ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಭಾರತಕಥಾಮಂಜರಿ64



ಕುಮಾರವ್ಯಾಸನ

ಕರ್ಣಾಟ ಭಾರತ ಕಥಾಮಂಜರಿ 

ವಿರಾಟ ಪರ್ವ  - ಐದನೆಯ ಸಂಧಿ


ವೈರಿಭಟ ಸಂವರ್ತ ನೂತನ

ಭೈರವನು ಕಲಿಪಾರ್ಥ ಸಮರೋ

ದಾರ ಸಾರಥಿಯಾದನಂದು ವಿರಾಟನಂದನಗೆ

ಶತ್ರು ಸೈನ್ಯನಾಶಕನೂ, ಹೊಸ ಭೈರವನೂ ಆದ ಅರ್ಜುನನು ಉತ್ತರನಿಗೆ ಸಾರಥಿಯಾದನು


ಕೇಳು ಜನಮೇಜಯ ಸುಯೋಧನ

ನಾಳು ಮುತ್ತಿತು ತುರುಗಳನು ಮೇ

ಲಾಳು ಕವಿದುದು ಭೀಷ್ಮ ಕರ್ಣ ದ್ರೋಣ ಮೊದಲಾಗಿ

ಕೋಲ ಸೂಟಿಯ ಸರಿವಳೆಗೆ ಗೋ

ಪಾಲಪಡೆ ಮುಗ್ಗಿದುದು ಗೋವರ

ಸಾಲ ಹೊಯ್ದರು ಕರ್ಣ ದುಶ್ಯಾಸನ ಜಯದ್ರಥರು ೧


ರಾಯ ಚೂಣಿಯ ಚಾತುರಂಗದ

ನಾಯಕರು ಮೇಳವಿಸಿ ಸಮರೋ

ಪಾಯದಲಿ ಹಿಂದಿಕ್ಕಿ ಕವಿದರು ಕೋಡ ಕೈಯವರು

ಸಾಯಲಸದ ಗೋವರನು ಕೈ

ಗಾಯದೆಸುತವೆ ಸೆರೆಯಕೊಂಡರು

ಮಾಯವಾಯಿತು ಹರಿಬಕಾರರ ಸೇನೆ ರಣದೊಳಗೆ ೨


ಮೇಲುದಳಕಿದಿರಾಗೆ ಬರೆ ಹರಿ

ಗಾಳಗದೊಳೊಡೆಮುರಿದು ಗೋವರು

ಧೂಳಿಗೋಟೆಯ ಕೊಂಡರಮರರ ರಾಜಧಾನಿಗಳ

ಸಾಲರಿದು ಕೆಟ್ಟೋಡಿದರು ಗೋ

ಪಾಲನೊಬ್ಬನ ಹಿಡಿದು ಮೂಗಿನ

ಮೇಲೆ ಸುಣ್ಣವ ಬರೆದು ಬಿಟ್ಟರು ಹಗೆಯ ಪಟ್ಟಣಕೆ ೩


ಗರುವ ಗೋವರು ಹುಯ್ಯಲಿಗೆ ಹರಿ

ಹರಿದು ಕೆಡೆದರು ರಾಯ ಮೋಹರ

ತೆರಳಿ ತುರುಗಳ ಹಿಡಿದು ಹಿಂದಿಕ್ಕಿದರು ಕಾಳಗಕೆ

ಬಿರುದರನು ಬರಹೇಳು ಹೋಗೆನೆ

ಕರದ ಬಿಲ್ಲನು ಬಿಸುಟು ಬದುಕಿದ

ಶಿರವ ತಡವುತ ಗೋವನೊಬ್ಬನು ಪುರಕೆ ಹರಿತಂದ ೪


ಗಣನೆಯಿಲ್ಲದು ಮತ್ತೆ ಮೇಲಂ

ಕಣದ ಹಾರಣೆ ನೂಕಿತೆಲವೋ

ರಣದ ವಾರ್ತೆಯದೇನೆನುತ ಜನವೆಲ್ಲ ಗಜಬಜಿಸೆ

ರಣವು ಕಿರಿದಲ್ಲೆನುತ ಧರೆ ಸಂ

ದಣಿಸಲವನೈತಂದು ಮೇಳದ

ಗಣಿಕೆಯರ ಮಧ್ಯದಲಿ ಮೆರೆದಿರೆ ಕಂಡನುತ್ತರನ ೫


ಬೆಗಡು ಮುಸುಕಿದ ಮುಖದ ಭೀತಿಯ

ಢಗೆಯ ಹೊಯ್ಲಿನ ಹೃದಯ ತುದಿನಾ

ಲಗೆಯ ತೊದಳಿನ ನುಡಿಯ ಬೆರಗಿನ ಬರತ ತಾಳಿಗೆಯ

ಆಗಿವ ಹುಯ್ಯಲುಗಾರ ಬಹಳೋ

ಲಗಕೆ ಬಂದನು ನೃಪ ವಿರಾಟನ

