ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಮನಸಾ


 ಮನಸಾ ನಾಗಭೂಷಣಂ


ಡಾ. ಮನಸಾ ನಾಗಭೂಷಣಂ ಶಿಕ್ಷಣ, ಮ್ಯಾನೇಜ್ಮೆಂಟ್ ಮತ್ತು ಬರಹ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಾಗಿದ್ದು, ಇತ್ತೀಚೆಗೆ 'ದೈವ್' ಎಂಬ ಆಧ್ಯಾತ್ಮಿಕ ಆ್ಯಪ್ ಮೂಲಕ ತಂತ್ರಜ್ಞಾನ ಲೋಕದಲ್ಲೂ ಸಂಚಲನ ಮೂಡಿಸಿದ್ದಾರೆ. 

ಅವರು ಸಾಹಿತ್ಯ, ಪ್ರಕೃತಿ, ಶಿಕ್ಷಣ, ಪುರಾಣ, ಯೋಗ, ಧ್ಯಾನ, ಅಧ್ಯಾತ್ಮ ಹೀಗೆ ಯಾವುದೇ ವಿಚಾರಗಳ ಅಭಿವ್ಯಕ್ತಿಗಳ ಆಳದಲ್ಲೂ ತೋರುವ ಹೊಳಹುಗಳು ವಿಶಿಷ್ಟ ಎನಿಸುವಂತದ್ದು. 


ಮನಸಾ ನಾಗಭೂಷಣಂ 1967ರ ಏಪ್ರಿಲ್ 22ರಂದು ಜನಿಸಿದರು.  ತಂದೆ ಪತ್ರಿಕಾಲೋಕದಲ್ಲಿ 'ಪದಬಂಧ ಪಿತಾಮಹ' ಎಂಬ ಕೀರ್ತಿವಂತರಾಗಿ ನಾಭೂ ಎಂದೇ ಪ್ರಖ್ಯಾತರಾಗಿದ್ದ ಕೆ. ಎಸ್. ನಾಗಭೂಷಣಂ. ತಾಯಿ ಭಾರತಿ.


ಡಾ. ಮನಸಾ ಅವರು ಮೂವತ್ತೈದು

ವರ್ಷಗಳಲ್ಲಿ ಮ್ಯಾನೇಜ್‍ಮೆಂಟ್ ಪ್ರಾಧ್ಯಾಪಕರಾಗಿ, ಸಂಶೋಧಕರಾಗಿ, ಶಿಕ್ಷಣ ತಜ್ಞರಾಗಿ, ಶಿಕ್ಷಣ ಸಂಸ್ಥೆಯ ಪ್ರಾಚಾರ್ಯರಾಗಿ ಮತ್ತು ಬರಹಗಾರ್ತಿಯಾಗಿ ಹಲವು ಪ್ರಮುಖ ಜವಾಬ್ಧಾರಿಗಳನ್ನು ನಿರ್ವಹಿಸಿದ್ದಾರೆ. ಶೈಕ್ಷಣಿಕ ಕ್ಷೇತ್ರದಲ್ಲಿ ಸದಾ ಹೊಸ ಆಲೋಚನೆ, ಉತ್ಸಾಹ ಮತ್ತು  ಹೊಸ ಚಿಂತನೆಯನ್ನು ತರುವ ನಿಟ್ಟಿನಲ್ಲಿ ಶ್ರಮವಹಿಸಿರುವ ಇವರು ಶಿಕ್ಷಣ ಕ್ಷೇತ್ರದಲ್ಲಿ ಕೆಲಸಮಾಡುವ ಉತ್ಸಾಹಿ ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿದ್ದಾರೆ. ಹಲವು ಪ್ರಸಿದ್ಧ ಶೈಕ್ಷಣಿಕ ಮತ್ತು ವೃತ್ತಿ ಶಿಕ್ಷಣ ಸಂಸ್ಥೆಗಳಲ್ಲಿ ದೊಡ್ಡ ಜವಾಬ್ದಾರಿಗಳನ್ನು ನಿರ್ವಹಿಸಿದ ಹಿರಿಮೆ ಇವರದ್ದು.  ಪತಿ ಡಾ. ಸುದರ್ಶನ್ ಮತ್ತು ಇಬ್ಬರು ಹೆಣ್ಣು ಮಕ್ಕಳೊಡನೆ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ.


ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಬೇರುಗಳೊಂದಿಗೆ ಹೊಸಚಿಂತನೆಗಳತ್ತಲೂ ತಮ್ಮನ್ನು ಬೆಸೆದುಕೊಂಡಿರುವ ಮನಸಾ ನಾಗಭೂಷಣಂ ಅವರು,  ದೈವ್ (Daiv) ಎಂಬ Artificial Intelligence ಸಾಮಾರ್ಥ್ಯವುಳ್ಳ ಆಧ್ಯಾತ್ಮಿಕ app ಅನ್ನು ತಮ್ಮ ಬಂಧು ಸಮರ್ಥ್ ನಾಗಭೂಷಣಂ ಅವರ ಸಹಯೋಗದಲ್ಲಿ ಮೂಡಿಸಿದ್ದಾರೆ. ಇದು ಭಾರತೀಯ ಧಾರ್ಮಿಕ ಶ್ರದ್ಧೆ, ದೇಗುಲಗಳು ಮತ್ತು ಭಕ್ತರ ಮೇಲೆ ಕೇಂದ್ರಿತವಾಗಿದ್ದು ಪ್ರಾರ್ಥನೆ, ಧಾರ್ಮಿಕ ವಿಧಿ ವಿಧಾನಗಳು ಹಾಗೂ ಆಧ್ಯಾತ್ಮಿಕ ಸೇವೆಗಳ ಕುರಿತಾಗಿ ಸಮಗ್ರ ಅರಿವನ್ನು ನೀಡುವಂತದ್ದಾಗಿದೆ. 


ಮನಸಾ ಅವರು ಶಿಕ್ಷಣ ಕ್ಷೇತ್ರದಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿರುವುದರ  ಜೊತೆಗೆ, ಕನ್ನಡ ಸಾಹಿತ್ಯಲೋಕದ ಮಹಾನ್ ವಿದ್ವಾಂಸರಾಗಿದ್ದ ತಂದೆ ನಾಗಭೂಷಣಂ ಆವರ ಪ್ರೇರಣೆಯಿಂದ  ಕನ್ನಡದಲ್ಲೂ ಅಪಾರ ಅಧ್ಯಯನಶೀಲತೆಯನ್ನು ಮೈಗೂಡಿಸಿಕೊಂಡಿದ್ದಾರೆ.  ಮನಸಾ ಅವರು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಲೇಖನಗಳನ್ನು, ಬ್ಲಾಗ್‍ಗಳನ್ನು ಮತ್ತು ಕವನಗಳನ್ನು ಬರೆಯುತ್ತಾರೆ. ಲೆವಿಸ್ ಕ್ಯಾರಲ್ ಅವರ ಆಲಿಸ್ ಇನ್ ವಂಡರ್ ಲ್ಯಾಂಡ್ ಪುಸ್ತಕದ ಇವರ ಕನ್ನಡಾನುವಾದ ಲೆವಿಸ್ ಕ್ಯಾರಲ್‍ನ 125ನೇ ಹುಟ್ಟಿದ ದಿನದಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳಕು ಕಂಡಿತ್ತು.  ತಮ್ಮ ತಂದೆಯವರಂತೆ ಇವರೂ ಪದಬಂಧ ರಚನೆಯಲ್ಲಿ ತೊಡಗಿದ್ದು ಪ್ರಜಾವಾಣಿಯಲ್ಲಿ ಭಾನುವಾರದ ಪದಬಂಧವನ್ನು ಮುಂದುವರೆಸಿಕೊಂಡು ಬಂದಿದ್ದಾರೆ. 


