ವಿದ್ಯಾಭೂಷಣ
ವಿದ್ಯಾಭೂಷಣ
ವಿದ್ಯಾಭೂಷಣರೆಂದರೆ ಒಂದು ಇಂಪಾದ ನಾದ. ಭಕ್ತಿ ಸಂಗೀತಕ್ಕೆ ಅವರು ನೀಡಿದ ವಿಸ್ತೃತವ್ಯಾಪ್ತಿ ಅಪಾರವಾದದ್ದು. ವಿದ್ಯಾಭೂಷಣರ ಗಾಯನ ಶಾಸ್ತ್ರೀಯ ಸಂಗೀತದ ನಾದವನ್ನು, ಧ್ವನಿ ಮಾಧುರ್ಯದೊಂದಿಗೆ, ಸುಸ್ಪಷ್ಟ ಉಚ್ಚಾರಗಳಲ್ಲಿ ಮುದವಾಗಿ ಕಟ್ಟಿಕೊಡುವಂತದ್ದು.
ವಿದ್ಯಾಭೂಷಣರ ಸಂಗೀತ, ಜ್ಞಾನಿಗಳು ಮತ್ತು ಸಂಗೀತವನ್ನು ತಿಳಿದಿಲ್ಲದವರು ಎಂಬ ಭೇದವಿಲ್ಲದೆ ಎಲ್ಲರನ್ನೂ ಅಯಸ್ಕಾಂತೀಯ ಶಕ್ತಿಯಿಂದ ತನ್ನ ತೆಕ್ಕೆಗೆ ಸೆಳೆದುಕೊಳ್ಳುವಂತಹ ಅಪರಿಮಿತ ಶಕ್ತಿ ಉಳ್ಳದ್ದು. ಅವರ ಸಂಗೀತ ಕಾರ್ಯಕ್ರಮಗಳು ಎಲ್ಲಿಯೇ ನಡೆದರೂ ಜನ ತುಂಬಿ ತುಳುಕುತ್ತಾರೆ.
ವಿದ್ಯಾಭೂಷಣರು ಹಾಡುವ ಹರಿದಾಸ ಕೀರ್ತನೆಗಳೆಲ್ಲವೂ, ಅದನ್ನು ಕೇಳಿ ಕೇಳಿ ಸವಿದ ಬಹುಸಂಖ್ಯಾತ ಜನರಿಗೆ, ಆ ಕೀರ್ತನೆಗಳ ಸಂಪೂರ್ಣ ಸಾಹಿತ್ಯವೇ ಬಾಯಿಪಾಠವಾಗಿರುವಷ್ಟು ಚಿರಪರಿಚಯವಾಗಿಬಿಟ್ಟಿದೆ. ಒಬ್ಬ ಕಲಾವಿದ ತನ್ನ ಪ್ರತಿಭೆಯ ಮೂಲಕ ಜನರ ಹೃದಯದಲ್ಲಿ ಹೀಗೆ ತನ್ನ ಧ್ಯೇಯೋದ್ಧೇಶವನ್ನು ಬಿತ್ತಿರುವುದು ಅತ್ಯಂತ ಮಹತ್ವದ ವಿಷಯ.
ದಕ್ಷಿಣ ಕನ್ನಡದವರಾದ ವಿದ್ಯಾಭೂಷಣರು 1952ರ ಜುಲೈ 10ರಂದು ತಮ್ಮ ತಾಯಿಯ ಊರು ಸೀತೂರಿನಲ್ಲಿ ಜನಿಸಿದರು. ತಂದೆ ಗೋವಿಂದಾಚಾರ್ಯ. ತಾಯಿ ಮಂದಾಕಿನಿಯಮ್ಮ. ಇವರ ಅಂದಿನ ಹೆಸರು 'ಯೋಗೀಂದ್ರ'. ಯೋಗೀಂದ್ರಭಟ್ಟ ತಮ್ಮ ಹದಿನೈದನೆ ವರುಷ ಪ್ರಾಯದಲ್ಲಿ 1967ರ ಜೂನ್ ತಿಂಗಳಲ್ಲಿ 'ಸುಬ್ರಹ್ಮಣ್ಯ ಮಠ'ಕ್ಕಾಗಿ ಸನ್ಯಾಸ ಆಶ್ರಮವನ್ನು ಸ್ವೀಕರಿಸಿದಾಗ, ಇವರ ಹೆಸರು ವಿದ್ಯಾಭೂಷಣತೀರ್ಥರು ಎಂದು ಬದಲಾಯಿತು. ಅಪರಿಮಿತ ಧೈರ್ಯದಿಂದ ಅವರು ಸಂನ್ಯಾಸ ಆಶ್ರಮವಾದ ಮಠದ ಅಧಿಪತ್ಯವನ್ನು ತೊರೆದು 1997ರಲ್ಲಿ ಗೃಹಸ್ಥಾಶ್ರಮಕ್ಕೆ ಕಾಲಿಟ್ಟರು. ಆದರೂ ಅವರ ಭಕ್ತಿ ಸಂಗೀತದಲ್ಲಿ ಪರವಶರಾದವರಿಗೆ, ಉತ್ತಮ ಯತಿಗಳನ್ನು ಕಂಡ ಪೂಜ್ಯಭಾವವನ್ನೇ ಮೂಡಿಸುತ್ತಾರೆ. 'ಭೂಷಣಕೆ ಭೂಷಣರು ಈ ವಿದ್ಯಾಭೂಷಣ'ರು. ಪ್ರತಿಭೆ ಮತ್ತು ಶ್ರದ್ಧೆ ಕಾಯಕದಲ್ಲಿ ಬಲು ಮುಖ್ಯ. ಇದುವೇ ಇವರ ಶ್ರೇಷ್ಠತೆಯ ಭೂಷಣ. ಅವರ ನಡೆ ನುಡಿಯೂ ಅಷ್ಟೇ ಸವಿಯಾದದ್ದು ಮತ್ತು ಸುಸಂಸ್ಕೃತವಾದದ್ದು.
