ಇಂದಿರಮ್ಮ
ಇಂದಿರಮ್ಮ
(ವಿಶ್ವ ರಂಗಭೂಮಿ ವಿಶೇಷ)
ಲೇಖನ ಕೃಪೆ: Arenalli Shivashankar Dharmendra Kumar
ಅಣ್ಣಾವ್ರ ಜೊತೆ ನಟಿಸಿರೋ ಸಿನೆಮಾ ಹೀರೋಯಿನ್ ಗಳನ್ನ ನೋಡಿದೀರಾ... ಅಂತ ನಾನು ನಿಮ್ಮನ್ನ ಕೇಳಿದರೆ...
ಓ... ನೋಡಿಲ್ದೇ ಏನು... ಲೀಲಾವತಿ , ಆರತಿ , ಭಾರತಿ , ಜಯಂತಿ , ಜಯಪ್ರದ , ಅಂಬಿಕಾ , ಸರಿತಾ , ಗೀತಾ... ಒಂದ್ ದೊಡ್ ಲಿಸ್ಟೇ ಬಿಸಾಕ್ತಿರಾ ನನ್ನ್ ಮುಂದಕ್ಕೆ...
ಆದೇ... ಅಣ್ಣಾವ್ರ ಜೊತೆ ನಟಿಸಿರೋ ರಂಗಭೂಮಿ ಕಲಾವಿದರನ್ನ ನೋಡಿದಿರಾ... ಅಂತ ಕೇಳಿದರೆ...
ನಿಮ್ ನಿಮ್ಮಲ್ಲೇ ಗುಸುಗುಸು ಶುರು ಆಗುತ್ತೆ...
ಕೊನೇದಾಗಿ... ಅಣ್ಣಾವ್ರ ಜೊತೆಗೂ ಮತ್ತು ಅವರ ತಂದೆ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯನವರ ಜೊತೆಗೂ ಏಕಕಾಲಕ್ಕೆ ಅಭಿನಯಿಸಿದಂಥ ವೃತ್ತಿ ರಂಗಭೂಮಿ ಕಲಾವಿದೆಯನ್ನ ನೋಡಿದಿರಾ ಅಂತ ನಾನೇನಾದ್ರೂ ನಿಮ್ಮನ್ನ ಕೇಳಿದ್ರೆ...
ನೀವು ಕ್ಲೀನ್ ಬೌಲ್ಡ್.... ಫುಲ್ಲು ಸೈಲೆಂಟು... ಅಲ್ವೇ...
ಮೀಟ್ ಇಂದಿರಮ್ಮ...
ಸಿಂಗಾನಲ್ಲೂರು ಪುಟ್ಟಸ್ವಾಮಯ್ಯನವರ ಜೊತೆಗೂ ಮತ್ತು ಅಣ್ಣಾವ್ರ ಜೊತೆಗೂ ಏಕಕಾಲಕ್ಕೆ ವೃತ್ತಿ ರಂಗಭೂಮಿಯ ಪೌರಾಣಿಕ ನಾಟಕಗಳಲ್ಲಿ ಅಭಿನಯಿಸಿದ , ಈಗ ಉಳಕೊಂಡಿರೋ ಏಕೈಕ ಕಲಾವಿದೆ... 88ರ ಇಳಿ ವಯಸ್ಸು... ಆದರೆ ಇಂದಿಗೂ ಬತ್ತದ ಅದೇ ಉತ್ಸಾಹ...
ಅಮ್ಮಾ... ಹಳೇ ಕಥೆ ಯಾವ್ದಾದ್ರೂ ಹೇಳಿ ಅಂದೇ...
ಅದು 1944...
