ಭಾರತಕಥಾಮಂಜರಿ63
ಕುಮಾರವ್ಯಾಸನ
ಕರ್ಣಾಟ ಭಾರತ ಕಥಾಮಂಜರಿ
ವಿರಾಟ ಪರ್ವ - ನಾಲ್ಕನೆಯ ಸಂಧಿ
ಅರಸು ಕುರುಪತಿ ಪಾಂಡುನಂದನ
ರರಿಕೆಯಾಗಲು ಮಲ್ಲ ಬಳಗವ
ಕರೆಸಿ ಕಳುಹಲು ವಲಲ ಕೊಂದನು ಮತ್ಸ್ಯನಗರಿಯಲಿ
ಕೇಳು ಜನಮೇಜಯ ಧರಿತ್ರೀ
ಪಾಲ ಪಾಂಡುಕುಮಾರರಡವಿಯ
ಬೀಳು ಕೊಂಡಜ್ಞಾತವಾಸದೊಳಿರಲು ಕೌರವನು
ಕಾಲ ಸವೆದುದು ಪಾಂಡುಸುತರಿಗೆ
ಮೇಲೆ ನೆಗಳುವುದಾವ ರಾಯರ
ಊಳಿಗವು ತಾನೆನುತ ತಿಳಿಹಿದನವನು ಭೀಷ್ಮಂಗೆ ೧
ದ್ರೋಣ ಗೌತಮವರ್ಯ ಗಂಗಾ
ಸೂನುವಶ್ವತ್ಥಾಮನೆನಿಪ ಮ
ಹಾನುಭಾವರು ದುಷ್ಟಮಂತ್ರಿ ಚತುಷ್ಟಯರು ತಾವು
ಸಾನುರಾಗದಲಿರೆ ನೃಪತಿಸು
ಮ್ಮಾನದಿಂದೋಲಗದೊಳಿರುತಿರೆ
ವೀನದೇಶಾಧಿಪನ ಪುರದಿಂ ಬಂದನೋರ್ವ ಚರ ೨
ತಂದು ಹರಹಿದ ಕೀಚಕನ ಮೃತಿ
ಯಂದವನು ನೃಪ ಕೇಳಿ ದೂತಂ
ಗೆಂದ ಮಡುಹಿದ ವೀರನಾವನು ಮರ್ತ್ಯಜಾತಿಯಲಿ
ಇಂದುಮುಖಿಯನು ಕೆಣಕಲಾಗಲೆ
ಬಂದು ಗಂಧರ್ವಕರು ಕೀಚಕ
ವೃಂದವನು ಸವರಿದರು ಕೌರವರಾಯ ಚಿತ್ತೈಸು ೩
ದೇವಲೋಕದ ಸತಿಗೆ ಮರ್ತ್ಯರೊ
ಳಾವ ಹೋಲಿಕೆಯುಂಟು ಮಡುಹಲ
ದಾವ ವೀರನೊ ಕಾಣೆ ಕೀಚಕನತುಳ ಭುಜಬಲನು
ಭಾವಿಸಲು ಪಾಂಡವರ ಸತಿಯನು
ಭಾವಜನ ಕೇಳಿಯಲಿ ಬಯಸಲು
ಪಾವಮಾನಿಯೆ ಕೊಂದ ನಿಶ್ಚಯವೆಂದನಾ ಭೂಪ ೪
ಕಳುಹೆ ಮಲ್ಲರ ಭೀಮನಿದ್ದರೆ
ಉಳಿಯಲೀಯನು ಮತ್ತೆ ಪಾಂಡವ
ರುಳಿವು ತಿಳಿದರೆ ಜಯಿಸಬಹುದೈಯೆಂದು ಚಿಂತಿಸುತ
ತಿಳುಹಿದನು ಭೀಷ್ಮಂಗೆ ದ್ರೋಣಗೆ
ನಲವು ಮಿಗೆ ಹರುಷದಲಿ ದೂತರ
ಕಳುಹಿ ಕರೆಸಿದ ಮನೆಯ ಮಲ್ಲ ಕೌರವರರಾಯ ೫
ಕರೆಸಿದನು ಜೀಮೂತ ಮಲ್ಲನ
ಕರೆಸಿದನು ಸಿಂಧೂರ ಮಲ್ಲನ
ಕರೆಸಿದನು ಜಗಜಟ್ಟಿ ಮಲ್ಲನ ವೀರ ದೇವುಲನ
ಕರೆಸಿದನು ಶಾರ್ದೂಲ ಮಲ್ಲನ
ಕರೆಸಿದನು ಗಜವೈರಿ ಮಲ್ಲನ
ಕರೆಸಿದನು ಶಾಕಂಬರೀಕನತುಳ ಭುಜಬಲನ ೬
ಉಡಿದನೊಬ್ಬನು ಗಜದ ದಾಡೆಯ
ಮಡಿಯಲನುಗೈಸಿದನು ಕರಿಯನು
ಹಿಡಿದವನು ತಾನಿವನಘಾಟದ ಸಿಡಿಲನಡಹಾಯ್ದು
ಒಡನೆ ಬೊಬ್ಬಿಡುವನು ಮಹಾಹವ
ತೊಡರಿಚುವರಿಲ್ಲಾಯೆನುತ ನೆರೆ
ಮಿಡುಕುವನು ತಾನೀತನೆಂಬನು ಭೂಪ ಕೇಳೆಂದ ೭
ಹೊಡೆದು ಭುಜವನು ಹುಂಕರಿಸಿ ಕಿಡಿ
ಯಿಡುವ ಮೀಸೆಯ ತಿದ್ದುತೊಲವಿನ
ಲಡಿಗಡಿಗೆಯಾರ್ಭಟಿಸಿ ನಿಂದನು ಮಲ್ಲ ಜೀಮೂತ
ನುಡಿ ನೃಪತಿ ಹದನೇನು ರಿಪುಗಳ
ಮಡುಹಿ ಬರಲೋ ಮೇಣು ಕೈಸೆರೆ
ವಿಡಿದು ತರ್ಲೋ ಏನು ಹದನೆಲೆ ನೃಪತಿ ಹೇಳೆಂದ ೮
ಈ ಪರಿಯ ತಂತಮ್ಮ ಶೌರ್ಯ ಪ್ರ
ತಾಪವನು ವಿಸ್ತರಿಸೆ ಕೌರವ
ಭೂಪನೆಂದನು ನೀವು ದಕ್ಷಿಣ ಮತ್ಸ್ಯಪುರವರಕೆ
