ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಜೀವನ್ ಶೆಟ್ಟಿ


 ಜೀವನ್ ಶೆಟ್ಟಿ


ಆತ್ಮೀಯರಾದ ಜೀವನ್ ಶೆಟ್ಟಿ ನಮ್ಮ ನಡುವಿನ ಅದ್ಭುತ ಕಲಾವಿದ. 

ಮಾರ್ಚ್ 31 ಜೀವನ್ ಶೆಟ್ಟಿ ಅವರ ಜನ್ಮದಿನ.  ಇವರು ಉಡುಪಿಯಲ್ಲಿ ನೆಲೆಸಿದ್ದಾರೆ.

ಮಂಗಳೂರಿನ ಸರ್ಕಾರಿ ಕಾಲೇಜಿನಲ್ಲಿ ಓದುವಾಗ ಗೋಡೆಯ ಮೇಲಿನ ಪ್ರಕಟಣೆಗಳಿಗಾಗಿ ಚಿತ್ರ ಬರೆಯುತ್ತ ಹವ್ಯಾಸವಾಗಿ ಕಲೆಯನ್ನು ರೂಡಿಸಿಕೊಂಡ ಜೀವನ್ ಶೆಟ್ಟಿ ಮುಂದೆ ನಾಡಿನ ಒಬ್ಬ ಮಹತ್ವದ ಚಿತ್ರಕಲಾವಿದರಾಗಿ ಮತ್ತು ವ್ಯಂಗ್ಯಚಿತ್ರಕಾರರಾಗಿ ಪ್ರಸಿದ್ಧರಾಗಿದ್ದಾರೆ.

ಜೀವನ್ ಶೆಟ್ಟಿ ಅವರ ಅದ್ಭುತ ವರ್ಣ ಚಿತ್ರಗಳು ಕಲಾಪ್ರದರ್ಶನಗಳಲ್ಲಿ ಕಲಾ ವಿದ್ವಾಂಸರ ಮೆಚ್ಚುಗೆ ಮತ್ತು ಕಲಾಭಿಮಾನಿಗಳ ಸಂತಸವನ್ನು ಆಕರ್ಷಿಸಿವೆ. ನಾಡಿನ ಎಲ್ಲ ಪ್ರಸಿದ್ಧ ನಿಯತಕಾಲಿಕಗಳಲ್ಲಿ ಅವರ ಸಹಸ್ರಾರು ವ್ಯಂಗ್ಯಚಿತ್ರಗಳು ನಿರಂತರ ಓದುಗರನ್ನು ಆಕರ್ಷಿಸುತ್ತ ಬಂದಿವೆ.

ಜೀವನ್ ಶೆಟ್ಟಿ ಅವರ ಪ್ರಕಟಿತ ವ್ಯಂಗ್ಯಚಿತ್ರಗಳ ಸಂಖ್ಯೆಯೇ ಹತ್ತು ಸಾವಿರ ಮೀರಿದ್ದು.  ಕಥಾನಕ ಚಿತ್ರಗಳು ಸಾವಿರದಷ್ಟು,  ಕಲಾತ್ಮಕ ವರ್ಣ ಚಿತ್ರಗಳು ಹಲವು ನೂರು. 

