ಭಾರತಕಥಾಮಂಜರಿ58
ಕುಮಾರವ್ಯಾಸನ
ಕರ್ಣಾಟ ಭಾರತ ಕಥಾಮಂಜರಿ
ಅರಣ್ಯಪರ್ವ - ಇಪ್ಪತ್ತೆರಡನೆಯ ಸಂಧಿ
ರಾಯನರಸಿಯ ಹಿಡಿದೆಳೆವ ರಿಪು
ರಾಯದಳವನು ಮಿರಿದು ಫಲುಗುಣ
ವಾಯುಜರು ಪರಿಭವಿಸಿ ಬಿಟ್ಟರು ಕಲಿಜಯದ್ರಥನ
ಕೇಳು ಜನಮೇಜಯ ಧರಿತ್ರೀ
ಪಾಲ ಲೆಕ್ಕಕೆ ಸಂದುದಟವೀ
ಪಾಳಿ ಪರಿಯಟಣ ಪ್ರಬಂಧಕೆ ವರುಷ ಹನ್ನೊಂದು
ಮೇಲೆ ಮೇಲೌಕುವ ವಿಪತ್ಕ
ಲ್ಲೋಲ ಕೋಳಾಹಲಿತ ಕಲುಷಕ
ರಾಳ ಕಾಲಾಂಬುಧಿಯನೀಸಾಡಿದರು ಬೇಸರದೆ ೧
ಸಿಂಧುದೇಶಕೆ ಬಂದನವನಿಪ
ಬಂಧ ಕೃತಿಯಲಿ ಬಳಿಕ ಬಿಡುಗಡೆ
ಯಂಧ ಭೂಪತಿಯಳಿಯ ಕೇಳಿದನಾ ಜಯದ್ರಥನು
ಅಂಧತೆಯನೇನೆಂಬೆನೈ ಪ್ರತಿ
ಬಂಧಕರು ಬೇಡೆನಲು ನಯದಭಿ
ಸಂಧಿಯಲಿ ಸೀವರಿಸಿ ಸಂವರಿಸಿದನು ಸೈನಿಕವ ೨
ನೆರಹಿದನು ಹದಿನಾರು ಸಾವಿರ
ಕರಿಘಟೆಯನೈವತ್ತು ಸಾವಿರ
ತುರಗವನು ಹದಿನಾಲ್ಕು ಸಾವಿರ ಕನಕಮಯ ರಥವ
ಚರಣ ಚೌಪಟರೈದು ಲಕ್ಷವ
ಬರಿಸಿದನು ಬಹುವಾದ್ಯರವದಿಕ್
ಶಿರವೊಡೆಯೆ ಸೂಳೈಸೆ ಮೇಳೈಸಿದನು ಮೋಹರವ ೩
ಜೀಯ ಭಾಸ್ಕರ ಭೌಮರಶುಭ
ಸ್ಥಾಯಿಗಳು ಗುರು ಮಂದರಭಿಭವ
ದಾಯಿಗಳು ವಿಪರೀತ ದೆಸೆ ಬುಧ ಶುಕ್ರ ರಾಹುಗಳ
ಯಾಯಿಗಳಿಗಪಜಯ ನಿವಾಸ
ಸ್ಥಾಯಿಗೊಳ್ಳಿತು ಚಿತ್ತವಿಸಿಯೆನೆ
ಜೋಯಿಸರ ಜವನಿಕೆಗೆ ಸಿಲುಕೆನೆನುತ್ತ ಹೊರವಂಟ ೪
ಉರಿಹೊಗೆಯ ದಿಕ್ಕಿನಲಿ ಹಕ್ಕಿಗ
ಳೊರಲಿದವು ಗೋಮಾಯುರವವ
ಬ್ಬರಿಸಿದುದು ದೆಸೆದೆಸೆಗಳಲಿ ಸೂಚಿಸಿತು ರಣಭಯವ
ದುರುಳನದ ಕೈಕೊಂಬನೇ ಕುರು
ನರಪತಿಯ ತತ್ಸಂಪ್ರದಾಯದ
ಗರುಡಿಕಾರನಲಾ ಚತುಷ್ಟಯ ದುಷ್ಟಮಂತ್ರಿಗಳ ೫
ಭರದ ಪಯಣದ ಮೇಲೆ ಪಯಣದ
ಲುರವಣಿಸಿ ನಡೆತಂದು ಪಾಂಡವ
ರರಸನಿಹ ವಿಮಲಾಶ್ರಮದ ವಿಪಿನೋಪಕಂಠದಲಿ
ಹರಹಿದವು ಗುಡಿ ಗಜಹಯದ ಮಂ
ದಿರ ರಚನೆ ರಹಿಯಾಯ್ತು ಬಿಟ್ಟನು
ಕುರುನೃಪಾಲನ ಮೈದುನನು ಭೂಪಾಲ ಕೇಳೆಂದ ೬
ಏನ ನೆನೆದನೊ ದುಷ್ಟಮಂತ್ರ ವಿ
ತಾನ ದೀಕ್ಷಿತ ಕಳುಹಿದನು ಮದ
ನಾನುರಾಗದಲಾಭರಣವನುಲೇಪನಾದಿಗಳ
ಸಾನುನಯದಲಿ ಪಾಂಡುಪುತ್ರರ
ಮಾನಿನಿಗೆ ಕೊಡಿ ನಿರ್ಜನದೊಳಬು
ಜಾನನೆಯ ಸೇರಿಸುವುದೆಮಗೆಂದಟ್ಟಿದನು ಚರರ ೭
ಬನದೊಳಡಗಿದರವರು ಕುಂತೀ
ತನುಜರೈವರು ಬೇಂಟೆಯಾಡಲಿ
ನೆನೆದು ಧೌಮ್ಯನಬುಜಮುಖಿಯಾಶ್ರಮದ ಕಾಹಿನಲಿ