ಪೋಪುದಲ್ಲಿಯೆ ಮಲ್ಲವಿದ್ಯೆಯ
ತೋಪ ಮೆರೆವುದು ಭೀಮನಿದ್ದರೆ
ಆಪುರದಲೊತ್ತೊತ್ತಿ ಹೊಗಳಿಸಿ ನಿಮ್ಮ ಬಿರುದುಗಳ ೯
ಸುದ್ದಿಯಿಲ್ಲದೆ ಹೋದ ಪಾಂಡವ
ರಿದ್ದರಾದೊಡೆ ಬೀದಿಗಲಹದ
ಯುದ್ಧಕೆಳಸದೆ ತಿರುಗಿಸುವುದೊಬ್ಬನನು ಕರಿಪುರಿಗೆ
ಉದ್ದುರುಟುತನ ಬೇಡ ಮಲ್ಲರೆ
ಗೆದ್ದು ಬರಲೀ ರಾಜಕಾರ್ಯವ
ಬುದ್ಧಿ ಮಾರ್ಗವಿದೀಗ ಪಯಣವ ಮಾಡಿ ನೀವೆಂದ ೧೦
ತರಿಸಿದನು ಹೊಂದೊಡವೆ ರತ್ನಾ
ಭರಣವೊಪ್ಪುವ ತೋಳ ಭಾಪುರಿ
ವರಮಣಿಗಳಿಂದೆಸೆವ ಬಿರುದಿನ ಕಡೆಯ ಸರಪಳಿಯ
ಕೊರಳ ಹಾರವ ವಜ್ರಮಾಣಿಕ
ತುರುಗಿ ತೂಳುವ ಕಾಲಪೆಂಡೆಯ
ವರಸುವಸ್ತ್ರಾದಿಗಳ ವೀಳೆಯವಿತ್ತು ಬೀಳ್ಕೊಂಡ ೧೧
ಹೊಡೆದುವೈ ಭೇರಿಗಳು ತುಂಬಟ
ವೆಡಬಲದ ಡೌಡೆಗಳು ಮಿಗೆ ಬೊ
ಬ್ಬಿಡುವ ನಿಸ್ಸಾಳದ ಮಹಾರವ ರಾಯಗಡಿಬಿಡಿಯ
ಘುಡುಘುಡಿಪ ಹೆಗ್ಗಾಳೆ ಮೊಳಗುವ
ಬೆಡಗು ಜಾಗಟೆ ಬೊಬ್ಬೆಯಲಿ ಜಗ
ನಡುಗೆ ಗಜಪುರದಿಂದ ಬಂದರು ಪಯಣಗತಿಗಳಲಿ ೧೨
ಸುರನದಿಯನುತ್ತರಿಸಿ ಗೋದಾ
ವರಿಯ ಹೊರೆಗೈದಿದರು ತರಣಿಯ
ಕಿರಣಲಹರಿಯ ಹೊಯ್ಲಿನಲಿ ಶ್ರಮವಾಗೆ ಪರಿಹರಿಸಿ
ಮರುದಿವಸ ತೆರಳಿದರು ಮಲ್ಲರು
ನೆರೆದು ನಡೆದುದು ಬಂದು ಕೃಷ್ಣೆಯ
ವರನದಿಯ ತೀರದಲಿ ಬೀಡು ವಿನಾಥಪುರದಲ್ಲಿ ೧೩
ತಳೆದುದಾ ದಿವಸದಲಿ ಮಲ್ಲರ
ಬಳಗ ರಾತ್ರಿಯೊಳೊಂದುದಿನ ನೆರೆ
ಯಳಿದು ಸಾವುದ ಕಂಡು ಮೈಮುರಿದೆದ್ದು ಕಳವಳಿಸಿ
ಚಲಿಸಿ ಬೆದರಿದರೇನು ಬೊಬ್ಬಿರಿ
ದೊಳಗೆ ಹೊಕ್ಕಿತೊ ಸಿಂಹವೆನೆ ಕಳ
ವಳಿಸಿ ಮಲ್ಲರು ಮಬ್ಬಿನಲಿ ತೂಳಿದರು ದೆಸೆದೆಸೆಗೆ ೧೪
ಲೇಳಿಗೆಯಲುಬ್ಬೆದ್ದು ಮಲ್ಲರ
ಪಾಳೆಯವನೆರಗುವುದನದ ನಾ ಕಂಡೆ ಸ್ವಪ್ನದಲಿ
ಕಾಳುಗಿಚ್ಚಿನ ಬಲುಮೆಯಂತಿರೆ
ಧಾಳಿ ಬಂದುದು ಮೇಲೆ ಮತ್ತದ
ಹೇಳುವರೆ ಭಯಗೊಂಬೆನೆಂದನದೊಬ್ಬ ಮಲ್ಲರಿಗೆ ೧೫
ಕಾಲಗತಿಯೆಂತಹುದೊ ರಿಪುಗಳು
ಶೀಲವುಳ್ಳವರೆಂದು ನುಡಿವರು
ಮೇಲೆಯಪಜಯವಹುದು ರಣದಲಿ ಸಾಕದಂತಿರಲಿ
ಕೇಳುತಾ ಜೀಮೂತಮಲ್ಲನು
ಹೇಳು ಹೇಳಿನ್ನೊಮ್ಮೆ ಸಿಡಿಲು ಛ
ಡಾಳದಲಿ ನೆರೆಯೆರಗಿತೇ ಸಟೆಯೆನುತ ನಡೆಗೊಂಡ ೧೬
ಹಲವು ಪಯಣದ ಮೇಲೆ ಮತ್ಸ್ಯನ
ಹೊಳಲಿಗಿವರಿಅತಂದು ಭಟರನು
ಕಳುಹಿದರು ಪುರದರಸಗೆಮ್ಮಯ ಬರವನರುಹೆನುತ
ನಲವು ಮಿಗಲೈತಂದು ಕೋಟೆಯ
ವಳಯದಲಿ ಹೊಕ್ಕವರು ರಾಜಾಂ
ಗಳವ ಸಾರುತೆ ತಿಳುಹಿದರು ಬಾಗಿಲಿನ ಸುಭಟರಿಗೆ ೧೭
ಬಂದು ಕಂಡು ವಿರಾಟರಾಯಗೆ
ನಿಂದು ಕರಗಳ ಮುಗಿದು ಮಲ್ಲರು
ಬಂದು ಪುರಬಾಹೆಯಲಿ ಬಿಟ್ಟುದ ಹೇಳಿದನು ನೃಪಗೆ
