ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಜಾನ್ ಮೆಕೆನ್ರೋ


 ಜಾನ್ ಮೆಕೆನ್ರೋ


ಜಾನ್ ಮೆಕೆನ್ರೋ ನಮ್ಮ ಕಾಲದ ಅವಿಸ್ಮರಣೀಯ ಟೆನ್ನಿಸ್ ಆಟಗಾರ.  "ಪ್ರಾಣಬಿಟ್ಕೊಂಡು ಆಡ್ತಿದ್ದ ಅಂತ ಹೇಳ್ತೀವಲ್ಲ" ಹಾಗೆ ಆಡ್ತಿದ್ದವ.  ಕೋಪಗೊಳ್ತಿದ್ದ, ಅಂಪೈರ್ ಹತ್ರ ಜಗಳ ಕಾಯ್ತಿದ್ದ.  ಈಗನ್ಸುತ್ತೆ ಎಂಥ ಮುಕ್ತ ವ್ಯಕ್ತಿತ್ವ ಅಂತ! ಬಹುತೇಕ ಜನಕ್ಕೆ ಸೌಜನ್ಯತೆ ಒಂದು ಶೋ ಇದ್ದ ಹಾಗೆ. ಈತ ತನಗೆ ಆ ಕ್ಷಣದಲ್ಲಿ ಏನೇನು ಭಾವ ಬರುತ್ತೊ ಅದು ಹರಿಯಗೊಟ್ಟು ಸಶಕ್ತನಾಗಿ ಬದುಕಿದ.  ಇಂದೂ ಕಾಮೆಂಟರಿಯಲ್ಲಿ ಬರ್ತಾನೆ. ಅನೇಕರನ್ನು ಕೋಚ್ ಮಾಡ್ತಾನೆ.  ಚೆನ್ನಾಗಿ ನಗುವಾಗ ನಕ್ಕು ಗಂಭೀರತನ ಬೇಕಾದಾಗ ಗಾಂಭೀರ್ಯದಿಂದ ಮಾತಾಡುತ್ತಾನೆ. 

ನಮ್ಮ ಕೆ. ವಿ. ತಿರುಮಲೇಶರು ಅವನ ಕುರಿತು ಬರೆದ ಜನಪ್ರಿಯ ಕವಿತೆ ಇದು:

ಕೆಟ್ಟ ಹುಡುಗ ಜಾನ್ ಮೆಕೆನ್ರೊ
ಬಯ್ದುಗಿಯ್ದು ಮಾಡಿದರೆ
ಎಲ್ಲಾ ಮಂದಿ ರೇಗುವವರೆ-
ವದಿಯೋಣವನ್ನ ಬನ್ರೊ!

ಅದೇ ಹುಡುಗ ಜಾನ್ ಮೆಕೆನ್ರೊ
ಆಡಲು ಮಜಬೂತು
ನೋಡುತ್ತಾರೆ ಸುಮ್ಮನೇಕೇ ಕೂತು
ಏನದ್ಭುತ ಕಣ್ರೊ!

ಕಣ್ಣ ಮುಂದೆ ಮೋಡವೊಂದು
ಎದ್ದ ಹಾಗೇನೆ ಥೇಟು
ಎಲ್ಲಿ ಚೆಂಡು ಎಲ್ಲಿ ಬ್ಯಾಟು
ಗುಡುಗು ಮಿಂಚು ಒಂದು!

ಯಾರೂ ಮುಚ್ಚಲಿಲ್ಲ ರಪ್ಪೆ
ಏನಾಗುವುದೊ ಕಾತರ
ಯಾವ ಕಡಲು ಯಾವ ತೀರ
ಮೀರಲದರ ತಪ್ಪೆ?