ಮುನಿಜನಂಗಳ ನಿಲಿಸಿ ಕೊಂಡರು
ಧನುವ ಬೆಂಬತ್ತಳಿಕೆಗಳ ನೃಪ
ಜನ ಲಲಾಮರು ಬನ ಬನದೊಳರಸಿದರು ಮೃಗಕುಲವ ೮
ಹೋದರವರತ್ತಲು ವಿಕಾರ ವಿ
ನೋದ ಶಿಲನ ಶಿಷ್ಟರುಬ್ಬಟೆ
ಬೀದಿವರಿದುದು ಪರ್ಣಶಾಲೆಗೆ ಬಂದರಂಗನೆಯ
ಆದರಿಸಿ ಮುನಿಜನವನೊಯ್ಯನೆ
ಕೈದುಗಳ ಹೊರಗಿರಿಸಿ ದೂರದ
ಲಾದುರಾತ್ಮರು ಕಂಡು ಮೈಯಿಕ್ಕಿದರು ಮಾನಿನಿಗೆ ೯
ದೇವಿ ಚಿತ್ತೈಸುವುದು ನಿಮ್ಮಯ
ಭಾವ ಕೌರವ ನೃಪನ ಮೈದುನ
ಭಾವಿಸಲು ದುಸ್ಸಳೆಯ ರಮಣನು ಕಲಿ ಜಯದ್ರಥನು
ಈ ವಿವಿಧ ರತ್ನಾಭರಣ ಪ
ಟ್ಟಾವಳಿಯನನುಲೇಪನಾದಿಯ
ಪಾವುಡವನವಧರಿಸಬೇಕೆಂದಿಳುಹಿದರು ಮುಂದೆ ೧೦
ಎಸೆವಳೇ ದುಸ್ಸಳೆ ಜಯದ್ರಥ
ಕುಶಲನೇ ಪಾವುಡವ ನೀವೊ
ಪ್ಪಿಸುವುದೊಡೆಯರ ಮುಂದೆ ಬಿಜಯಂಗೈವರೀಕ್ಷಣಕೆ
ಶಿಶುಗಳಾವೆಮಗೀ ಸ್ವತಂತ್ರದ
ಯೆಸಕವೆಲ್ಲಿಯದಕಟ ವಸ್ತು
ಪ್ರಸರವೆಮಗೇಕೆನುತ ನುಡಿದಳು ನಗುತ ನಳಿನಾಕ್ಷಿ ೧೧
ನಾರಸೀರೆಯನುಡುವೆನೆಮಗಾ
ಹಾರವೇ ಫಲಮೂಲತತಿ ಶೃಂ
ಗಾರವೆಮಗೆ ಪತಿವ್ರತಾಗುಣವಲ್ಲದಿತರದಲಿ
ಸೇರುವುದೆ ಮನವಿದನು ಪಾಂಡುಕು
ಮಾರರಿಗೆ ತೋರಿಸುವುದೈ ಬೀ
ಡಾರವನು ಬಿಡಿ ಬೇರೆ ವನದೊಳಗೆಂದಳಿಂದುಮುಖಿ ೧೨
ತಾಯೆ ನೀವಿವನೊಪ್ಪುಗೊಂಬುದು
ರಾಯ ಬಡವನೆ ಮತ್ತೆ ಪಾಂಡವ
ರಾಯರಿಗೆ ಪಾವುಡವನಟ್ಟುವನಿದನುಪೇಕ್ಷಿಸದೆ
ಆಯತಾಂಬಕಿ ತೆಗೆಸಿಯೆನೆ ನುಡಿ
ಯಾರಸವಿದೇಕೆನುತ ದೂತರ
ನಾ ಯುವತಿ ಜರಿದೊಳಗೆ ಹೊಕ್ಕಳು ತಳಿರ ಮಂಟಪವ ೧೩
ಮುಸುಳಿತವದಿರ ಮೋರೆ ಕಾರ್ಯದ
ಬೆಸುಗೆ ಹತ್ತದೆ ಸತಿಯ ನುಡಿಯಲಿ
ರಸವ ಕಾಣದೆ ಭೀತಿಯಲಿ ಮರಳಿದರು ಪಾಳೆಯಕೆ
ಉಸುರಲಮ್ಮೆವು ಜೀಯ ಸೋಲಳು
ಶಶಿವದನೆಗುಣಸಾಮದಲಿ ಸಾ
ಧಿಸುವುದರಿದೆನೆ ತಾನೆ ನೋಡುವೆನೆನುತ ಹೊರವಂಟ ೧೪
ಹೆಗಲ ಹಿರಿಯುಬ್ಬಣ ಕಠಾರಿಯ
ಬಿಗಿದುಡಿಗೆ ರತ್ನಾಭರಣ ಝಗ
ಝಗಿಸೆ ಝಣ ಝಣರವದ ರಭಸದ ಖಡಿಯ ಮಿಗೆ ಮೆರೆಯೆ
ಒಗುವ ಸಾದು ಜವಾದಿ ಕತ್ತುರಿ
ಯಗರು ಪರಿಮಳದಂಗಸಾರದ
ವಿಗಡ ಹೊಕ್ಕನು ಬನವನಾ ಪಾಂಚಾಲಿಯಾಶ್ರಮವ ೧೫
ತೊಲಗಿದುದು ಮುನಿನಿಕರವೀತನ
ಸುಳಿವ ಕಂಡು ಸುತೇಜದಲಿ ಖಳ
ತಿಲಕ ಬಂದನು ಪರ್ಣಶಾಲೆಯ ಮುಖದ ಮಂಟಪಕೆ
ಲಲನೆಯೊಳಹೊಗಲೊಡನೆ ಹೊಕ್ಕನು
ನಳಿನಮುಖಿ ಬಂದವ ಜಯದ್ರಥ