ಮುಂದೆ ಕಳುಹಿದರೆನಲು ನೃಪತಾ
ನೆಂದನಾ ದಾರುಕನ ಕರೆಯೆನ
ಲಂದು ವುರವಣಿಸಿದನು ಭೂಮೀಪಾಲನೋಲಗಕೆ ೧೮
ಕರವ ಮುಗಿದಾ ದಾರುಕನ ಕೂ
ಡರಸ ನೇಮವನಿತ್ತು ಮಲ್ಲರ
ಕರೆಯೆನಲು ತಿರುಗಿದನು ಭಟ್ಟನ ಸಹಿತ ವಹಿಲದಲಿ
ಪುರದ ಹೊರಬನದಲ್ಲಿಯಿರುತಿ
ರ್ದರನು ಕಂಡು ನೃಪಾಲ ನಿಮ್ಮನು
ಕರೆಯ ಕಳುಹಿದನೆಂದೊಡೆದ್ದರು ಮಲ್ಲರತಿಮುದದಿ ೧೯
ಪರಿಪರಿಯ ಶೃಂಗಾರದಲಿ ಮ
ಲ್ಲರುಗಳೇಳಲು ಮುಂದೆ ನಾದಿಪ
ಬಿರುದು ಜಾಗಟೆ ಡೌಡೆ ಪಾಠಕನಿಕರದೊಗ್ಗಿನಲಿ
ಪುರವ ಹೊಕ್ಕರು ರಾಜಸಭೆಗೊಡ
ನಿರದೆ ನಡೆಯಲು ಮತ್ಸ್ಯಭೂಪತಿ
ಸಿರಿಯೊಳೋಲಗವಿತ್ತು ಕುಳ್ಳಿರ್ದನು ಸರಾಗದಲಿ ೨೦
ಉರವಣಿಸಿ ಮುಂದುಗ್ಘಡಿಪ ಭ
ಟ್ಟರುಗಳೆಲ್ಲರ ನಿಲಿಸಿ ತಾಳಿಯ
ವರಮಣಿಗಳಿಂದೆಸೆವ ಭೂಮೀಪತಿಗೆ ಜೀಮೂತ
ಶಿರವ ಬಾಗುತ ನಿಂದಿರಲು ಸಭೆ
ನೆರೆದು ನೋಡಲು ಮತ್ಸ್ಯ ಭೂಪತಿ
ಇರವದೆಲ್ಲಿಯದೆಂದು ಕೇಳಲು ನುಡಿದ ಜೀಮೂತ ೨೧
ಇಂದುವಂಶದಲಧಿಕರಾಯರ
ವೃಂದದೊಳಗಾ ನಹುಷಪುತ್ರರು
ಸಂದರಾಮಾಲೆಯಲಿ ಬಳಿಕಾ ಶಾಂತ ಭೂಪತಿಗೆ
ನಂದನನು ಜನಿಸಲ್ಕೆಯವನಿಗೆ
ಯಂಧನೃಪ ಜನಿಸಿದನು ಆತನ
ನಂದನನು ಕುರುರಾಯನಾತನ ಮಲ್ಲರಾವೆಂದ ೨೨
ಏನು ನಿಮ್ಮಯ ಬರವು ನಗರದ
ಲೇನು ಕೆಲಸವು ನೃಪತಿ ದೇಶದ
ಜಾಣಿಕೆಯು ತಾನೇನು ದರ್ಪದ ಬರವೊ ಹೇಳೆನಲು
ಧ್ಯಾನಿಸಿಯೆ ನಾವ್ ಬಂದ ಕೆಲಸವ
ಕಾಣಿಸುವ ಭಾರವನೇ ನಿಮ್ಮದು
ಮಾನನಿಧಿ ಕೌರವನು ಕಳುಹಿದ ಮಲ್ಲಗಾಳಗಕೆ ೨೩
ಅದು ನಿಮಿತ್ತದಿ ನಾವು ಬಂದಿಹ
ಹದನಿದೀಗಿದು ರಾಯ ಕೇಳೆನೆ
ಮುದದಿ ಮನದುಬ್ಬಿನಲಿ ನುಡಿದನು ಮತ್ಸ್ಯನೃಪ ನಗುತ
ಹದನಹುದು ಮಲ್ಲರಿಗೆ ಬಹುದೇ
ಶದಲಿ ಕೃಪಣತೆಯುಂಟು ನಿಮ್ಮಯ
ಮೃದು ವಚನ ಬಲು ಮೋಡಿಗಾಡಿಕೆಗಾರು ಸರಿಯೆಂದ ೨೪
ಏನು ಹದವಿದಕಿನ್ನು ಕೌರವ
ಮಾನಭಂಗವ ಕಂಡು ಕಳುಹಿದೊ
ಡಾನುವವರಿವರೊಡನೆ ಕಾಣೆನು ನಮ್ಮ ಮಲ್ಲರಲಿ
ಮಾನನಿಧಿ ಹೊರವಂಟು ಸಭೆಯೊಳ
ನೂನರಾಗದಿಯಿರಲು ಕಾಲನ
ಸೂನು ನುಡಿದನು ಕೇಳು ಜನಮೇಜಯ ಮಹೀಪಾಲ ೨೫
ಕರೆಸು ನಿಮ್ಮಯ ಮಲ್ಲರನು ಸಂ
ಗರವ ಜಯಿಸಲಿ ಜಯಿಸದಿರಲಾ
ಪರಿಯ ಬಿಡುವರೆ ರಾಯಲಕ್ಷಣಗಳನು ವಹಿಸಿರ್ದು
ಕರೆಸಿದರೆ ತಮತಮಗೆ ತವಕದಿ
ಹಿರಿದು ಶೃಂಗಾರವನು ಮಾಡಿಯೆ
ನೆರೆದು ಬಂದರು ಮೊರೆವ ಡೌಡೆಯ ವಾದ್ಯ ರಭಸದಲಿ ೨೬
ತುಳುವ ತುಂಬುರ ನಾಗನಾದಳ
ವಳಿಗ ಮುಖ್ಯರು ಬಂದು ಸಭೆಯಲಿ
ನಲಿದು ಮಿಗೆ ಗರ್ಜಿಸಿತು ರಾಯನ ಮುಂದೆ ಕೆಲಕೆಲರು
ಛಲದೊಳಗೆ ಬಲದೊಳಗೆ ಮಲ್ಲರ
ಬಳಗ ಗಂಡನು ತಾನು ಹೇಳೆಂ
