ಪ್ರೊಫೆಸರ್ ಶಂಕರ್
ಪ್ರೊಫೆಸರ್ ಶಂಕರ್
ಲೇಖಕರು: ಮೂರ್ತಿ ದೇರಾಜೆ
ಜಾಗತಿಕ ಜಾದೂ ವಲಯದಲ್ಲಿ ಪ್ರೊಫೆಸರ್ ಶಂಕರ್ ಅವರದ್ದು ದೊಡ್ಡ ಹೆಸರು. ಭಾರತದಾದ್ಯಂತ ಮಾತ್ರವಲ್ಲದೇ ಅನೇಕ ಪಾಶ್ಚಾತ್ಯ ದೇಶಗಳಲ್ಲಿ 18 ಜನರ ತನ್ನ "ಗಿಲಿಗಿಲಿ ಮ್ಯಾಜಿಕ್" ತಂಡದೊಂದಿಗೆ ನಾಲ್ಕು ಜನ ಹಿನ್ನೆಲೆ ಸಂಗೀತಗಾರರ ಸಹಿತವಾಗಿ. ಭಾರತೀಯ ಜಾದೂವನ್ನು ಪಸರಿಸಿದವರು, ಪ್ರೊಫೆಸರ್ ಶಂಕರ್.
ಹೈಸ್ಕೂಲಿನಲ್ಲಿದ್ದಾಗಲೇ ಶಂಕರ್ ಅವರು ಜಾದೂ ಕಾರ್ಯಕ್ರಮ ನೀಡಲು ಪ್ರಾರಂಬಿಸಿದರು. 14ನೇ ವಯಸ್ಸಿನಲ್ಲಿ ಬೆಳ್ತಂಗಡಿಯ ಸಮಾಜ ಮಂದಿರದಲ್ಲಿ ಕೋವಿಯಿಂದ ಹೊಡೆದ ಗುಂಡನ್ನು ಅಂಗೈಯಲ್ಲಿ ಹಿಡಿಯುವುದು, ಜೀವಂತ ಸಮಾಧಿ ಮುಂತಾದ ಅಪರೂಪದ ಅಪಾಯಕಾರಿ ಜಾದುಗಳನ್ನು ಪ್ರದರ್ಶಿಸಿ ನೋಡುಗರನ್ನು ಮತ್ರಮುಗ್ಧರನ್ನಾಗಿಸಿದ್ದರು.
ಪಿ.ಯು.ಸಿ.ಯಲ್ಲಿದ್ದಾಗ ಕಲ್ಕತ್ತಾ ಜಾದೂ ಪ್ರತಿಷ್ಠಾನದಿಂದ ಪ್ರೊಫೆಸರ್ ಪದವಿ ಪಡೆದರಲ್ಲದೇ, ಆ ಕಾಲದ ಜಾದೂ ದಿಗ್ಗಜರಿಂದ “ಬುಲೆಟ್ ಪ್ರೂಫ್ ಮೆಜೀಶಿಯನ್" ಎಂದು ಪ್ರಶಂಸಿಸಲ್ಪಟ್ಟರು. ಮೈಸೂರಿನಲ್ಲಿ ಮನಃಶಾಸ್ತ್ರ ಪದವಿ ಪಡೆದು,
ಹಿಪ್ನೋಟಿಸಂ ವಿದ್ಯೆಯಲ್ಲೂ ಪರಿಣತಿ ಸಾಧಿಸಿದರು. ಸಿಂಡಿಕೇಟ್ ಬ್ಯಾಂಕ್ - ಶಂಕರ್ ಅವರಿಗಾಗಿಯೇ "ಇಂಡಸ್ಟ್ರಿಯಲ್ ಮೆಜೀಶಿಯನ್" ಎನ್ನುವ ಹುದ್ದೆಯೊಂದನ್ನು ಸೃಷ್ಟಿಸಿತು. 1974 ರಿಂದ 2001 ರವರೆಗೆ ಅವಿರತವಾಗಿ ದೇಶದಾದ್ಯಂತ, ಪ್ರಮುಖವಾಗಿ ಉತ್ತರ ಭಾರತದ ಹಳ್ಳಿ ಹಳ್ಳಿಗಳಲ್ಲೂ ಬ್ಯಾಂಕಿನ ಸೇವಾ ಯೋಜನೆಗಳನ್ನು ಜಾದೂ ಮೂಲಕ ಜನಸಾಮಾನ್ಯರಿಗೆ ತಲಪಿಸಿದ ವಿಶ್ವದ ಏಕೈಕ ಜಾದೂಗಾರ ಪ್ರೊಫೆಸರ್ ಶಂಕರ್. ಮತ್ತು ಸಿಂಡಿಕೇಟ್ ಬ್ಯಾಂಕ್ ಒಬ್ಬ ಜಾದೂಗಾರನನ್ನು ತನ್ನ social service scheme ಗಳ ಪ್ರಚಾರಕ್ಕಾಗಿ ಬಳಸಿಕೊಂಡ ಏಕೈಕ ವಾಣಿಜ್ಯ ಸಂಸ್ಥೆ.