ಮಗನ ಕಾಲಿಂಗೆರಗಿದನು ದೂರಿದನು ಕಳಕಳವ ೬


ಏಳು ಮನ್ನೆಯ ಗಂಡನಾಗು ನೃ

ಪಾಲ ಕೌರವರಾಯ ತುರುಗಳ

ಕೋಳ ಹಿಡಿದನು ಸೇನೆ ಬಂದುದು ಧರಣಿಯಗಲದಲಿ

ದಾಳಿ ಬರುತಿದೆ ಕರೆಸಿಕೋ ನಿ

ನ್ನಾಳು ಕುದುರೆಯ ರಾಣಿವಾಸದ

ಗೂಳೆಯವ ತೆಗೆಸೆಂದು ನುಡಿದನು ಬಿನ್ನಹದ ಬಿರುಬ ೭


ಏನೆಲವೊ ತುದಿ ಮೂಗಿನಲಿ ಬಿಳು

ಪೇನು ಢಗೆ ಹೊಯ್ದೇಕೆ ಬಂದೆ ಯಿ

ದೇನು ನಿನ್ನನ ರಣವನಯ್ಯನು ಗೆಲಿದುದೇನಾಯ್ತು

ಏನು ಭಯಬೇಡಿನ್ನು ಕಲಹನಿ

ಧಾನ ವಾರ್ತೆಯದೇನೆನಲು ಕುರು

ಸೇನೆ ಬಂದುದು ತುರುವ ಹಿಡಿದರು ಬಡಗ ದಿಕ್ಕಿನಲಿ ೮


ರಾಯ ತಾನೈ ತಂದನಾತನ

ನಾಯಕರು ಗುರುಸುತನು ಗುರು ಗಾಂ

ಗೇಯ ಶಕುನಿ ವಿಕರ್ಣ ಕರ್ಣ ಜಯದ್ರಥಾದಿಗಳು

ಜೀಯ ಬಿನ್ನಹ ದಳದ ತೆರಳಿಕೆ

ತಾಯಿ ಮಳಲಂಬುಧಿಗೆ ಮೋಹರ

ದಾಯತವ ನಾನೆತ್ತ ಬಲ್ಲೆನು ಹೊಕ್ಕು ಹೊಗಳುವರೆ ೯


ಎತ್ತ ದುವ್ವಾಳಿಸುವಡಾಲಿಗ

ಳತ್ತಲಾನೆಯ ಥಟ್ಟು ಕಾಲಾ

ಳೊತ್ತರದ ರಣವಾಜಿ ರೂಢಿಯ ರಾಯರಾವುತರು

ಸುತ್ತ ಬಳಸಿಹುದೆತ್ತ ಮನ ಹರಿ

ವತ್ತ ಮೋಹರವಲ್ಲದನ್ಯವ

ಮತ್ತೆ ಕಾಣೆನು ಜೀಯ ಹದನಿದು ವೈರಿ ವಾಹಿನಿಯ ೧೦


ಒಡ್ಡಿದರೊ ಪಡಿನೆಲವನವನಿಯ

ದಡ್ಡಿಯೋ ಮೇಣೆನಲು ಝಲ್ಲರಿ

ಯೊಡ್ಡು ತಳಿತುದು ಚಮರ ಸೀಗುರಿಗಳ ಪತಾಕೆಯಲಿ

ಅಡ್ಡಹಾಯ್ದಿನ ಕಿರಣ ಪವನನ

ಖಡ್ಡತನ ನಗೆಯಾಯ್ತು ಕೌರವ

ನೊಡ್ಡನಭಿವರ್ಣಿಸುವಡರಿಯೆನು ಜೀಯ ಕೇಳೆಂದ ೧೧


ಒಳಗೆ ನೀ ಕಾದುವೊಡೆ ದುರ್ಗವ

ಬಲಿಸು ಬವರಕೆ ಹಿಂದುಗಳೆಯದೆ

ನಿಲುವ ಮನ ನಿನಗೀಗಲುಂಟೆಟೇ ನಡೆಯ ಬೇಕೆನಲು

ಕೆಲಬಲನ ನೋಡಿದನು ಮೀಸೆಯ

ನಲುಗಿದನು ತನ್ನಿದಿರ ಮೇಳದ

ಲಲನೆಯರ ಮೊಗನೋಡುತುತ್ತರ ಬಿರುದ ಕೆದರಿದನು ೧೨


ನೂಕು ಕುನ್ನಿಯನಾಹವದ ಭೀ

ತಾಕುಲನು ತಾನೀಗ ಹೆಂಡಿರ

ಸಾಕಿ ಬದುಕುವ ಲವಲವಿಕೆಯಲಿ ಜಾರಿ ಬಂದೀಗ

ಕಾಕ ಬಳಸುನನಿವನು ನಾನು

ದ್ರೇಕಿಸಲು ಸಮರದಲಿ ನಿಲುವರೆ

ನಾಕದವರಿಗೆ ನೂಕದೆಂದನು ಸತಿಯರಿದುರಿನಲಿ ೧೩


ಎನಿತು ಬಲ ಘನವಾದೊಡೇನದು

ನಿನಗೆ ಗಹನವೆ ಜೀಯ ಜಗದಲಿ