ಬುಲುಹುಗಳ ಸಂತೈಸಿ ನಗುತ ವಿರಾಟನಿಂತೆಂದ ೨೭
ಕಳುಹಿದನು ಗಜಪುರದ ನೃಪಕುಲ
ತಿಲಕನಿವರನು ಮಲ್ಲಯುದ್ಧಕೆ
ಹೊಳಲಿಗೈದಲು ನಿಮ್ಮ ಕರೆಸಿದೆವೆನಲು ತಮತಮಗೆ
ನಲಿದು ಹರುಷದಲಂದು ಬಾಹ
ಪ್ಪಳಿಸಿ ಮುಷ್ಟಿಯ ಜಡಿದು ಕದನ
ಕ್ಕೆಳಸಿದರು ಕಳುಹಿದರು ದೂತರ ಮಲ್ಲರಿದ್ದೆಡೆಗೆ ೨೮
ಬರಲು ಯಿವರಿದಿರಾಗಿ ಬಂದರು
ಕರವ ಧರಣಿಯಲುದ್ದಿ ಮಿಗೆಯ
ಬ್ಬರಿಸಿ ಭುಜವನು ಹೊಡೆದು ನಿಂದಿರೆ ಕಂಡು ಖಾತಿಯಲಿ
ಧುರಕೆ ಎಲಸಿದರಾದರಿವದಿರ
ಶಿರವ ಚೆಂಡಾಡುವೆನೆನುತ ಮೋ
ಹರಿಸಿ ಕಿಡಿಕಿಡಿಯೋಗಿ ಸಿಂಧುರಮಲ್ಲ ಮಾರಾಂತ ೨೯
ಅಳವಿಯಲಿ ಬಂದೊಬ್ಬರೊಬ್ಬರು
ಹಳಚಿದರು ಹೆರೆಸಾರಿ ಮುಷ್ಟಿಯ
ತುಳುವ ಪುಟನೆಗೆದೆದ್ದು ತಿವಿದನು ತುಡುಕಿ ಸಿಂಧುರನ
ಅಳುಕದವನಾ ಭುಜದ ಸತ್ವದಿ
ಬಳಲಿ ಸಿಂಧುರ ತುಡುಕಿ ನೆಲಕ
ಪ್ಪಳಿಸೆ ಶಿರ ಶತಚೂರ್ಣವಾದುದು ಬೆದರಿತಾಸ್ಥಾನ ೩೦
ಮಡಿದನವ ಶವದೆಗೆದು ರಣಕವ
ಗಡಿಸಲಾ ಚೌದಂತ ಮಲ್ಲನು
ಜಡಿದು ಹಳಚಿದ ನೊಂದು ಸಿಂಧುರ ಮಲ್ಲರಿಪು ಶಿರವ
ಮಡೆಮುರಿದು ಕಿತ್ತಿಟ್ಟು ಡೌಡೆಯ
ಹೊಡೆಯೆನಲು ಝಮ್ಮೆಂದು ಕುಟ್ಟಲು
ನಡುಗಿತಾಯಾಸ್ಥಾನ ಕೇಳ್ ಜನಮೇಜಯ ಕ್ಷಿತಿಪ ೩೧
ಎದ್ದನವ ಬೊಬ್ಬಿರಿದು ಸಿಂಧುರ
ಗೆದ್ದ ಗರ್ವವನುಗುಳೆನುತಲು
ಬ್ಬೆದ್ದು ಹೊಕ್ಕನು ತೋಳ ತೆಕ್ಕೆಯ ಮಲ್ಲ ಹೋಲಿಕೆಗೆ
ಭದ್ರಗಜ ಕೈಯ್ಯಿಕ್ಕಿದವೊಲುರಿ
ದೆದ್ದು ಸಿಂಧುತರಹರಿಸಿ ಮೇ
ಲೆದ್ದು ಬರಸೆಳೆದೊದೆದು ಕುಸಿದೊತ್ತಿದನು ಮುಷ್ಟಿಯಲಿ ೩೨
ಕ್ಕುರುಕಿ ಶೋಣಿತ ಧಾರೆ ಬಾಯಿಂ
ದೊರತೆಯಿಡೆ ಮೈಮರೆದು ತುಂಬುರ ಕಳನ ಮಧ್ಯದಲಿ
ಒರಗಿದನು ಕಂಡುಳಿದ ಮಲ್ಲರು
ಧುರಕೆ ಮಿಸುಕದೆ ಮುಸುಕುದಲೆಯಲಿ
ಸರಿವವರ ನೃಪಕಂಡು ದುಗುಡವ ಹೊತ್ತು ಬೆರಗಾದ ೩೩
ಧುರವ ಜಯಿಸಿದಿರಿಂದು ಯುದ್ಧಕೆ
ಕರೆಸುವೆನು ಸಾಕೆನುತ ವರಕ
ರ್ಪುರದ ವೀಳೆಯವಿತ್ತು ನೃಪಬೀಳ್ಕೊಟ್ಟನನಿಬರನು
ಅರಸ ಮರುಳೈ ಮನ್ನಿಸಿದೆ ಸಂ
ಗರಕೆ ನೇಮವನಿತ್ತೆಯಕಟಾ
ವುರಿಯ ನೂಕಿದೆ ಉಳಿದ ಮಲ್ಲರನೆಂದನಾ ಕಂಕ ೩೪
ಬವರವನು ಮನ್ನಿಸಲು ಬೇಕೆಂ
ದವನಿಪತಿ ನೆರೆನುಡಿಯೆ ಮಲ್ಲರ
ನಿವಹವೈತಹುದೆಂದು ನೇಮವನಿತ್ತುದೊಳಿತಾಯ್ತು
ಅವರು ಬಂದರೆ ನಾಳೆ ಮಾಡುವ
ಹವಣದಾವುದು ಬಿಟ್ಟುಕಳೆ ಹೇ
ಳುವೆನು ನಿನಗಿನ್ನೊಮ್ಮೆ ಗೆಲುಗೈಯಹ ಮನೋರಥವ ೩೫
ಅವನಿಪತಿ ಕೇಳ್ನಿನ್ನ ಬಾಣಸಿ
ನವನು ಮಲ್ಲನು ಭೀಮಸೇನನ
ಭವನದಲಿ ಬಲು ಮಲ್ಲವಿದ್ಯೆಯ ಸಾಧಿಸಿದನವನು
ಪವನಸುತನಿಂ ಬಲುಮೆಯೀತನು
