ಸರೋಜ
ಸರೋಜ ನಾರಾಯಣರಾವ್
ಸರೋಜ ನಾರಾಯಣರಾವ್ ಹೆಸರಾಂತ ಬರಹಗಾರ್ತಿಯಾಗಿದ್ದವರು.
ಸರೋಜ 1931ರ ಏಪ್ರಿಲ್ 22ರಂದು ಮೈಸೂರಿನಲ್ಲಿ ಜನಿಸಿದರು. ತಂದೆ ಎಚ್. ವೆಂಕಟೇಶಮೂರ್ತಿ. ತಾಯಿ ಸೀತಮ್ಮ.
ಅವರು ಓದಿ ಬೆಳೆದದ್ದು ಬೆಂಗಳೂರಿನಲ್ಲಿ. ಹೈಸ್ಕೂಲುವರೆಗೆ ಮಹಿಳಾ ಸೇವಾ ಸಮಾಜದಲ್ಲಿ ಹಾಗೂ ಇಂಟರ್ ಮೀಡಿಯೆಟ್‌ವರೆಗೆ ಮಹಾರಾಣಿ ಕಾಲೇಜಿನಲ್ಲಿ ಓದಿದರು. ಜೊತೆಗೆ ಸಂಗೀತದಲ್ಲಿ ವಿದ್ವತ್ ಸಾಧನೆ ಮಾಡಿದರು. ಪತಿ ಟಿ. ಎಸ್. ನಾರಾಯಣ ರಾವ್ ಐಎಎಸ್ ಅಧಿಕಾರಿಯಾಗಿದ್ದರು.
ಸರೋಜ ಅವರಿಗೆ ಚಿಕ್ಕಂದಿನಿಂದಲೇ ಸಾಹಿತ್ಯದಲ್ಲಿ ಆಸಕ್ತಿ. ಇವರ‘ಮಂಜಿನ ಗೆಡ್ಡೆ ಮಹಲು' ಎಂಬ ಮೊದಲ ಕಥೆ ‘ಕಥಾವಳಿ' ಮಾಸಿಕದಲ್ಲಿ ಪ್ರಕಟಗೊಂಡಿತು. ಮುಂದೆ ಸುಧಾ, ಮಯೂರ, ತರಂಗ, ತುಷಾರ, ಕರ್ಮವೀರ, ಮಲ್ಲಿಗೆ ಮುಂತಾದ ನಾಡಿನ ಪ್ರಖ್ಯಾತ ಪತ್ರಿಕಗಳೆಲ್ಲದರಲ್ಲೂ ಅವರ ಬರಹಗಳು ಮೂಡಿಬಂದವು.
ಸರೋಜ ನಾರಾಯಣರಾವ್ ಅವರ ಬರಹಗಳಲ್ಲಿ ಹಳ್ಳಿಯಿಂದ ದಿಲ್ಲಿಗೆ, ಆಸೆಯ ಸೇತುವೆ, ಜಾಲಿಯ ಮರ, ಅಪಾತ್ರ, ವಾನಪ್ರಸ್ಥ, ವಧು ಮುಂತಾದವು ಕಾದಂಬರಿಗಳು. ಇಷ್ಟಾರ್ಥ, ಈ ನೆಲ-ಈ ಜಲ ಕಥಾ ಸಂಕಲನಗಳು. ಮಕ್ಕಳ ಸಾಹಿತ್ಯದಲ್ಲಿ ದಿನೇಶನ ರಜಾದಿನಗಳು, ರಶ್ಮಿಯ ಗೆಳತಿ ಮಾಧವಿ, ದಿನೇಶನ ದೀಪಾವಳಿ, ಬೆಟ್ಟದಮನೆ, ಉಡುಗೊರೆ (ನೂರೊಂದು ಕಥೆಗಳ ಸಂಕಲನ), ಪ್ರಪಂಚದ ಕಥೆಗಳು (ದೇಶ ವಿದೇಶದ ಜಾನಪದ ಕಥಾ ಸಂಗ್ರಹ), ಮಹಾಭಾರತದ ಕತೆಗಳು, ದಿನೇಶನ ಲೈಬ್ರರಿ ಮುಂತಾದುವು ಸೇರಿದ್ದವು.
ಸರೋಜ ನಾರಾಯಣರಾವ್ ಅವರು 1966ರಿಂದ 1986ರವರೆಗೆ ಸಮಾನಾಸಕ್ತ ಲೇಖಕಿಯರನ್ನು ಸೇರಿಸಿ ‘ಸಾಹಿತ್ಯ ಕೂಟ’ ಸ್ಥಾಪಿಸಿ ಚರ್ಚೆ, ಹರಟೆ, ವಿಮರ್ಶೆ, ಮುಂತಾದವುಗಳನ್ನು ಸಂಘಟಿಸಿದರು. ‘ಸ್ನೇಹ-ಸೌಹಾರ್ದ’, 'ಗೃಹಾಲಂಕಾರ' ಮುಂತಾದವುಗಳ ಸಂಪಾದಕಿಯಾಗಿದ್ದರು. 2011ರಲ್ಲಿ ಇವರ ಬಾಲ್ಯದ ನೆನಪುಗಳ 'ಬಾಲ್ಯ' ಎಂಬ ಪ್ರಬಂಧ ಸಂಗ್ರಹ ಬೆಂಗಳೂರಿನಲ್ಲಿ ಪ್ರಕಟಗೊಂಡಿತು. ಈ ಕೃತಿಯನ್ನು ಅವರ ಪುತ್ರಿ ಡಾ. ಸಂಧ್ಯಾ ರಾವ್ ಅವರು Memories of my childhood ಎಂದು ಇಂಗ್ಲಿಷಿಗೆ ತಂದಿದ್ದಾರೆ.
