ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ದ್ವಾರಕಾನಾಥ್ ಕಬಾಡಿ


ಎಚ್. ದ್ವಾರಕಾನಾಥ್ ಕಬಾಡಿ

ಡಾ. ಎಚ್. ದ್ವಾರಕಾನಾಥ್ ಕಬಾಡಿ ಕನ್ನಡದಲ್ಲಿ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ ಅಪಾರ ಸಾಧನೆ ಮಾಡಿದ್ದಾರೆ. 

ದ್ವಾರಕಾನಾಥ್ ಕಬಾಡಿ 1936ರ ಫೆಬ್ರವರಿ 17ರಂದು ಬೆಂಗಳೂರಿನಲ್ಲಿ ಜನಿಸಿದರು. ಬೆಂಗಳೂರಿನಲ್ಲೇ ಬಿ.ಕಾಂ., ಬಿ.ಎಲ್. ಪದವಿ ಪಡೆದ ನಂತರ ಲೆಕ್ಕ ಪರಿಶೋಧಕರಾಗಿ ವೃತ್ತಿ ಆರಂಭಿಸಿದರು. 

ದ್ವಾರಕಾನಾಥ್ ಸಾಹಿತ್ಯದ ಗೀಳು ಹತ್ತಿಸಿಕೊಂಡವರು. ವಿದ್ಯಾರ್ಥಿ ದೆಸೆಯಿಂದಲೇ ಕೀಟ್ಸ್, ಎಲಿಯೆಟ್, ಷೆಲ್ಲಿ, ಷೇಕ್ಸ್‌ಪಿಯರ್ ಮುಂತಾದ ಪಾಶ್ಚಿಮಾತ್ಯ ಕವಿಗಳು ಮತ್ತು ಕನ್ನಡ ಕವಿಗಳ ಅಧ್ಯಯನ ಮಾಡಿದರು. ಕಾಲೇಜು ಮ್ಯಾಗಜಿನ್‌ನಲ್ಲಿ ‘ಗೌರಿಶಂಕರ’ ಎಂಬ ಕವನ ಪ್ರಕಟಗೊಂಡಿತು. ಕಥಾವಳಿ, ಮೈಸಿಂಡಿಯಾ ಪತ್ರಿಕೆಗಳಿಗೆ ಬರವಣಿಗೆ ಮಾಡಿದರು. ರಾಜಾಸ್ಥಾನದ ಕವಿ ನರದೇವ ಶರ್ಮರವರ ಮೇಲೆ Monograph on stylists ಮಹಾಪ್ರಬಂಧ ಮಂಡಿಸಿದರು. ಬಿಹಾರದ ಡಾ. ಬ್ರಿಜ್ ಕಿಶೋರ್ ಪಾಂಡೆಯವರ ಸಮಗ್ರ ಆಂಗ್ಲ ಕವನ ಸಂಕಲನ ಕುರಿತ ಮಹಾಪ್ರಬಂಧಕ್ಕೆ ಕುನ್ವಾರ್ ವಿಶ್ವವಿದ್ಯಾಲಯದ ಡಾಕ್ಟರೇಟ್ ಸಂದಿತು. ಇಂಗ್ಲಿಷ್, ಕನ್ನಡ ಎರಡು ಭಾಷೆಯ ಪರಿಣತಿಯಿಂದ ಇವರ ಬರಹಗಳು ಕಂಗೊಳಿಸಿದವು. ರಾಜರತ್ನಂ ಮುನ್ನುಡಿಯ ‘ಹೊನ್ನಿನ ಮಡಿಲಲ್ಲಿ’ ಕಾದಂಬರಿ 1960ರಲ್ಲಿ ಪ್ರಕಟಗೊಂಡಿತು. ಗೀತಗಂಗೋತ್ರಿ, ಸ್ವಪ್ನಸೋಪಾನ, ಹೀಗೂ ಒಂದು ಇತಿಹಾಸ, ಬೆಳಕ ಬಿಂಬದಲ್ಲಿ ಮುಂತಾದವು ಇವರ ಕವನ ಸಂಕಲನಗಳು. ಮಿಂಚಿನ ಬುಟ್ಟಿ, ಕೋಲ್ಮಿಂಚಿನ ದಾರಿಯಲ್ಲಿ ವಿನೂತನ ತ್ರಿಪದಿಗಳು. ಬಿಂಬ-ಪ್ರತಿಬಿಂಬ, ಪಿರಮಿಡ್ ಮಾದರಿಯ ಸಾಲುಗಳ ರಚನೆಯ ಪಿರಮಿಡ್ ಕವನ ಸಂಗ್ರಹ, ಇಂಗ್ಲಿಷ್‌ನಲ್ಲಿ ಬರೆದ ಕವನ ಸಂಕಲನಗಳಾದ Lamps of Hope, Amidst The Cosmic Wilderness, Rye On The Ravines,�Symphony of Skeletons, Tender Wings, Melting Moments, Kabadi’s Glimmericks, A Tear On A Pancake, Golden Glimmers, Shimmering Waves, Snail-Pace Street, Chariot of Dreams, ಮುಂತಾದುವು ಇವರ ಕೃತಿಗಳಲ್ಲಿವೆ. 