ಜವಕೆ ಜವವೊದಗುವನು ನೀನಿಂ
ದಿವನ ಕರೆಸುವುದೆನಲು ಮತ್ಸ್ಯನೃಪಾಲನಿಂತೆಂದ ೩೬
ಎಲೆ ಮಹೀಸುರ ಯೀವಿವೇಕವ
ಬಳಸುವೆನೆ ನೀನರಿಯದಿದ್ದೊಡೆ
ತಿಳಿವೆ ನಾನೆಲ್ಲವನು ಸಂಹರಿಸುವನು ಸಿಂಧುರನು
ಉಳಿದವರ ಗಣಿಸುವನೆ ತಾನಿ
ನ್ನುಳಿದವರು ಕೃಶರೆಂದು ಬಡವನ
ಕೊಲಿಸ ಬಗೆವರೆ ಕಂಕ ನೀ ಹೇಳೆಂದನಾ ಮತ್ಸ್ಯ ೩೭
ಬಲ್ಲೆನಾತನ ಕೈಗುಣಕೆ ಸರಿ
ಯಿಲ್ಲ ಸುಭಟರೊಳಸಮ ಸಾಹಸ
ಮಲ್ಲನಿವನೊಳಗರಿವ ಪವನಜ ಮಲ್ಲ ಕೌಶಲವ
ಅಲ್ಲವೆಂದೆನೆ ನೃಪತಿ ತಾ ತ
ಪ್ಪಲ್ಲ ಜಯಿಸಲಿ ಮೇಣುಸೋಲಲಿ
ಬಲ್ಲೆ ನಾನಂಜದಿರು ಬೇಗದಿ ಕರೆಸು ನೀನೆಂದ ೩೮
ಮುರಿದ ಮೀಸೆಯ ಹೊದರುದಲೆ ಕೆಂ
ಪೊರೆದ ಕಂಗಳ ಹೊಗರು ಮೋರೆಯ
ತುರುಗಿದುಬ್ಬಿನ ರೋಮಪುಳಕದ ಬಿಗಿದ ಹುಬ್ಬುಗಳ
ಹೊರೆದ ದೇಹದ ನಿರುತ ರೌದ್ರದ
ಮರುತಜನು ಕದನಕ್ಕೆ ಕಾಲನ
ಕರೆವವೊಲು ನಡೆತಂದು ನಿಂದನು ಮತ್ಸ್ಯನಿದಿರಿನಲಿ ೩೯
ಬರವ ಕಾಣುತ ಮತ್ಸ್ಯನೃಪನುಪ
ಚರಿಸಿ ವಲಲಂಗೆಂದನೀ ಸಂ
ಗರದಿ ಜಯಿಸಿದರೆಮ್ಮ ಮಲ್ಲರ ಉತ್ತರಾಹಿಗಳು
ಧುರವ ಬಲ್ಲೈ ಮಲ್ಲವಿದ್ಯೆಯ
ನರಿತಿಹೈ ನೀನೆಂದು ಮುನಿವರ
ನರುಹೆ ಕೇಳ್ಚೆನು ವಲಲ ನಿನ್ನಂತಸ್ಥವೇನೆಂದ ೪೦
ಎನಲು ಕಿರುನಗೆ ಮಿನುಗೆ ಮುಖದಲಿ
ಯನಿಲಜನು ಮಗುಳೆಂದನೇತಕೆ
ಜನಪ ಚಿಂತಿಪೆ ಸತ್ತೊಡೆನಗದು ರಾಜಕಾರ್ಯವಲೆ
ಅನುವರವ ಜಯಿಸಿದೊಡೆ ನೀವೆಂ
ದನಿತು ಮಲ್ಲರುವುತ್ತರಾಯಿಗ
ಳೆನಗೆ ನಿಮ್ಮಯ ಕರುಣ ಸಾಕೆಂದನಿಲಜನು ನುಡಿದ ೪೧
ಪ್ರಾಣದತಿಶಯವೇನು ಮಿಗೆ ಸಂ
ಗ್ರಾಣಿಸುವುದಿನ್ನೊಮ್ಮೆ ನಾನೇ
ಕಾಣೆ ಕಾಣುವೆನವರ ಜೀವದ ನೆಲಕಡೆಯನೆಲ್ಲ
ಕ್ಷೋಣಿಪತಿ ಕರೆಸಿದರೆ ಮಲ್ಲ
ಶ್ರೇಣಿ ಬಂದುದು ಧುರವ ಜಯಿಸುವ
ತ್ರಾಣಿಗನ ಕರೆಸೆನುತಲಿದ್ದರು ರಾಜಸಭೆಯೊಳಗೆ ೪೨
ದಿಟ್ಟನಹೆ ಬಾಣಸಿನ ಮನೆಯಲಿ
ಕಟ್ಟುಳಿಲ್ಲದ ಕೂಳ ತಿಂದುರೆ
ಹೊಟ್ಟೆಯನು ನೆರೆ ಬೆಳೆಸಿ ದೇಹದಲುಬ್ಬಿ ಕೊಬ್ಬಿನಲಿ
ಹೊಟ್ಟುಗುಟ್ಟದೊಡಾಗದೆಲೆ ಜಗ
ಜಟ್ಟಿಗಳ ಕೂಡಕಟ ಮಝರೇ
ಬಿಟ್ಟು ಸುಮ್ಮನೆ ಹೋಗು ನಿನಗಳವಲ್ಲ ಹೋಗೆಂದ ೪೩
ಆಗಲದಕೇನೆಮ್ಮ ಸಮರೋ
ದ್ಯೋಗವನು ನಾವ್ ಮಾಳ್ಪೆವದನಿಂ
ನೀಗ ನೋಡಿದ ಮೇಲೆ ಗಹಗಹಿಸುವುದು ನೀತಿಯಲ
ಮೇಗರೆಯದುಬ್ಬಿನಲಿ ನಕ್ಕರೆ
ಹೋಗಬಿಡುವೆನೆ ಸೋಲಿಸದೆ ಹೊರ
ಸಾಗುವೆನೆ ಎನ್ನೊಡನೆ ಸೆಣಸೆಂದನಿಲಜನು ನುಡಿದ ೪೪
ಎಲವೊ ಬಾಣಸಿ ಎನ್ನೊಡನೆ ಹೆ
ಕ್ಕಳಿಸಿ ಸಮರವ ತೊಡಕಿದರೆ ನಿ
ಟ್ಟೆಲುವ ಮುರಿವೆನುಯೆನುತ ಸಿಂಧುರ ಗಾಢಗರ್ವದಲಿ
ಹಳಚಿದನು ಖತಿಯೇರೆ ಬಾಹ