ದಿನಪನಿದಿರಲಿ ದಿಟ್ಟತನವೇ ತಮದ ಗಾವಳಿಗೆ

ಬಿನುಗು ರಾಯರ ಬಿಂಕ ಗೋವರ

ಮೊನೆಗೆ ಮೆರೆದೊಡೆ ಸಾಕು ನಿಂದಿರು

ಜನಪ ತೋರಿಸು ಕೈಗುಣವ ಕೌರವನ ಥಟ್ಟಿನಲಿ ೧೪


ಎಂದಡುಬ್ಬರಿಸಿದನು ತಾ ಕಲಿ

ಯೆಂದು ಬಗೆದನು ಮೇಸೆಯನು ಬೆರ

ಳಿಂದ ತಿರುಹುತ ಮುಗುಳು ನಗೆ ಹರುಷದಲಿ ಮೈಮರೆದ

ಸಂದಣಿಸಿ ರೋಮಾಂಚ ಕೆಲ ಬಲ

ದಿಂದುಮುಖಿಯರ ನೋಡಿದನು ನಲ

ವಿಂದ ನುಡಿದನು ತನ್ನ ಪೌರುಷತನದ ಪರಿಣತಿಯ ೧೫


ಅಹುದಹುದು ತಪ್ಪೇನು ಜೂಜಿನ

ಕುಹಕದಲಿ ಪಾಂಡವರ ಸೋಲಿಸಿ

ಮಹಿಯಕೊಂಡಂತೆನ್ನ ಕೆಣಕಿದನೇ ಸುಯೋಧನನು

ಸಹಸದಿಂದವೆ ತುರುವ ಮರಳಿಚಿ

ತಹೆನು ಬಳಿಕಾ ಕೌರವನ ನಿ

ರ್ವಹಿಸಲೀವೆನೆ ಸೂರೆಗೊಂಬೆನು ಹಸ್ತಿನಾಪುರವ ೧೬


ಹಿಡಿದು ರಾಜ್ಯವ ಕೊಂಡು ಹೆಂಗುಸ

ಬಡಿದು ಪಾಂಡವರಾಯರನು ಹೊರ

ವಡಿಸಿ ಕೊಬ್ಬಿದ ಭುಜಬಲವನೆನ್ನೊಡನೆ ತೋರಿದನೆ

ಬಡಯುಧಿಷ್ಠಿರನೆಂದು ಬಗೆದನೆ

ಕಡುಗಿದರೆ ಕೌರವನ ಕೀರ್ತಿಯ

ತೊಡೆವೆನರಿಯನಲಾಯೆನುತ ಸುಕುಮಾರ ಖತಿಗೊಂಡ ೧೭


ತನಗೆ ಬಡ ಪಾಂಡವರ ತೆವರಿದ

ಮನದ ಗರ್ವದ ಕೊಬ್ಬು ಕಾಲನ

ಮನೆಯನಾಳಿಪುದಲ್ಲದಿದ್ದೊಡೆ ತನ್ನ ವೈರವನು

ನೆನೆದು ದುರ್ಯೋಧನನು ತಾ ಮೇ

ದಿನಿಯನಾಳ್ವನೆ ಹಾ ಮಹಾದೇ

ವೆನುತಲುತ್ತರ ಬಿರುದ ನುಡಿದನು ಹೆಂಗಳಿದಿರಿನಲಿ ೧೮


ಜವನ ಮೀಸೆಯ ಮುರಿದನೋ ಭೈ

ರವನ ದಾಡೆಯನಲುಗಿದನೊ ಮೃ

ತ್ಯುವಿನ ಮೇಲುದ ಸೆಳೆದನೋ ಕೇಸರಿಯ ಕೆಣಕಿದನೋ

ಬವರವನು ತೊಡಗಿದನಲಾ ಕೌ

ರವನಕಟ ಮರುಳಾದನೆಂದಾ

ಯುವತಿಯರ ಮೊಗನೋಡುತುತ್ತರ ಬಿರುದ ಕೆದರಿದನು ೧೯


ಆರೊಡನೆ ಕಾದುವೆನು ಕೆಲಬರು

ಹಾರುವರು ಕೆಲರಂತಕನ ನೆರೆ

ಯೂರವನು ಕೆಲರಧಮಕುಲದಲಿ ಜನಿಸಿ ಬಂದವರು

ವೀರರೆಂಬುವರಿವರು ಮೇಲಿ

ನ್ನಾರ ಹೆಸರುಂಟವರೊಳೆಂದು ಕು

ಮಾರ ನೆಣಗೊಬ್ಬಿನಲಿ ನುಡಿದನು ಹೆಂಗಳಿದಿರಿನಲಿ ೨೦


ಪೊಡವಿಪತಿಗಳು ಬಂದು ತುರುಗಳ

ಹಿಡಿವರೇ ಲೋಕದಲಿ ಅಧಮರ

ಬಡಮನದ ಮನ್ನೆಯರ ಮೈಸಿರಿ ಕೌರವನೊಳಾಯ್ತು

ಕಡೆಗೆ ದುರ್ಯಶವುಳಿವುದಲ್ಲದೆ

