ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಶಿವಾನಂದ ಕಳವೆ

ಶಿವಾನಂದ ಕಳವೆ


ಶಿವಾನಂದ ಕಳವೆ, ತಮ್ಮೊಳಗಿನ ಪ್ರಕೃತಿ ಪ್ರೀತಿಯನ್ನು ತಮ್ಮ ಸುತ್ತಲಿನ ವಿಶ್ವದಲ್ಲಿ ಪಸರಿಸುತ್ತಿರುವ ಅಸಾಮಾನ್ಯ ಜೀವಿ. 

ಶಿವಾನಂದ ಕಳವೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಸಮೀಪದ ಕಳವೆ ಗ್ರಾಮದವರು.  ಪ್ರಾಥಮಿಕ, ಪ್ರೌಢ ಶಿಕ್ಷಣದ ಮುಗಿಸಿ ವಾಣಿಜ್ಯಶಾಸ್ತ್ರದಲ್ಲಿ ಪದವಿ ಪಡೆದರು. 

ಶಿವಾನಂದ ಕಳವೆ ಅವರಿಗೆ ಚಿಕ್ಕಂದಿನಿಂದ ಬಯಲೇ ಬದುಕಾಯಿತು. ಕಾಡು, ಕೆರೆ, ನದಿ ಬೆಟ್ಟ ಗುಡ್ಡಗಳಲ್ಲೇ ಇವರ ಓಡಾಟ ಸಾಗಿತು. ಈ ಮನಕ್ಕೆ ಪ್ರತಿ ಗಿಡಮರಗಳನ್ನೂ ಮುಟ್ಟಿ ನೋಡುವ ತವಕ. ಚಿಟ್ಟೆಯಿಂದ ಹಿಡಿದು ಆನೆಯವರೆಗೆ ಪ್ರತಿ ಪ್ರಾಣಿಯ ಬಗ್ಗೆಯೂ ಆಳವಾದ ಜ್ಞಾನ. "ಸಮಾಜ ಬದಲಾಗಬೇಕಾದರೆ ಮೊದಲು ನಮ್ಮಲ್ಲಿ ಬದಲಾವಣೆ ಆಗಬೇಕು" ಎನ್ನುವ ಗಾಂಧೀಜಿ ಸಿದ್ಧಾಂತವನ್ನು ಬಲವಾಗಿ ನಂಬಿದರು.  

ಕಳವೆಯಲ್ಲಿ ನೀರಿಂಗಿಸುವ ಪ್ರಯೋಗಕ್ಕೆ ಕೈ ಹಾಕಿ ಯಶಸ್ವಿಯಾದ ಶಿವಾನಂದ ಕಳವೆಯವರು ತಮ್ಮ ಪ್ರಯತ್ನವನ್ನು ಬೇರೆಡೆಗೂ ವಿಸ್ತರಿಸಿದರು. ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಖಾಲಿ ಜಾಗದಲ್ಲಿ ನೀರಿಂಗಿಸುವ, ಕೆರೆ ಹೂಳು ಸ್ವಚ್ಛಗೊಳಿಸುವ ಕಾರ್ಯಕ್ಕೆ ಮುಂದಾದರು. ಚಿತ್ರನಟ ಯಶ್ ಅವರ ಯಶೋಮಾರ್ಗಕ್ಕೆ ನೀರಿಂಗಿಸುವ ಕಾರ್ಯಕ್ರಮದ ಉಸ್ತುವಾರಿಯನ್ನೂ ಹೊತ್ತರು. ಶಿವಾನಂದ ಕಳವೆಯವರ ನೀರಿಂಗಿಸುವ ಸಾಹಸದಿಂದ ಇಂದು ಎಷ್ಟೋ ಜನರ ನೆಲ ಹಸುರಾಗಿದೆ. 

