ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ನಯನ ಬಜಕೂಡ್ಲು


 ನಯನ ಬಜಕೂಡ್ಲು


ನಯನ ಬಜಕೂಡ್ಲು ಸುಸಂಸ್ಕೃತ ಮನೋಭಾವದ ಬರಹಗಾರ್ತಿ.  ಮುಖ್ಯವಾಗಿ ಅಪೂರ್ವ ಸಹೃದಯಿ.  ಅವರು ತಾವು ಓದಿದದನ್ನು ಅನುಭಾವಿಸಿ ಹೇಳುವ ರೀತಿ, ಕ್ಷಿಪ್ರವಾಗಿ ಪ್ರಕೃತಿಯ ಕುರಿತು ಕವಿತೆ ಹೇಳುವ ರೀತಿ ನನಗೆ ತುಂಬ ಇಷ್ಟ.  ಹಾಗಾಗಿ ಅವರನ್ನು ಕವಿತೆ ಕೊಡಿ ಎಂದು ಆಗಾಗ ಕೇಳುತ್ತೇನೆ.  

ಸಾಮಾನ್ಯವಾಗಿ ಬಂಧು ವರ್ಗದವರೆಂದರೆ ಏನೋ ಹಲವು ರೀತಿಯ ವೈರುಧ್ಯಗಳು ಕಾಣುವ ಈ ಲೋಕದಲ್ಲಿ ನಯನ ಅವರು ಒಂದು ಅಪವಾದ‍. ಅವರು ತಮ್ಮ ಬಂಧು ಬಳಗದ ಪ್ರತಿಯೋರ್ವರನ್ನೂ ಆಪ್ತವಾಗಿ ಕಾಣುವ ರೀತಿ ಬದುಕುನ್ನು ಹೀಗೆ ಕಂಡರೆ ಎಷ್ಟು ಸುಂದರ ಅನಿಸುತ್ತದೆ.

ಮಾರ್ಚ್ 27,  ನಯನ ಅವರ ಜನ್ಮದಿನ. 
ಹುಟ್ಟಿದ ಊರು ಬಂಟ್ವಾಳ.  ತಂದೆ ಎಲ್ಲೂರು ವಿಶ್ವನಾಥ ರಾವ್.  ತಾಯಿ ಆಶಾಲತಾ.  ಪದವಿ ಓದಿರುವ ಇವರು ಗೃಹಿಣಿಯಾಗಿ ಮನೆಯಲ್ಲಿದ್ದುಕೊಂಡೆ ಫ್ಯಾನ್ ವೈಂಡಿಂಗ್ ಕೆಲಸ ಮಾಡುತ್ತಾರೆ.  ಪತಿ ಮುರಳಿ ಕೃಷ್ಣ ಅವರು ಎಲೆಕ್ಟ್ರಿಷಿಯನ್ ಆದ ಕಾರಣ ಅವರು ಮೋಟಾರ್ ವೈಂಡಿಂಗ್, ವೈರಿಂಗ್ ನ ಕೆಲಸಗಳನ್ನು ಮಾಡುತ್ತಾರೆ.  ಅವರ ಬಳಿಯೇ ನಯನ ಸಹಾ ಫ್ಯಾನ್ ವೈಂಡಿಂಗ್ ಕೆಲಸ ಕಲಿತಿದ್ದಾರೆ. ಜೊತೆಗೆ ಸ್ವಲ್ಪ ತೋಟ ಇರುವ ಕಾರಣ ಕೃಷಿ ಸಂಬಂಧಿತ ಕೆಲಸಗಳನ್ನೂ  ಸಾಕಷ್ಟು ಮಾಡುತ್ತಾರೆ. 

ಓದು ನಯನ ಅವರ ನೆಚ್ಚಿನ ಹವ್ಯಾಸ. ಯಾವುದಾದರೂ ಪುಸ್ತಕವನ್ನು ಓದಿದ ಮೇಲೆ ಮನಸ್ಸನ್ನು ಆವರಿಸುವ ಭಾವನೆಗಳನ್ನು ಬರೆಯುವ ರೂಢಿ ಮಾಡಿಕೊಂಡಿದ್ದಾರೆ. ಚಿಕ್ಕ ಚಿಕ್ಕ ಕವನ, ಹನಿಗವನಗಳನ್ನು ಬರೆಯುವ ಹವ್ಯಾಸವೂ ಇದೆ.   ಚಿಕ್ಕವರಿದ್ದಾಗ ಅಮ್ಮ ಸಾಯಿಸುತೆ, ಎಂ ಕೆ ಇಂದಿರಾ, ತ್ರಿವೇಣಿ ಇವರೆಲ್ಲರ ಕಾದಂಬರಿಗಳನ್ನು ಲೈಬ್ರರಿಯಿಂದ ತಂದು ಓದುತ್ತಿದ್ದುದರಿಂದ  ಇವರಲ್ಲೂ ಓದಿನ ಆಸಕ್ತಿ ಬೆಳೆಯಿತು. ಇವರಿಗೆ ಎಲ್ಲ ರೀತಿಯ ಪುಸ್ತಕಗಳನ್ನು ಓದುವುದು ಇಷ್ಟ, ಮಾತ್ರವಲ್ಲ,  ಸುಮ್ಮನೆ ಪುಟ ತಿರುವದೆ, ಪೂರ್ತಿಯಾಗಿ ಓದುವುದು ಇಷ್ಟ.  ಹಾಗಾಗಿ ಒಂದೊಂದು ಪುಸ್ತಕಕ್ಕೂ ಓದಿ ಮುಗಿಸಲು ಬಹಳ ಸಮಯ ತೆಗೆದುಕೊಳ್ಳುತ್ತಾರೆ.  ತುಂಬಿದ ಮನೆ, ಕುಟುಂಬ ಇವರಿಗೆ ಬಹಳ ಇಷ್ಟ. 

