ಎಲ್. ಸಿ. ಸುಮಿತ್ರಾ
ಡಾ. ಎಲ್. ಸಿ. ಸುಮಿತ್ರಾ ಪ್ರಸಿದ್ಧ ಲೇಖಕಿ.
ಎಲ್. ಸಿ. ಸುಮಿತ್ರಾ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಲಕ್ಷ್ಮೀಪುರದವರು. ತಾಯಿ ಹೊನ್ನಮ್ಮ. ತಂದೆ ಎಲ್. ಚಂದ್ರಪ್ಪಗೌಡ. ಸುಮಿತ್ರಾ ಅವರು ಮೈಸೂರು ವಿಶ್ವವಿದ್ಯಾಲಯದಿಂದ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿಯನ್ನು ಗಳಿಸಿ ಮುಂದೆ ಡಾಕ್ಟರೇಟ್ ಸಾಧನೆಯನ್ನೂ ಮಾಡಿದ್ದಾರೆ.
ಡಾ. ಸುಮಿತ್ರಾ ಅವರು ತೀರ್ಥಹಳ್ಳಿಯ ತುಂಗಾ ಕಾಲೇಜಿನಲ್ಲಿ ಪ್ರಾಧ್ಯಾಪಕಿಯಾಗಿ, ಪ್ರಾಂಶುಪಾಲೆಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಓದು, ಬರಹ ಮತ್ತು ತೋಟಗಾರಿಕೆ ಅವರ ಆಪ್ತ ವಿಷಯಗಳು. ಅವರ ಬರಹಗಳಲ್ಲಿ ಪ್ರಕೃತಿ ಪ್ರೇಮ ಎದ್ದು ಕಾಣುವಂತದ್ದು.
ಸುಮಿತ್ರಾ ಅವರ ಕವಿತೆ, ಕಥೆ, ವಿಮರ್ಶೆ, ಪ್ರಬಂಧಗಳು ನಿಯತಕಾಲಿಕಗಳಲ್ಲಿ, ವಿಶಿಷ್ಟ ಸಂಕಲನಗಳಲ್ಲಿ; ಅವಧಿ, ಕೆಂಡಸಂಪಿಗೆ ಮುಂತಾದ ತಾಣಗಳಲ್ಲಿ ನಿರಂತರವಾಗಿ ಹರಿದುಬಂದಿವೆ.
ಡಾ. ಸುಮಿತ್ರಾ ಅವರ ಪ್ರಕಟಿತ ಕೃತಿಗಳಲ್ಲಿ ಬಕುಲದ ದಾರಿ, ತುಂಬೆ ಹೂವು, ವಿಭಾವ ಕವಿತಾ ಸಂಕಲನಗಳು; ಅಮೃತಾ ಪ್ರೀತಮ್ ಅವರ ಕಾದಂಬರಿ ಅನುವಾದ 'ಪಿಂಜರ್’; 'ನಿರುಕ್ತ' ವಿಮರ್ಶೆ; 'ಗುಬ್ಬಿ ಹಳ್ಳದ ಸಾಕ್ಷಿಯಲ್ಲಿ' ಕಥಾ ಸಂಕಲನ; ಹೂ ಹಸಿರಿನ ಮಾತು, ಓದಿನ ಸುಖ, ಗದ್ದೆಯಂಚಿನ ದಾರಿ ಮುಂತಾದ ಪ್ರಬಂಧಗಳು; 'ಅಂಗೈ ಅಗಲದ ಆಕಾಶ' ಸ್ಮೃತಿ ಚಿತ್ರಗಳು'; ಕುವೆಂಪು ಮತ್ತು ಶಿವರಾಮ ಕಾರಂತರ ಕಾದಂಬರಿಗಳಲ್ಲಿ ಪ್ರಕೃತಿ ಕುರಿತಾದ 'ಕಾಡು.. ಕಡಲು'; ಜಸ್ಟೀಸ್ ಎನ್. ಡಿ. ವೆಂಕಟೇಶ್ ನೆನಪಿನ ಸಂಪಾದನೆ 'ಸಾಕ್ಷೀಪ್ರಜ್ಞೆ' ಮುಂತಾದ ವೈವಿಧ್ಯಗಳು ಸೇರಿವೆ.
ಡಾ. ಎಲ್. ಸಿ. ಸುಮಿತ್ರಾ ಅವರಿಗೆ ನೀಲಗಂಗಾದತ್ತಿ ಬಹುಮಾನ, ಶಿವಮೊಗ್ಗ ಕರ್ನಾಟಕ ಸಂಘದಿಂದ ಎಸ್.ವಿ. ಪರಮೇಶ್ವರಭಟ್ಟ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ ಗೌರವಗಳು ಸಂದಿವೆ.
Dr. L. C. Sumitra
ಕಾಮೆಂಟ್‌ಗಳು