ಶಿವಾನಂದ ಕಳವೆಯವರು ತಮ್ಮೂರಿನ ಜನರಿಗೆ ಪರಿಸರದ ಪಾಠ ಹೇಳಿಕೊಟ್ಟರು. ಕೃಷಿ ಬದಲಾವಣೆಗಳನ್ನು ತೋರಿಸಿಕೊಟ್ಟರು. ಅನೇಕ ದೇಸಿ ತಳಿಗಳನ್ನು ಸಂರಕ್ಷಿಸಿದರು. ಕಳವೆಯಲ್ಲಿ ಗ್ರಾಮ ಅರಣ್ಯ ಸಮಿತಿ ರಚನೆ ಮಾಡಿ ಕ್ರಾಂತಿಕಾರಕ ಬದಲಾವಣೆಗಳಿಗೆ ಕಾರಣರಾದರು. ಕೃಷಿ, ಗ್ರಾಮೀಣ, ಪರಿಸರ ಹೀಗೆ ಅನೇಕ ಮಹತ್ವದ ಹಾಗೂ ಸೂಕ್ಷ್ಮ ವಿಚಾರಗಳ ಬಗ್ಗೆ ಕಾಲೇಜು ವಿದ್ಯಾರ್ಥಿಗಳಿಂದ ಹಿಡಿದು ವಿಜ್ಞಾನಿಗಳವರೆಗೆ ಹಾಗೂ ಪತ್ರಕರ್ತರಿಗೂ ಶಿಬಿರಗಳನ್ನು ಆಯೋಜಿಸುತ್ತ ಬಂದರು. ಇವರು ತಮ್ಮ ಕಲಿಕಾ ಶಿಬಿರಗಳಲ್ಲಿ ತರಗತಿಯಲ್ಲಿ ಕಲಿಯುವುದಕ್ಕಿಂತ ಹೆಚ್ಚು ಕಾಡಿನಲ್ಲಿ, ಹೊಲ, ತೋಟಗಳಲ್ಲಿ ಕಲಿಯುವಂತೆ ಮಾಡುತ್ತಿರುವುದು ವಿಶೇಷವಾಗಿದೆ.

ಶಿವಾನಂದರು ಕಳವೆಯಲ್ಲಿ 'ಕಾನ್ಮನೆ' ಎಂಬ  ವಿಶಿಷ್ಟ ಜ್ಞಾನಕೇಂದ್ರವನ್ನು ಸ್ಥಾಪಿಸಿದ್ದಾರೆ. ಕರ್ನಾಟಕದ ನಾನಾ ಹಳ್ಳಿಗಳಿಗೆ ಭೇಟಿ ಕೊಟ್ಟು ವಿಶಿಷ್ಟ ಅರಣ್ಯಗಳನ್ನು ರೂಪಿಸಿರುವ 20 ಹಳ್ಳಿಗಳ ಪಟ್ಟಿ ಮಾಡಿ ಕೃತಿಯೊಂದನ್ನು ಹೊರತಂದಿದ್ದಾರೆ. 40ಕ್ಕೂ ಹೆಚ್ಚು ಕೆರೆ, ಕಟ್ಟೆಗಳ ಅಭಿವೃದ್ಧಿಗೆ ಕಾರಣರಾಗಿದ್ದಾರೆ. ಕೃಷಿ ಮತ್ತು ಪರಿಸರಕ್ಕೆ ಬಿಡಲಾಗದ ನಂಟು. ಆದ್ದರಿಂದಲೇ ನಮ್ಮ ಜನ ಈ ಎರಡಕ್ಕೂ ಸಮಾನ ಆದ್ಯತೆ ಕೊಡಬೇಕು ಎನ್ನುವುದು ಕಳವೆಯವರ ಅಭಿಮತ.

ಶಿವಾನಂದ ಕಳವೆ ಅವರು ಶಿರಸಿ ಸಮೀಪದ ನೀರ್ನಳ್ಳಿಯಲ್ಲಿರುವ ‘ಮಲೆನಾಡ ಮಳೆಕೇಂದ್ರ’ದ ರೂವಾರಿಯೂ ಹೌದು. ಈಸ್ಟ್ ಇಂಡಿಯ ಕಂಪನಿಯ ನಿರ್ದೇಶನದಂತೆ 1801ರಲ್ಲಿ ಡಾ. ಪ್ರಾನ್ಸಿಸ್ ಬುಕಾನನ್ ಎಂಬ ವಿದೇಶಿ ಅಧ್ಯಯನ ಪ್ರವಾಸಿ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಪ್ರವಾಸ ಮಾಡಿದ. ಅಲ್ಲಿಯ ಕೃಷಿ, ಪರಿಸರ, ಪರಿಸರ, ಜನಜೀವನಗಳನ್ನು ದಾಖಲಿಸಿದ. ಇದರ ಮಹತ್ವ ಅರಿತ ಶಿವಾನಂದ ಕಳವೆಯವರು 2001ರಲ್ಲಿ ಬುಕಾನನ್ ತಿರುಗಿದ ಹಾದಿಯಲ್ಲಿ ಮರುಪ್ರವಾಸ ಮಾಡಿ ವಿಶಿಷ್ಟ ಸಂಗತಿಗಳನ್ನು ದಾಖಲಿಸಿದರು. ಹೀಗೆ ಮೂಡಿದ್ದು ಅವರ ‘ಕಾಡುನೆಲದ ಕಾಲಮಾನ’. 