ಇವರು ಬಾಲ್ಯದಲ್ಲಿ ಒಬ್ಬ ಅತ್ಯುತ್ತಮ ನಟನಾಗಿ ಮತ್ತು ನಾಟಕ ನಿರ್ದೇಶಕನಾಗಿ ಹೆಸರು ಗಳಿಸಿದ್ದರು. ಉತ್ತಮ ಎನ್.ಸಿ.ಸಿ ಕೆಡೆಟ್ ಆಗಿದ್ದರು. ಚಿತ್ರ ಕಲಾವಿದ, ಕವಿ ಮತ್ತು ಕತೆಗಾರ ಆಗಿದ್ದರು.8 ನೇ ತರಗತಿಯಲ್ಲಿದ್ದಾಗಲೇ "ಬೆನ್ನು ಬಿಡದ ಬೇತಾಳ" ಎನ್ನುವ ಕಾದಂಬರಿಯನ್ನು ಬರೆದು ಪ್ರಕಟಿಸಿದ್ದರು. ಒಳ್ಳೆಯ ಯಕ್ಷಗಾನ ವೇಷಧಾರಿ ಆಗಿದ್ದರಲ್ಲದೆ, ತಾಳಮದ್ದಳೆಯಲ್ಲಿ ಉಡುವೇಕೋಡಿ ಸುಬ್ಬಪ್ಪಯ್ಯನವರ ಜೊತೆ ತಾರೆಯಾಗಿ ಅರ್ಥ ಹೇಳಿದ್ದರು.
ಕಾಲೇಜಿನಲ್ಲಿದ್ದಾಗ ನಾಟಕದಲ್ಲಿ ಬಹುಮಾನವನ್ನೂ ಪಡೆದರಲ್ಲದೇ, ಪ್ರಸಿದ್ಧ ಸಿನೇಮಾ ನಿರ್ದೇಶಕ ಜಿ.ವಿ.ಅಯ್ಯರ್ ಅವರ ಕಣ್ಣಿಗೆ ಬಿದ್ದು , ಅವರ ಸಿನೇಮದಲ್ಲಿ ಪಾತ್ರವಹಿಸಲು ಆಹ್ವಾನಿಸಲ್ಪಟ್ಟರು. ಸಿ.ಆರ್.ಸಿಂಹ, ಅನಂತನಾಗ್ ಅಭಿನಯಿಸಿದ "ಸಂಕಲ್ಪ" ಸಿನೇಮಾದಲ್ಲೂ ಶಂಕರ್ ಅವರು ಮುಖ್ಯ ಪಾತ್ರದಲ್ಲಿ ನಟಿಸಿದ್ದು ಮಾತ್ರವಲ್ಲದೆ, ಸಹ ನಿರ್ದೇಶಕರಾಗಿಯೂ ಕಾರ್ಯ ನಿರ್ವಹಿಸಿದವರು.ಅದು ರಾಷ್ಟ್ರಪ್ರಶಸ್ತಿಯನ್ನು ಪಡೆದ ಸಿನೇಮ.
