ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸರಿತಾ


 ಸರಿತಾ


ಸರಿತಾ ಚಲನ ಚಿತ್ರರಂಗ ಕಂಡ ಅಮೋಘ ಪ್ರತಿಭೆ. ಆಕೆಯ ಅಭಿನಯ ನೋಡಲಿಕ್ಕೆಂದೇ  ಚಿತ್ರಗಳನ್ನು ನೋಡಬೇಕು ಎಂದು ಅನಿಸಿಕೆ ಮೂಡಿಸುತ್ತಿದ್ದ ಅಪೂರ್ವ ಪ್ರತಿಭೆ.  ಚಿತ್ರರಂಗ ಎಂಬ ಗ್ಲಾಮರ್ ಮಾಯಾಲೋಕದಲ್ಲಿ ಅತ್ಯಂತ ಸರಳ - ಸಾಧಾರಣ ನೆರೆಮನೆ ಹುಡುಗಿಯಂತಹ ಭಾವಮೂಡಿಸುತ್ತಿದ್ದ ಸರಿತಾ ಅವರು ಚಿತ್ರರಂಗದಲ್ಲಿ ಮೂಡಿಸಿದ ಪ್ರತಿಭಾಪೂರ್ಣತೆಯ ಹೆಜ್ಜೆಗಳು ಅಳಿಸಲಾರದಂತಹವು. 

ಸರಿತಾ 1960ರ ಜೂನ್ 7ರಂದು ಆಂಧ್ರಪ್ರದೇಶದ ಮುನಿಪಲ್ಲೆ ಎಂಬಲ್ಲಿ ಜನಿಸಿದರು. 

1978ರಲ್ಲಿ ಚಲನಚಿತ್ರರಂಗಕ್ಕೆ ಬಂದ ಸರಿತಾ ಅದೇ ವರ್ಷದಲ್ಲಿ ಮಹಾನ್ ನಿರ್ದೇಶಕ
ಕೆ. ಬಾಲಚಂದರ್ ಅವರ 'ಮರೋಚರಿತ್ರ'ದಲ್ಲಿ ಕಮಲಹಾಸನ್ ಅವರ ಎದುರು ಆತನಷ್ಟೇ ಶ್ರೇಷ್ಠಮಟ್ಟದ ಅಭಿನಯ ನೀಡಿದ್ದು ಅವಿಸ್ಮರಣೀಯ. ಮುಂದೆ ಆಕೆಗೆ ದಕ್ಷಿಣ ಭಾರತದ ಎಲ್ಲ ಭಾಷೆಗಳಲ್ಲಿ ಅವಕಾಶಗಳು ಹರಿದುಬಂದವು. ಬಾಲಚಂದರ್ ಅವರದೇ ಅನೇಕ ಚಿತ್ರಗಳಲ್ಲಿ ನಟಿಸಿದ್ದರು. ತಪ್ಪು ತಾಳಂಗಲ್, ಇದಿ ಕಥಾ ಕಾಡು,  ವಂಡಿಚಕ್ಕರಂ, ನೇಟ್ರಿಕ್ಕಣ್, ಅಗ್ನಿ ಸಾಕ್ಷಿ,  ಪುದುಕವಿತೈ, ಕಲ್ಯಾಣ ಅಗತಿಗಳು, ಅಚಮಿಲ್ಲೈ ಆಚಮಿಲ್ಲೈ ಮುಂತಾದವು ಅವರ ಪ್ರಾರಂಭಿಕ ದಶಕದ ಪ್ರಮುಖ ಚಿತ್ರಗಳು. ಮೌನ ಗೀತಂಗಳ್, ತಣ್ಣೀರ್ ತಣ್ಣೀರ್ ಅಂತಹ ಚಿತ್ರಗಳ ವಿಭಿನ್ನ ಪಾತ್ರಗಳಲ್ಲಿಯೂ ಅವರ ಅಭಿನಯ ಮೇರುಮಟ್ಟದ್ದು.

ಸರಿತಾ ಕನ್ನಡದಲ್ಲಿಯೂ ಹೊರಭಾಷೆಯವರು ಎಂಬ ಭಾವವೇ ಮೂಡಿಸದಷ್ಟು ಅತ್ಯುತ್ತಮ ಪಾತ್ರ ನಿರ್ವಹಣೆ ಮಾಡಿದವರು. ತಪ್ಪಿದ ತಾಳ, 
ಹೊಸ ಬೆಳಕು, ಕೇರಳಿದ ಸಿಂಹ, ಭಕ್ತ ಪ್ರಹ್ಲಾದ, ಚಲಿಸುವ ಮೋಡಗಳು,  ಕಾಮನ ಬಿಲ್ಲು,  ಎರಡು ರೇಖೆಗಳು,  ಸಂಕ್ರಾಂತಿ,  ಮಲಯ ಮಾರುತ ಮುಂತಾದ ಪ್ರತಿ ಚಿತ್ರದಲ್ಲೂ ಅವರದ್ದು ಉತ್ಕೃಷ್ಟ ಅಭಿನಯ. 

ಸರಿತಾ ಅವರು ಕನ್ನಡ, ತೆಲುಗು ಮತ್ತು ತಮಿಳು ಚಲನಚಿತ್ರಗಳಲ್ಲಿ ತಮ್ಮದೇ ಸುಸ್ಪಷ್ಟ ಧ್ವನಿ ಬಳಸುತ್ತಿದ್ದುದಲ್ಲದೆ ತಮ್ಮ ಕಾಲದಲ್ಲಿ ಜನಪ್ರಿಯರಾಗಿ ಹೆಸರಮಾಡಿದ್ದ ಅನೇಕ ನಟಿಯರಿಗೂ ಧ್ವನಿದಾನ ಕಲಾವಿದೆಯಾಗಿ ಕೆಲಸ ಮಾಡಿದವರು. ಕಿರುತೆರೆಯಲ್ಲೂ ಕೆಲಸ ಮಾಡಿದ್ದರು.

ಸರಿತಾ ಕನ್ನಡವೂ ಸೇರಿ ದಕ್ಷಿಣ ಭಾರತದ‍ ಎಲ್ಲ ಪ್ರಮುಖ ಭಾಷೆಗಳಲ್ಲಿ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು.  ಅವರಿಗೆ ಆಂಧ್ರ, ತಮಿಳು ನಾಡು, ಕರ್ನಾಟಕ ರಾಜ್ಯದ ಚಲನಚಿತ್ರ ಪ್ರಶಸ್ತಿಗಳು, ಫಿಲಂಫೇರ್ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಸಂದವು. 

On the birthday of great actress Saritha

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