ನಳುಕಲೇಕೌ ದ್ರೌಪದಿಯೆ ನೀನೆನುತ ಮಂಡಿಸಿದ ೧೬
ಬೆದರಲೇತಕೆ ನಮ್ಮ ನಾದಿನಿ
ಮದವಳಿಗೆ ನೀನಾದರೊಡಹು
ಟ್ಟಿದನು ನೀನಹೆಯೆನಗೆ ನಿನ್ನಲಿ ಬೇರೆ ಭಯವೇನು
ಸದನವಿದು ಪತಿಶೂನ್ಯ ತಾನೆಂ
ಬುದು ಪತಿವ್ರತೆಯಲ್ಲಿಯನುಚಿತ
ವಿದು ವಿಚಾರವ ಬಲ್ಲೆ ನೀನೆಂದಳು ಸರೋಜಮುಖಿ ೧೭
ಆಹಹ ಪಾತಿವ್ರತ್ಯವತಿಸ
ನ್ನಿಹಿತವಲ್ಲಾ ನಿನಗೆ ಹಲಬರ
ಮಹಿಳೆ ಸತಿಯೆನಿಸುವೊಡೆ ಸೂಳೆಯರೇಕ ಪುರುಷರಲಿ
ವಿಹರಿಸುವರೇ ಲೋಕಧರ್ಮದ
ರಹಣಿ ರಹಿಸುವುದೈಸಲೇ ನಮ
ಗಿಹುದು ಮತವಲ್ಲದಿರೆ ಮಾಣಲೆನುತ್ತ ಮುರಿದೆದ್ದ ೧೮
ತರಳೆ ಮಿಗೆ ತಲ್ಲಣಿಸಿ ತಳಿರೋ
ವರಿಯ ಹೊಗುತಿರಲಟ್ಟಿ ಮೇಲುದ
ಬರಸೆಳೆದು ತುರುಬಿಂದೆ ಹಾಯ್ದನು ಹಿಡಿದು ಕುಸುಬಿದನು
ಒರಲಿದಳು ಹಾ ಭೀಮ ಹಾನೃಪ
ವರ ಧನಂಜಯ ಹಾಯೆನುತ ಕಾ
ತರಿಸೆ ಕಮಲಾನನೆಯ ಕಂಠವನವಚಿ ಹೊರವಂಟ ೧೯
ರಾಣಿವಾಸವಲಾ ಯುಧಿಷ್ಠಿರ
ನಾಣೆ ಬಿಡು ಬಿಡುಯೆನುತ ಸುಜನ
ಶ್ರೇಣಿಯಡ್ಡೈಸಿದರೆ ಬೀಸಿದನವನು ಖಂಡೆಯವ
ರಾಣಿ ನಡೆನಡೆ ನಮಗೆ ಪಾಂಡವ
ರಾಣೆಯಿಟ್ಟರು ಮುನಿಗಳಿಲ್ಲಿರ
ಲಾಣೆ ತಪ್ಪುವುದೆನುತ ಹೊರವಂಡಿಸಿದನಾಶ್ರಮವ ೨೦
ಒಡನೆ ಬಂದನು ಧೌಮ್ಯಮುನಿ ಮೊರೆ
ಯಿಡುತ ಘನ ರಕ್ಷೋಘ್ನಸೂಕ್ತವ
ನಡಿಗಡಿಗೆ ಜಪಿಸುತ ಜಯದ್ರಥ ಬೇಡಬೇಡೆನುತ
ಮಿಡುಕದೈತರಲೌಕಿ ಹೊಕ್ಕನು
ಪಡೆಯ ಮಧ್ಯದ ರಥವನೇರಿಸಿ
ನಡೆದನವ ಸೂಟಿಯಲಿ ತಾಟಿಸಿ ರಥದ ವಾಜಿಗಳ ೨೧
ಚೆಲ್ಲಿತೀ ಮುನಿಯೂಥ ದೆಸೆದೆಸೆ
ಗೆಲ್ಲ ಹರಿದುದು ಬಾಯ ಮೊರೆಗಳ
ಪಲ್ಲವದ ಪಾಣಿಗಳ ಸೂಸುವ ಸಮಿಧೆ ಬರ್ಹಿಗಳ
ತಲ್ಲಣದ ತೋಪಿನ ವಿಷಾದದ
ವಲ್ಲರಿಯ ಹೂದೊಡಬೆಗಳ ಹೊ
ಯ್ವಳ್ಳೆಗಳ ಮುನಿಜನವ ಕಂಡರು ಪಾಂಡುನಂದನರು ೨೨
ಏನು ಗಜಬಜ ಋಷಿಜನಂಗಳಿ
ಗೇನಪಾಯವೊ ನಮ್ಮ ಬನದಲಿ
ದಾನವರ ದುರ್ಘಟದ ದುರ್ನಯವಲ್ಲಲಾಯೆನುತ
ಆ ನರೇಂದ್ರ ಮನೋಹರದ ಮೃಗ
ಯಾ ನಿರೂಢಿಯ ಬಿಸುಟು ಬಂದನಿ
ದೇನಿದೇನೂಳಿಗವೆನುತ ಬೆಸಗೊಂಡನವರುಗಳ ೨೩
ಹೇಳಲಮ್ಮೆವು ಜೀಯ ಸಿಂಧು ನೃ
ಪಾಲ ದಶಮುಖನಾದನಾ ಪಾಂ
ಚಾಲೆ ಜಾನಕಿಯಾದಳಿಂದಿನ ರಾಜಕಾರ್ಯವಿದು
ಮೇಲೆ ರಾಘವತನದ ತೋಟಿಯ
ತೋಳ ಬಿಂಕವು ನಿಮ್ಮದೆನೆ ನರ
ಪಾಲನಾಜ್ಞೆಯಲಂದು ಹರಿದರು ಭೀಮ ಫಲುಗುಣರು ೨೪
