ದೇವದಾಸ್ ಗಾಂಧಿ
ದೇವದಾಸ್ ಗಾಂಧಿ
ದೇವದಾಸ್ ಗಾಂಧಿ ಅವರು ಮಹಾತ್ಮ ಗಾಂಧೀಜಿ ಮತ್ತು ಕಸ್ತೂರಬಾ ಗಾಂಧಿ ಅವರ 4 ಮಕ್ಕಳಲ್ಲಿ ಕೊನೆಯ ಮಗ.
ದೇವದಾಸ್ ಗಾಂಧಿ 1900ರ ಮೇ 22ರಂದು ದಕ್ಷಿಣ ಆಫ್ರಿಕದ ಡರ್ಬನ್ನಲ್ಲಿ ಜನಿಸಿದರು. ಗಾಂಧಿಯವರ ಇತರ ಮಕ್ಕಳಂತೆ ಇವರಿಗೂ ಸಾಮಾನ್ಯ ರೀತಿಯ ಶಾಲಾ-ಕಾಲೇಜ್ ಶಿಕ್ಷಣ ದೊರಕಲಿಲ್ಲ. ಇವರು ಗಾಂಧಿಯವರೊಂದಿಗೆ ಇದ್ದುದೇ ದೊಡ್ಡ ಶಿಕ್ಷಣವಾಯಿತು.
ದೇವದಾಸ್ ಗಾಂಧಿ ತಮ್ಮ ತಂದೆಯವರ ಪ್ರೇರಣೆಯಿಂದ ತಾವೂ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡರು. ಅನೇಕ ಬಾರಿ ಜೈಲುವಾಸ ಅನುಭವಿಸಿದರು.
ಯಂಗ್ ಇಂಡಿಯ ಪತ್ರಿಕೆಯಲ್ಲಿ ಕೆಲಸ ಮಾಡಿ, ಪತ್ರಿಕೋದ್ಯಮದ ಅನುಭವ ಪಡೆದರು. ದಕ್ಷಿಣ ಭಾರತ ಹಿಂದೀ ಪ್ರಚಾರ ಸಭಾದ ಪ್ರಥಮ ಪ್ರಚಾರಕರಾದರು. ಹಿಂದೀ ಬೋಧನೆ ಮತ್ತು ಚರಕ ನೂಲುವಿಕೆ ಮುಂತಾದ ಕಾರ್ಯಗಳಲ್ಲೂ ಪಾಲ್ಗೊಂಡರು.
ದೇವದಾಸ್ ಗಾಂಧಿ ಅವರು ಸಿ. ರಾಜಗೋಪಾಲಾಚಾರಿ ಅವರ ಮಗಳಾದ ಲಕ್ಷ್ಮೀಯನ್ನು ಪ್ರೀತಿಸುತ್ತಿದ್ದರು. ಆಗ ದೇವದಾಸರ ವಯಸ್ಸು 28. ಲಕ್ಷ್ಮಿಯವರ ವಯಸ್ಸು 15. ಗಾಂಧಿ ಮತ್ತು ರಾಜಾಜಿ ಈ ಬೆಳವಣಿಗೆಯನ್ನು ಒಪ್ಪಿದರೂ, ವೈವಾಹಿಕ ಜೀವನಕ್ಕೆ ಕಾಲಿಡಲು ಸೂಕ್ತವಾದ ವಯಸ್ಸಲ್ಲವೆಂದು ನಿಶ್ಚಯಿಸಿ, 5 ವರ್ಷ ಕಾಯಲು ಹೇಳಿದರು. ಆ ಸಮಯದಲ್ಲಿ ಅವರಿಬ್ಬರೂ ಭೇಟಿಯಾಗಲು ಸಮ್ಮತಿಯಿರಲಿಲ್ಲ. 1933ರಲ್ಲಿ ಹಿರಿಯರ ಅನುಮತಿ ಪಡೆದು ವಿವಾಹವಾದರು. ಈ ದಂಪತಿಗಳಿಗೆ ತಾರಾ ಎಂಬ ಮಗಳು ಮತ್ತು ರಾಜಮೋಹನ ಗಾಂಧಿ, ಗೋಪಾಲಕೃಷ್ಣ ಗಾಂಧಿ, ರಾಮಚಂದ್ರ ಗಾಂಧಿ ಪುತ್ರರು.
ದೇವದಾಸ್ ಗಾಂಧಿ ಹಿಂದೂಸ್ಥಾನ್ ಟೈಮ್ಸ್ ಇಂಗ್ಲಿಷ್ ದಿನಪತ್ರಿಕೆಗೆ 1940ರಲ್ಲಿ ಕಾರ್ಯನಿರ್ವಾಹಕ ಸಂಪಾದಕರಾಗಿ ನೇಮಕಗೊಂಡರು. ಆಗ ಇವರ ಅನುಭವ ಒಳ್ಳೆಯ ಪ್ರಯೋಜನಕ್ಕೆ ಬಂತು. ಸಹ ಸಂಪಾದಕರಾಗಿದ್ದ ದುರ್ಗಾದಾಸ್ ಅವರ ನೆರವಿನಿಂದ ಪತ್ರಿಕೆಯನ್ನು ಹೆಚ್ಚು ಜನಪ್ರಿಯಗೊಳಿಸಲು ಪ್ರಯತ್ನಿಸಿದರು. ಸ್ವಾತಂತ್ರ್ಯ ಹೋರಾಟ, ಕಾಂಗ್ರೆಸ್ ಧ್ಯೇಯಗಳನ್ನು ಪ್ರತಿಪಾದಿಸುತ್ತಿದ್ದ ಈ ಪತ್ರಿಕೆ, ರಾಷ್ಟ್ರಕ್ಕೆ ಸ್ವಾತಂತ್ರ್ಯ ಪ್ರಾಪ್ತವಾದ ಮೇಲೆ, ಸರ್ಕಾರದ ನೀತಿ-ಧೋರಣೆಗಳ ವಾಣಿಯಾಯಿತು. ಇದರ ಹಿಂದಿ ಅವತಾರಗಳಾದ ಹಿಂದೂಸ್ತಾನ್, ಹಿಂದೂಸ್ತಾನ್ ಸಾಪ್ತಾಹಿಕ ಇವೂ ಜನಪ್ರಿಯತೆ ಗಳಿಸಿದುವು. ಇದರ ಸಾಗರೋತ್ತರ ಆವೃತ್ತಿ ವಿದೇಶಗಳಲ್ಲಿಯ ರಾಷ್ಟ್ರೀಯರ ಪ್ರೀತಿಗೆ ಪಾತ್ರವಾಯಿತು. ದೇವದಾಸ್ ಗಾಂಧಿಯವರು 1947ರಲ್ಲಿ ಅಖಿಲಭಾರತ ಪತ್ರಕರ್ತರ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ದೇವದಾಸ ಗಾಂಧಿಯವರು 1957ರ ಆಗಸ್ಟ್ 3ರಂದು ನಿಧನರಾದರು.
On the birth anniversary of freedom fighter and journalist Devdas Gandhi
ಕಾಮೆಂಟ್ಗಳು