ಡಾ. ಮನಸಾ ಎರಡು ದಶಕಗಳ ಕಾಲ ಪ್ರಮುಖ ಮ್ಯಾನೇಜಮೆಂಟ್ ಕಾಲೇಜುಗಳಲ್ಲಿ ನಿರ್ದೇಶಕಿಯಾಗಿ ಕೆಲಸ ನಿರ್ವಹಿಸಿದ್ದಾರೆ. ಕರ್ನಾಟಕ ಸರ್ಕಾರದ ಶಿಕ್ಷಣ ಕ್ಷೇತ್ರದ ಅನೇಕ ಗಣನೀಯ ಸಮಿತಿಗಳಲ್ಲಿ ಸದಸ್ಯೆಯಾಗಿ ತಮ್ಮ ಕೊಡುಗೆ ನೀಡಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ವಿಭಿನ್ನ ವೇದಿಕೆಗಳಲ್ಲಿ ಮತ್ತು ವೆಬಿನಾರ್‍ಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿದ್ದಾರೆ. ಅವರು ಕರ್ನಾಟಕ ಸರ್ಕಾರದಿಂದ ಬೆಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯೆಯಾಗಿ ನೇಮಕವಾಗಿದ್ದವರು.  ಕಲಬುರಗಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ನಿರ್ವಾಹಕ ಪರಿಷತ್ತಿನಲ್ಲಿ ಭಾರತದ ರಾಷ್ಟ್ರಾಧ್ಯಕ್ಷರ ಪ್ರತಿನಿಧಿಯಾಗಿ ಸೇವೆ ಸಲ್ಲಿಸಿದ್ದಾರೆ. ಇದೇ ರೀತಿ ಕರ್ನಾಟಕದ‍ ರಾಜ್ಯಪಾಲರಿಂದ ಶಿಕ್ಷಣ ಕ್ಷೇತ್ರದ ನಿರ್ಣಯತ್ಮಾಕ ಸಮಿತಿಗಳಲ್ಲಿ ನೇಮಕಗೊಂಡು ಕೊಡುಗೆ ನೀಡಿದ್ದಾರೆ.  ಕರ್ನಾಟಕ ಜ್ಞಾನ ಆಯೋಗ, ಸರ್ವ ಶಿಕ್ಷಣ ಅಭಿಯಾನ, ಸೆಂಟರ್ ಫಾರ್ ಎಜುಕೇಷನಲ್ ಆಂಡ್ ಸೋಷಿಯಲ್ ಸ್ಟಡೀಸ್ (ಸೆಸ್) ಸಂಸ್ಥೆಗಳ ಮೂಲಕ ಅನೇಕ ಶಿಕ್ಷಣ ಕ್ಷೇತ್ರದ ಸಂಶೋಧನೆಯಲ್ಲಿ ಕೊಡುಗೆ ನೀಡಿದ್ದಾರೆ.   ಅನೇಕ ಕಂಪನಿಗಳಿಗೆ ಮತ್ತು ಸ್ಟಾರ್ಟ್ ಅಪ್ ಸಂಸ್ಥೆಗಳಿಗೆ ನೂರಕ್ಕೂ ಹೆಚ್ಚು ಸಂಶೋಧನೆ ನಡೆಸಿ ಕೊಟ್ಟು ಸಂಸ್ಥೆಗಳ ನಿರ್ಧಾರಗಳಿಗೆ ಒಂದು ದಿಕ್ಕನ್ನು ಕಲ್ಪಿಸಿದ್ದಾರೆ. ಹತ್ತಾರು ಸಂಶೋಧಕರು ಇವರ ಮಾರ್ಗದರ್ಶನದಲ್ಲಿ  ಪಿಎಚ್.ಡಿ ಪದವಿ ಪಡೆದಿದ್ದಾರೆ. ಬೆಂಗಳೂರಿನ ಸುಮಾರು ಹತ್ತು ಕಾಲೇಜುಗಳ ನಿರ್ವಾಹಕ ಮತ್ತು ಶೈಕ್ಷಣಿಕ ಪರಿಷತ್ತುಗಳಲ್ಲಿ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಇವರ ಸಂದರ್ಶನ ಆಕಾಶವಾಣಿ ಹಾಗು ಕನ್ನಡ ದಿನಪತ್ರಿಕೆಗಳಲ್ಲಿ ಪ್ರಕಟವಾಗಿವೆ. 


