ಮಹಾಬಲೇಶ್ವರ ರಾವ್
ಮಹಾಬಲೇಶ್ವರ ರಾವ್
ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಸೇವೆ ಸಲ್ಲಿಸಿರುವ ಡಾ. ಮಹಾಬಲೇಶ್ವರ ರಾವ್ ಅವರು ಬರಹಗಾರರಾಗಿ, ಸಂವಹನಕಾರರಾಗಿ, ಯುವಪೀಳಿಗೆಯ ಪ್ರೇರಕರಾಗಿ, ಹೀಗೆ ಬಹುಮುಖಿಯಾಗಿ ಸಕ್ರಿಯರಾಗಿದ್ದಾರೆ.
ಮಹಾಬಲೇಶ್ವರ ರಾವ್ ಅವರು 1952ರ
ಜೂನ್ 7ರಂದು ಉಡುಪಿ ಜಿಲ್ಲೆಯ ಮಣೂರಿನಲ್ಲಿ ಜನಿಸಿದರು. ಬಿ.ಎಸ್ಸಿ, ಎಂ.ಎ., ಎಂ.ಎಡ್ ಮತ್ತು ಪಿಎಚ್.ಡಿ ಗಳಿಸಿದ ಅವರು ಕೆಲ ವರ್ಷ ಪ್ರೌಢಶಾಲಾ ಕನ್ನಡ ಶಿಕ್ಷಕರಾಗಿ, ಆಕಾಶವಾಣಿಯ ಭದ್ರಾವತಿ ಹಾಗೂ ಮಂಗಳೂರು ಕೇಂದ್ರಗಳಲ್ಲಿ ಪ್ರಸಾರಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಮುಂದೆ ಟಿಎಮ್ಎ ಪೈ ಎಜುಕೇಷನ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಮತ್ತು ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾದ ಅವರು, ಪ್ರಸಕ್ತದಲ್ಲಿ ಆ ಸಂಸ್ಥೆಗೆ ಕೋಆರ್ಡಿನೇಟರ್ ಮತ್ತು ಎಜುಕೇಶನಿಸ್ಟ್ ಆಗಿ ಸೇವೆ ನೀಡುತ್ತಿದ್ದಾರೆ.
ಮಹಾಬಲೇಶ್ವರ ರಾವ್ ಕಳೆದ ನಾಲ್ಕು ದಶಕಗಳಿಂದ ಕನ್ನಡ ಭಾಷಾ ಬೋಧನೆ, ಬರವಣಿಗೆ, ಭಾಷಣ, ಸಾಹಿತ್ಯ ಮೊದಲಾದ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಲೇಖಕರಾಗಿ, ಅನುವಾದಕರಾಗಿ, ಅಂಕಣಕಾರರಾಗಿ ಅವರು ’ಉದಯವಾಣಿ’, ’ಪ್ರಜಾವಾಣಿ’, ’ತರಂಗ’, 'ಹೊಸತು’ ಮೊದಲಾದ ಕನಡ ದಿನಪತ್ರಿಕೆ ಮತ್ತು ನಿಯತಕಾಲಿಕಗಳಲ್ಲಿ ನೂರಾರು ಲೇಖನಗಳನ್ನು ಮೂಡಿಸುತ್ತ ಬಂದಿದ್ದಾರೆ.
ಡಾ. ಮಹಾಬಲೇಶ್ವರ ರಾವ್ ಅವರ ಕೃತಿಗಳಲ್ಲಿ ಕಾರಂತರ ದೃಷ್ಟಿ-ಸೃಷ್ಟಿ, ಭಾರತೀಯ ಜನಪದ ಕತೆಗಳು (ಎ.ಕೆ.ರಾಮಾನುಜನ್), ಮನೆ-ಶಾಲೆ, ಸಂಶೋಧನ ಮಾರ್ಗ, ಶಿಕ್ಷಣದಲ್ಲಿ ಮನೋವಿಜ್ಞಾನ, ಪ್ರೌಢ ಶಾಲೆಗಳಲ್ಲಿ ಕನ್ನಡ ಬೋಧನೆ, ಸ್ಥಿತ್ಯಂತರ, ಉದಯೋನ್ಮುಖ ಭಾರತದಲ್ಲಿ ಶಿಕ್ಷಣ, ಬಾಳಿಗೊಂದು ಭಾಷ್ಯ (೩ ಸಂಪುಟಗಳಲ್ಲಿ ಜೆ.ಕೆ.), ಪರಿಸರ ಶಿಕ್ಷಣ, ಮಹಿಳಾ ಶಿಕ್ಷಣ, ಪ್ರಾಥಮಿಕ ಶಿಕ್ಷಣ: ಸಮಸ್ಯೆಗಳು, ಮನದ ಮಾಮರದ ಕೋಗಿಲೆ : ಸಿಗ್ಮಂಡ್ ಫ್ರಾಯ್ಡ್ ಜೀವನ ಕಥನ, ಬಾನಾಡಿಗೆ ಬಂಧನವೆ?, ಸೃಜನಶೀಲ ಶಿಕ್ಷಣ, ಹೆತ್ತವರೇ ಮಕ್ಕಳ ಬಗ್ಗೆ ಕಾಳಜಿ ವಹಿಸಿ, ಕೈ ಹಿಡಿದು ನಡೆಸಬೇಕೆ?, ಮರಿ ಕುದುರೆಯ ಮೈಸೂರು ಕನಸು (ಆಡಿಯೋ ಪುಸ್ತಕ), ಗಾಂಧಿ ಬಿಂಬ ದರ್ಶನ,ಬುದ್ಧಿ ಶಕ್ತಿ ಒಂದಲ್ಲ ಹಲವು, ಮುಂತಾದ ಅನೇಕ ಕೃತಿಗಳು ಸೇರಿವೆ.
ಡಾ. ಮಹಾಬಲೇಶ್ವರ ರಾವ್ ಅವರಿಗೆ ಡಾ. ಹಾ.ಮಾ. ನಾಯಕ ದತ್ತಿನಿಧಿ ಪುರಸ್ಕಾರ, ಗೊರೂರು ಸಾಹಿತ್ಯ ಪುರಸ್ಕಾರ, ಶ್ರೀ.ವಸುದೇವ ಭೂಪಾಲಂ ದತ್ತಿನಿಧಿ ಪುರಸ್ಕಾರ, ಉಪಾಧ್ಯಾಯ ಸಮ್ಮಾನ್ ರಾಜ್ಯ ಪುರಸ್ಕಾರ, ಅಂತಾರಾಷ್ಟ್ರೀಯ ರೋಟರಿ ವೃತ್ತಿ ಶ್ರೇಷ್ಠತಾ ಪುರಸ್ಕಾರ ಮುಂತಾದ ಅನೇಕ ಗೌರವ ಪುರಸ್ಕಾರಗಳು ಸಂದಿವೆ. ಇವರ ‘ಶಿಕ್ಷಣದಲ್ಲಿ ಭಾಷೆ ಮತ್ತು ಮಾಧ್ಯಮದ ಸಮಸ್ಯೆಗಳು’ (ಮಾನವಿಕ) ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ 2019ನೇ ಸಾಲಿನ ಅತ್ಯುತ್ತಮ ಕೃತಿ ಬಹುಮಾನ ಸಂದಿದೆ.
ಸಾಧಕರಾದ ಡಾ. ಮಹಾಬಲೇಶ್ವರ ರಾವ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
Happy birthday to writer, educationist and scholar Dr. Mahabaleshwara Rao Sir 🌷🙏🌷
ಕಾಮೆಂಟ್‌ಗಳು