ಶಂಕರ್ ಅವರು ಅರುವತ್ತರ ದಶಕದಲ್ಲಿ ದಕ್ಷಿಣ ಭಾರತದಲ್ಲಿ ತೀರಾ ಅಪರಿಚಿತವಾಗಿದ್ದ ಜಾದೂ ಕಲೆಯನ್ನು ಅಭ್ಯಸಿಸಿ ಆ ಕಲೆಗೆ ಒಂದು ಮಾನ್ಯತೆಯನ್ನು ದೊರಕಿಸಿ ಕೊಟ್ಟವರು. ಭದ್ರ ಬುನಾದಿಯನ್ನು ಹಾಕಿಕೊಟ್ಟವರು. ಆಧುನಿಕ ಜಾದೂ ವಿದ್ಯೆಯನ್ನು ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮೊದಲು ಪ್ರಾರಂಬಿಸಿದವರೇ ಪ್ರೊಫೆಸರ್ ಶಂಕರ್.
ಭಾರತದಾದ್ಯಂತ ಮಾತ್ರವಲ್ಲ USA , UK, Switzerland, Germany, UAE, Srilanka , Malaysia Mauritius ಮುಂತಾದ ದೇಶಗಳಲ್ಲಿ 10,000 ಮಿಕ್ಕಿ ಜಾದೂ ಕಾರ್ಯಕ್ರಮಗಳನ್ನು ಪ್ರದರ್ಶಿಸಿದವರು ಪ್ರೊಫೆಸರ್ ಶಂಕರ್
ಶಂಕರ್ ಉಡುಪಿಯಲ್ಲಿ ಮೂರು ಭಾರಿ ‘ಗಿಲಿ ಗಿಲಿ 94', 'ಗಿಲಿ ಗಿಲಿ 97' ಹಾಗೂ 'ಗಿಲಿಗಿಲಿ 2001' ಜಾಗತಿಕ ಜಾದೂ ಸಮ್ಮೇಳನಗಳನ್ನು ತನ್ನ ಸ್ವಂತ ಖರ್ಚಿನಲ್ಲಿ ಏರ್ಪಡಿಸಿ, ಜಗತ್ತಿನ ಪ್ರಸಿದ್ದ ಜಾದೂಗಾರರನ್ನು ಕರೆಸಿ, ಅವರ ಜಾದೂ ವಿಶೇಷತೆಗಳನ್ನು ನಾಡಿನ ಜನರಿಗೆ ಪರಿಚಯಿಸಿದರು. ಈ ಸಮ್ಮೇಳನದ ಸಂದರ್ಭ, ಅಳಿದು ಹೋಗುತ್ತಿರುವ ದೇಶ ವಿದೇಶಗಳ ಬೀದಿಬದಿಯ ಜಾದೂಗಾರರನ್ನೂ ಕರೆಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವರಿಗೆ ಒಂದು ಉತ್ತಮ ವೇದಿಕೆಯನ್ನು ಪ್ರೊಫೆಸರ್ ಶಂಕರ್ ಅವರು ನಿರ್ಮಿಸಿ ಕೊಟ್ಟರು. ಕೇವಲ ದಂತಕತೆ ಎಂದೇ ಬಿಂಬಿತವಾಗಿದ್ದ ಭಾರತದ ಸಾಂಪ್ರದಾಯಿಕ ಜಾದುವಾದ The Great Indian Rope Trick ನ್ನು ಈ ಸಮ್ಮೇಳನದಲ್ಲಿ ಪರಿಚಯಿಸಿದ ಹಿರಿಮೆ ಇವರದು.
