ನಂಬೂದರಿಪಾದ್
ಇ.ಎಂ.ಎಸ್. ನಂಬೂದರಿಪಾದ್
ಎಲಂಕುಲಂ ಮನಕ್ಕಲ್ ಶಂಕರನ್ ನಂಬೂದರಿಪಾದ್ ಅವರು ಇಎಂಎಸ್ ಎಂದು ಜನಪ್ರಿಯರಾಗಿದ್ದವರು. ಅವರು ಭಾರತೀಯ ಕಮ್ಯುನಿಸ್ಟ್ ರಾಜಕಾರಣಿ ಮತ್ತು ಸಿದ್ಧಾಂತಿಯಾಗಿದ್ದರು. ಅವರು ಮುಖ್ಯಮಂತ್ರಿಯಾಗಿ ಕೇರಳದಲ್ಲಿ ಭೂಸುಧಾರಣೆ ಮತ್ತು ಶೈಕ್ಷಣಿಕ ಸುಧಾರಣೆಗಳನ್ನು ಪ್ರಾರಂಭಿಸಿದರು. 14 ವರ್ಷಗಳ ಕಾಲ ಅವರು ಪಾಲಿಟ್‌ಬ್ಯುರೊ ಸದಸ್ಯರೂ, ಪ್ರಧಾನ ಕಾರ್ಯದರ್ಶಿಯೂ ಆಗಿದ್ದರು. ಸಿಪಿಐ(ಎಂ) ಅನ್ನು ಪ್ರಬಲ ರಾಜಕೀಯ ಶಕ್ತಿಯಾಗಿ ಮಾರ್ಪಡಿಸುವಲ್ಲಿ ಅವರ ಪರಿಶ್ರಮ ಬಹಳಷ್ಟಿತ್ತು.
ಎಲಂಕುಲಂ ಮನಕ್ಕಲ್ ಶಂಕರನ್ ನಂಬೂದಿರಿಪಾದ್ ಅವರು ಈಗಿನ ಮಲಪ್ಪುರಂ ಜಿಲ್ಲೆಯ ಪೆರಿಂತಲ್ಮನ್ನಾ ತಾಲೂಕಿನ ತುತಪುಳ ನದಿಯ ದಡದಲ್ಲಿರುವ ಎಲಂಕುಲಂನಲ್ಲಿ 1909ರ ಜೂನ್ 13ರಂದು ಜನಿಸಿದರು. ತಂದೆ ಪರಮೇಶ್ವರನ್ ನಂಬೂದರಿಪಾದ್. ತಾಯಿ ವಿಷ್ಣುದತ್ತ ಅಂತರ್ಜನಂ. ಇವರದ್ದು ಶ್ರೀಮಂತ ಬ್ರಾಹ್ಮಣ ಕುಟುಂಬ. ಹುಟ್ಟುವ ಮೊದಲೇ ಅವರ ಇಬ್ಬರು ಅಣ್ಣಂದಿರು ತೀರಿಕೊಂಡರು ಮತ್ತು ಮೂರನೇ ಸಹೋದರ ಬೌದ್ಧಿಕವಾಗಿ ಅಂಗವಿಕಲರಾಗಿದ್ದರು. ಅವರು ಐದು ವರ್ಷದವರಾಗಿದ್ದಾಗ ತಂದೆಯನ್ನು ಕಳೆದುಕೊಂಡರು. 1921ರ ಮಲಬಾರ್ ದಂಗೆಯ ಸಮಯದಲ್ಲಿ ದಂಗೆಕೋರರು ಅವರ ಮನೆಯ ಮೇಲೆ ದಾಳಿ ಮಾಡಿದ ಕಾರಣ ಇರಿಂಜಾಲಕುಡಕ್ಕೆ ವಲಸೆ ಹೋದರು. ಅವರ ಆರಂಭಿಕ ವರ್ಷಗಳಲ್ಲಿ, ಅವರು ಸೀನಿಯರ್ ಪಿ.ಎಂ. ಮ್ಯಾಥ್ಯೂ ಅವರ ಆತ್ಮೀಯ ಸ್ನೇಹಿತರಾಗಿದ್ದರು.