ನಮ್ಮದು ಆಗ "ಭಕ್ತ ಪ್ರಹ್ಲಾದ " ನಾಟಕ... ಪುಟ್ಟಸ್ವಾಮಯ್ಯನವರು ಹಿರಣ್ಯಕಶಿಪುವಿನ ಪಾತ್ರ , ಅಣ್ಣಾವ್ರದು ಪ್ರಹ್ಲಾದನ ಪಾತ್ರ... ನಾನು ಹತ್ತರ ಬಾಲೆ... ಹಿರಣ್ಯನ ಆಸ್ಥಾನದಲ್ಲಿ ನರ್ತಕಿಯರಾಗಿ ನಾನು ಮತ್ತು ಅಣ್ಣಾವ್ರ ತಂಗಿ ಶಾರದಾ... ಹಿನ್ನೆಲೆಯಲ್ಲಿ ಹಾಡು ಶುರುವಾದ ಕೂಡಲೇ ಕುಣಿಯಲು ಆರಂಭಿಸುತ್ತಿದ್ದ ನಾನು ನೃತ್ಯದಲ್ಲಿ ಎಷ್ಟು ಮೈ ಮರೆತು ಬಿಡ್ತಾ ಇದ್ದೆ ಅಂದ್ರೆ... ಹಾಡು ಮುಗಿದು ಎಷ್ಟ್ ಹೊತ್ತಾದ್ರೂ ನನ್ನ ಕುಣಿತ ಮುಗಿಯುತ್ತಲೇ ಇರಲಿಲ್ಲ... ಇದು ನಾಟಕ ಮುಂದುವರೆಯೋದಕ್ಕೆ ತೊಂದರೆ ಆಗ್ತಾ ಇತ್ತು...
ಈ ಹುಡುಗೀನ ಕಂಟ್ರೋಲ್ ಮಾಡೋಕೆ ಏನಾದ್ರೂ ಉಪಾಯ ಮಾಡ್ಬೇಕಲ್ಲ... ಪುಟ್ಟಸ್ವಾಮಯ್ಯನವರು ಕೇಳಿದ್ರು...
ಒಂದು ಕೆಲಸ ಮಾಡೋಣ... ಇವಳ ಸೊಂಟಕ್ಕೊಂದು ತೆಳ್ಳನೆಯ ಬಿಳಿದಾರವನ್ನು ಕಟ್ಟಿ ಬಿಡೋಣ... ಹಾಡು ಮುಗೀತಿದ್ದ ಹಾಗೇನೇ ನಾನು ಸೈಡ್ ವಿಂಗಿನಲ್ಲಿ ನಿಂತು ಮೆಲ್ಲನೆ ಇವಳನ್ನ ಒಳಕ್ಕೆ ಎಳೆದುಕೊಳ್ತೇನೆ... ಅಣ್ಣಾವ್ರು ಹೇಳಿದ್ರು...
ಸರಿ... ಸಂಜೆ ಆರಕ್ಕೆ ನಾಟಕ ಶುರು ಆಯ್ತು... ಹಿರಣ್ಯನ ಆಸ್ಥಾನ... ಸಿಂಹಾಸನದ ಮೇಲೆ ಗಜಗಂಭೀರವಾದನರಾಗಿ ಕುಳಿತು... ಕೈ ತಟ್ಟಿ ... ಯಾರಲ್ಲಿ... ನರ್ತಕಿಯರನ್ನು ಬರಮಾಡಿ... ಎಂದ ಕೂಡಲೇ ಹಿನ್ನೆಲೆಯಲ್ಲಿ ಹಾಡು... ನಾನು ತನ್ಮಯಳಾಗಿ ನರ್ತಿಸುತ್ತಿದ್ದಾಗಲೇ ಹಾಡು ಮುಗಿಯುವ ವೇಳೆಯಾಯಿತು... ಅಣ್ಣಾವ್ರು ನಿಧಾನವಾಗಿ ದಾರವನ್ನು ಜಗ್ಗಿದರು... ನನ್ನ ಏಕಾಗ್ರತೆಗೆ ಭಂಗ ಬಂದು ಅತ್ತ ತಿರುಗಿದೆ... ಅಣ್ಣಾವ್ರು 'ಹಾಡು ಮುಗೀತು ಬಾ ಅಂತ ಸನ್ನೆ ಮಾಡಿದ್ರು... ಆಗ ನಾನು , ಶಾರದಾ ಇಬ್ರೂ ಸಭಿಕರತ್ತ ಕೈ ಮುಗಿದು ಒಳಕ್ಕೆ ಹೋದೆವು...
ಇಷ್ಟು ಹೇಳಿ ಮೌನಕ್ಕೆ ಜಾರಿದರು... ಇಂದಿರಮ್ಮ...
ರೋಮಾಂಚಿತನಾಗಿ ಬಿಟ್ಟಿದ್ದೆ ನಾನು... ಅಣ್ಣಾವ್ರನ್ನೂ ಅವರ ತಂದೆಯವರನ್ನೂ ಒಟ್ಟಿಗೇ ನೋಡಿದಷ್ಟು ಖುಷಿಯಾಗಿತ್ತು ನನಗೆ...
