ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ವಿದ್ಯಾಲಕ್ಷ್ಮಿ ದೇವರಡ್ಕ


 ವಿದ್ಯಾಲಕ್ಷ್ಮಿ  ದೇವರಡ್ಕ 


ವಿದ್ಯಾಲಕ್ಷ್ಮಿ ದೇವರಡ್ಕ ಸಾಹಿತ್ಯ, ಸಂಗೀತಗಳಲ್ಲಿನ ಸುಂದರ ಸದಭಿರುಚಿಗಳ ಆಗರದಂತಿದ್ದಾರೆ.

ಜೂನ್ 13 ವಿದ್ಯಾಲಕ್ಷ್ಮಿ ಅವರ ಜನ್ಮದಿನ. 
ಅವರು ಹುಟ್ಟಿದ್ದು ಕಾಸರಗೋಡಿನ ಬದಿಯಡ್ಕದ ಸಮೀಪ, ನೆಲ್ಲಿಕ್ಕಳಯದಲ್ಲಿ. ತಂದೆ ಮುರಳೀಧರ ಭಟ್, ತಾಯಿ ಸರಸ್ವತಿ.

ವಿದ್ಯಾಲಕ್ಷ್ಮಿ ಅವರು ಪಾಣೆಮಂಗಳೂರಿನ ಎಸ್ ವಿ ಎಸ್  ಶಾಲೆ, ಬದಿಯಡ್ಕದ ಸಮೀಪದ  ವಿದ್ಯಾಗಿರಿ ಶಾಲೆಯಲ್ಲಿಗಳಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ನಡೆಸಿದರು.  ಮುಂದೆ ಬದಿಯಡ್ಕದ ನವಜೀವನ ಹೈಸ್ಕೂಲಿನಲ್ಲಿ ಓದಿದರು.  ಪಿಯುಸಿಗೆ ವಿಟ್ಲದ(ಕರ್ನಾಟಕ) ಪದವಿಪೂರ್ವ ಕಾಲೇಜಿಗೆ ಚಿಕ್ಕಮ್ಮನ ಮನೆಯಲ್ಲಿದ್ದು ಓದಿದರು. ಮದುವೆಯಾಗಿ ಬಂದು ಸೇರಿದ್ದು ದಕ್ಷಿಣ ಕನ್ನಡದ ಕಡಬ ತಾಲೂಕಿನ ಬಲ್ಯದ ದೇವರಡ್ಕಕ್ಕೆ. ಪತಿ ಗಣೇಶ್ ಕುಮಾರ್ ಮೊದಲು ಎಲ್ ಐ ಸಿ   ಆಡ್ವೈಜರ್ ಆಗಿದ್ದು   ಈಗ ಕೃಷಿಕರಾಗಿದ್ದಾರೆ. 

ವಿದ್ಯಾಲಕ್ಷ್ಮಿ  ಅವರ ತಾಯಿಯ ಅಣ್ಣ ಶಿಕಾರಿಪುರ ಈಶ್ವರ ಭಟ್ ಅವರು ಶಿಕ್ಷಕ ಮತ್ತು ಪತ್ರಕರ್ತರು. ಅವರೇ ವಿದ್ಯಾಲಕ್ಷ್ಮಿ ಅವರಿಗೆ ಸ್ಫೂರ್ತಿ ಆಗಿದ್ದರು. ಇವರ  ಕಥೆ ಕವಿತೆಗಳನ್ನು ಓದಿ, ಬರೆಯಲು ಬೆನ್ತಟ್ಟುತ್ತಿದ್ದವರು ಅವರೇ. ವಿದ್ಯಾಲಕ್ಷ್ಮಿ ಹೈಸ್ಕೂಲಿನಲ್ಲಿ ಇದ್ದಾಗ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಜೂನಿಯರ್ ಪರೀಕ್ಷೆ ಪಾಸಾದರು. 

ವಿದ್ಯಾಲಕ್ಷ್ಮಿ ಮದುವೆಯಾಗಿ ಮಗಳು ಹುಟ್ಟಿ  ಒಂದೂವರೆ ವರ್ಷ ಆದಾಗ ಉಜಿರೆಯ ಪ್ರಸನ್ನ ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ ಶಿಕ್ಷಕರ ತರಬೇತಿಗೆ ಸೇರಿದರು.  ತರಬೇತಿ ಮುಗಿಸಿದಾಗ ಅನಿವಾರ್ಯ ಕಾರಣಗಳಿಂದ  ಮನೆಯ ಜವಾಬ್ದಾರಿ ವಿದ್ಯಾಲಕ್ಷ್ಮಿ - ಗಣೇಶ್ ಕುಮಾರ್ ದಂಪತಿಗಳ  ಹೆಗಲಿಗೆ ಬಿತ್ತು, ಹಾಗಾಗಿ ಇವರು ಶಿಕ್ಷಕಿಯಾಗುವ ಕನಸನ್ನು ಕೈಬಿಟ್ಟರು.  

ವಿದ್ಯಾಲಕ್ಷ್ಮಿ ಮಗಳಂದಿರು ಇಬ್ಬರನ್ನೂ ಬಲ್ಯದ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಯಲ್ಲೆ ಓದಿಸಿದ್ದಾರೆ. ಆ ಶಾಲೆಯಲ್ಲಿ ತರಬೇತಿಯ ಅವಧಿಯಲ್ಲಿ ಟೀಚರ್ ಕೂಡಾ ಆಗಿದ್ದರು.  ಮತ್ತೆಯೂ ಅವಶ್ಯಕತೆ ಇದ್ದಾಗಲೆಲ್ಲ, ಅದರಲ್ಲೂ ವಿಶೇಷವಾಗಿ ಮಕ್ಕಳನ್ನು ಪ್ರತಿಭಾಕಾರಂಜಿಗೆ ತಯಾರು ಮಾಡುವ ವಿಷಯದಲ್ಲಿ ಆ ಶಾಲೆಗೆ ಸೇವೆ ಸಲ್ಲಿಸುತ್ತ ಬಂದಿದ್ದಾರೆ.