ಬಿಡುವೆನೇ ಗೋಧನವನೆನ್ನೊಳು

ತೊಡಕಿ ಬದುಕವನಾವನೆಂದನು ಖಂಡೆಯವ ಜಡಿದು ೨೧


ಖಳನ ಮುರಿವೆನು ಹಸ್ತಿನಾಪುರ

ದೊಳಗೆ ಠಾಣಾಂತರಾನಿಕ್ಕುವೆ

ತೊಲಗಿಸುವೆ ಕೌರವನ ಸೇನೆಯ ಧೂಳಿಪಟಮಾಡಿ

ಗೆಲವ ತಹೆನೆಂದುತ್ತರನು ಕೋ

ಮಲೆಯರೆದುರಿಗೆ ಬಾಯ್ಗೆ ಬಂದುದ

ಗಳಹುತಿರ್ದನು ಬೇಕು ಬೇಡೆಂಬವರ ನಾಕಾಣೆ ೨೨


ಅರಿಯೆನೇ ಗಾಂಗೇಯನನು ತಾ

ನರಿಯದವನೇ ದ್ರೋಣ ಕುಲದಲಿ

ಕೊರತೆಯೆನಿಸುವ ಕರ್ಣನೆಂಬವನೆನಗೆ ಸಮಬಲನೆ

ಬರಿದೆ ಬಯಲಾಡಂಬರದಿ ತುರು

ಸೆರೆಯ ಹಿಡಿದರೆ ತನ್ನ ಹೆಂಡಿರ

ಸೆರೆಯ ತಾರದೆ ಮಾಣೆನೆಂದುತ್ತರನು ಗರ್ಜಿಸಿದ ೨೩


ನುಡಿದು ಫಲವೇನಿನ್ನು ಸಾರಥಿ

ಮಡಿದ ನಿನ್ನಿನ ಬವರದಲಿ ತಾ

ನುಡುಹನಾದೆನು ಶಿವಶಿವಾಯಿಂದೆನ್ನ ಕೈಮನಕೆ

ಗಡಣಿಸುವ ಸಾರಥಿಯನೊಬ್ಬನ

ಪಡೆದೆನಾದೊಡೆ ಕೌರವೇಂದ್ರನ

ಪಡೆಗೆ ಹಬ್ಬವ ಮಾಡುವೆನು ತೋರುವೆನು ಕೈಗುಣವ ೨೪


ಸಾರಥಿಯ ಶಿವ ಕೊಟ್ಟನಾದೊಡೆ

ಮಾರಿಗುಬ್ಬಸವಾಗದಂತಕ

ನೂರು ತುಂಬದೆ ಡೊಳ್ಳು ನೂಕದೆ ರಣಪಿಶಾಚರಿಗೆ

ದೋರೆಗರುಳಲಿ ದಾನವಿಯರೊಡ

ಲೇರು ಹತ್ತದೆ ಹಬ್ಬವಾಗದೆ

ಭೂರಿ ಬೇತಾಳರಿಗೆ ಹೋಹುದೆ ಬರಿದೆ ರಣವೆಂದ ೨೫


ಪರರು ನಿಜ ಸಾಹಸವ ಹೊಗಳಿದೊ

ಡಿರದೆ ಲಜ್ಜಿಸಬೇಕು ತನ್ನಯ

ಹಿರಿದು ಪೂರುಷತನವ ತಾನಾಡಿದರೆ ಫಲವೇನು

ಇರವಿದನೆ ಗಹಗಹಿಸಿ ಮನದಲಿ

ತರಳೆಯರು ನಗಲಾ ವಿರಾಟನ

ವರಕುಮಾರಕನಿರದೆ ನುಡಿದನು ಹೆಂಗಳಿದಿರಿನಲಿ ೨೬


ಕೇಳಿದನು ಕಲಿ ಪಾರ್ಥನೀತನ

ಬಾಲ ಭಾಷೆಗಳೆಲ್ಲವನು ಪಾಂ

ಚಾಲೆಗೆಕ್ಕಟಿ ನುಡಿದ ನಾವಿನ್ನಿಹುದು ಮತವಲ್ಲ

ಕಾಲ ಸವೆದುದು ನಮ್ಮ ರಾಜ್ಯದ

ಮೇಲೆ ನಿಲುಕಲು ಬೇಕು ಕೌರವ

ರಾಳು ನಮಗೋಸುಗವೆ ಬಂದುದು ಕಾಂತೆ ಕೇಳೆಂದ ೨೭


ನರನ ಸಾರಥಿಯೆಂದು ನೀನು

ತ್ತರೆಗೆ ಸೂಚಿಸು ತನ್ನನೀಗಳೆ

ಕರೆಸೆನಲು ಕೈಕೊಂಡುದುರಪದಿ ಬಂದಳೊಲವಿನಲಿ

ತರುಣಿ ಕೇಳರ್ಜುನನ ಸಾರಥಿ

ವರ ಬೃಹನ್ನಳೆ ಖಾಂಡವಾಗ್ನಿಯ

ಹೊರೆದನಿವ ತಾನೆಂದು ಸತಿಯುತ್ತರೆಗೆ ಹೇಳಿದಳು ೨೮