ನಂಬೂದರಿಪಾದ್ ಅವರು ತಮ್ಮ ನಂಬೂತಿರಿ ಸಮುದಾಯದಲ್ಲಿ ಅಸ್ತಿತ್ವದಲ್ಲಿದ್ದ ಜಾತೀಯತೆ ಮತ್ತು ಸಂಪ್ರದಾಯವಾದದ ವಿರುದ್ಧದ ಹೋರಾಟದಲ್ಲಿ ವಿ.ಟಿ.ಭಟ್ಟತಿರಿಪಾಡ್, ಎಂ.ಆರ್.ಭಟ್ಟತಿರಿಪಾಡ್ ಮತ್ತು ಇತರ ಅನೇಕರೊಂದಿಗೆ ಸಂಬಂಧ ಹೊಂದಿದ್ದರು. ಅವರು ಪ್ರಗತಿಪರ ನಂಬೂತಿರಿ ಯುವಕರ ಸಂಘಟನೆಯಾದ ವಳ್ಳುವನಾಡು ಯೋಗಕ್ಷೇಮ ಸಭಾದ ಪದಾಧಿಕಾರಿಗಳಲ್ಲಿ ಒಬ್ಬರಾದರು.
ನಂಬೂದರಿಪಾದ್ ಅವರು ತಮ್ಮ ಪದವಿಯನ್ನು ಕೇರಳದ ತ್ರಿಶೂರ್‌ನ ಸೇಂಟ್ ಥಾಮಸ್ ಕಾಲೇಜಿನಲ್ಲಿ ಪೂರ್ಣಗೊಳಿಸಿದರು. ತಮ್ಮ ಕಾಲೇಜು ದಿನಗಳಲ್ಲಿ, ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮತ್ತು ಭಾರತೀಯ ಸ್ವಾತಂತ್ರ್ಯ ಚಳುವಳಿಯೊಂದಿಗೆ ಆಳವಾದ ಸಂಬಂಧವನ್ನು ಹೊಂದಿದ್ದರು. ಫೈರ್‌ಬ್ರಾಂಡ್ ಕೊಚ್ಚಿನ್ ರಾಜಕಾರಣಿ ವಿಜೆ ಮಥಾಯ್ ಅವರ ಭಾಷಣವನ್ನು ಕೇಳಲು ಅವರು 5-8 ಕಿಮೀ ನಡೆಯುತ್ತಿದ್ದರಂತೆ.
ನಂಬೂದರಿಪಾದ್ 1934ರಲ್ಲಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಸಮಾಜವಾದಿ ವಿಭಾಗವಾದ, ಕಾಂಗ್ರೆಸ್ ಸಮಾಜವಾದಿ ಪಕ್ಷದ ಸಂಸ್ಥಾಪಕರಲ್ಲಿ ಒಬ್ಬರಾಗಿದ್ದರು. 1934ರಿಂದ 1940ರವರೆಗೆ ಅದರ ಅಖಿಲ ಭಾರತ ಜಂಟಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದರು. ಈ ಅವಧಿಯಲ್ಲಿ, ಅವರು ಮದ್ರಾಸ್ ವಿಧಾನಸಭೆಗೆ ಚುನಾಯಿತರಾಗಿದ್ದರು (1939).