ಐದುವಡೆ ಮೆಣ್ಮಂತ್ರಸಿದ್ಧಿಯ
ಕೈದು ಮನೆಯಲಿ ಬೇಂಟೆಕಾರರ
ಕೈದು ಕೈಯಲಿ ಸಮಯವಲ್ಲ ಮಹಾಸ್ತ್ರಕರ್ಷಣಕೆ
ಮೈದುನನ ಮೈಸರಸಕೀ ಹುಲು
ಗೈದು ಸಾಲದೆ ತಂಗಿ ದುಶ್ಶಳೆ
ಯೈದೆತನ ಬಯಲಾಯ್ತೆನುತ ಬೆಂಬತ್ತಿದರು ಖಳನ ೨೫
ಕಂಡರಡವಿಯಲವನನೆಲವೋ
ಭಂಡ ಫಡ ಹೋಗದಿರೆನುತ ಕೈ
ಗೊಂಡು ಸುರಿದರು ಸರಳನಾ ಪಿಂಗಳಿಯ ಸೇನೆಯಲಿ
ಭಂಡರಿವದಿರು ತಾವು ಕಡುಹಿನ
ಖಂಡೆಯದ ಸಿರಿವಂತರಿವರು
ದ್ದಂಡ ಭಟರೆನುತಾ ಜಯದ್ರಥ ನಿಲಿಸಿದನು ಬಲವ ೨೬
ಸೆರೆ ಸಹಿತ ತಾನೈದುವೆನು ನಿಜ
ಪುರವ ನೀವಾನುವುದು ಭೀಮನ
ನಿರಿವುದರ್ಜುನನೊಡನೆ ನಿಮಗುಗ್ಗಡದ ಸಮರವಿದು
ಇರಿತಕಂಜದ ಸ್ವಾಮಿಕಾರ್ಯದ
ಹೊರಿಗೆಯುಳ್ಳ ನವಾಯ ಬಿರುದಿನ
ಮುರುಕವುಳ್ಳ ಭಟಾಳಿ ನಿಲುವುದು ತಡೆವುದರಿಭಟರ ೨೭
ಎಂದು ವಾಘೆಯ ಕೊಂಡು ರಥವನು
ಮುಂದೆ ದುವ್ವಾಳಿಸಿದನಿತ್ತಲು
ಹಿಂದೆ ನಿಂದುದು ಗಜ ರಥಾಶ್ವ ಪದಾತಿ ಚತುರಂಗ
ಇಂದುಮುಖಿಯಿಹ ತೇರು ಹಾಯ್ದುದು
ಮುಂದೆ ಹೊಳ್ಳುಗರಡ್ಡವಿಸಿದರೆ
ಬಂದ ಹೊಲ್ಲೆಹವೇನೆನುತ ಹೊಕ್ಕೆಚ್ಚನಾ ಪಾರ್ಥ ೨೮
ಮುರಿದು ಮರನನು ಭೀಮನಹಿತರ
ನೊರಸಿದನು ಮಲೆತಾನೆಗಳ ಹೊ
ಕ್ಕುರುಬಿದನು ತುರುಗಿದನು ಭಟ್ಟರಭ್ರದ ವಿಮಾನದಲಿ
ಜುರಿತಡಗಿನಿಂಡೆಗಳ ಮೆದುಳಿನ
ನಿರಿಗರುಳ ನೆಣವಸೆಗಳಲಿ ಜಿಗಿಯಲಿ
ಮೆರೆದುದಾಮರನಲ್ಲಿ ತಳಿತುದು ಹೂತುದೆಂಬಂತೆ ೨೯
ಸಾಯಲಾರದೆ ಸುಭಟವರ್ಗವ
ಕಾಯಲಿರಿಸಿದೆ ಭಟರ ತಲೆಗಳು
ಬೀಯವಾದವು ಮತ್ತೆ ರಪಣವ ತೋರಿನಾ ರಣಕೆ
ರಾಯ ರಂಗವನೆತ್ತ ಬಲ್ಲೆ ನಿ
ಜಾಯುಧವ ಹಿಡಿ ನಿನ್ನ ಬಿರುದಿನ
ಬಾಯಲೆರೆವುದು ಮಧುವನೆನುತುರವಣಿಸಿದನು ಭೀಮ ೩೦
ಧನುವ ಕೊಂಡನು ಸರಳ ಸಾರದ
ಲನಿಲಜನ ಮುಸುಕಿದನು ಪಾರ್ಥನ
ಮೊನೆಗಣೆಯ ತರಿದಟ್ಟಿ ಬೊಬ್ಬಿರಿದನು ಜಯದ್ರಥನು
ತನ ತನಗೆ ಸೈಂಧವನ ಬೆಂಗಾ
ಹಿನ ಭಟರು ಭಾರಣೆಯಲೈದಿದ
ರನಿತುವನು ನಿಮಿಷದಲಿ ನಿರ್ಣೈಸಿದನು ಕಲಿಪಾರ್ಥ ೩೧
ಅಂಜದಿರು ಕಮಲಾಕ್ಷಿ ಧೌಮ್ಯನಿ
ರಂಜನನ ಸುತಿವಾಕ್ಯವೇ ಪವಿ
ಪಂಜರವಲೇಯೆನುತ ಹಾಯ್ದನು ಪವನಸುತ ರಥಕೆ
ಕುಂಜರವು ಕೈಯಿಕ್ಕೆ ನಿಲುಕದೆ
ಕಂಜವನವನಿಲಜನ ಝಾಡಿಯ
ಜಂಜಡಕೆ ದಿಟ್ಟನೆ ಜಯದ್ರಥನರಸ ಕೇಳೆಂದ ೩೨