ಪ್ಪಳಿಸಿ ತಿವಿಯಲು ಭೀಮ ನಗುತದ
ಕಳುಕದಿರೆ ಭೀತಿಯಲಿ ಸಿಂಧುರ ಹೊಕ್ಕನುರವಣಿಸಿ ೪೫
ಎರಗಿದರೆ ಕರಘಾತದುರುಬೆಯ
ಪರಿಹರಿಸಿ ನಿಮಿಷದಲಿ ಮಲ್ಲನ
ಬರಸೆಳೆದು ಬಿಗಿಯಪ್ಪಿ ಹೊಕ್ಕಿರಿದವನಿಯಲಿ ಕೆಡಹೆ
ನಿರಿನಿಟಿಲು ನಿಟಿಲೆಂದು ನಿಟ್ಟೆಲು
ಮುರಿಯೆ ಶೋಣಿತವಾರಿ ಬಾಯಿಂ
ದೊರತೆಯಿಡೆ ಸಿಂಧುರನು ಮಲಗಿದ ಸಭೆಯ ಮಧ್ಯದಲಿ ೪೬
ಎದ್ದನಾ ಗಜಸಿಂಗ ಬಾಣಸಿ
ದೊದ್ದೆಗೂಳಿನ ಮೈಸಿರಿಯ ಬಲು
ಬಿದ್ದನಿಕ್ಕುವೆನೆನುತ ಪವಮಾನಜನ ಕಿಬ್ಬದಿಯ
ಗುದ್ದಿದರೆ ಕಲಿ ಭೀಮನದಕು
ಬ್ಬೆದ್ದು ಗೋಣನು ತಿರುಹಿ ಬಸುರೊಳ
ಗದ್ದಯಿಸಿಯರೆಯರೆದು ಕಾಲಲಿ ತಿಕ್ಕಿದನು ಭೀಮ ೪೭
ಖತಿಯೊಳುರಿನೆಗೆದೆದ್ದು ಪಿಂಗಳ
ನತಿಶಯದ ಕುಶಲದಲಿ ವರಬಃಉ
ಪತಿಯೆ ಇತ್ತೈಸೆನುತ ಹೊಕ್ಕನು ತೋಳ ತೆಕ್ಕೆಯಲಿ
ಧೃತಿಗೆಡದೆ ಹೋರಿದರು ಸಾಧಕ
ದತಿಶಯದ ಬಲುಹಿನಲಿ ವರಭೂ
ಪತಿಯೆ ಗೋಚರವಲ್ಲ ಭೀಮನ ಬಲವ ಬಣ್ಣಿವೊಡೆ ೪೮
ಕಂಡು ಪವನಜ ತುಡುಕಿ ಮಿಗೆ ಮುಂ
ಕೊಂಡು ನೆಲಕಪ್ಪಳಿಸೆ ಮೆಲ್ಲನೆ
ದೊಂಡೆಗರುಳುರೆ ಸೂಸೆ ಚೆಲ್ಲಿತು ರಾಜಸಭೆಯೊಳಗೆ
ಖಂಡ ಮಿದುಳಿನ ಹೊನಲಿನಲಿ ಕಡಿ
ಖಂಡ ಶೋಣಿತವಾರಿಯೊಳು ಮಿಗೆ
ದಿಂಡುಗೆಡೆದೊರಗಿದನು ಪಿಂಗಳ ಸಭೆಯ ಮಧ್ಯದಲಿ ೪೯
ದಿಟ್ಟನಹೆ ಬಾಣಸಿನ ಮನೆಯೊಳ
ಗಟ್ಟ ಕೂಳನು ತಿಂದು ದೇಹದೊ
ಳಟ್ಟೆಯಲಿ ಶಿರವಿರಲಹಂಕಾರದಲಿ ಬೆರೆತಿರುವೆ
ಕಟ್ಟಳವಿಗೈದೆನುತಲುರೆ ಕೂ
ಗಿಟ್ಟು ತಾ ಜೀಮೂತ ಮಲ್ಲನು
ಮೆಟ್ಟಿ ಹೊಕ್ಕನು ತೋಳ ತೆಕ್ಕೆಯ ಮಲ್ಲಗಾಳಗಕೆ ೫೦
ಅದುರಿತಂಘ್ರಿಗೆ ಭೂಮಿ ದಿಕ್ಕರಿ
ಯೊದರಿತಹಿಪತಿಯಳುಕೆ ಕೂರ್ಮನು
ಬೆದರಿ ಬಿದ್ದನು ಭೀಮ ಜೀಮೂತಕರ ಪದಹತಿಗೆ
ಹೆದರಿ ಚಲಿಸಿತು ರಾಜಸಭೆ ನೆರೆ
ಹದುಳಿಪುದೆ ಪುರ ಜನವು ಹೇಳೆನೆ
ಪದಹತಿಯೊಳದುಭುತವ ತೋರಿದರಾ ಮಹಾಸಭೆಗೆ ೫೧
ತೋಳುಗಳ ಹಿಡಿದೆಳೆಯೆ ಭೀಮನು
ಕಾಲುಕಾಲುಗಳಿಂದ ಘಟ್ಟಿಸೆ
ಬೀಳುತೇಳುತ ಹೋರುತಿದ್ದರು ಅಸಮ ಪಟುಭಟರು
ಕೇಳುತಾರ್ಭಟ ಮಲ್ಲರಿಬ್ಬರ
ಏಳಿಗೆಯ ಕದನವನು ಕಾಣುತ
ಕಾಲನಂದನನಾಗ ಬೆದರಿದನಧಿಕ ಚಿಂತೆಯಲಿ ೫೨
ಎದ್ದು ವಾಘೆಯೊಳೆತ್ತಿ ಭೀಮನ
ಗುದ್ದಿದನು ಲೇಸಾಗಿ ಮಲ್ಲನ
ನದ್ದಿದನು ನೆಲಕಿಕ್ಕಿ ಭೀಮನು ಬಾಹುಸತ್ವದಲಿ
ತಿದ್ದಿತಾತನ ದೆಸೆಯೆನಲು ಸಿಡಿ
ದೆದ್ದು ಮಲ್ಲನು ಭೀಮನನು ನೆಲ
ಕುದ್ದಿ ಮಂಡಿಯಕೊಂಡು ಹೋರಿದನಳುಕೆ ಭೂಪಾಲ ೫೩
ಕಡಲು ಕಡಲೊಳು ಹಳಚುವಂತಿರೆ
ಸಿಡಿಲು ಸಿಡಿಲಿನೊಳೆರಗುವಂತಿರೆ