ವಿದ್ಯಾಲಕ್ಷ್ಮಿ  ಅವರಿಗೆ  ಹವಿಸವಿ ಅನ್ನುವ ಫೇಸ್ಬುಕ್ ಪೇಜ್ ಸೇರಿದಾಗ ಮತ್ತೆ ಬರೆಯುವ ಆಸೆ ಚಿಗುರೊಡೆಯಿತು. ಅಲ್ಲಿಂದ ಅನ್ನಪೂರ್ಣ ಹೆಗಡೆಯವರ ಒತ್ತಾಸೆಯಿಂದ  ಬರೆಯಲು ಮತ್ತು ಗೀತೆಗಳಿಗೆ ರಾಗಸಂಯೋಜಿಸಲು ಆರಂಭಿಸಿದರು. Momspresso appನಲ್ಲಿ  ಬ್ಲಾಗರ್ ವ್ಲಾಗರ್ ಆಗಿದ್ದರು. ಅಲ್ಲಿ ಅವರಿಂದ ಮೂಡಿದ  ಬರಹಗಳು ವೈವಿಧ್ಯ ತುಂಬಿಕೊಂಡಿವೆ.  ಅಲ್ಲಿ ಮಕ್ಕಳಕಥೆ, ಮಕ್ಕಳಕವಿತೆ, ಕಥೆ, ಕವಿತೆ, ಭಕ್ತಿಗೀತೆ, ಅನುಭವ ಕಥನ, ಚುಟುಕು, ರುಬಾಯಿಗಳು  ನ್ಯಾನೋ ಕಥೆಗಳು, ದಿನದ ಚಿಂತನೆಗಳು ಹೀಗೆ ವಿಶಾಲತೆಯ ವ್ಯಾಪ್ತಿ ಇದೆ.   ಇವರ ಬರಹಗಳಲ್ಲಿ ಸುಂದರ ಸುಲಲಿತ ಭಾಷೆಯಿದೆ.  ಸುಂದರ ಚಿಂತನೆಗಳಿಗೆ ಸೊಗಸಾದ ಅಭಿವ್ಯಕ್ತಿಗಳ ಚೌಕಟ್ಟಿದೆ. ಇವರ ಮಕ್ಕಳ ಕಥೆಗಳಲ್ಲಂತೂ ಮಕ್ಕಳ ಮನೋಭಾವದಲ್ಲಿ ಪರಕಾಯ ಪ್ರವೇಶ ಮಾಡಿ ಬರೆದಂತ ಚೆಲುವಿದೆ.

ವಿದ್ಯಾಲಕ್ಷ್ಮಿ ಅವರಿಗೆ ಒಳ್ಳೆಯ ಧ್ವನಿ ಇದ್ದು ಸುಶ್ರಾವ್ಯವಾಗಿ ಹಾಡುತ್ತಾರೆ.  ಅನೇಕ ಗೀತೆಗಳಿಗೆ ಭವ್ಯವಾಗಿ ರಾಗ ಸಂಯೋಜಿಸಿ ಪ್ರತಿಭಾನ್ವಿತರಿಂದಲೂ ಹಾಡಿಸಿದ್ದಾರೆ.  ಅಂತಹ ಪ್ರಸ್ತುತಿಗಳಲ್ಲಿ, ಇತರ ಪ್ರತಿಭಾನ್ವಿತರ ರಚನೆಗಳೊಂದಿಗೆ ಇವರೇ ರಚಿಸಿದ ಕವಿತೆಗಳೂ ಇವೆ. ಇವೆಲ್ಲ ಯುಟ್ಯೂಬ್ನಲ್ಲಿ ಲಭ್ಯವಿವೆ. 

ಓದುವ ದಿನಗಳಲ್ಲೇ ಮದುವೆಯಾಗಿ ಕೃಷಿ ಆಧಾರಿತ ಕೂಡು ಕುಟುಂಬದ ಅಕ್ಕರೆಯ ಹಿರಿಯ ಸೊಸೆಯಾಗಿ, ಬದುಕು ಮತ್ತು ಕೃಷಿ ಅವಲಂಬನೆಯ ಅನೇಕ ಜವಾಬ್ದಾರಿ ಮತ್ತು ಸವಾಲುಗಳನ್ನು ಎದುರಿಸುತ್ತಲೇ ಸಾಹಿತ್ಯ, ಸಂಗೀತ, ಸಂಸ್ಕೃತಿ ಮತ್ತು ಸಮುದಾಯಗಳಲ್ಲಿ ಉತ್ಸಾಹಯುತ ಹವ್ಯಾಸ ಮತ್ತು ಪ್ರವೃತ್ತಿಯಲ್ಲಿ ವಿದ್ಯಾಲಕ್ಷ್ಮಿ ಅವರು ಹೊಂದಿರುವ ಉತ್ಸಾಹ ಶ್ಲಾಘನೀಯವಾದದ್ದು. 

ಆತ್ಮೀಯರಾದ ವಿದ್ಯಾಲಕ್ಷ್ಮಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.

Happy birthday VidyaGanesh Devaradka 🌷🌷🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