ದ್ವಾರಕಾನಾಥ್ ಕಬಾಡಿ ಅವರು ಬಾಲ್ಟಿಮೋರ್‌ನ ವಿಶ್ವಕವಿ ಸಮ್ಮೇಳನದ ಛಾನ್ಸಲರ್ ಆಗಿ ಆಯ್ಕೆಯಾಗಿದ್ದರು. ಲಂಡನ್ನಿನ ರೀಜನ್ಸಿ ಪ್ರೆಸ್‌ನಿಂದ Ode to my windows  ಕಾವ್ಯಕ್ಕೆ ಬಹುಮಾನ ಬಂತು.  ಕಾವ್ಯರಚನೆಗಾಗಿ ಡೆಲ್ಲೆ, ಆರ್ತೆ, ಇಟಲಿ ವಿಶ್ವವಿದ್ಯಾಲಯದ ಡಿಪ್ಲೊಮ ಶ್ರೇಣಿಯ ಮನ್ನಣೆ, ಫಿಲಿಫೈನ್ಸ್ ಅಂತಾರಾಷ್ಟ್ರೀಯ ಕವಿ ಸಮ್ಮೇಳನದಲ್ಲಿ  ಪ್ರಶಂಸೆಗಳು ಸಂದವು. ನೆಪೋಲಿ ಅಕಾಡಮಿಯಿಂದ Symphony of skeletons ಕೃತಿ ಪ್ರಕಟಣೆಗೊಂಡಿತು.  ಮೆಲ್ಬೋರ್ನ್ ಕಾವ್ಯ ಸಂಘದಿಂದ ಕೃತಿಗೆ ಮನ್ನಣೆ ಸಂದಿತು.  Sing O Rain Sing

ನ್ಯೂಯಾರ್ಕ್ ಮತ್ತು ಬಾಲ್ಟಿಮೋರ್‌ನಲ್ಲಿ ಬ್ಯಾಲೆಯಾಗಿ ಪ್ರದರ್ಶನಗೊಂಡಿತು. Rye on the ravinesಗೆ ಮೈಕೇಲ್ ಮಧುಸೂಧನ ದತ್ತ ಪ್ರಶಸ್ತಿ ಸಂದಿತು. ಕ್ಯಾಲಿಫೋರ್ನಿಯಾ World of Literary Academy of Poets, 

ಚೆನ್ನೈನ World Academy of Arts and Culture ಮತ್ತು World Poetry Society 

ಮುಂತಾದ ಪ್ರತಿಷ್ಠಿತ ಸಂಘಟನೆಗಳ ಫೆಲೋ ಆಗಿ ಆಯ್ಕೆ ಆದರು.

H. Dwarakanath Kabadi

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