ವಿದ್ಯಾಭೂಷಣರು ಸಣ್ಣವರಿರುವಾಗಲೇ ತಂದೆ ಗೋವಿಂದಾಚಾರ್ಯರಿಂದ ಸಂಗೀತ ಕಲಿಯಲಾರಂಭಿಸಿದರು. ಮುಂದೆ ಉಡುಪಿಯ ನಾರಾಯಣ ಐತಾಳರಿಂದ ಬಹುವರ್ಷ, ನಂತರ ಆರ್. ಕೆ. ಶ್ರೀಕಂಠನ್ ಮತ್ತು ಟಿ. ವಿ. ಗೋಪಾಲಕೃಷ್ಣನ್ ಅವರುಗಳ ಬಳಿ ಹೆಚ್ಚಿನ ಸಂಗೀತ ಸಾಧನೆಯನ್ನು ನಡೆಸಿದರು.
ವಿದ್ಯಾಭೂಷಣರಿಂದ ಹರಿದಾಸ ಸಾಹಿತ್ಯ ಪಡೆದುಕೊಂಡ ಪ್ರಚಾರ ಅಪರಿಮಿತವಾದದ್ದು. ವಿದ್ಯಾಭೂಷಣರು ಎರಡೂವರೆ ದಶಕಗಳಿಂದ ನಡೆಸಿಕೊಂಡು ಬರುತ್ತಿರುವ 'ಭಕ್ತಿ ಭಾರತೀ ಪ್ರತಿಷ್ಠಾನ' ಹರಿದಾಸ ಸಂದೇಶ ಪ್ರಸಾರದಲ್ಲಿ ನಿರತವಾಗಿದೆ. ಸಂಗೀತ, ದೇವರನಾಮ, ಅಧ್ಯಾತ್ಮ ಶಿಬಿರಗಳನ್ನು, ಪುರಂದರೋತ್ಸವ ಭಕ್ತಿಮೇಳಗಳನ್ನು ನಡೆಸಿಕೊಂಡು ಬಂದಿದೆ. ಕರ್ನಾಟಕ ಸಂಗೀತ ಪಿತಾಮಹ ಪುರಂದರದಾಸರ ಹೆಸರಿನಲ್ಲಿ 'ಪುರಂದರಾಶ್ರಮ' ಕೂಡ ಸ್ಥಾಪನೆಗೊಂಡಿದೆ. ಪುರಂದರಾಶ್ರಮದಲ್ಲಿ ಸಂಗೀತ ತರಗತಿಗಳನ್ನು ನಡೆಸಲಾಗುತ್ತಿದೆ. ಶಾಸ್ತ್ರೀಯ ಸಂಗೀತ ಮತ್ತು ಹರಿದಾಸ ಸಾಹಿತ್ಯ ಪಾಠಗಳನ್ನು ಹೇಳಿಕೊಡಲಾಗುತ್ತಿದೆ. ಹರಿದಾಸ ಸಾಹಿತ್ಯದ ಅಧ್ಯಯನಕ್ಕೆ ಎಲ್ಲ ರೀತಿಯ ಸಂಪನ್ಮೂಲಗಳೂ ಇಲ್ಲಿವೆ.