ಜೀವನ್ ಶೆಟ್ಟಿಯವರಿಗೆ ಅನೇಕ ಸನ್ಮಾನ ಗೌರವಗಳು ಸಂದಿವೆ. 1996ರಷ್ಟು ಹಿಂದೆಯೇ ನಾಲ್ಕನೇ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಇವರು ರಚಿಸಿದ 'ನಂದು' ಬಸವ ಕೃತಿ ಅಧಿಕೃತ ಲಾಂಛನವಾಗಿ ಗೌರವಕ್ಕೆ ಅಂಗೀಕೃತವಾಯಿತು. 2003ರಲ್ಲಿ ಇವರ ಏಕವ್ಯಕ್ತಿ ಚಿತ್ರ ಪ್ರದರ್ಶನ ‘ವಾಟರ್ ಇನ್ ವಾಟರ್ ಕಲರ್' ನಾಡಿನ ಗಮನ ಸೆಳೆದಿತ್ತು.  ಅನೇಕ ಕಲಾ ಸ್ಪರ್ಧೆಗಳು, ಶಿಬಿರಗಳು ಮತ್ತು ಕಲಾ ಪ್ರದರ್ಶನಗಳಲ್ಲಿಯೂ ಇವರಿಗೆ ಗೌರವ ಮತ್ತು ಬಹುಮಾನಗಳು ಸಂದಿವೆ. ದೂರದರ್ಶನ ವಾಹಿನಿಗಳು ಇವರ ಸಂದರ್ಶನ ಮಾಡಿವೆ.  ಇವರು ಇಪ್ಪತ್ತಕ್ಕೂ ಹೆಚ್ಚು ವ್ಯಂಗ್ಯ ಚಿತ್ರ ಕಾರ್ಯಾಗಾರ ಮತ್ತು ಮಕ್ಕಳಿಗಾಗಿ 'ಗೆರೆಗಳೊಂದಿಗೆ ಆಟಶಿಬಿರಗಳಲ್ಲಿ ಭಾಗವಹಿಸಿದ್ದಾರೆಇತ್ತೀಚಿನ ವರ್ಷಗಳಲ್ಲಿ ಹಲವಾರು ಅಂತರ ರಾಷ್ಟ್ರೀಯ  ಮತ್ತುರಾಷ್ಟ್ರಮಟ್ಟದ  ಕ್ಯಾರಿಕೇಚರ್ ಸ್ಪರ್ಧೆಗಳ ವಿಜೇತರ ಪಟ್ಟಿಯಲ್ಲಿ ಹೆಸರು ಗಳಿಸಿದ್ದಾರೆ.

ಜೀವನ್ ಶೆಟ್ಟಿ ಅವರು ಉಡುಪಿ ಆರ್ಟಿಸ್ಟ್ಸ್ ಫೋರಂನ ಸಂಸ್ಥಾಪಕ ಉಪಾಧ್ಯಕ್ಷರಾಗಿ, ರಾಜ್ಯ ವ್ಯಂಗ್ಯಚಿತ್ರಕಲಾವಿದರ ಕಾರ್ಯನಿರ್ವಾಹಕ ಮಂಡಳಿಯ ಸದಸ್ಯರಾಗಿ, ಉಡುಪಿಯ 'ಗೆರೆ ಬರೆ' ಕಲಾ ಶಾಲೆಯ ಗೌರವ ನಿರ್ದೇಶಕರಾಗಿ, 'ವಾರೆ ಕೋರೆ' ಪತ್ರಿಕೆಯ ಗೌರವ ಸಂಪಾದಕರಾಗಿ ಹೀಗೆ ಅನೇಕ ರೀತಿಯಲ್ಲಿ ಕ್ರಿಯಾಶೀಲರಾಗಿ ಮತ್ತು ಯುವ ಕಲಾವಿದರಿಗೆ ಸ್ಪೂರ್ತಿ ಮಾರ್ಗದರ್ಶಕರಾಗಿದ್ದಾರೆ.

ಜೀವನ್ ಶೆಟ್ಟಿ ಅಂತಹ ಕಲಾವಿದರ ಬಗ್ಗೆ ಹೇಳುವಾಗ ನೂರು ಪುಟಗಳೂ ಸಾಲುವುದಿಲ್ಲ.  ಅವರ ಚಿತ್ರಗಳ ಕಾಣಲು ನೂರು ಕಣ್ಣು ಸಾಲುವುದಿಲ್ಲ.  ಇವರ ಕಲೆಯ ಮಿನುಗನ್ನು  ಜೀವನ್‍ಗ್ಯಾಲರಿ (jeevangallery), ಈಭೂಮಿ(we Holi), ಗೆರೆಬರೆ( here are) ಮುಂತಾದ ಬ್ಲಾಗುಗಳಲ್ಲಿ ಸಾಕಷ್ಟು ಕಾಣಬಹುದು.

ಆತ್ಮೀಯ ಜೀವನ್ ಶೆಟ್ಟಿ ಅವರಿಗೆ ನಮಸ್ಕಾರ ಮತ್ತು ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ತಮ್ಮ ಮತ್ತು ತಮ್ಮ ಕುಟುಂಬದವರ ಬದುಕು ಸಕಲ ಸುಖ, ಸೌಖ್ಯ, ಸಂಪದ, ಸಂತಸ, ಸಾಧನೆ, ಸಂತೃಪ್ತಿಗಳಿಂದ ನಿತ್ಯ ಕಂಗೊಳಿಸುತ್ತಿರಲಿ. 
🎂🎉🍰🎁🍦💐😊   

Happy birthday Jeevan Shetty Sir

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