ್ತಿಯ ಕದಡು ತಿಳಿಯಲಿ ದೈವದೂರನಲೆ
ದುರುಳನಿವನ ದುರುಕ್ತಿಗಳ ಕೇ
ಳ್ದರಿಗೆ ಪ್ರಾಯಶ್ಚಿತ್ತವಿದು ವಿ
ಸ್ತರಿಸಬೇಹುದು ಸಕಲ ಜನಮತವೆಂದನಾ ಭೂಪ ೫೩
ಕೇಳು ಧರ್ಮಜ ಸಕಲ ಋಷಿಗಳು
ಕೇಳಿರೈ ನೆರೆದವನಿಪಾಲರು
ಕೇಳಿರೈ ನೆರೆದಖಿಳಜನ ಚಿತ್ತಾವಧಾನದಲಿ
ಶ್ರೀಲತಾಂಗಿಯ ವಲ್ಲಭನ ಸ್ತುತಿ
ಮೌಳಿ ಮೌಕ್ತಿಕಪಾದಪೀಠನ
ಲೀಲೆಯನು ಚಿತ್ತವಿಸಿ ಗದುಗಿನ ವೀರನರಯಣನ ೫೪
ಸಂಕ್ಷಿಪ್ತ ಭಾವ
Lrphks Kolar
ಕೃಷ್ಣನಿಗೆ ಅಗ್ರಪೂಜೆಯ ವಿಚಾರದ ಬಗ್ಗೆ ಶಿಶುಪಾಲನ ಅಸಹನೆ.
ರಾಜಸೂಯಯಾಗದ ಅಗ್ರಪೂಜೆಯನ್ನು ಯಾರಿಗೆ ಮಾಡಬೇಕು ಎಂಬ ವಿಚಾರ ಬಂದಾಗ ಭೀಷ್ಮರು ಕೃಷ್ಣನನ್ನು ಸೂಚಿಸುತ್ತಾರೆ. ಕೃಷ್ಣನೇ ಇದಕ್ಕೆ ತಕ್ಕವನೆಂದು ಅವನ ಮಹತ್ವವನ್ನು ಹೇಳುವರು. ಮುನಿಗಳು ಇದನ್ನು ಅನುಮೋದಿಸುವರು.
ಕೃಷ್ಣನನ್ನು ಮಣಿಮಯ ಪೀಠದಲ್ಲಿ ಕುಳ್ಳಿರಿಸಿ ಪಾದಗಳನ್ನು ತೊಳೆದು ಪೂಜೆಗೆ ಅಣಿಯಾದರು. ಸಹದೇವನು ಎಲ್ಲವನ್ನೂ ಅಣಿ ಮಾಡಿಕೊಟ್ಟನು.
ಶಿಶುಪಾಲನು ರೋಷಾವಿಷ್ಟನಾಗಿ ಎದ್ದು ನಿಂತು ಈ ಪೂಜೆಯು ಕೃಷ್ಣನಿಗೆ ಸಲ್ಲದು ಎಂದು ಆರಂಭಿಸಿ ಕೃಷ್ಣನನ್ನು ನಿಂದಿಸಲು ಆರಂಭಿಸಿದನು. ಅವನು ಧರ್ಮಜನನ್ನು ಈ ಕಾರ್ಯ ಕೈಗೊಂಡಿದ್ದಕ್ಕೆ ನಿಂದಿಸಿದನು. ಬೇರೆ ಬೇರೆ ಪ್ರಮುಖರು, ಗುರುಹಿರಿಯರು, ಪ್ರಧಾನರು ಇರುವಾಗ ಇವನನ್ನೇಕೆ ಪೂಜಿಸಬೇಕೆಂದು ಹೀಯಾಳಿಸಿದನು. ಸೂಚಿಸಿದ ಭೀಷ್ಮರನ್ನೂ, ಅಣಿ ಮಾಡುತ್ತಿದ್ದ ಸಹದೇವನನ್ನೂ ಕೆಣಕಿದನು. ಕೃಷ್ಣ ರಾಜನಲ್ಲ, ಸ್ನಾತಕನಲ್ಲ, ಗೋವಳಿಗ, ಜಾರ, ವಂಚಕ, ಪಾಪಿ, ಇತ್ಯಾದಿ ಒಂದೇ ಸಮನೆ ತೆಗಳಲು ಆರಂಭಿಸಿದನು.
ಸಹದೇವಾದಿಗಳು ಇದರಿಂದ ಕೆರಳಿ ಅವನ ಮೇಲೆ ಹರಿಹಾಯ್ದರು. ಶಿಶುಪಾಲನು ಯಾಗವನ್ನೇ ಜರಡು ಎಂದು ಹೀಯಾಳಿಸಿ ಅದಕ್ಕೆ ಸಂಬಂಧಿಸಿದ ಎಲ್ಲರನ್ನೂ ಬಯ್ಯತೊಡಗಿದನು. ಇದರಿಂದ ಅಲ್ಲಿ ಕೋಲಾಹಲವೆದ್ದಿತು. ಭೀಷ್ಮನು ಎಲ್ಲರನ್ನೂ ಸುಮ್ಮನಿರಿಸಿದನು. ಕೃಷ್ಣನ ಹಿರಿಮೆಯನ್ನು ವಿವರಿಸಲು ಹೊರಟ ಭೀಷ್ಮರನ್ನು ಶಿಶುಪಾಲನು ತಡೆದು ತನ್ನ ಅನುಯಾಯಿಗಳೊಡನೆ ಸಭೆಯಿಂದೆದ್ದು ಹೊರಟನು. ಆಗ ಧರ್ಮಜನು ಅವನನ್ನು ಸಮಾಧಾನಿಸಿ ಮತ್ತೆ ಒಳಗೆ ಕರೆತಂದನು.
ಆಗ ಮತ್ತೆ ಭೀಷ್ಮರು ಕೃಷ್ಣನ ಬಗ್ಗೆ ಶಿಶುಪಾಲನು ಎತ್ತಿದ ಆಕ್ಷೇಪಗಳಿಗೆಲ್ಲ ಸೂಕ್ತ ಉತ್ತರ ಕೊಡತೊಡಗಿದರು. ಇಡೀ ಭೂಮಂಡಲಕ್ಕೇ ರಾಜನಾಗಿರುವನು ಕೃಷ್ಣ. ಇವನುಸಕಲ ವಿದ್ಯಾ ಪಾರಂಗತನು. ಆಗ ಧರ್ಮಜನು ಭೀಷ್ಮರನ್ನು ಕುರಿತು ಶ್ರೀ ಕೃಷ್ಣನ ಚರಿತ್ರೆಯನ್ನು ವಿವರವಾಗಿ ಹೇಳಬೇಕೆಂದು ಪ್ರಾರ್ಥಿಸಿದನು. ಇದರಿಂದ ದುರುಳ ಶಿಶುಪಾಲನ ದುರುಕ್ತಿಗಳನ್ನು ಕೇಳಿದವರಿಗೆ ಪ್ರಾಯಶ್ಚಿತ್ತವಾಗುವುದೆಂದನು. ಇದಕ್ಕೆ ಒಪ್ಪಿದ ಭೀಷ್ಮರು ಹೇಳಲನುವಾದರು.
ಕಾಮೆಂಟ್‌ಗಳು