ನಾಡಿನ ಉದ್ದಗಲ ಸಂಚರಿಸಿದ ಶಿವಾನಂದ ಕಳವೆಯವರು ದೇಸೀ ಜ್ಞಾನದ ವಿವಿಧ ಮಜಲುಗಳ ಅಧ್ಯಯನ ನಡೆಸಿದ್ದಾರೆ. ನಾಡಿನ ಬಹುತೇಕ ಎಲ್ಲ ಪತ್ರಿಕೆಗಳಲ್ಲೂ ಅಂಕಣ ಬರೆದಿದ್ದಾರೆ. ಇವುಗಳಲ್ಲಿ
ಮುಡೇಬಳ್ಳಿ, ಮುಳ್ಳೆಹಣ್ಣು, ಬಹುಧಾನ್ಯ, ದಾಟ್ ಸಾಲು ಮುಂತಾದವು ಸೇರಿವೆ.

ಶಿವಾನಂದ ಕಳವೆಯವರ ಕೃತಿಗಳಲ್ಲಿ ಕಾನ್ ಗೌರಿ, ಗೌರಿ ಜಿಂಕೆಯ ಆತ್ಮಕಥೆ, ಅರಣ್ಯ, ಅರಣ್ಯ ಜ್ಞಾನದ ಹತ್ಯಾಕಾಂಡ, ಕಂಪ್ಯೂಟರ್ ಊಟ ಹಳ್ಳಿ ಮಾರಾಟ, ಪತ್ರಕರ್ತರೇ ಟೈಂ ಉಂಟಾ?, ಮಳೆ ಮನೆಯ ಮಾತುಕಥೆ, ಕಾನ್ ಬಾಗಿಲು, ಮಣ್ಣಿನ ಓದು, ಒಂದು ತುತ್ತಿನ ಕಥೆ, ಕ್ಷಾಮ ಡಂಗುರ, ಜಲ ವರ್ತಮಾನ, ಅನ್ನ ಕೊಡುವ ಅನನ್ಯ ತೋಟ – ತದ್ರೂಪಿ ಕಾಡು ( ಜಿ. ಕೃಷ್ಣ ಪ್ರಸಾದ್ ಅವರ ಜೊತೆ ಸಂಪಾದನೆ), ಒಡಲ ನೋವಿನ ತೊಟ್ಟಿಲ ಹಾಡು, ಪಶ್ಚಿಮ ಘಟ್ಟದಲ್ಲಿ ಮೋನೋಕಲ್ಚರ್ ಮಹಾಯಾನ, ಕಾನ್ ಚಿಟ್ಟೆ, ಹಸಿರು ಪುಸ್ತಕದ ಹಳೆಯ ಪುಟಗಳು, ಕಾಡು ನೆಲದ ಕಾಲಮಾನ, ಕಾನ್ಮನೆಯ ಕಥೆಗಳು, ಕಾವೇರಿ ಖಂಡ, ಅನಲಾಗ್ ತೋಟಗಾರಿಕೆ ಮುಂತಾದವು ಸೇರಿವೆ. 

ಶಿವಾನಂದ ಕಳವೆ ಅವರಿಗೆ ಕರ್ನಾಟಕ ರಾಜ್ಯ ಸರ್ಕಾರ 2006ರಲ್ಲಿ ಪರಿಸರ ಪತ್ರಿಕೋದ್ಯಮಿ ಪ್ರಶಸ್ತಿ ನೀಡಿ ಗೌರವಿಸಿದೆ. ಇವರಿಗೆ 'ಸುವರ್ಣ ಸುದ್ದಿವಾಹಿನಿ' ನೀಡುವ ಅಸಾಮಾನ್ಯ ಕನ್ನಡಿಗ ಪ್ರಶಸ್ತಿ ಸಂದಿದೆ. ಅನೇಕ  ಸಂಘಸಂಸ್ಥೆಗಳೂ ಗೌರವಿಸಿವೆ.  ಎಲ್ಲಕ್ಕಿಂತ ಮುಖ್ಯವಾಗಿ ಇದ್ದರೆ ಶಿವಾನಂದ ಕಳವೆ ಅವರಂತಿರಬೇಕು ಎಂದು ಬದುಕಿನ ಕಾಳಜಿಯುಳ್ಳರಿಗೆ ಅನಿಸಿದೆ.  

'ಬಂಗಾರದ ಮನುಷ್ಯ' ಚಿತ್ರದ ಗೀತೆಯ ತುಣುಕೊಂದು ಮನದ ಮುಂದೆ ಹಾದು ಹೋಯ್ತು

"ಉರಿಯೋ ಸೂರ್ಯ ಒಬ್ಬ ಸಾಕು ಭೂಮೀನ್ ಬೆಳಗೋಕೆ... " ಶಿವಾನಂದ ಕಳವೆ ಅಂತ ಸಹೃದಯಿ ಎಲ್ಲ ಊರಲ್ಲೂ ಇರಬೇಕು.

Our great nature lover and social worker Shivanand Kalave Sir 🌷🙏🌷


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