ಕೇಳಿ ಹರುಷಿತೆಯಾದಳುತ್ತರೆ

ಯೋಲಗಕೆ ಬಂದಣ್ಣನಂಘ್ರಿಗೆ

ಲೋಲಲೋಚನೆಯೆರಗಿ ಕೈಮುಗಿದೆಂದಳೀ ಹದನ

ಕೇಳಿದೆನು ಸಾರಥಿಯ ನೆಲೆಯನು

ಕಾಳಗಕೆ ನಡೆಯಣ್ಣ ದೇವ ನೃ

ಪಾಲಕರ ಜಯಿಸೆಂದಡುತ್ತರ ನಗುತ ಬೆಸಗೊಂಡ ೨೯


ತಂಗಿ ಹೇಳೌ ತಾಯೆ ನಿನಗೀ

ಸಂಗತಿಯನಾರರುಹಿದರು ಬಳಿ

ಕಂಗವಣೆಯುಳ್ಳವನೆ ಸಾರಥಿತನದ ಕೈಮೆಯಲಿ

ಮಂಗಳವಲಾ ಬಳಿಕರಣದೊಳ

ಭಂಗನಹೆ ನಿನ್ನಾಣೆ ತನ್ನಯ

ತುಂಗ ವಿಕ್ರಮತನವನುಳುಹಿದೆ ಹೇಳು ಹೇಳೆಂದ ೩೦


ಎಂದಳೀ ಸೈರಂಧ್ರಿ ಸುರಪನ

ನಂದನವ ಸುಡುವಂದು ಪಾರ್ಥನ

ಮುಂದೆ ಸಾರಥಿಯಾದಗಡ ನಾವರಿಯೆವೀ ಹದನ

ಹಿಂದುಗಳೆಯದೆ ಕರೆಸು ನಮ್ಮ ಬೃ

ಹಂದಳೆಯನೆನೆ ನಗುತ ಲೇಸಾ

ಯ್ತೆಂದು ಪರಮೋತ್ಸಾಹದಲಿ ಸೈರಂಧ್ರಿಗಿಂತೆಂದ ೩೧


ಸಾರಥಿಯ ಕೊಟ್ಟೆನ್ನನುಳುಹಿದೆ

ವಾರಿಜಾನನೆ ಲೇಸಮಾಡಿದೆ

ಕೌರವನ ತನಿಗರುಳ ತೆಗೆವೆನು ತಡವ ಮಾಡಿಸದೆ

ನಾರಿ ನೀನೇ ಹೋಗಿ ಪಾರ್ಥನ

ಸಾರಥಿಯ ತಾಯೆನಲು ನಮ್ಮನು

ವೀರ ಬಗೆಯನು ನಿಮ್ಮ ತಂಗಿಯ ಕಳುಹಿ ಕರೆಸುವುದು ೩೨


ತಾಯೆ ನೀನೇ ಹೋಗಿ ಸೂತನ

ತಾಯೆನಲು ಕೈಕೊಂಡು ಕಮಲದ

ಳಾಯತಾಕ್ಷಿ ಮನೋಭವನ ಮರಿಯಾನೆಯಂದದಲಿ

ರಾಯ ಕುವರಿ ನವಾಯಿಗತಿ ಗರು

ವಾಯಿಯಲಿ ಬರೆ ವಿಟರ ಕರಣದ

ಲಾಯ ತೊಡಕಿತು ತೆಗೆದಳಂಗನೆ ಜನರ ಕಣ್ಮನವ ೩೩


ಐದು ಶರವೇಕೊಂದು ಬಾಣವಿ

ದೈದದೇಯಿನ್ನಮಮ ಕಾಮನ

ಕೈದುಗಾರತನಕ್ಕೆ ಕೋಡದೆ ಕೊಂಕದಿಹರಾರು

ಒಯ್ದುಕೊಳ್ಳನೆ ಮುನಿಮನವನಡ

ಹಾಯ್ದು ಹಿಡಿಯನೆ ಹಿರಿಯರನು ವಿಧಿ

ಕೊಯ್ದನಕಟಾ ಕೊರಳನೆಂದುದು ನಗುತ ವಿಟನಿಕರ ೩೪


ಅರಳುಗಂಗಳ ಬೆಳಗು ಹೊಯ್ದು

ಬ್ಬರಿಸೆ ಚಿತ್ತದ ತಿಮಿರ ಹೆಚ್ಚಿತು

ಕುರುಳ ಕಾಳಿಕೆಯಿಂದ ಮುಖ ಬಿಳುಪೇರಿ ವಿಟಜನದ

ಸರಸತರ ಲಾವಣ್ಯರಸದಿಂ

ದುರಿಮಸಗೆ ಜನಹೃದಯದಲಿ ಮೈ

ಪರಿಮಳದ ಪಸರದಲಿ ಪದ್ಮಿನಿ ಬಂದಳೊಲವಿನಲಿ  ೩೫


ನಡೆ ನಡೆಯ ಬಂಧಿಸಿತು ನೋಟವ

ನುಡುಗಿಸಿತು ಕುಡಿನೋಟ ಸಖಿಯರ

ನುಡಿ ಸಮೇಳದ ಮಾತು ಮನುಜರ ಮಾತ ಮಾಣಿಸಿತು