ಸೆಳೆದಡಾಯುಧವಾತನೀತನ
ನಿಲುಕಿಹೊಯ್ದನು ದಂಡೆಯಿಂದದ
ಕಳಚಿ ಮಾರುತಿ ಹೊಕ್ಕೊಡವ ಚಿಮ್ಮಿದನು ಚೀಲಯವ
ಖಳನ ಬಾಹುವನೊದೆದು ತುರುಬಿಗೆ
ನಿಲುಕಿ ಕುಸುಬಿದನವನ ಗೋಣಿನ
ಲಲಗ ಹೂಡಲು ಕಂಡನರ್ಜುನನಾ ವೃಕೋದರನ ೩೩
ಭೀಮ ಬಿಡಿಸದಿರವನ ಗಂಟಲ
ನೀ ಮದಾಂಧನನೊಯ್ದು ಕೆಡಹುವ
ಭೂಮಿಪತಿಯಂಘ್ರಿಯಲಿ ಕಾಯಲಿ ಮುನಿದು ಮೇಣ್ಕೊಲಲಿ
ತಾಮಸನ ಬಿಗಿಯೆನಲು ನಗುತು
ದ್ದಾಮನೆಂದನು ಕೊಲುವೆನೆಂದೇ
ಕಾಮಿಸಿದೆನೈ ಪಾರ್ಥಕೆಡದೇಯೆನ್ನ ಸಂಕಲ್ಪ ೩೪
ನೆನೆಯದಿರು ಸಂಕಲ್ಪ ಹಾನಿಯ
ನನುಚಿತಕೆ ಮನಮಾಡದಿರು ಮಾ
ನಿನಿಯಿರಲಿ ರಥದಿಂದ ಕುನ್ನಿಯ ಕೆಡಹುಧಾರುಣಿಗೆ
ಮುನಿಪನೇರಲಿ ರಥದ ವಾಜಿಯ
ನನುಗೊಳಿಸಿ ಸಾರಥ್ಯದಲಿ ಬರ
ಲೆನುತ ಭೀಮನ ಮನದ ಖತಿಯನು ಬಿಡಿಸಿದನು ಪಾರ್ಥ ೩೫
ವೈರಿ ಬಾಹುದ್ವಯವ ಬದ್ದುಗೆ
ದಾರದಲಿ ಕಟ್ಟಿದನು ನಾರೀ
ಚೋರ ನಡೆನಡೆಯೆನುತ ತಿವಿದನು ಬಿಲ್ಲಕೊಪ್ಪಿನಲಿ
ಕೌರವೇಂದ್ರನ ಮತವೊ ನಿನ್ನ ವಿ
ಕಾರವೋ ಹೆಂಗಳ್ಳ ವಿದ್ಯೆಯ
ನಾರು ಕಲಿಸಿದರೆನುತ ತಂದರು ಧರ್ಮಜನ ಹೊರೆಗೆ ೩೬
ಸಿಂಧು ಭೂಪನಲಾ ಭುಜಾಗ್ರದ
ಬಂಧನವ ಬಿಡು ಭೀಮ ಶಿವಶಿವ
ನೊಂದನೈ ನಿಷ್ಕರುಣಿಗಳು ನೀವೆಂದನವನೀಶ
ಕೊಂದು ಬಿಸುಡುವ ನೇಮ ಕಂದ
ರ್ಪಾಂಧಕನನುಳುಹುವೊಡೆ ತನಗಿ
ನ್ನಿಂಧನವ ಹೂಡಿಸುವುದೈಸಲೆಯೆಂದನಾ ಭೀಮ ೩೭
ಹದನಿದೊಳ್ಳಿತು ತಂಗಿ ವೈಧ
ವ್ಯದಲಿ ನವೆಯಳೆ ಸುಬಲನಂದನೆ
ಯುದ್ದರ ಕುಂತೀದೇವಿಯುದರಕೆ ಭಿನ್ನಭಾವನೆಯೆ
ಕದನದಲಿ ಹಿಡಿವಡೆದವರ ಕೊಲು
ವುದು ನರೇಂದ್ರರ ಧರ್ಮವಲ್ಲಿ
ನ್ನಿದರ ಮೇಲಾವರಿಯೆವೆಂದನು ಧರ್ಮನಂದನನು ೩೮
ಈತನಳಿಯದೆ ಮತ್ಪ್ರತಿಜ್ಞಾ
ಖ್ಯಾತಿ ಮಸುಳದೆ ತಿದ್ದುವನುವನು
ಭೂತಳಾಧಿಪ ನೀವು ಬೆಸಸುವುದೆನಲು ಮುನಿಜನವ
ಆತನೋಡಿದ ನಾವುದಿದಕನು
ನೀತಿಯೆನೆ ಧೌಮ್ಯಾದಿ ಸುಜನ
ವ್ರಾತ ನಿಶ್ಚೈಸಿದರು ಮನದಲಿ ಧರ್ಮನಿರ್ಣಯವ ೩೯
ಮಾನಧನರಿಗೆ ವಧೆಯೆನಿಪುದಭಿ
ಮಾನಭಂಜನವಿವನು ಕಟ್ಟಭಿ
ಮಾನಿ ಭಂಗಿಸಿ ಬಿಟ್ಟೊಡೀತಂಗಿದುವೆ ಮರಣವಲ
ಈ ನುಡಿಯ ಸಲಿಸಿದೊಡೆ ಇವನಪ
ಮಾನಹತವಿದು ಧರ್ಮನಿಶ್ಚಯ
ವೇನು ಸಂಶಯವಿಲ್ಲೆನುತ ನುಡಿದುದು ಮುನಿಸ್ತೋಮ ೪೦
ಅಹುದೆನುತ ಕಲಿಭೀಮ ಮಾಡಿದ