ಶಂಕರ್ ಅವರ ಈ ಅಪ್ರತಿಮ ಸಾಹಸವನ್ನು ಮೆಚ್ಚಿ ಶಿವರಾಮ ಕಾರಂತರು ಶಂಕರ್ ಅವರ ತಲೆಗೆ ಮೈಸೂರು ಪೇಠವನ್ನಿಟ್ಟು ಗೌರವಿಸಿದ್ದರಲ್ಲದೆ, ತಾನು ಕಂಡಂತೆ ಯಾವುದೇ ಸಮಿತಿಗಳನ್ನು ರಚಿಸದೇ ಕೇವಲ ಮನೆಯವರು ಮತ್ತು ಗೆಳೆಯರ ಸಹಾಯದಿಂದ ಜಾಗತಿಕ ಸಮ್ಮೇಳನವನ್ನು ಏರ್ಪಡಿಸಿದವರು ಶಂಕರ್ ಮಾತ್ರ ಎಂದು ಪ್ರಶಂಸಿಸಿದ್ದರು.
ಮೂರನೇ ಜಾಗತಿಕ ಜಾದೂ ಸಮ್ಮೇಳನಕ್ಕೆ ಇಡೀ ಭಾರತದಲ್ಲೆಲ್ಲೂ ಪ್ರದರ್ಶನಕ್ಕೆ ಒಪ್ಪದ ಜಗತ್ತಿನ ಶ್ರೇಷ್ಟ ಎಸ್ಕೇಪ್ ಏಕ್ಟ್ ಜಾದೂಗಾರ ಡೀನ್ ಗನರ್ ಸನ್ ಅವರು ಉಡುಪಿಗೆ ಆಗಮಿಸಿದ್ದರು. "ನೀನು ಪ್ರದರ್ಶನ ನೀಡದೇ ಇದ್ದರೂ ಸರಿ, ಶಂಕರ್ ಅವರ ಆತಿಥ್ಯವನ್ನು ಸವಿಯುವುದಕ್ಕಾದರೂ ಉಡುಪಿಗೆ ಹೋಗಬೇಕು" ಎಂದು ತನ್ನ ಅನೇಕ ಜಾದೂ ಗೆಳೆಯರು ಹೇಳಿದ್ದರಿಂದ ಉಡುಪಿಗೆ ಬಂದೆ ಎಂದ ಗನರ್ ಸನ್ ಸ್ಟಾರ್ ಹೋಟೆಲನ್ನು ಬಿಟ್ಟು ಶಂಕರ್ ಅವರ ಮನೆಯಲ್ಲೇ ತಂಗಿದ್ದರು.
ಜಾದುವನ್ನು ಕೇವಲ ಮನೋರಂಜನೆಗೆ ಮಾತ್ರವಲ್ಲ, ಮಾಟ, ಮಂತ್ರ ಪವಾಡ, ಮೂಡನಂಬಿಕೆಗಳು, Black Majic ನಂತಹ ಅಂಧಶ್ರದ್ಧೆಗಳ ವಿರುದ್ಧ ಸತತವಾಗಿ ಹೋರಾಡುತ್ತಾ ನಾನಾ ರೀತಿಯ ಕಪಟಿಗಳ ಮೋಸಗಳಿಂದ ಜನರಲ್ಲಿ ಜಾಗೃತಿ ಮೂಡಿಸಲು ಪ್ರದರ್ಶನ ನೀಡಿದ ಮೊತ್ತಮೊದಲ ಜಾದೂಗಾರ ಪ್ರೊಫೆಸರ್ ಶಂಕರ್.