ನಂಬೂದರಿಪಾದ್ ಸಮಾಜವಾದಿ ಆದರ್ಶಗಳಿಗೆ ಬದ್ಧರಾಗಿದ್ದರು. ಕಾರ್ಮಿಕ ವರ್ಗದ ಕಡೆಗೆ ಹೊಂದಿದ್ದ ಸಹಾನುಭೂತಿಯು ಅವರನ್ನು ಕಮ್ಯುನಿಸ್ಟ್ ಚಳುವಳಿಗೆ ಸೇರಲು ಪ್ರೇರಿಸಿತು. ಭಾರತ ಸರ್ಕಾರವು ಅವರನ್ನು ಕೇರಳದಲ್ಲಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ) ಸ್ಥಾಪಕರಲ್ಲಿ ಒಬ್ಬರೆಂದು ಪರಿಗಣಿಸಿ, ತಲೆಮರೆಸಿಕೊಳ್ಳಲು ಒತ್ತಾಯ ಹೇರಿತ್ತು. 1962ರ ಚೀಣಾ ಮತ್ತು ಭಾರತ ಗಡಿ ಕದನದ ಸಮಯದಲ್ಲಿ ಅವರು ಚೀಣಾದ ವಾದದ ಕಡೆ ಒಲವು ವ್ಯಕ್ತಪಡಿಸಿದ್ದರು ಎಂಬ ಮಾತಿತ್ತು. ಆ ಕುರಿತು ಮುಂದೆ ಅವರು "ಎರಡೂ ದೇಶಗಳೂ ಮಾತುಕತೆಯ ಮೂಲಕ ವಿಚಾರ ಇತ್ಯರ್ಥಪಡಿಸಿಕೊಳ್ಳಬೇಕು ಎಂಬುದು ತಮ್ಮ ಅಭಿಪ್ರಾಯವಾಗಿತ್ತು" ಎಂದಿದ್ದಾರೆ. 1964ರಲ್ಲಿ ಸಿಪಿಐ ವಿಭಜನೆಯಾದಾಗ, ಇಎಂಎಸ್ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) (ಸಿಪಿಐ(ಎಂ)) ಜೊತೆ ನಿಂತರು. ಅವರು ಸಿಪಿಐ(ಎಂ) ಕೇರಳ ರಾಜ್ಯ ಸಮಿತಿಯ ನಾಯಕರಾಗಿದ್ದರು.
ನಂಬೂದರಿಪಾದ್ 1998ರಲ್ಲಿ ನಿಧನರಾಗುವವರೆಗೆ ಸಿಪಿಐ(ಎಮ್)ನ ಕೇಂದ್ರ ಸಮಿತಿ ಮತ್ತು ಪಾಲಿಟ್‌ಬ್ಯೂರೋ ಸದಸ್ಯರಾಗಿ ಸೇವೆ ಸಲ್ಲಿಸಿದರು. 1977ರಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ 1992ರವರೆಗೆ ಈ ಹುದ್ದೆಯನ್ನು ಹೊಂದಿದ್ದರು.
ಮಾರ್ಕ್ಸ್‌ವಾದಿ ವಿದ್ವಾಂಸರಾದ ನಂಬೂದರಿಪಾದ್ ಕೇರಳದ ಅಭಿವೃದ್ಧಿಯ ಮೇಲೆ ಪ್ರಭಾವ ಬೀರಿದರು. ಆ ರಾಜ್ಯ ಮೊದಲ ಮುಖ್ಯಮಂತ್ರಿಯಾಗಿದ್ದರು.
ನಂಬೂದಿರಿಪಾದ್ ನೇತೃತ್ವದ ಕಮ್ಯುನಿಸ್ಟ್ ಪಕ್ಷವು 1957ರಲ್ಲಿ ಹೊಸ ಕೇರಳ ವಿಧಾನಸಭೆಗೆ ಮೊದಲ ಚುನಾವಣೆಯ ಗೆಲುವು ಸಾಧಿಸಿತು. ಜನಪ್ರಿಯವಾಗಿ ಚುನಾಯಿತ ಸರ್ಕಾರದ ನೇತೃತ್ವ ವಹಿಸಿದ ಅವರು ಭಾರತದ ಮೊದಲ ಕಮ್ಯುನಿಸ್ಟ್ ನಾಯಕರಾದರು. ಇದು 1945ರ ಚುನಾವಣೆಯಲ್ಲಿ ಯುರೋಪ್‌ನ ಸೂಕ್ಷ್ಮ ರಾಜ್ಯವಾದ ಸ್ಯಾನ್ ಮರಿನೋ ಗಣರಾಜ್ಯದಲ್ಲಿ ಕಮ್ಯುನಿಸ್ಟ್ ಯಶಸ್ಸಿನ ನಂತರ ಪ್ರಜಾಸತ್ತಾತ್ಮಕವಾಗಿ ಚುನಾಯಿತರಾದ ಎರಡನೇ ಕಮ್ಯುನಿಸ್ಟ್ ಸರ್ಕಾರವೆನಿಸಿತು. 