ರಾಮಚಂದ್ರ ಗುಹ
ರಾಮಚಂದ್ರ ಗುಹ
ರಾಮಚಂದ್ರ ಗುಹ ಇಂಗ್ಲಿಷ್ ಲೇಖಕರಾಗಿ ಅಂಕಣಕಾರರಾಗಿ ಮತ್ತು ಚರಿತ್ರಕಾರರಾಗಿ ಹೆಸರಾಗಿದ್ದಾರೆ.
ರಾಮಚಂದ್ರ ಗುಹ 1958ರ ಏಪ್ರಿಲ್ 29ರಂದು ಡೆಹ್ರಾಡೂನ್‌ನಲ್ಲಿ ಜನಿಸಿದರು. ಅವರು ಸೇಂಟ್ ಸ್ಟೀಫನ್ಸ್ ಕಾಲೇಜಿನಲ್ಲಿ ಅರ್ಥಶಾಸ್ತ್ರದಲ್ಲಿ ತಮ್ಮ ಬಿ.ಎ. ಪದವಿಯನ್ನು ಪಡೆದರು. ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್ ನಿಂದ ಸ್ನಾತಕೋತ್ತರ ಪದವಿ ಮತ್ತು ಕೋಲ್ಕತ್ತಾದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನಿಂದ ಚಿಪ್ಕೋ ಚಳುವಳಿಯ ಇತಿಹಾಸ ಮತ್ತು ಪೂರ್ವ ಇತಿಹಾಸದ ಕುರಿತಾದ ಪ್ರಬಂಧಕ್ಕೆ ಡಾಕ್ಟರೇಟ್ ಗಳಿಸಿದರು.
ಪೂರ್ಣ ಸಮಯದ ಬರಹಗಾರರಾಗಿರುವ ರಾಮಚಂದ್ರ ಗುಹ, ಹಿಂದೆ ಯೇಲ್ ಮತ್ತು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯಗಳಲ್ಲಿ, ಓಸ್ಲೋ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪನ ನಡೆಸಿದ್ದರು. ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು. ವಿಸ್ಸೆನ್ಸ್‌ಚಾಫ್ಟ್‌ಸ್ಕೊಲ್ಲೆಗ್ ಜು ಬರ್ಲಿನ್‌ನ ಫೆಲೋ ಆಗಿದ್ದರು. ಬರ್ಕ್ಲಿಯಲ್ಲಿರುವ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಇಂಡೋ-ಅಮೇರಿಕನ್ ಸಮುದಾಯದ ಸಂದರ್ಶಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಇತಿಹಾಸ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳಲ್ಲಿ ಪ್ರತಿಷ್ಠಿತ ಫಿಲಿಪ್ ರೋಮನ್ ಚೇರ್ ಅನ್ನು ಸಹ ಅಲಂಕರಿಸಿದ್ದರು.
ಡಾ. ಗುಹ ಅವರ ಬರಹಗಳು ಪರಿಸರ, ಸಾಮಾಜಿಕ, ರಾಜಕೀಯ ಮತ್ತು ಕ್ರಿಕೆಟ್ ಇತಿಹಾಸವನ್ನು ಒಳಗೊಂಡಿವೆ. ಅವರ ಪುಸ್ತಕಗಳಲ್ಲಿ ದಿ ಅನ್‌ಕ್ವೈಟ್ ವುಡ್ಸ್: ಇಕಾಲಾಜಿಕಲ್ ಚೇಂಜ್ ಅಂಡ್ ಪೆಸೆಂಟ್ ರೆಸಿಸ್ಟೆನ್ಸ್ ಇನ್ ದಿ ಹಿಮಾಲಯ; ಸವೇಜಿಂಗ್ ದಿ ಸಿವಿಲೈಸ್ಡ್: ವೆರಿಯರ್ ಎಲ್ವಿನ್, ಹಿಸ್ ಟ್ರೈಬಲ್ಸ್ ಮತ್ತು ಇಂಡಿಯಾ; ಎ ಕಾರ್ನರ್ ಆಫ್ ಎ ಫಾರಿನ್ ಫೀಲ್ಡ್: ಎನ್ ಇಂಡಿಯನ್ ಹಿಸ್ಟರಿ ಆಫ್ ಬ್ರಿಟಿಷ್ ಸ್ಪೊರ್ಟ್; ಇಂಡಿಯಾ ಆಫ್ಟರ್ ಗಾಂಧಿ: ದಿ ಹಿಸ್ಟರಿ ಆಫ್ ದಿ ವರ್ಲ್ಡ್ಸ್ ಲಾರ್ಜೆಸ್ಟ್ ಡೆಮಾಕ್ರಸಿ; ಗಾಂಧಿ ಬಿಫೋರ್ ಇಂಡಿಯಾ, ದ ಕಾಮನ್ ವೆಲ್ತ್ ಆಫ್ ಕ್ರಿಕೆಟ್ ಮುಂತಾದವು ಸೇರಿವೆ.
ಗುಹ ಅವರು 1997 ಮತ್ತು 2009ರ ನಡುವೆ 'ದಿ ಹಿಂದೂ' ಪತ್ರಿಕೆಗೆ ಪಾಕ್ಷಿಕ ಅಂಕಣವನ್ನು ಬರೆದರು. ಮುಂದೆ 'ದಿ ಟೆಲಿಗ್ರಾಫ್'ನಲ್ಲಿ ಬರೆಯುತ್ತ ಬಂದರು.
ಗುಹ ಅವರಿಗೆ ಅಮೇರಿಕನ್ ಸೊಸೈಟಿ ಆಫ್ ಎನ್ವಿರಾನ್ಮೆಂಟಲ್ ಹಿಸ್ಟರಿಯ ಲಿಯೋಪೋಲ್ಡ್-ಹಿಡಿ ಪ್ರಶಸ್ತಿ, ಸಾಮಾಜಿಕ ವಿಜ್ಞಾನ ಸಂಶೋಧನೆಯಲ್ಲಿನ ಶ್ರೇಷ್ಠತೆಗಾಗಿ ಮಾಲ್ಕಮ್ ಆದಿಶೇಷಯ್ಯ ಪ್ರಶಸ್ತಿ, ಪತ್ರಿಕೋದ್ಯಮದಲ್ಲಿನ ಶ್ರೇಷ್ಠತೆಗಾಗಿ ರಾಮನಾಥ್ ಗೋಯೆಂಕಾ ಪ್ರಶಸ್ತಿ ಮತ್ತು ಮ್ಯಾಕ್ ಆರ್ಥರ್ ಸಂಶೋಧನೆ ಪ್ರಶಸ್ತಿ, ಆರ್.ಕೆ.ನಾರಾಯಣ್ ಪ್ರಶಸ್ತಿ, ಪದ್ಮಭೂಷಣ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಫುಕೋಕಾ ಪ್ರಶಸ್ತಿ, ಯೇಲ್ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಮುಂತಾದ ಅನೇಕ ಗೌರವಗಳು ಸಂದಿವೆ.
ರಾಮಚಂದ್ರ ಗುಹ ಅವರ ಬರಹಗಳು ಕನ್ನಡವೂ ಸೇರಿದಂತೆ ಅನೇಕ ಭಾಷೆಗಳಿಗೆ ತರ್ಜುಮೆಗೊಂಡಿವೆ.
ಕಾಮೆಂಟ್‌ಗಳು