ಇವರು ಅಕ್ಷಯ ವಸಂತ ಎನ್ನುವ ಜನಜಾಗೃತಿಗಾಗಿ ಜಾದೂವನ್ನು 2011 ರಲ್ಲಿ ವರ್ಷವಿಡೀ ನಾಡಿನಾದ್ಯಂತ, ಸ್ವಂತ ಖರ್ಚಿನಲ್ಲಿ ಉಚಿತವಾಗಿ ಪ್ರದರ್ಶನ ನೀಡುವ ಮೂಲಕ ತಮ್ಮ 60 ನೇ ವರ್ಷವನ್ನು ಆಚರಿಸಿಕೊಂಡರು. ಈಗಲೂ ಆಸಕ್ತಿ, ಅಪೇಕ್ಷೆ ಇದ್ದರೆ ಸಂಘಟಕರಿಗೆ ಹೊರೆಯಾಗದಂತೆ ಕೇವಲ ಖರ್ಚುವೆಚ್ಚಗಳನ್ನು ಮಾತ್ರ ಸ್ವೀಕರಿಸಿ ಈ ಜನಜಾಗೃತಿ ಕಾರ್ಯಕ್ರಮವನ್ನು ನೀಡುತ್ತಾರಲ್ಲದೆ, ಸಂಘಟಕರು ಸ್ವ ಇಚ್ಛೆಯಿಂದ ನೀಡಬಯಸುವ ಸಂಭಾವನೆಯನ್ನು ಸ್ವೀಕರಿಸಿ, ಆ ಮೊತ್ತವನ್ನು ಜನಜಾಗೃತಿಗಾಗಿಯೇ ಬಳಸುತ್ತಿದ್ದಾರೆ.
ತನ್ನ ಗೆಳೆಯರ ಜೊತೆ ಕಣ್ಣಿಗೆ ಪ್ಲಾಸ್ಟರ್ ಬ್ಯಾಂಡೇಜ್ ಮಾಡಿ ಸ್ಕೂಟರ್ ಚಲಾಯಿಸುತ್ತಾ ಮಂಗಳೂರಿನಿಂದ ಕಾರವಾರದವರೆಗೆ 'ಜಾಗೃತಿಗಾಗಿ ಜಾದೂ' ಎಂಬ ಜಾಥಾವನ್ನು ಮಾಡಿದ್ದಾರೆ.
ಆಸ್ಪತ್ರೆಯಲ್ಲಿ ರೋಗಿಗಳ ಆರೈಕೆಗಾಗಿ ಜಾದೂ ಕೈಚಳಕಗಳನ್ನು ಪ್ರದರ್ಶಿಸುತ್ತಾ, ರೋಗಿಗಳು ಆ ಜಾದೂಗಳನ್ನು ಕಲಿತು ದೈಹಿಕವಾಗಿ ಮತ್ತು ಮಾನಸಿಕವಾಗಿ ರೋಗಮುಕ್ತರಾಗುವಂತಹ ಪ್ರಯೋಗಗಳನ್ನು ನಡೆಸಿದವರು ಪ್ರೊಫೆಸರ್ ಶಂಕರ್.
ಅಧ್ಯಾತ್ಮ ಪ್ರಸಾರಕ್ಕಾಗಿ ಜಾದೂ ಶಂಕರ್ ಅವರ ಮಹತ್ತರ ಕಾರ್ಯಕ್ರಮ. ವಿಶ್ವದಲ್ಲೇ ಮೊದಲ ಭಾರಿಗೆ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದವರ ವಿನಂತಿಯಂತೆ ಅವರ ಆಧ್ಯಾತ್ಮಿಕ ನಿಲುವುಗಳನ್ನು ಜನರಿಗೆ ತಲಪಿಸಿ ಆಧ್ಯಾತ್ಮದತ್ತ ಒಲವನ್ನು ಹೆಚ್ಚಿಸಲು 'ಆಧ್ಯಾತ್ಮಿಕ ಜಾದೂ' ಎಂಬ ಕಾರ್ಯಕ್ರಮವನ್ನು ನಿರ್ಮಿಸಿ, ದೆಹಲಿಯ ತಿಹಾರ್ ಜೈಲಿನಲ್ಲೂ ಸೇರಿದಂತೆ ಅನೇಕ ಕಡೆಗಳಲ್ಲಿ ಪ್ರದರ್ಶನಗಳನ್ನು ನೀಡಿದ್ದಾರೆ.