5 ಏಪ್ರಿಲ್ 1957 ರಂದು ಅವರು ಕೇರಳದ ಮೊದಲ ಮುಖ್ಯಮಂತ್ರಿಯಾಗಿ ನೇಮಕಗೊಂಡರು. ಅವರ ಸರ್ಕಾರವು ಭೂಸುಧಾರಣಾ ಸುಗ್ರೀವಾಜ್ಞೆ ಮತ್ತು ಶಿಕ್ಷಣ ಮಸೂದೆಯನ್ನು ಮಂಡಿಸಿತು. 1958ರಲ್ಲಿ, ಮಸೂದೆಗಳಿಗೆ ಪ್ರತಿಕ್ರಿಯೆಯಾಗಿ ಕಮ್ಯುನಿಸ್ಟ್ ವಿರೋಧಿ ಪ್ರತಿಭಟನೆಯ ಅವಧಿ, ವಿಮೋಚನಾ ಸಮರಂ ಪ್ರಾರಂಭವಾಯಿತು. ಕೇಂದ್ರ ಸರ್ಕಾರವು 1959ರಲ್ಲಿ ಭಾರತೀಯ ಸಂವಿಧಾನದ 356ನೇ ವಿಧಿಯನ್ನು ಪ್ರಯೋಗಿಸುವ ಮೂಲಕ, ರಾಜ್ಯ ಸರ್ಕಾರವನ್ನು ಅಮಾನತುಗೊಳಿಸಿ ರಾಷ್ಟ್ರಪತಿ ಆಳ್ವಿಕೆಯನ್ನು ಹೇರಿತು. ಉಚ್ಚಾಟನೆಯಲ್ಲಿ ಕೇಂದ್ರೀಯ ಗುಪ್ತಚರ ಸಂಸ್ಥೆಯು ಭಾಗಿಯಾಗಿತ್ತು ಎಂಬ ಮಾತಿತ್ತು. ಭಾರತದಲ್ಲಿ ಕಮ್ಯುನಿಸ್ಟ್ ರಾಜ್ಯ ಸರ್ಕಾರಗಳ ಸ್ಥಾಪನೆಯು ಭಾರತಕ್ಕೆ ಅಮೆರಿಕದಿಂದ ಬರುವ ಸಹಾಯಕ್ಕೆ ಮಾರಕ ಎಂಬ ಅಭಿಪ್ರಾಯದ ಹಿನ್ನೆಲೆ ಇಲ್ಲಿತ್ತು ಎನ್ನಲಾಗಿದೆ.
ನಂಬೂದರಿಪಾದ್ ಅವರು 1967ರಲ್ಲಿ ಸಿಪಿಐ ಮತ್ತು ಮುಸ್ಲಿಂ ಲೀಗ್ ಒಳಗೊಂಡ ಏಳು ಪಕ್ಷಗಳ ಒಕ್ಕೂಟದ (ಸಪ್ತಕಾಕ್ಷಿ ಮುನ್ನಾನಿ) ನಾಯಕರಾಗಿ ಎರಡನೇ ಬಾರಿಗೆ ಕೇರಳದ ಮುಖ್ಯಮಂತ್ರಿಯಾದರು. ಮತ್ತೊಮ್ಮೆ ಮುಖ್ಯಮಂತ್ರಿಯಾದ ನಂತರ, 31 ಜನವರಿ 1968 ರಂದು ಅವರು ಪರವೂರಿನ ಪೊಝಿಕ್ಕಾರದಲ್ಲಿ ಫ್ಲೋರ್ಕೊ ಎಂಬ ಯಾಂತ್ರಿಕೃತ ತೆಂಗಿನಕಾಯಿ ಕಾರ್ಖಾನೆಯನ್ನು ಉದ್ಘಾಟಿಸಿದರು. ಈ ಬಾರಿ ನಂಬೂದರಿಪಾದ್ ಅವರ ಅಧಿಕಾರಾವಧಿಯು ಎರಡೂವರೆ ವರ್ಷಗಳ ಕಾಲ ನಡೆಯಿತು. ಸರ್ಕಾರದ ಘಟಕ ಪಕ್ಷಗಳ ಆಂತರಿಕ ಘರ್ಷಣೆಯಿಂದ ಸರ್ಕಾರವು 24 ಅಕ್ಟೋಬರ್ 1969 ರಂದು ಪತನವಾಯಿತು.