ಕಡುಹುಮಿಗೆ ಜೀಮೂತ ಭೀಮರ ಹೊಯ್ಲಹೋರಟೆಯ
ಬಿಡದೆ ನೋಡುತ ನಡುಗಿದುದು ವಿಯ
ದೆಡೆಯ ನೋಡುವ ನೆರವಿ ಮೈಮರೆ
ದೊಡಲ ಸಂಚದೊಳಿದ್ದುದಲ್ಲಿಯ ಮಡದಿಯರ ನಿವಹ ೫೪
ಮಲ್ಲ ಗೆದ್ದನು ಈ ಕ್ಷಣದಿ ಗೆಲ
ವಿಲ್ಲ ವಲಲನಿಗಾಯ್ತು ಹೋಹೋ
ನಿಲ್ಲು ಪಡಿಸಣಿ ಗೆದ್ದನೀಗಲೆ ಗೆದ್ದ ನಾ ವಲಲ
ಗೆಲ್ಲ ಸೋಲವನರಿಯದಾ ಜನ
ವೆಲ್ಲ ಬೆರಗಾಗಿರಲು ಚೌಪಟ
ಮಲ್ಲರಿದ್ದರು ಮೇರು ಮೇರುವ ಹಳಚುವಂದದಲಿ ೫೫
ಅರರೆ ಸಿಕ್ಕಿದ ವಲಲ ಹೋಹೋ
ಅರರೆ ಸೋತನು ಮಲ್ಲನೆಂಬ
ಬ್ಬರವು ಮಸಗಿರೆ ಭೀಮ ಕೇಳಿದನಧಿಕ ರೋಷದಲಿ
ತಿರುಗಿ ಪೈಸರದಿಂದ ಮಲ್ಲನ
ನೊರಸಿದನು ಮುಷ್ಟಿಯಲಿ ನೆತ್ತಿಯ
ತರಹರಿಸೆ ಸಂತವಿಸಿ ತಿವಿದನು ಮಲ್ಲ ಮಾರುತಿಯ ೫೬
ಅದ್ದಿದವು ಬದಿಯೊಳಗೆ ಭೀಮನ
ಗುದ್ದುಗಳು ಜೀಮೂತ ಮಲ್ಲನ
ನುದ್ದುರುಟು ಬಯಲಾಯ್ತು ಸಂದುದು ಭಾರಿಯಗ್ಗಳಿಕೆ
ಹೊದ್ದಿದನು ಭೂಮಿಯಲಿ ಮೈಮುರಿ
ದೊದ್ದುಕೊಳುತಲೆ ಚಲಿಸಿ ಕಳನೊಳು
ಬಿದ್ದು ಹೊರಳಲು ಬಂದು ಕುಣಿದನು ಖಳನ ವಕ್ಷದಲಿ ೫೭
ಮೆಟ್ಟಿ ಸರ್ರನೆ ಸೀಳಿ ನೆಲಕರೆ
ಯುಟ್ಟಿ ಹೊಯ್ದನು ಹೊಯ್ದು ಭರದಲಿ
ನಿಟ್ಟೆಲುವು ಹುಡಿಯಾಯ್ತು ಕಂಡನು ಮನೆಯೊಳಾ ಯಮನ
ದಿಟ್ಟರಾದರೆ ಕವಿಯಿರೆನೆ ಮತಿ
ಗೆಟ್ಟು ತಮತಮಗೆಲ್ಲ ಭೀಮನ
ಧಟ್ಟಿಸುತ ಮುತ್ತಿದರು ಮಲ್ಲರು ಮುಷ್ಟಿಗಳ ಜಡಿದು ೫೮
ಕಂಡು ಪವನಜ ಗಹಗಹಿಸಿ ಮಿಗೆ ಮುಂ
ಕೊಂಡು ತುಳಿದನು ಎಡಬಲದೊಳುರೆ
ಹಿಂಡು ಜಟ್ಟಿಗರಸುವನಜಿಗಿಜಿಯಾಗೆ ಸಭೆಯೊಳಗೆ
ದೊಂಡೆಗರುಳೊಡಸೂಸೆ ಸಭೆಯಲಿ
ದಿಂಡುಗೆಡೆದರು ಬಂದ ಮಲ್ಲರು
ಕಂಡರೈ ಭಾನುಜನ ಪಟ್ಟಣಕಂದು ಐನೂರು ೫೯
ಏನಿದೇನೈ ವಲಲ ನಿನ್ನನ
ದೇನರಿಯನೆಂದಿದ್ದೆವೈ ಸು
ಮ್ಮಾನದಿಂದಲಿ ನಿಖಿಳ ಮಲ್ಲರ ಜಯಿಸಿ ಜಯಸಿರಿಯ
ಮಾನಿನಿಯ ಕೈವಿಡಿದು ಮಲ್ಲರ
ಸಾನುರಾಗವ ಬಳಸಿಕೊಂಡೆ ಸ
ಮಾನನನು ನಾವ್ಕಾಣೆವೆಂದೆನುತರಸ ಮನ್ನಿಸಿದ ೬೦
ಮೆಚ್ಚಿದನು ಭೂಪಾಲ ವಲಲನ
ಹಚ್ಚಿ ಕೊಂಡಾಡಿದನು ಮುನಿಯೊಳ
ಗೆಚ್ಚರಿಸಿದನು ಲೇಸ ಮಾಡಿದೆ ನಿನ್ನ ದೆಸೆಯಿಂದ
ಕಿಚ್ಚು ನಂದಿದ ತೆರನವೊಲು ಮಾ
ಯುಚ್ಚವಕೆ ಮಿಗಿಲಾಯ್ತು ಪೂತುರೆ
ನಿಚ್ಚಟದ ಸಾಹಸಿಕ ನೀನೆಂದುಲಿದನಾ ಮತ್ಸ್ಯ ೬೧
ಕೌರವೇಂದ್ರನ ಮನೆಯ ಮಲ್ಲರ
ತೋರಹತ್ತರ ಮುರಿದನದಟ ಸ
ಮೀರ ಸುತನೆಂದರಕೆಯಾಗದೆ ಗೆಲಿದು ಬದುಕಿದರು
ವೀರನಾರಾಯಣನ ಕರುಣಾ
ವಾರಿಧಿಯ ಕಾಲುವೆಯ ಭಾಗ್ಯದ
ಚಾರು ಶಾಲೀವನದ ವೀರರು ತೊಳಗಿ ಬೆಳಗಿದರು ೬೨
ಸಂಕ್ಷಿಪ್ತ ಭಾವ
ಸುಶರ್ಮಕನನ್ನು ಭೀಮನು ನಿಗ್ರಹಿಸಿದುದು.