ಇವರ ಅಖಂಡ ಎಪ್ಪತೈದು ವರ್ಷಗಳ ವೃತ್ತಿ ರಂಗಭೂಮಿಯ ಸೇವೆಯನ್ನು ಗುರುತಿಸಿ ಬರಗೂರು ರಾಮಚಂದ್ರಪ್ಪನವರ ಅಧ್ಯಕ್ಷತೆಯಲ್ಲಿ ಅಣ್ಣಾವ್ರ ಸಹೋದರ ವರದಪ್ಪನವರ ಹೆಸರಿನಲ್ಲಿ ಪ್ರತಿವರ್ಷ ಕೊಡಮಾಡುವ "ಜೀವಮಾನದ ಸಾಧನೆ " ಪ್ರಶಸ್ತಿಯನ್ನು ಕೊಟ್ಟು ಸನ್ಮಾನಿಸಿದರು.. ಆ ಕಾರ್ಯಕ್ರಮಕ್ಕೆ ಆ ಅಣ್ಣಾವ್ರ ಕುಟುಂಬದ ಎಲ್ಲಾ ಸದಸ್ಯರೂ ಬಂದಿದ್ರು... ಪ್ರಶಸ್ತಿ ಸ್ವೀಕರಿಸಿದ ಇಂದಿರಮ್ಮನವರು ನಾನು ಈ ಮೇಲೆ ಹೇಳಿದ ಘಟನೆಯನ್ನೇ ನೆನೆಸಿಕೊಂಡರು... ಸಮಾರಂಭ ಎಲ್ಲ ಮುಗಿದ ಮೇಲೆ ಸಭಿಕರ ಗುಂಪಿನಿಂದ ಹೆಣ್ಣು ಮಗಳೊಬ್ಬಳು ಮೇಲಕ್ಕೆ ಬಂದು ಇವರ ಕಾಲಿಗೆ ನಮಸ್ಕರಿಸಿ ತಬ್ಬಿಕೊಂಡು ಹನಿಗಣ್ಣಾದಳು...
ಯಾರಮ್ಮ ನೀನು... ನನಗೆ ಗುರುತೇ ಸಿಕ್ಕಲಿಲ್ಲವಲ್ಲ...
ನಾನಮ್ಮ... ನೀವು ಈಗ ಹೇಳಿದಿರಲ್ಲ ಶಾರದಾ ಅಂತ... ಅವರ ಮಗಳು ನಾನು... ಅಮ್ಮ ತೀರಿಕೊಂಡಾಗ ನನಗೆ ಎರಡೂವರೆ ವರ್ಷ... ಅವರ ನೋಡಿದ ನೆನಪೇ ನನಗಿಲ್ಲ... ಇವತ್ತು ನೀವು ನಮ್ಮಮ್ಮನ ಕ್ಲೋಸ್ ಫ್ರೆಂಡು ಅಂತ ಗೊತ್ತಾದಾಗ ನನಗೆ ಅಮ್ಮನನ್ನೇ ನೋಡಿದ ಹಾಗಾಗುತ್ತಿದೆ...
ಇಬ್ಬರೂ ಎಷ್ಟೋ ಹೊತ್ತು ಮಾತೇ ಆಡದೇ ಒಬ್ಬರ ಕೈ ಒಬ್ಬರು ಹಿಡಿದುಕೊಂಡು ನಿಂತಿದ್ರು... ಇಬ್ಬರ ಕಣ್ಣುಗಳೂ ಒದ್ದೆಯಾಗಿದ್ದವು... ಈ ಅತ್ಯಪರೂಪದ ಪ್ರಸಂಗಕ್ಕೆ ಸಾಕ್ಷಿಯಾಗಿದ್ದ ನಾನೂ ಕೂಡಾ ಭಾವುಕನಾಗಿದ್ದೆ...
ಬೆಳಿಗ್ಗೆ ಫೋನ್ ಮಾಡಿ ಅಮ್ಮಾ...ಈವತ್ತು ವಿಶ್ವ ರಂಗಭೂಮಿ ದಿನ ಅಂದೆ... ನಕ್ಕ ಅವರು... ಕೊನೆ ಉಸಿರಿರೋವರೆಗೂ ಪ್ರತಿ ದಿನವೂ ರಂಗಭೂಮಿ ದಿನವೇ ಅಂದ್ರು...
🌷🙏🌷
ಕಾಮೆಂಟ್‌ಗಳು