ಕೆಡಿಸಿತಧರದ ರಾಗ ರಾಗವ

ಬಡತನವ ಹೆಚ್ಚಿಸಿತು ನಡುವಿನ

ಬಡತನವು ವಿಟಜನಕೆನಲು ನಡೆತಂದಳಿಂದುಮುಖಿ ೩೬


ಕುರುಳ ತಿದ್ದುತ ಮೊಲೆಗೆ ಮೇಲುದ

ಸರಿವುತೇಕಾವಳಿಯ ಮೆಲ್ಲನೆ

ತಿರುಹಿ ಹಾಯ್ಕುತ ಬಿಡುಮುಡಿಯನೆಡಗೈಯೊಳೊಂದಿಸುತ

ವರ ನಿಖಾರಿಯ ನಿರಿಯ ರಭಸದ

ಚರಣದಂದುಗೆ ದನಿಯ ಗಮನದ

ಭರದಿ ಕಿರುಬೆಮರಿಡುತ ನಡೆತರುತಿರ್ದಳಿಂದುಮುಖಿ ೩೭


ಬರವ ಕಂಡನು ಪಾರ್ಥನೇನು

ತ್ತರೆ ಕುಮಾರಿ ಕಠೋರಗತಿಯಲಿ

ಬರವು ಭಾರಿಯ ಕಾರಿಯವ ಸೂಚಿಸುವುದೆನೆ ನಗುತ

ಬರವು ಬೇರಿಲ್ಲೆನ್ನ ಮಾತನು

ಹುರುಳುಗೆಡಿಸದೆ ಸಲಿಸುವೊಡೆ ನಿಮ

ಗರುಹಿದಪನೆನೆ ಮೀರಬಲ್ಲೆನೆ ಮಗಳೆ ಹೇಳೆಂದ ೩೮


ಪುರಕೆ ಹಾಯ್ದರು ಹಸ್ತಿನಾಪುರ

ದರಸುಗಳು ಹೊಲನೊಳಗೆ ಶತಸಾ

ವಿರದ ತುರುಗಳ ಹಿಡಿದರಳಿದುದು ಗೋಪಪಡೆ ತಾಗಿ

ಮರಳಿಚುವಡೆಮ್ಮಣ್ಣ ದೇವನ

ಧುರಕೆ ಸಾರಥಿಯಿಲ್ಲ ನೀವಾ

ನರನ ಸಾರಥಿಯೆಂದು ಕೇಳಿದೆವೆಂದಳಿಂದುಮುಖಿ ೩೯


ಇನ್ನು ನೀವೇ ಬಲ್ಲಿರೆನೆ ನಡೆ

ನಿನ್ನ ಮಾತನು ಮೀರಬಲ್ಲೆನೆ

ಮುನ್ನ ಸಾರಥಿಯಹೆನು ನೋಡುವೆನೆನುತ ವಹಿಲದಲಿ

ಬೆನ್ನಲಬಲೆಯನೈದಲಾ ಸಂ

ಪನ್ನಬಲನೋಲಗಕೆ ಬರೆ ಹರು

ಷೋನ್ನತಿಯಲುತ್ತರ ಕುಮಾರನು ಕರೆದು ಮನ್ನಿಸಿದ ೪೦


ಎಲೆ ಬೃಹನ್ನಳೆ ತೆತ್ತುದೆನಗ

ಗ್ಗಳೆಯರೊಳು ವಿಗ್ರಹವು ಸಾರಥಿ

ಯಳಿದನೆನ್ನವ ನೀನು ಸಾರಥಿಯಾಗಿ ಸಮರದಲಿ

ಉಳುಹಬೇಹುದು ನೀ ಸಮರ್ಥನು

ಫಲುಗುಣನ ಸಾರಥಿಯಲೈ ನೀ

ನೊಲಿದು ಮೆಚ್ಚಲು ಕಾದಿ ತೋರುವೆನಹಿತ ಸೇನೆಯಲಿ ೪೧


ಭರತವಿದ್ಯಾ ವಿಷಯದಲಿ ಪರಿ

ಚರಿಯತನ ನಮಗಲ್ಲದೀ ಸಂ

ಗರದ ಸಾರಥಿತನವ ಮರೆದೆವು ಹಲವು ಕಾಲದಲಿ

ಅರಿಭಟರು ಭೀಷ್ಮಾದಿಗಳು ನಿಲ

ಲರಿದು ಸಾರಥಿತನದ ಕೈ ಮನ

ಬರಡರಿಗೆ ದೊರೆಕೊಂಬುದೇ ರಣ ಸೂರೆಯಲ್ಲೆಂದ ೪೨


ಆನಿರಲು ಭೀಷ್ಮಾದಿಗಳು ನಿನ

ಗೇನ ಮಾಡಲು ಬಲ್ಲರಳುಕದೆ

ನೀನು ನಿಲು ಸಾಕೊಂದು ನಿಮಿಷಕೆ ಗೆಲುವೆನವರುಗಳ

ತಾನದಾರೆಂದರಿಯಲಾ ಗುರು

ಸೂನು ಕರ್ಣ ದ್ರೋಣರೆಂಬವ