ನೋಡಿದವರು ನೋಡಿದಲ್ಲೆ
ಬಯಲಿನಿಂದ ಬಯಲಿಗೆ
ದಾಳಿಯಿಡುವ ಗಾಳಿ ತನಗೆ
ತಾನೆ ಕೊಡುವ ಎಲ್ಲೆ

ಜಾನ್ ಮೆಕೆನ್ರೋ ಪಶ್ಚಿಮ ಜರ್ಮನಿಯ ವೆಬಿಸ್‍ಬೆಡನ್ ಎಂಬಲ್ಲಿ 16 ಫೆಬ್ರುವರಿ 1959ರಂದು ಜನಿಸಿದರು. ತಂದೆ ಅಮೆರಿಕದಲ್ಲಿ ಕೆಲಸಮಾಡುತ್ತಿದ್ದುದರಿಂದ ಅಮೆರಿಕಕ್ಕೆ ಬಂದರು. ಹ್ಯಾಂಪಾ ಪಮನ್ ಮತ್ತು ಟೋನಿ ಫೆಲೋಫಾಕ್ಸ್ ಎಂಬವರ ಬಳಿ ಟೆನಿಸ್‍ನಲ್ಲಿ ತರಬೇತಿ ಪಡೆದರು. ಎಡಗೈ ಆಟಗಾರನಾದ ಈತ ಟೆನಿಸ್‍ನಲ್ಲಿ ತನ್ನದೇ ಆದ ಶೈಲಿಯನ್ನು  ಮೂಡಿಸಿದರು. 

ಜಾನ್ ಮೆಕೆನ್ರೋ  ನಾಲ್ಕು ಬಾರಿ ಅಮೆರಿಕ ಮುಕ್ತ ಟೆನಿಸ್ ಪ್ರಶಸ್ತಿಯನ್ನೂ (1979,1980,1981,1984), ಮೂರು ಬಾರಿ ವಿಂಬಲ್ಡನ್ ಪ್ರಶಸ್ತಿಯನ್ನೂ (1981,1983,1984) ಗಳಿಸಿದರು. ಪಿ. ಫ್ಲೆಮಿಂಗ್  ಜೊತೆಗೂಡಿ ನಾಲ್ಕು ಬಾರಿ ವಿಂಬಲ್ಡನ್ ಡಬಲ್ಸ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು (1979,1981,1983,1984). 1984ರ ವರ್ಷದಲ್ಲಿ ಈತ ಬರೆದ 82-3 ಅಂತರರಾಷ್ಟ್ರೀಯ  ಪಂದ್ಯಗಳ ಗೆಲುವಿನ ದಾಖಲೆ ಆತನ ಬಗ್ಗೆ ಬಹಳಷ್ಟು ಹೇಳುತ್ತೆ.

ಟೆನಿಸ್ ಕೋರ್ಟ್ನಲ್ಲಿ ಅತಿಯಾದ ವರ್ತನೆಗೆ ಪ್ರಸಿದ್ಧವಾಗಿದ್ದ ಜಾನ್ ಮೆಕೆನ್ರೋ  ಅನೇಕ ಬಾರಿ ದೊಡ್ಡ ಮೊತ್ತದ ದಂಡವನ್ನು ತೆತ್ತರು. ಖಾಸಗೀ ಜೀವನದಲ್ಲಿ ಸರಳ ವ್ಯಕ್ತಿಯಾದ ಈತ ತಾನು ಪ್ರೀತಿಸಿದ ಟೇಟಂ ಓನಿಯಲ್ ಎಂಬಾಕೆಯನ್ನು 1986ರಲ್ಲಿ ವಿವಾಹವಾದರು.  ಇವರಿಗೆ ಇಬ್ಬರು ಗಂಡು ಮಕ್ಕಳು. ಮೆಕೆನ್ರೊನ ಸಹೋದರ ಜಾನ್ ಪ್ಯಾಟ್ರಿಕ್ ಮೆಕೆನ್ರೊ ಕೂಡ ಖ್ಯಾತ ಟೆನಿಸ್ ಆಟಗಾರರಾಗಿದ್ದರು.

ನಾವು ಯಾರನ್ನು ಹುಚ್ಚರಾಗಿ ಆಡುತ್ತಾರೆ ಎನ್ನುತ್ತೇವೊ ಅವರೆಲ್ಲ ಹುಚ್ಚರೇ ಆಗಿರಬೇಕಿಲ್ಲ.  ಹುಚ್ಚು ಕೂಡಾ ಮುಖ್ಯ.  ತಾವು ಹುಚ್ಚರಲ್ಲ ಎಂದು ಜಗದ ಮುಂದೆ ಹೆಣಗುವುದರಲ್ಲೇ ನಮ್ಮ ಬದುಕು ಕಳೆದುಹೋಗುವುದು ದೊಡ್ಡ ವಿಪರ್ಯಾಸ.

On the birthday of greatest tennis star John McEnroe 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