ರಹವನದನೇನೆಂಬೆನೈ ಕೂ
ರಿಹಕಠಾರಿಯ ಹಣಿಗೆಯಲಿ ಬಾಚಿದನು ಸಿರಿಮುಡಿಯ
ಅಹಿತಶಿರವಿದೆಲಾಯೆನುತ ಗೃಹ
ಮಹಿಳೆಯರು ವಿಹಿತಾಂಗುಲಿಯ ಸಂ
ಪ್ರಹರಣದಿ ಪರಿಭವಿಸಿದರು ಘೊಳ್ಳೆನಲು ನಿಖಿಳ ಜನ ೪೧
ಬಿಟ್ಟರೀತನ ತೋಳ ಹಿಂಗೈ
ಗಟ್ಟುಗಳ ನೆಲೆ ಕುನ್ನಿ ಹೋಗೆನೆ
ಕೆಟ್ಟಕೇಡದನೇನ ಹೇಳುವೆನಾ ಜಯದ್ರಥನ
ಬೆಟ್ಟದಿಂದುರುಳುವೆನೊ ಹಾಸರೆ
ಗಟ್ಟಿಹೊಗುವೆನೊ ಮಡುವನೆನುತಡಿ
ಯಿಟ್ಟನಂತಃಕಲುಷ ಚಿತ್ತ ದುರಂತ ಚಿಂತೆಯಲಿ ೪೨
ಚಿಂತಿಸಿದೊಡೇನಹುದು ಹೊಗುವೆನು
ಕಂತು ಮಥನನ ಮರೆಯನಿವದಿರಿ
ಗಂತಕನು ತಾನಹೆನು ಗೆಲುವೆನು ಬಳಿಕ ಬವರದಲಿ
ಭ್ರಾಂತಿಯೇ ಬಿಡು ತನ್ನನೆನುತ ಪು
ರಾಂತಕ ಧ್ಯಾನದಲಿ ವಿಮಲ
ಸ್ವಾಂತನೇಕಾಗ್ರದಲಿ ಭಜಿಸಿದನಿಂದುಶೇಖರನ ೪೩
ಇವನ ನಿಷ್ಠೆಗೆ ಮೆಚ್ಚಿ ಗೌರೀ
ಧವನು ಮೈದೋರಿದನು ರಾಜ
ಪ್ರವರ ಕೊಟ್ಟೆನು ಬೇಡು ಸಾಕು ಭವನ್ಮನೋರಥವ
ವಿವರಿಸೆನೆ ಕಂದೆರೆದು ಮುಂದಿಹ
ಶಿವನ ಕಂಡನು ಮೈಯ ಚಾಚಿದ
ನವನಿಯಲಿ ಜಯ ಜಯ ಮಹೇಶ ನಮಃ ಶಿವಾಯೆನುತ ೪೪
ವರದನಾದೈ ಶಂಭು ಕರುಣಾ
ಕರ ಹಸಾದವು ಪಾಂಡು ಸುತರೈ
ವರನು ದಿನವೊಂದರಲಿ ಗೆಲುವುದು ತನಗಭೀಷ್ಟವಿದು
ಕರುಣಿಸೈತನಗೆನಲು ನಕ್ಕನು
ಗಿರಿಸುತೆಯ ಮೊಗ ನೋಡಿ ಭಾರಿಯ
ವರವ ವಿವರಿಸಿದನು ಜಯದ್ರಥನೆಂದನಿಂದುಧರ ೪೫
ಪಾಶುಪತಶರವೆನ್ನ ಸತ್ವ ವಿ
ಳಾಸವದೆ ಫಲುಗುಣನ ಕೈಯಲಿ
ವಾಸವಾಬ್ಜಭವಾದಿ ಬಿರುದರ ಬಗೆಯದಾಹವಕೆ
ಆ ಸುಭಟನೊಬ್ಬನನುಳಿಯೆ ಮಿ
ಕ್ಕೇಸು ಪಾಂಡವರುಗಳನೊಂದೇ
ವಾಸರದೊಳವಗಡಿಸು ಹೋಗೆಂದನು ಮಖಧ್ವಂಸಿ ೪೬
ಸಾಕು ಜೀಯ ಹಸಾದವೆಂದವಿ
ವೇಕನಿಧಿ ಬೀಳ್ಕೊಂಡನೀಶನ
ನೀ ಕುಮಾರರು ವನದೊಳಿರ್ದರು ಖತಿಯ ಭಾರದಲಿ
ನೂಕು ನೂಕಾಡುವ ವಿಪತ್ತಿನ
ವೈಕೃತಿಗೆ ನಾನೊಬ್ಬನೇ ದಿಟ
ವಾಕೆವಾಳನೆ ಶಿವಶಿವಾಯೆಂದರಸ ಬಿಸುಸುಯ್ದ ೪೭
ಬಂದ ಮಾರ್ಕಂಡೇಯ ಮುನಿಗಭಿ
ವಂದಿಸಿದನೀ ಬ್ರಹ್ಮಸೃಷ್ಟಿಯ
ಲಿಂದು ತಾನಲ್ಲದೆ ಸುಧಾಕರ ಸೂರ್ಯವಂಶದಲಿ
ಹಿಂದೆ ನವೆದವರಾರು ಪರಿಭವ
ದಿಂದ ನಮ್ಮಂದದಲಿ ವಿಪಿನದೊ
ಳಿಂದುಮುಖಿಯರು ಭಂಗಬಿಟ್ಟರೆಯೆನುತ ಬಿಸುಸುಯ್ದ ೪೮
ಎನಲು ನಕ್ಕನು ಮುನಿಪನವನಿಪ
ಜನಶಿರೋಮಣಿ ಕೇಳು ನಿಮ್ಮೀ