ಸರೋಜ ನಾರಾಯಣರಾವ್ ಹಲವಾರು ಬಾರಿ ಲಂಡನ್, ಪ್ಯಾರಿಸ್, ಕೆನಡಾ, ಮೆಕ್ಸಿಕೋ ದೇಶಗಳಿಗೆ ಹೋಗಿದ್ದರು. 1993ರಿಂದ ಅಮೆರಿಕದಲ್ಲಿ ನೆಲೆಸಿದ್ದರು. ನ್ಯೂಯಾರ್ಕಿನಲ್ಲಿ ಶಿವರಾಮಕಾರಂತರ ಅಧ್ಯಕ್ಷತೆಯಲ್ಲಿ ನಡೆದ ಕಾರ‍್ಯಕ್ರಮದಲ್ಲಿ ಪ್ರಬಂಧ ಮಂಡನೆ ಮಾಡಿದ್ದರು. ಟೆಕ್ಸಾಸ್ ವಿಶ್ವವಿದ್ಯಾಲಯದಲ್ಲಿ ‘ಹರ್ ಸ್ಟೋರಿ’ ವಿಭಾಗದಲ್ಲಿ ಮಕ್ಕಳ ಸಾಹಿತ್ಯ ಹಾಗೂ ಮಹಿಳಾ ಸಾಹಿತ್ಯ ಕುರಿತು ವಿಚಾರ ಮಂಡನೆ ಮಾಡಿದ್ದರು. ವಾಷಿಂಗ್‌ಟನ್ ಕನ್ನಡ ಸಂಘದಲ್ಲಿ ಸಾಹಿತ್ಯ ಸಂವಾದದಲ್ಲಿ ಕ್ರಿಯಾಶೀಲರಾಗಿದ್ದರು. ಡೋವರ್ ವಿಶ್ವವಿದ್ಯಾಲಯದಲ್ಲಿ ಭಾಷಣ ಮಾಡಿದ್ದರು. ಹ್ಯೂಮನ್ ರಿಲೇಷನ್ಸ್ ಕಮೀಷನ್ ಏರ‍್ಪಡಿಸಿದ್ದ ಸಮಾರಂಭದಲ್ಲಿ ವಿಚಾರ ಮಂಡನೆ ಮಾಡಿದ್ದರು. ಮಕ್ಕಳಿಗಾಗಿ ಕಥಾ ನಿರೂಪಣೆಯ ಹಲವಾರು ಕಾರ‍್ಯಕ್ರಮಗಳಲ್ಲಿ ಕ್ರಿಯಾಶೀಲರಾಗಿದ್ದರು.
ಸರೋಜ ಅವರ ಅನೇಕ ಕಥೆಗಳು ಆಕಾಶವಾಣಿಯಲ್ಲಿ ಮೂಡಿದ್ದವು. ದೂರದರ್ಶನದಲ್ಲಿಯೂ ಅನೇಕ ಕಥೆಗಳು ಮೂಡಿದ್ದವು. ಸಂಗೀತಗಾರ್ತಿಯಾಗಿ ಅವರು ಶಾಸ್ತ್ರಿಯ ಮತ್ತು ಸುಗಮ ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದರು. 'ಉಡುಗೊರೆ' ಎಂಬ ಸಿಡಿ ಮತ್ತು ಕ್ಯಾಸೆಟ್ನಲ್ಲಿ ಇವರ ಕಥೆಗಳಿಗೆ ಪ್ರಸಿದ್ಧ ರಂಗಕಲಾವಿದೆ ಬಿ. ಜಯಶ್ರೀ ಧ್ವನಿರೂಪ ನೀಡಿದ್ದಾರೆ.
ಸರೋಜ ನಾರಾಯಣರಾವ್ ಅವರ ಅನೇಕ ಬರಹಗಳು ಬಹುಮಾನ ಗಳಿಸಿದ್ದವು. 1982ರಲ್ಲಿ ಪ್ರಕಟಗೊಂಡು ವಿಮರ್ಶಕರಿಂದ ಮೆಚ್ಚುಗೆ ಪಡೆದ ಅವರ 'ವಾನಪ್ರಸ್ಥ' ಕಾದಂಬರಿ ಆ ವರ್ಷದ ಶ್ರೇಷ್ಠ ಕೃತಿಗಳ ಸಾಲಿನಲ್ಲಿ 'ಗ್ರಂಥಲೋಕ'ದಲ್ಲಿ ಕಂಗೊಳಿಸಿತ್ತು. ಅವರಿಗೆ ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿ, ಗೊರೂರು ಪ್ರತಿಷ್ಠಾನ ಪ್ರಶಸ್ತಿ, 2011ರ ಕರ್ನಾಟಕ ಲೇಖಕಿಯರ ಸಂಘದ ಅನುಪಮಾ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಸಂದಿದ್ದವು. ಪ್ರೊ. ಎಲ್. ಎಸ್. ಶೇಷಗಿರಿರಾವ್ ಅವರು ಸರೊಜ ನಾರಾಯಣರಾವ್ ಕನ್ನಡದ ಶ್ರೇಷ್ಠ ಬರಹಗಾರ್ತಿಯರಲ್ಲೊಬ್ಬರು ಎಂದು ದಾಖಲಿಸಿದ್ದಾರೆ.
ಸರೋಜ ನಾರಾಯಣರಾವ್ 2012ರ ಜೂನ್ 20ರಂದು ಅಮೆರಿಕದ ಡೋವರ್ ಎಂಬಲ್ಲಿ ನಿಧನರಾದರು.
On the birth anniversary of writer and musician Saroja Narayana Rao
ಕಾಮೆಂಟ್‌ಗಳು