ತಂಡದವರಿಗಾಗಿ ಒಂದು ಮಿನಿ ಬಸ್ ಮತ್ತು ಇಡೀ ರಂಗವೇದಿಕೆಯನ್ನು ಸಾಗಿಸಲು ಒಂದು ಟ್ರಕ್ ಜೊತೆ. ದೇಶದುದ್ದಗಲಕ್ಕೂ ಸಂಚರಿಸಿದ್ದಾರೆ. ಒಂದು ನಾಟಕದ ರೀತಿಯಲ್ಲಿ ನಡೆದ ಈ ಕಾರ್ಯಕ್ರಮ ಅಪಾರ ಜನಮೆಚ್ಚುಗೆ ಪಡೆದಿತ್ತು.ಪ್ರತೀ ಕಾರ್ಯಕ್ರಮಕ್ಕೂ ಸೇರಿದ ಜನ ಸಮೂಹ ಕನಿಷ್ಠ 5000 ದಿಂದ 10,000 ಹೆಚ್ಚು. ಬೃಹತ್ ಟಿ.ವಿ.ಪರದೆಗಳನ್ನು ವ್ಯವಸ್ತೆ ಮಾಡಲಾಗಿತ್ತು.
ದೇಶದ ಪಾಕಿಸ್ಥಾನ ಮತ್ತು ಚೈನಾ ಗಡಿಗಳಲ್ಲಿ ಸೇವೆ ಸಲ್ಲಿಸುತ್ತಲಿರುವ ಯೋಧರಿಗಾಗಿ ಕಾರ್ಯಕ್ರಮಗಳನ್ನು ನೀಡಿದ್ದಾರಲ್ಲದೇ, 2000ದ ಕಾರ್ಗಿಲ್ ಯುದ್ಧದ ಸಮಯದಲ್ಲಿ “ಕಾರ್ಗಿಲ್ ಜಾದೂ" ಎಂಬ ವಿಶೇಷ ಕಾರ್ಯಕ್ರಮವನ್ನು ರೂಪಿಸಿ, ಈ ಪ್ರದರ್ಶನಗಳಿಂದ ಸಂಗ್ರಹವಾದ ಹಣವನ್ನು ಕಾರ್ಗಿಲ್ ಯೋಧರ ನಿಧಿಗೆ ಸಮರ್ಪಿಸಿದ್ದರು.
ಅಲ್ಲದೇ ವಿಶೇಷವಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯವರ ಕೋರಿಕೆಯ ಮೇರೆಗೆ ಅವರು ನಡೆಸುತ್ತಿರುವ "ಮದ್ಯವರ್ಜನ ಶಿಬಿರದಲ್ಲಿ" ಶಂಕರ್ ಅವರು ನಿರಂತರವಾಗಿ ಭಾಗವಹಿಸಿ,
ಬೀಡಿ, ಸಿಗರೇಟು, ಮದ್ಯಸೇವನೆ, ಮಾದಕ ದ್ರವ್ಯ ವ್ಯಸನಿಗಳ ಮನಃಪರಿವರ್ತನೆಗೆ ತಮ್ಮ ಜಾದೂ ವಿದ್ಯೆಯನ್ನು ಬಳಸಿ, ಸಾವಿರಾರು ವ್ಯಸನಿಗಳನ್ನು ವ್ಯಸನಮುಕ್ತರನ್ನಾಗಿಸಿದ್ದಾರೆ. ಇಂದಿಗೂ ಆ ಕೆಲಸ ಸದ್ದಿಲ್ಲದೇ ನಡೆಯುತ್ತಲೇ ಇದೆ. ನಿರಂತರವಾದ ಇಂತಹ ಒಂದು ಕಾರ್ಯಕ್ರಮವನ್ನು ನೀಡುತ್ತಿರುವ ವಿಶ್ವದ ಏಕೈಕ ಜಾದೂಗಾರ ಪ್ರೊ ಶಂಕರ್.