ಬನದೊಳಬುಜಾನನೆಯನೊಯ್ದನಲೇ ಜಯದ್ರಥನು
ಅನುಜರಾಗಳೆ ಹರಿದು ಮರಳಿಚಿ
ವನಜ ಮುಖಿಯನು ತಂದರವನನು
ನೆನೆಯ ಬಾರದ ಭಂಗ ಬಿಡಿಸಿದರೆಂದನಾ ಮುನಿಪ ೪೯
ಅರಸ ಮರುಗದಿರಾವ ಪಾಡಿನ
ನರಪತಿಗಳೈ ನೀವು ವಿಶ್ವಂ
ಭರನ ಘನತೆಯ ಕೇಳಿದರಿಯಾ ಕೈಟಭಾಂತಕನ
ವರಮುನಿಯ ಶಾಪವನು ತಾನೇ
ಧರಿಸಿ ನರರೂಪಿನಲಿ ನವೆದುದ
ನರಸ ಬಣ್ಣಿಸಲೆನ್ನ ಹವಣಲ್ಲೆಂದನಾ ಮುನಿಪ ೫೦
ಅಡವಿಯಲಿ ತೊಳಲಿದನು ರಾಮನ
ಮಡದಿಯನು ರಕ್ಕಸನು ಕದ್ದನು
ಬಿಡಿಸಿ ಬಳಿಕರಸಿದನು ರಾಣೀವಾಸವನು ಕೂಡೆ
ಕಡಲ ಮಧ್ಯದ ಖಳನೊಡನೆ ಕೈ
ದುಡುಕಲಲ್ಲಿಗೆ ತೆತ್ತಿಗರು ನಾ
ಡಡವಿಗೋಡಗವಾಳು ಕುದುರೆಗಳಸರುವಿಗ್ರಹಕೆ ೫೧
ಸಾಗರದ ತೆರೆಗಳಲಿ ಗಿರಿಗಳ
ತೂಗಿ ಸೇನೆಯ ನಡೆಸಿ ದಶಶಿರ
ನಾಗ ಹಿಂಗಿಸಿ ರಾಮ ರಮಣಿಯ ಬಿಡಿಸಿದಾಯಸವ
ಈಗಳೀ ನರರೇನನಾನುವ
ರಾ ಗರುವ ರಘುರಾಮ ವಜ್ರಕೆ
ಬೇಗಡೆಯ ವಿಧಿಮಾಡಿತೆಂದನು ಮುನಿ ನೃಪಾಲಂಗೆ ೫೨
ಎಂದು ರಾಮಾಯಣವ ವಿಸ್ತರ
ದಿಂದ ಹೇಳಿದು ಸಂತವಿಟ್ಟನು
ಕಂದು ಕಸರಿಕೆಯಡಗಿತಾ ಧರ್ಮಜನ ಚಿತ್ತದಲಿ
ಸಂದಣಿಸೆ ತನುಪುಳಕ ಪರಮಾ
ನಂದರಸಮಯ ನಯನಜಲ ಭರ
ದಿಂದಲೆಸೆದರು ವೀರನಾರಾಯಣನ ಕರುಣದಲಿ ೫೩
ಸಂಕ್ಷಿಪ್ತ ಭಾವ
ಜಯದ್ರಥನು ದ್ರೌಪದಿಯನ್ನು ಅಪಹರಿಸಿ ಪರಿಭವಕ್ಕೆ ಒಳಗಾದದ್ದು.
ಪಾಂಡವರ ವನವಾಸ ಹಾಗೆಯೇ ಮುಂದುವರಿದು ಹನ್ನೊಂದು ವರ್ಷಗಳು ಕಳೆದವು. ಈ ಮಧ್ಯೆಧೃತರಾಷ್ಟ್ರನ ಅಳಿಯ ಜಯದ್ರಥನು ಪಾಂಡವರು ಇದ್ದ ಆಶ್ರಮದ ಹತ್ತಿರ ಬಿಡಾರವನ್ನು ಮಾಡಿಕೋಲಾಹಲವೆಬ್ಬಿಸಿದನು. ದುಷ್ಟನಾದ ಅವನು ದ್ರೌಪದಿಗಾಗಿ ಶೃಂಗಾರಸಾಮಗ್ರಿಗಳನ್ನುಕಳಿಸಿಕೊಟ್ಟನು. ಪಾಂಡವರು ಇಲ್ಲದ ವೇಳೆ ನೋಡಿ ಕೊಡಿರೆಂದನು.
ಪಾಂಡವರು ಮುನಿಗಳನ್ನು ದ್ರೌಪದಿ ಮತ್ತು ಆಶ್ರಮದ ಕಾವಲಿಗೆ ನಿಲ್ಲಿಸಿ ಬೇಟೆಗೆ ತೆರಳಿದರು. ಇತ್ತಜಯದ್ರಥನ ಕಡೆಯವರು ಬಂದು ದ್ರೌಪದಿಯನ್ನು ಕಂಡು ಸಾಮಗ್ರಿಗಳನ್ನು ಇಳಿಸಿದರು. ಎಲ್ಲರಕುಶಲ ವಿಚಾರಿಸಿದ ದ್ರೌಪದಿ ಇವುಗಳನ್ನು ತಾನು ಸ್ವೀಕರಿಸುವುದಿಲ್ಲವೆಂದೂ ಪತಿಗಳುಬಂದನಂತರ ಅವರೊಡನೆ ಮಾತನಾಡಿರಿ ಎಂದೂ ಹೇಳಿದಳು. ಅವರು ಹೋಗಿ ಜಯದ್ರಥನಿಗೆಸಂಗತಿ ಹೇಳಲು ಅವನು ತಾನೇ ಹೊರಟನು.