ರಾನರಿಯದವರಲ್ಲ ಸಾರಥಿಯಾಗು ನೀನೆಂದ ೪೩


ವೀರನಹೆ ಬಳಿಕೇನು ರಾಜಕು

ಮಾರನಿರಿವೊಡೆ ಹರೆಯವಲ್ಲಾ

ಸಾರಥಿತ್ವವ ಮಾಡಿ ನೋಡುವೆ ರಥವ ತರಿಸೆನಲು

ವಾರುವದ ಮಂದಿರದಲಾಯಿದು

ಚಾರು ತುರಗಾವಳಿಯ ಬಿಗಿದನು

ತೇರ ಸಂವರಿಸಿದನು ರಥವೇರಿದನು ಕಲಿಪಾರ್ಥ೪೪


ಮಂಗಳಾರತಿಯೆತ್ತಿದರು ನಿಖಿ

ಳಾಂಗನೆಯರುತ್ತರಗೆ ನಿಜ ಸ

ರ್ವಾಂಗ ಶೃಂಗಾರದಲಿ ಹೊಳೆವುತ ಬಂದು ರಥವೇರಿ

ಹೊಂಗೆಲಸಮಯ ಕವಚವನು ಪಾ

ರ್ಥಂಗೆ ಕೊಟ್ಟನು ಜೋಡಿಸೀಸಕ

ದಂಗಿಗಳನಳವಡಿಸಿ ರಾಜಕುಮಾರನನುವಾದ ೪೫


ನರನು ತಲೆಕೆಳಗಾಗಿ ಕವಚವ

ಸರಿವುತಿರೆ ಘೊಳ್ಳೆಂದು ಕೈ ಹೊ

ಯ್ದರಸಿಯರು ನಗೆ ನಾಚಿದಂತಿರೆ ಪಾರ್ಥ ತಲೆವಾಗಿ

ತಿರುಗಿ ಮೇಲ್ಮುಖವಾಗಿ ತೊಡಲು

ತ್ತರೆ ಬಳಿಕ ನಸುನಗಲು ಸಾರಥಿ

ಯರಿಯ ತಪ್ಪೇನೆನುತಲುತ್ತರ ತಾನೆ ತೊಡಿಸಿದನು ೪೬


ಕವಚವನು ತೊಡಲರಿಯದವನಾ

ಹವಕೆ ಸಾರಥಿತನವ ಮಾಡುವ

ಹವಣು ತಾನೆಂತೆನುತಲಿದ್ದರು ನಿಖಿಳ ನಾರಿಯರು

ಬವರವನು ನಮ್ಮಣ್ಣಗೆಲಿದಪ

ನವರ ಮಣಿ ಪರಿಧಾನವಾಭರ

ಣವನು ಸಾರಥಿ ಕೊಂಡುಬಾಯೆಂದಳು ಸರೋಜಮುಖಿ 


ನಸುನಗುತ ಕೈಕೊಂಡನರ್ಜುನ

ನೆಸಗಿದನು ರಥವನು ಸಮೀರನ

ಮಿಸುಕಲೀಯದೆ ಮುಂದೆ ಮಿಕ್ಕವು ವಿಗಡವಾಜಿಗಳು

ಹೊಸಪರಿಯ ಸಾರಥಿಯಲಾ ನಮ

ಗಸದಳವು ಸಂಗಾತ ಬರಲೆಂ

ದುಸುರದುಳಿದುದು ಹಿಂದೆ ಪುರದಲಿ ಚಾತುರಂಗ ೪೮


ಗತಿಗೆ ಕುಣಿದವು ನಾಸಿಕದ ಹುಂ

ಕೃತಿಯ ಪವನನ ಹಳಿವ ಲುಳಿಯಲಿ

ಗತಿಯ ಸಂಚಿತ ಪಂಚಧಾರಾ ಪ್ರೌಢವಾಜಿಗಳು

ವಿತತ ರಥ ಪದದಳಿತ ವಸುಧೋ

ತ್ಪತಿತ ಧೂಳೀಪಟಲ ಪರಿಚುಂ

ಬಿತ ದಿಶಾಮುಖನೈದಿದನು ಕುರುರಾಯ ಮೋಹರವ 


ಮುಂದೆ ರಥವೆಸಗಿದನು ಪಾರ್ಥನು

ಬಂದನುತ್ತರ ಸಹಿತ ವಹಿಲದೊ

ಳಂದು ಬಡಗಣದೆಸಗೆ ಮೇಲಣ ಸುರರು ನೋಡುತಿರೆ

ಇಂದಿನಾಹವದೊಳಗೆ ನರ ರಿಪು

ವೃಂದವನು ಜಯಿಸುವನೆನುತಲಾ

ನಂದದಿಂದವೆ ಹರುಷಿಯಾದನು ವೀರನಾರಯಣ ೫೦


ಸಂಕ್ಷಿಪ್ತ ಭಾವ

Lrphks Kolar


ಉತ್ತರ ಕುಮಾರನಿಗೆ ಪಾರ್ಥನು ಸಾರಥಿಯಾದದ್ದು.


