ರಮಾಕಾಂತ್ ಜೋಶಿ
ಮನೋಹರ ಗ್ರಂಥಮಾಲೆಯ ರಮಾಕಾಂತ್ ಜೋಶಿ ಇನ್ನಿಲ್ಲ
ಪ್ರಸಿದ್ದ ಮನೋಹರ ಗ್ರಂಥಮಾಲೆಯ ಸಂಪಾದಕ, ಪ್ರಕಾಶಕ ಮತ್ತು ಉಪಾಧ್ಯಕ್ಷರಾಗಿ, ಪ್ರಾಧ್ಯಾಪಕರಾಗಿ, ರಂಗಕರ್ಮಿಯಾಗಿ ಮತ್ತು ಬರಹಗಾರರಾಗಿ ಹೆಸರಾದ ಡಾ. ರಮಾಕಾಂತ್ ಜೋಶಿ ಇಂದು ನಿಧನರಾಗಿದ್ದಾರೆ. ರಮಾಕಾಂತ್ ಜೋಶಿ ಅವರು ತಂದೆ ಜಿ.ಬಿ. ಜೋಶಿಯವರು ಆರಂಭಿಸಿದ ಮನೋಹರ ಗ್ರಂಥಮಾಲೆ ಪ್ರಕಾಶನವನ್ನು ನಡೆಸಿಕೊಂಡು ಬಂದಿದ್ದರು.
ರಮಾಕಾಂತ್ ಜೋಶಿ 1936ರ ಡಿಸೆಂಬರ್ 23ರಂದು ಧಾರವಾಡದಲ್ಲಿ ಜನಿಸಿದರು. ತಂದೆ ಮಹಾನ್ ಸಾಹಿತಿ ಮತ್ತು ರಂಗಕರ್ಮಿ ಜಿ.ಬಿ. ಜೋಶಿ (ಜಡಭರತ) ಅವರು. ತಾಯಿ ಪದ್ಮಾವತಿ. ಗುಜರಾತಿನ ಸರ್ದಾರ್ ಪಟೇಲ್ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದ ರಮಾಕಾಂತರು, ಅದೇ ವಿಶ್ವವಿದ್ಯಾಲಯದಿಂದ “The use of myth in Indian English Drama” ಮಹಾಪ್ರಬಂಧಕ್ಕೆ ಪಿಎಚ್.ಡಿ ಗಳಿಸಿದರು. ಮುಂದೆ ಇಂಗ್ಲಿಷ್ ಪ್ರಾಧ್ಯಾಪಕರಾಗಿ ನಿವೃತ್ತರಾಗಿದ್ದರು.
ರಮಾಕಾಂತ್ ಜೋಶಿ ಅವರು ಪುಸ್ತಕ ಪ್ರಕಾಶನದ ಜೊತೆಗೆ ಲೇಖಕರಾಗಿಯೂ ಮಹತ್ವದ ಕೆಲಸ ಮಾಡಿದ್ದರು. ಸವಣೂರ ವಾಮನರಾವ್, ಗರುಡ ಸದಾಶಿವರಾವ್, ರಾಘವೇಂದ್ರ ಖಾಸನೀಸ, ದ.ಬಾ. ಕುಲಕರ್ಣಿ, ಎ.ಕೆ.ರಾಮಾನುಜನ್, ಒಂದಷ್ಟು ಹೊಸಕಥೆಗಳು ಸೇರಿದಂತೆ ಹಲವಾರು ಕೃತಿಗಳನ್ನು ಸಂಪಾದಿಸಿ ಪ್ರಕಟಿಸಿದ್ದರು. ಪುಸ್ತಕ ಪ್ರಕಾಶನ ಇವರ ಅನುವಾದಿತ ಕೃತಿ.
ಕರ್ನಾಟಕ ಪ್ರಕಾಶಕರ ಸಂಘದ ಅಧ್ಯಕ್ಷರಾಗಿ ಸೇವೆಸಲ್ಲಿಸಿದ್ದ ರಮಾಕಾಂತ್ ಜೋಶಿ ಅವರಿಗೆ ‘ಪ್ರಕಾಶಕರ ಒಕ್ಕೂಟದ ವಿಶಿಷ್ಟ ಪ್ರಕಾಶಕ ಪ್ರಶಸ್ತಿ’, ‘ಸಂದೇಶ ವಿಶೇಷ ಗೌರವ ಪ್ರಶಸ್ತಿ’, ‘ಕನ್ನಡ ಪುಸ್ತಕ ಪ್ರಾಧಿಕಾರದ ಅತ್ಯುತ್ತಮ ಪ್ರಕಾಶಕ ಪ್ರಶಸ್ತಿ’, ಅಂಕಿತ ಅತ್ಯುತ್ತಮ ಪ್ರಕಾಶನ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಸಂದಿದ್ದವು.
ರಮಾಕಾಂತ್ ಜೋಶಿ ಅವರ ನಿಧನದಿಂದ ನಾಡು ಮಹಾನ್ ಕನ್ನಡ ಪ್ರೇಮಿ, ಪ್ರಕಾಶಕ ಮತ್ತು ವಿದ್ವಾಂಸರನ್ಜು ಕಳೆದುಕೊಂಡಿದೆ. ಅಗಲಿದ ಮಹಾನ್ ಚೇತನಕ್ಕೆ ನಮನ 🌷🙏🌷
Respects to departed soul Ramakanth Joshi of Manohara Grantha Mala Dharwad 🌷🙏🌷
ಕಾಮೆಂಟ್ಗಳು