ಅವನು ಬಂದ ರಭಸಕ್ಕೆ ಮುನಿಗಳು ಬೆದರಿದರು. ದ್ರೌಪದಿಯು ಇವನ ನಡೆ ಅನುಚಿತವೆಂದೂ, ಪತಿವ್ರತೆಯನ್ನು ಕೆಣಕಬಾರದೆಂದೂ ಹೇಳಿದರೆ ಕೇಳಲಿಲ್ಲ. ಅವನು ಅವಳನ್ನು ಬಲವಂತದಿಂದಹೊತ್ತು ಹೊರಟ. ಮುನಿಗಳೆಲ್ಲರೂ ದೆಸೆದೆಸೆಗೆ ಹೊರಟು ಪಾಂಡವರನ್ನು ಕಂಡು ವಿಷಯವನ್ನುಹೇಳಲು ಭೀಮಾರ್ಜುನರು ತಕ್ಷಣ ಹೊರಟರು.
ಜಯದ್ರಥನನ್ನು ಹುಡುಕಿ ನಿಲ್ಲಿಸಿದ ಪಾರ್ಥ ರಥ ಮುಂದೆ ಹೋಗದಂತೆ ತಡೆದ. ಮರಗಳನ್ನೆಆಯುಧ ಮಾಡಿಕೊಂಡ ಭೀಮ ಶತ್ರುಗಳನ್ನು ಹೊಡೆದುರುಳಿಸಿದ. ಘನಘೋರ ಯುದ್ಧವಾಯಿತು. ಇವನನ್ನು ಕೊಲ್ಲದಿರು, ಅಣ್ಣನ ಬಳಿಗೆ ಸೆರೆಹಿಡಿದು ಕರೆದೊಯ್ಯುವಾ ಎಂದು ಅರ್ಜುನ ಭೀಮನಿಗೆಹೇಳಿ ಹಾಗೆಯೇ ಮಾಡಿದರು. ದ್ರೌಪದಿಯನ್ನು ಸಂತೈಸಿ, ಮುನಿಗಳನ್ನು ಸಮಾಧಾನಪಡಿಸಿಎಲ್ಲರೂ ಧರ್ಮಜನ ಬಳಿಗೆ ಬಂದರು.
ತಂಗಿ ದುಶ್ಶಲೆಯ ಗಂಡ ಇವನು. ಇವನನ್ನು ಕೊಂದರೆ ಅವಳು ವಿಧವೆಯಾಗುವಳು ಎಂದುಧರ್ಮಜ ಸಮಾಧಾನ ಹೇಳಿ ಇವನಿಗೆ ಯಾವ ಶಿಕ್ಷೆ ಕೊಡಬೇಕೆಂದು ಮುನಿಗಳನ್ನು ಕೇಳಿದನು. ಆಗಧೌಮ್ಯರು ಮಾನಧನರಿಗೆ ಮಾನಭಂಗಕ್ಕಿಂತ ಮಿಗಿಲಾದ ಶಿಕ್ಷೆಯಿಲ್ಲವೆನ್ನಲು ಇವನ ತಲೆ ಬೋಳಿಸಿಕಳಿಸಿಕೊಟ್ಟರು.
ಅಪಮಾನಿತನಾದ ಜಯದ್ರಥ ಈ ಅಪಮಾನಕ್ಕೆ ಪ್ರತೀಕಾರ ಮಾಡಲು ನಿರ್ಧರಿಸಿ ಶಿವನನ್ನುಕುರಿತು ತಪಸ್ಸು ಮಾಡತೊಡಗಿದನು. ಶಿವ ಬಂದಾಗ ಒಂದೇ ದಿನದಲ್ಲಿ ಪಾಂಡವರನ್ನು ಗೆಲ್ಲಬೇಕೆನಲು ಶಿವನು ಅದು ಸಾಧ್ಯವಿಲ್ಲವೆಂದೂ, ಪಾಶುಪತಾಸ್ತ್ರ ಮುಂತಾದ ಅಸ್ತ್ರಗಳನ್ನುತಾವುಗಳೇ ನೀಡಿರುವುದಾಗಿಯೂ ತಿಳಿಸಿ ಅರ್ಜುನನನ್ನು ಬಿಟ್ಟು ಉಳಿದವರನ್ನು ತೊಂದರೆಪಡಿಸಬಹುದೆಂದು ಹೇಳಿ ಹೋದನು. ಗೆಲ್ಲುವೆಯೆನ್ನಲಿಲ್ಲ.
ಈ ಎಲ್ಲಾ ಕಷ್ಟಗಳಿಗೆ ಕೊನೆಯೆಂದು ಎಂದು ಧರ್ಮಜನು ನೊಂದಿರಲು ಬಂದ ಮಾರ್ಕಂಡೇಯಮುನಿಗಳು ಅವನಿಗೆ ಹಿಂದೆ ರಾಮ ಅನುಭವಿಸಿದ ಕ್ಲೇಷವನ್ನು ವಿವರಿಸಿದರು. ಮುನಿಯಿಂದರಾಮಾಯಣದ ಕಥೆ ಆಲಿಸಿದ ಧರ್ಮಜನ ಮನಸ್ಸು ಸ್ವಲ್ಪ ತಿಳಿಯಾಯಿತು.
ಕಾಮೆಂಟ್‌ಗಳು