ವಿರಾಟನೊಂದಿಗೆ ಪಾಂಡವರೆಲ್ಲರೂ ಗೋರಕ್ಷಣೆಗೆ ಹೊರಟರಾದರೂ ಅರ್ಜುನನನ್ನು ಇಲ್ಲಿಯೇ ಬಿಟ್ಟು ಹೊರಟರು. ಅವರೆಲ್ಲ ವಿಜಯದ ಸಂಭ್ರಮದಲ್ಲಿರುವಾಗ ಇತ್ತ ಉತ್ತರದ ಕಡೆಯಿಂದ ಗೋಗ್ರಹಣವಾಯಿತು. ಕೌರವರ ಬಲು ದೊಡ್ಡ ಸೇನೆ ಗೋವುಗಳನ್ನು ಸೆರೆಹಿಡಿದು ಕೆಲವರನ್ನು ಸುದ್ದಿ ಹೇಳಲು ಕಳಿಸಿದರು. ಸೋತು ಸುಣ್ಣವಾಗಿ‌ ಬಂದ ಗೋವಳರು ವಿರಾಟನ ಮಗ ಉತ್ತರಕುಮಾರನಲ್ಲಿ ಮೊರೆಯಿಟ್ಟರು. ಅಪಾರವಾದ ಸೈನ್ಯ ಬಂದಿದೆಯೆಂದೂ ಹೇಳಿದರು.


ಹೆಂಗಸರ ಮಧ್ಯೆ ಇದ್ದ ಉತ್ತರನು ಬರಿದೇ ಬಡಾಯಿ ಕೊಚ್ಚಿಕೊಂಡನು. ಮುದುಕರೊಂದಿಗೆ ಯುದ್ಧಮಾಡಲಾರೆ, ಅನ್ಯಕುಲದಲ್ಲಿ ಜನಿಸಿದವರೊಂದಿಗೆ ಕಾದಲಾರೆ, ದುರ್ಯೋಧನನನ್ನು ಒಂದೇ ಕ್ಷಣಕ್ಕೆ ಸೋಲಿಸಬಲ್ಲೆ, ಪಾಂಡವರನ್ನು ಮೋಸ ಮಾಡಿದಂತಲ್ಲ, ನನ್ನ ಬಳಿ ಅವನ ಆಟ ನಡೆಯದು ಎಂದೆಲ್ಲ ಹೇಳಿಕೊಂಡನು. ಕೊನೆಯಲ್ಲಿ ತನ್ನ ಸಾರಥಿ ಸತ್ತುಹೋಗಿರುವುದರಿಂದ ಹೇಗೆ ಹೋಗುವುದು ಎಂದು ಅಳಲಿದನು.


ಅಲ್ಲಿಯ ಎಲ್ಲ ಮಾತುಗಳನ್ನು ತಿಳಿದ ಅರ್ಜುನನು ದ್ರೌಪದಿಗೆ ಹೋಗಿ ತಾನು ಸಾರಥಿಯಾಗಬಲ್ಲೆನೆಂದು ಹೇಳು ಎಂದನು. ಅದರಂತೆ ಅವಳು ಬಂದು ಈ ಬೃಹನ್ನಳೆಯು ಹಿಂದೆ ಅರ್ಜುನನಿಗೆ ಸಾರಥಿಯಾಗಿದ್ದ ಬಗ್ಗೆ ಹೇಳಿ ಅವನನ್ನು ಕರೆತರಲು ಉತ್ತರೆಯನ್ನು ಕಳಿಸುವಂತೆ ಹೇಳಿದಳು. ಅದರಂತೆ ಉತ್ತರೆಯು ಅರ್ಜುನನನ್ನು ಕರೆತಂದಳು. ಉತ್ತರಕುಮಾರನ ರಥ ಸಿದ್ಧವಾಯಿತು.ಎಲ್ಲ ಹೆಂಗಸರ ಮುಂದೆ ತನ್ನ ಧೈರ್ಯವನ್ನು ಕೊಚ್ಚಿಕೊಂಡಿದ್ದರಿಂದ ಈಗ ಅವನು ಹೊರಡಲೇಬೇಕಾಯಿತು. ಸಾರಥಿಯು ಕವಚವನ್ನು ತಲೆಕೆಳಗಾಗಿ ತೊಟ್ಟನು. ಎಲ್ಲರೂ ಗೊಳ್ಳೆಂದು ನಕ್ಕರು. ಉತ್ತರನೇ ಸರಿಯಾಗಿ ತೊಡಿಸಿದನು. ಉತ್ತರೆಯು ಸೈನ್ಯದ ಆಭರಣಗಳು, ಬಣ್ಣಬಣ್ಣದ ಬಟ್ಟೆಗಳನ್ನು ತರುವಂತೆ ಸೂಚಿಸಿದಳು. ಬೇಕೆಂದೇ ತಡವರಿಸಿದಂತೆ ನಟಿಸಿದ ಅರ್ಜುನನು ರಥ ಹತ್ತಿ ಕುದುರೆಗಳ ಲಗಾಮು ಹಿಡಿದನು. ಉತ್ತರ ಮಹಾ ಧೈರ್ಯದಿಂದ ಯುದ್ಧಕ್ಕೆ ಹೊರಟನು.


(ನಮ್ಮ 'ಕನ್ನಡ ಸಂಪದ'ದಲ್ಲಿ ಮೂಡಿಬರುತ್ತಿರುವ ಬರಹಗಳು 'ಸಂಸ್ಕೃತಿ ಸಲ್ಲಾಪ' ತಾಣವಾದ www.sallapa.com ನಲ್ಲಿಯೂ ಲಭ್ಯವಿದೆ. ನಮಸ್ಕಾರ)


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