ನಂಬೂದಿರಿಪಾದ್ ಅವರು 1960 ರಿಂದ 1964 ರವರೆಗೆ ಮತ್ತು ಮತ್ತೆ 1970 ರಿಂದ 1977 ರವರೆಗೆ ಕೇರಳ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದರು. ಅಧಿಕಾರ ಮತ್ತು ಸಂಪನ್ಮೂಲಗಳ ವಿಕೇಂದ್ರೀಕರಣದ ಅವರ ದೃಷ್ಟಿ (ಜನರ ಯೋಜನೆ) ಮತ್ತು ಕೇರಳ ಸಾಕ್ಷರತಾ ಆಂದೋಲನವು ಕೇರಳ ಸಮಾಜದ ಮೇಲೆ ಸಾಕಷ್ಟು ಪ್ರಭಾವ ಬೀರಿತು. ಅವರು ಇಂಗ್ಲಿಷ್ ಮತ್ತು ಮಲಯಾಳಂನಲ್ಲಿ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ. ಚಿಂತಾ ಪಬ್ಲಿಕೇಶನ್, ಕೇರಳ ಇವರ ಎಲ್ಲಾ ಪುಸ್ತಕಗಳನ್ನು "ಇ ಎಂ ಎಸ್ ಸಂಚಿಕಾ" ಎಂಬ ಶೀರ್ಷಿಕೆಯಡಿಯಲ್ಲಿ ಪ್ರಕಟಿಸಿದೆ. ಅವರು ಪತ್ರಕರ್ತರಾಗಿಯೂ ಹೆಸರುವಾಸಿಯಾಗಿದ್ದರು.
ನಂಬೂದರಿಪಾಡ್, ಕೇಸರಿ ಬಾಲಕೃಷ್ಣ ಪಿಳ್ಳೈ, ಜೋಸೆಫ್ ಮುಂಡಸ್ಸೆರಿ, ಎಂ.ಪಿ. ಪಾಲ್ ಮತ್ತು ಕೆ. ದಾಮೋದರನ್ ಅವರು "ಜೀವನಸಾಹಿತ್ಯ ಪ್ರಸ್ತಾನಂ" ನ ವಾಸ್ತುಶಿಲ್ಪಿಗಳಾಗಿದ್ದರು, ಇದನ್ನು ಪುರೋಗಮನ ಸಾಹಿತ್ಯ ಪ್ರಸ್ತಾನಂ (ಕಲೆ ಮತ್ತು ಪತ್ರಗಳ ಪ್ರಗತಿಪರ ಸಂಘ) ಎಂದು ಮರುನಾಮಕರಣ ಮಾಡಲಾಯಿತು.
ವಯಸ್ಸು ಮತ್ತು ಅನಾರೋಗ್ಯದ ಹೊರತಾಗಿಯೂ, ನಂಬೂದರಿಪಾದ್ ಅವರು ಕೊನೆಯವರೆಗೂ ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದರು. ಅವರು 1998ರ ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿಯೂ ಸಕ್ರಿಯವಾಗಿ ಪ್ರಚಾರ ಮಾಡಿದರು. 1998ರ ಮಾರ್ಚ್ 19ರಂದು ಅವರು ತಮ್ಮ 88 ನೇ ವಯಸ್ಸಿನಲ್ಲಿ ನಿಧನರಾದರು.
On the birth anniversary of E. M. S. Nsmboodaripad
ಕಾಮೆಂಟ್‌ಗಳು