ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಪ್ರೀತಿಯ ಕರೆ ಕೇಳಿ


 ಪ್ರೀತಿಯ ಕರೆ ಕೇಳಿ ಆತ್ಮನ ಮೊರೆ ಕೇಳಿ 

ನೀ ಬಂದು ನಿಂದಿಲ್ಲಿ ದೀಪ ಹಚ್ಚ 
ನಲ್ಲ ನೀ ಬಂದಂದು ಕಣ್ಣಾರೆ ಕಂಡಂದು 
ಮನೆಯೆಲ್ಲ ಹೊಳೆದಂತೆ ದೀಪ ಹಚ್ಚ 

ಕರಿಗೆಜ್ಜೆ ಕುಣಿಸುತ್ತ ಕಣ್ಣೀರ ಮಿಡಿಯುತ್ತ 
ಇರುಳಾಕೆ ಬಂದಳು ದೀಪ ಹಚ್ಚ 
ಬಾನಿನಂಗಳದಲ್ಲಿ ಚುಕ್ಕಿ ಹೊಳೆ ಬೆಸೆವಂತೆ 
ನನ್ನ ಮನದಂಗಳದೀ ದೀಪ ಹಚ್ಚ 

ಪ್ರೀತಿಯ ಕರೆ ಕೇಳಿ ಆತ್ಮನ ಮೊರೆ ಕೇಳಿ 
ನೀ ಬಂದು ನಿಂದಿಲ್ಲಿ ದೀಪ ಹಚ್ಚ 

ಹಳೆ ಬಾಳು ಸತ್ತಿತ್ತು ಕೊಳೆ ಬಾಳು ಸುಟ್ಟಿತ್ತು 
ಹೊಸ ಬಾಳು ಹುಟ್ಟಿತ್ತು ದೀಪ ಹಚ್ಚ 
ಪ್ರೀತಿಯ ರತಿಗೆ ನೀ ಬೆಳಕಿನ ಆರತಿ 
ಬೆಳಗಿ ಕಣ್ಣಾರತಿ ದೀಪ ಹಚ್ಚ 

ಪ್ರೀತಿಯ ಕರೆ ಕೇಳಿ ಆತ್ಮನ ಮೊರೆ ಕೇಳಿ 
ನೀ ಬಂದು ನಿಂದಿಲ್ಲಿ ದೀಪ ಹಚ್ಚ 

ವಿಷ್ಣುಮೋಹಿತ ಚರಣ ವಿವಿಧ ವಿಶ್ವಾಭರಣ 
ಆನಂದದ ಕಿರಣ ದೀಪ ಹಚ್ಚ 
ನೀನೆಂಬ ಜ್ಯೋತಿಯಲಿ ನಾನೆಂಬ ಪತಂಗ 
ಸೋತ ಉಲಿ ಏಳಲಿ ದೀಪ ಹಚ್ಚ 
ನನ್ನಂತರಂಗದಿ ನಂದದೆ ನಿಂದೀಪ 
ನಂದಾದೀಪವಾಗಿರಲಿ ದೀಪ ಹಚ್ಚ 

ಪ್ರೀತಿಯ ಕರೆ ಕೇಳಿ ಆತ್ಮನ ಮೊರೆ ಕೇಳಿ 
ನೀ ಬಂದು ನಿಂದಿಲ್ಲಿ ದೀಪ ಹಚ್ಚ 
ನಲ್ಲೆ ನೀ ಬಂದಂದು ಕಣ್ಣಾರೆ ಕಂಡಂದು 
ಮನೆಯೆಲ್ಲ ಹೊಳೆದಂತೆ ದೀಪ ಹಚ್ಚ

ಸಾಹಿತ್ಯ: ಪರಮೇಶ್ವರ ಭಟ್ಟರು

Photo: At Lalbagh, Bengaluru on 8.2.2017


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