ಮನಸಾ ಅವರು  ಬೆಂಗಳೂರು ದೂರದರ್ಶನದಲ್ಲಿ ‘ಪರಿಚಯ’ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದರು.  ಹೆಣ್ಣುಮಕ್ಕಳ ಶಿಕ್ಷಣದ ಬಗ್ಗೆ ಹೆಚ್ಚು ಕಾಳಜಿಯಿರುವ ಇವರು ಸರ್ಕಾರಿ ಶಾಲೆಗಳಲ್ಲಿ ಹಣ್ಣು ಮಕ್ಕಳ ಶಿಕ್ಷಣದ ಪ್ರಾಮುಖ್ಯತೆ, ಜೀವನವನ್ನು ಎದುರಿಸುವುದು ಮತ್ತು ರೂಪಿಸಿಕೊಳ್ಳುವ ಬಗ್ಗೆ ಅನೇಕ ಉಪನ್ಯಾಸಗಳನ್ನು ಮತ್ತು ಕಾರ್ಯಾಗಾರಗಳನ್ನು ನಡೆಸಿದ್ದಾರೆ. ಮಹಿಳಾ ಶಿಕ್ಷಕರಿಗೆ ಮತ್ತು ಮಹಿಳಾ ಉದ್ಯೋಗಿಗಳು ತಮ್ಮ ವೃತ್ತಿ ಮತ್ತು ವೈಯಕ್ತಿಕ ಧ್ಯೇಯವನ್ನು ತಲುಪುವಲ್ಲಿ ಯಶಸ್ವಿಯಾಗಲು ಅನೇಕ ಕಾರ್ಯಗಾರಗಳನ್ನು ನಡೆಸಿದ್ದಾರೆ.

 

ಪ್ರೆಸ್ಟೀಜ್ ಸಂಸ್ಥೆಗಳಿಂದ 2009ರಲ್ಲಿ ಇವರ ಮಹಿಳಾ ಸಬಲೀಕರಣ ಸಂಸ್ಥೆಗಳ ನಿರ್ವಹಣೆ ಕುರಿತಾದ ಪಿಎಚ್.ಡಿ ಸಂಶೋಧನಾ ಗ್ರಂಥಕ್ಕೆ ಅತ್ಯುನ್ನತ ಸಂಶೋಧನೆ ಎಂಬ ಪ್ರಶಸ್ತಿ ದೊರೆತಿದೆ.  ಬೆಂಗಳೂರು ಶಿಕ್ಷಣ ಸಂಸ್ಥೆಯಿಂದ 2007ರಲ್ಲಿ ಉತ್ತಮ ಉಪನ್ಯಾಸಕಿ ಪ್ರಶಸ್ತಿ, 2022ರಲ್ಲಿ ಫೋರಮ್ ಫಾರ್ ವುಮೆನ್ ಆಂಟ್ರಪ್ರಿನ್ಯೂರ್ಸ್ ವತಿಯಿಂದ ಮಹಿಳಾ ಸಾಧಕಿ ಪ್ರಶಸ್ತಿ ಮತ್ತು 2022 ಇಂಡಿಯಾ 5000 ಅವರಿಂದ ಮಹಿಳಾ ಸಾಧಕಿ ಪ್ರಶಸ್ತಿ ಇತ್ಯಾದಿ ಅನೇಕ ಗೌರವಗಳು ಇವರಿಗೆ ಸಂದಿವೆ.


ಆತ್ಮೀಯರೂ, ಸಾಧಕರೂ ಆದ ಡಾ. ಮನಸಾ ನಾಗಭೂಷಣಂ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.



Happy birthday Dr. Manasa Nagabhushanam



ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