ತಮಗಿರುವ ಕೌಟುಂಬಿಕ ಆಪ್ತತೆ ಬಗ್ಗೆ ನಯನ ಹೀಗೆ ಹೇಳುತ್ತಾರೆ "ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ ಅನ್ನುತ್ತಾರೆ.  ನಮ್ಮ ಮನೆಯಲ್ಲಿ ನನ್ನ ಗಂಡನ ಅಕ್ಕಂದಿರನ್ನು ಸೇರಿಸಿಯೇ ನಮ್ಮ ಕುಟುಂಬ ಪೂರ್ತಿಯಾಗುವುದು ಅನ್ನುವುದೇ ನನ್ನ ವಾದ. ಹಾಗೂ ನಾವೆಲ್ಲರೂ ಹೀಗೆಯೇ ಬದುಕುತ್ತಿದ್ದೇವೆ. ದೇವರ ದಯೆಯಿಂದ ಆ ಹೆಣ್ಣುಮಕ್ಕಳು ಕೂಡಾ ಮಮತಾಮಯಿಗಳು, ಅತ್ತಿಗೆಯಂದಿರಾದರು ಅಮ್ಮನ ಪ್ರೀತಿ ನೀಡುವವರು. ಒಂದು ಮನೆಯಲ್ಲಿ ಇಂತಹ ವಾತಾವರಣ ನಿರ್ಮಾಣ ಆಗಬೇಕಾದರೆ ಎರಡು ಕಡೆಯಿಂದಲೂ ಬಹಳಷ್ಟು ತ್ಯಾಗ ಇರಬೇಕಾಗುತ್ತದೆ. ನಾವು ಬಾಗಲು ಕಲಿತಾಗ ಸಂಬಂಧಗಳು ನವಿರಾಗಿ ನಮ್ಮನ್ನು ಅಪ್ಪಿಕೊಳ್ಳುತ್ತವೆ ಇದು ನನ್ನ ಬದುಕಿನಲ್ಲಿ ನಾನು ಕಂಡುಕೊಂಡ ಸತ್ಯ. ಜಗತ್ತಿನ ಎಲ್ಲ ಕುಟುಂಬ, ಸಂಸಾರಗಳು ಪರಸ್ಪರ ಬೆಸೆದು, ಸಂತೋಷದಿಂದ ಬಾಳಬೇಕು ಅನ್ನುವುದೊಂದೇ ಸದಾಶಯ. ಇದು ಸುಲಭದ ಮಾತಲ್ಲ ಅನ್ನುವುದು ಕೂಡಾ ಸತ್ಯ."

ನಯನ ಅವರು ಜನರನ್ನು ಮಾತ್ರವಲ್ಲ ತಮ್ಮ ಮನೆಯ ಹಸು, ಕರು, ತಮ್ಮ ಸುತ್ತಲಿನ ಹಸುರು, ಹೂಗಿಡಗಳನ್ನೂ ಅಷ್ಟೇ ಅಕ್ಕರೆಯಿಂದ ಕಾಣುತ್ತಾರೆ.

ನಯನ ಅವರು ತಮ್ಮ ಕುರಿತು ಹೇಳುವುದು ಕಡಿಮೆ. ತಮಗೆ ಪ್ರೋತ್ಸಾಹಿಸಿದ, ಸ್ಫೂರ್ತಿ ನೀಡಿದ ಅನೇಕರನ್ನು ಕೃತಜ್ಞತೆಯಿಂದ ನೆನೆಯುತ್ತಾರೆ.  ಅವರಿಗೆ ಅನೇಕ ಬಹುಮಾನಗಳು ಬರುವುದನ್ನು ಆಗಾಗ್ಗೆ ಫೇಸ್ಬುಕ್ನಲ್ಲಿ ಕಾಣುತ್ತಿರುತ್ತೇನೆ.

ಪ್ರತಿ ಸಲ ಅವರ ಹುಟ್ಟುಹಬ್ಬ ಮರೆತುಹೋಗುತ್ತೆ. ಹೀಗಾಗಿ ತಡವಾಗಿ ನಯನ ಅವರಿಗೆ ಹುಟ್ಟುಹಬ್ಬದ ಶುಭಕೋರುತ್ತೇನೆ. ನಯನ ಅವರ ಪರಿಚಯ ನನ್ನ ಬದುಕಿನ ಸೌಭಾಗ್ಯ 😇

Belated Happy birthday Nayana



ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