ಮೈಸೂರು ರಂಗಾಯಣದಲ್ಲಿ ಗಿಲಿಗಿಲಿ ಜಾದೂ ನಡೆದಾಗ ಬಿ.ವಿ.ಕಾರಂತರು ಬಂದು ಪೂರ್ಣ ಪ್ರದರ್ಶನ ನೋಡಿ ಗ್ರೀನ್ ರೂಮಿಗೆ ಬಂದು
ತುಂಬಾ ಮೆಚ್ಚುಗೆ ವ್ಯಕ್ತ ಪಡಿಸಿದ್ದರು. “ಮ್ಯಾಜಿಕ್ ಎನ್ನುವುದು ನಾಟಕಕ್ಕೆ ಬೇಕು.. ಹಾಗೇ ನಾಟಕ ಕೂಡಾ ಮ್ಯಾಜಿಕ್ಕಿಗೆ ಬೇಕು. ನಿಮ್ಮ ಮ್ಯಾಜಿಕ್ಕಿನ ನಾಟಕೀಯ ಅಂಶ ಇಷ್ಟ ಆಯ್ತು. ಎಷ್ಟು ಬೇಕೋ ಅಷ್ಟೇ ಇದೆ...." ಎಂದಿದ್ದರು.
ಶಂಕರ್ ಅವರ ಸಾಧನೆಗಾಗಿ ದೇಶ-ವಿದೇಶಗಳಲ್ಲಿ ಅನೇಕ ಗೌರವಾನ್ವಿತ ಸಂಸ್ಥೆಗಳು ಪ್ರಶಸ್ತಿ-ಸಂಮಾನಗಳಿಂದ ಅವರನ್ನು ಗೌರವಿಸಿವೆ.
ತನ್ನ ಪುತ್ರ ತೇಜಸ್ವಿ ಜ್ಯೂನಿಯರ್ ಶಂಕರ್‌ನಿಗೆ ಜಾದೂ ತರಬೇತಿ ನೀಡಿ ಆತ ತನ್ನ 3 ನೇ ವಯಸ್ಸಿನಲ್ಲಿಯೇ ಅಮೇರಿಕಾದಲ್ಲಿ 50,000 ಜನರ ಮುಂದೆ ಜಗತ್ ಪ್ರಸಿದ್ಧ "ಹೌದಿನಿ ಜಾದೂ"
ಪ್ರದರ್ಶಿಸಿಸುವಂತೆ ಮಾಡಿದ್ದರು. ಆತ ಇಂದು ಜಗತ್ತಿನ ಶ್ರೇಷ್ಠ ಜಾದೂ ದಿಗ್ಗಜರೆಲ್ಲ ಅತ್ಯಂತ ಗೌರವಿಸುವ ಜಾದೂಗಾರ. ನಮ್ಮ ಉಡುಪಿಯನ್ನು ಜಾಗತಿಕ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ ಓರ್ವ ಅದ್ಭುತ ವ್ಯಕ್ತಿ ಪ್ರೊಫೆಸರ್ ಶಂಕರ್ ಅವರನ್ನು ನಮ್ಮವರೆಂದು ಹೇಳಿಕೊಳ್ಳಲು ನಮಗೆ ಅತ್ಯಂತ ಹೆಮ್ಮೆ ಎನಿಸುತ್ತಿದೆ.
ದಶಂಬರ 14 ಕ್ಕೆ ಉಡುಪಿಯಲ್ಲಿ ಪ್ರೊ. ಶಂಕರ್ ಅವರ ಅಭಿನಂದನಾ ಸಮಾರಂಭ ನಡೆಯುತ್ತಿದೆ.
ಕೃತಜ್ಞತೆಗಳು: ಮೂರ್ತಿ ದೇರಾಜೆ Moorthy Deraje ಅವರಿಗೆ 🌷🙏🌷
ಕಾಮೆಂಟ್‌ಗಳು