ಕೌರವರಿಗೆ ಎಲ್ಲಾ ದಿಕ್ಕುಗಳಿಂದಲೂ ದೂತರು ವಾರ್ತೆಗಳನ್ನು ತರುತ್ತಿದ್ದರು. ಆದರೆ ಎಲ್ಲಿಯೂ ಪಾಂಡವರ ಸುಳಿವು ಸಿಗಲಿಲ್ಲ. ಅಷ್ಟರಲ್ಲಿ ಕೀಚಕನ ಮರಣದ ವಾರ್ತೆ ಬಂದಿತು. ಅದರ ಬಗ್ಗೆ ವಿವರವಾಗಿ ಕೇಳಿದ ನಂತರ ಕೀಚಕನನ್ನು ಕೊಲ್ಲಬೇಕಾದರೆ ಅದು ಭೀಮನೇ ಇರಬೇಕು ಎಂದು ಊಹಿಸಿದನು. ಎಲ್ಲರನ್ನೂ ಕರೆಸಿ ತನ್ನ ಊಹೆಯನ್ನು ಹೇಳಿದನು. ಅಲ್ಲಿಗೆ ಹೋಗಿ ಪತ್ತೆ ಹಚ್ಚಿ ಮತ್ತೆ ಅವರನ್ನು ವನವಾಸಕ್ಕೆ ಕಳಿಸುವ ಅದಮ್ಯ ಆಸೆ ಅವನದು. ಸುತ್ತಮುತ್ತಲಿನ ರಾಜ್ಯಗಳು ಬರಗಾಲದಿಂದ ಬೆಂದಿದ್ದರೆ ವಿರಾಟನ ರಾಜ್ಯ ಮಾತ್ರ ಸುಭಿಕ್ಷದಿಂದ ಕೂಡಿತ್ತು. ಎಲ್ಲಿ ಧರ್ಮಜನಿರುವನೋ ಅಲ್ಲಿ ಈ ಸ್ಥಿತಿ ಎಂದು ಭೀಷ್ಮನೂ ಹೇಳಿದನು. ಗೋಗ್ರಹಣದ ನೆಪದಲ್ಲಿ ಅಲ್ಲಿಗೆ ಮುತ್ತಿಗೆ ಹಾಕುವುದು ಹಿರಿಯರಾರಿಗೂ ಹಿಡಿಸಲಿಲ್ಲ. ಆದರೆ ದುರ್ಯೋಧನನು ಅದನ್ನೇ ಬಲವಾಗಿ ಹಿಡಿದು ಸೇನೆಗೆ ಸಿದ್ಧವಾಗಲು ಹೇಳಿದನು. ಗೋವಿನ ರಕ್ಷಣೆಯಲ್ಲಿ ಪಾಂಡವರು ಬಂದೇ ಬರುವರೆಂಬ ನಂಬಿಕೆ ಅವನದು.
ಸೇನೆ ಹೊರಟಿತು. ಅಪಶಕುನಗಳನ್ನು ಲೆಕ್ಕಿಸಲಿಲ್ಲ. ವಿರಾಟನಗರದ ದಕ್ಷಿಣ ಭಾಗದಲ್ಲಿ ಅರವತ್ತು ಸಾವಿರ ಗೋವುಗಳನ್ನು ಸೆರೆಹಿಡಿದರು ತ್ರಿಗರ್ತ ಸುಶರ್ಮಕರು. ಈ ವಿಷಯವನ್ನು ಗೋಪಾಲಕರು ಬಂದು ಹೇಳಿದಾಗ ಈ ಸಮಯದಲ್ಲಿ ಕೀಚಕನಿಲ್ಲವೇ ಎಂದು ಅಳಲಿದನು ರಾಜ. ಆಗ ಧರ್ಮಜನು ಗೋವನ್ನು ರಕ್ಷಿಸುವುದು ನಮ್ಮ ಧರ್ಮವೆಂದು ಅವಧಿಯ ಬಗ್ಗೆ ಯೋಚಿಸದೆ ನಡೆಯಿರಿ ಎಂದು ಭೀಮಾರ್ಜುನರ ಸಹಿತ ವಿರಾಟನ ಸೈನ್ಯದೊಂದಿಗೆ ಹೊರಟನು. ಸುಶರ್ಮನು ವಿರಾಟನನ್ನು ಮೂದಲಿಸಿ ನಕ್ಕನು. ಆಗ ಕೋಪಗೊಂಡ ಭೀಮನು ಎದುರಿಗಿದ್ದ ಆಲದ ಮರವನ್ನು ನೋಡಲು ಧರ್ಮಜನು ತಡೆದನು. ಮರವನ್ನು ಮುರಿದರೆ ನೀನೇ ಭೀಮನೆಂದು ತಿಳಿಯುವರು. ಬೇಡ ಎಂದನು. ಇಷ್ಟು ದಿನಗಳು ಕಷ್ಟಪಟ್ಟು ಅವಧಿ ಸಾಗಿಸಿದ್ದೇವೆ ಎನ್ನಲು ಭೀಮನು ಸರಿಯೆಂದು ಬಾಣಗಳಿಂದಲೇ ಎಲ್ಲರನ್ನೂ ಈಡಾಡಿದನು. ಇಡೀ ಸೈನ್ಯ ಪುಡಿಯಾಯಿತು. ಗೋವುಗಳನ್ನು ಬಿಡಿಸಿಕೊಂಡು ಬಂದಾಗ ವಿರಾಟನು ಇವರನ್ನು ಬಗೆಬಗೆಯಾಗಿ ಹೊಗಳಿದನು. ಸುಶರ್ಮನು ಅವಮಾನದಿಂದ ಹಿಂದಿರುಗಲು ಮತ್ತೆ ಉತ್ತರ ಭಾಗದಲ್ಲಿ ಗೋಗ್ರಹಣ ಮಾಡಲು ದುರ್ಯೋಧನನು ನಿರ್ಧರಿಸಿದನು.
(ನಮ್ಮ 'ಕನ್ನಡ ಸಂಪದ'ದಲ್ಲಿ ಮೂಡಿಬರುತ್ತಿರುವ ಬರಹಗಳು 'ಸಂಸ್ಕೃತಿ ಸಲ್ಲಾಪ' ತಾಣವಾದ www.sallapa.com ನಲ್ಲಿಯೂ ಲಭ್ಯವಿದೆ. ನಮಸ್ಕಾರ)
ಕಾಮೆಂಟ್‌ಗಳು