ವಿದ್ಯಾಭೂಷಣರು ಅನೇಕ ಅಪರೂಪದ ದಾಸರ ಕೃತಿಗಳನ್ನು ಹಾಡಿ 'ದಾಸಸಾಹಿತ್ಯ'ವನ್ನು ಪ್ರಸಿದ್ಧಿಪಡಿಸುತ್ತಾ ಬಂದಿದ್ದಾರೆ. ಅವರ 'ನೂರಾರು ಧ್ವನಿಮುದ್ರಿತ ಆಲ್ಬಮ್'ಗಳು ವಿಶ್ವ ಮಾರುಕಟ್ಟೆಯಲ್ಲಿವೆ. ಭಾರತದ ಹಲವು ಕಡೆಗಳಲ್ಲಿ ಅಲ್ಲದೆ ವಿದೇಶಗಳಲ್ಲೂ ಅವರ ಗಾಯನ ಪ್ರಸಿದ್ಧಿ ಪಡೆದಿದೆ. ವಿದೇಶಿಗಳಲ್ಲಿ ನೆಲೆಸಿರುವ ಕನ್ನಡಿಗರಿಗೆ ಅವರನ್ನು ಆಗಾಗ ಬರಮಾಡಿಕೊಂಡು ಅವರ ಸಂಗೀತ ಕೇಳುವಾಗ, ಓಹ್ ನಾವೆಲ್ಲೂ ಕಳೆದುಹೋಗಿಲ್ಲ ಎಂಬ ಸಮಾಧಾನ.
ವಿದ್ಯಾಭೂಷಣರ ಮೊಟ್ಟ ಮೊದಲ ಆಲ್ಬಮ್ 'ದಾಸರ ಪದಗಳು' ಅಂದು ಮಾರುಕಟ್ಟೆಯಲ್ಲಿ ಮೂಡಿಸಿದ ಕ್ರಾಂತಿ ಅಮೋಘವಾದದ್ದು. ನೂರನೆಯದು 'ತನು ನಿನ್ನದು ಜೀವನ ನಿನ್ನದು'. ಮುಂದೆ ಬಂದಿರುವುದು ಮತ್ತು ಬರಲಿರುವುದು ಇನ್ನೆಷ್ಟೆಷ್ಟೋ.
ವಿದ್ಯಾಭೂಷಣರ ಬದುಕಿನ ಕಥಾನಕ ಅಂತರಜಾಲದಲ್ಲಿ ಧಾರಾವಾಹಿಯಂತೆ ಬಂದು 'ನೆನಪೇ ಸಂಗೀತ' ಎಂಬ ಕೃತಿಯೂ ಆಗಿ ಅಸಂಖ್ಯಾತರನ್ನು ಸೆಳೆದಿದೆ.
ಹಿಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ಜರುಗುವ ಸಂಗೀತೋತ್ಸವಗಳಿಗೆ ಕಳೆ ಕಟ್ಟಿಸಬೇಕೆಂದರೆ ಹೊರ ರಾಜ್ಯಗಳಿಂದಲೇ ಕಲಾವಿದರನ್ನು ತರಬೇಕು ಎಂಬ ಪ್ರಾಧಾನ್ಯತೆ ವ್ಯವಸ್ಥಾಪಕರಲ್ಲಿ ಇದ್ದುದರಲ್ಲಿ ಸುಳ್ಳಿಲ್ಲ. ಆದರೆ ಈಗ ಯಾವುದೇ ಸಂಗೀತೋತ್ಸವವೂ ವಿದ್ಯಾಭೂಷಣರಿಲ್ಲದೆ ಭೂಷಣವೆನಿಸುವುದಿಲ್ಲ. ಇದು ಸಂಗೀತಲೋಕದಲ್ಲಿ ಕನ್ನಡ ಸಾಹಿತ್ಯಕ್ಕೆ ಸಂದ ಬಹು ಅಮೂಲ್ಯ ಲಾಭ.
ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ ನಿಮ್ಮೊಳಗಿಹನಾರಮ್ಮ?, ಪಿಳ್ಳಂಗೋವಿಯ ಚೆಲ್ವ ಕೃಷ್ಣನ ಎಲ್ಲಿ ನೋಡಿದಿರಿ? ಹೀಗೆಲ್ಲ ನೀವು ಯಾವುದೇ ಕನ್ನಡಿಗನನ್ನು ಕೇಳಿ ತಕ್ಷಣ ಹೇಳುತ್ತಾರೆ, "ವಿದ್ಯಾಭೂಷಣರ ಧ್ವನಿಯಲ್ಲಿ" ಎಂದು. 'ಇಷ್ಟು ದಿನ ವೈಕುಂಠ ಎಷ್ಟು ದೂರವೊ ಎನ್ನುತಲಿದ್ದೆ' ನೆನಪಾಗುತ್ತದೆ, ಆ ಗಾಯನ ಕೇಳುವಾಗ ಇಲ್ಲೇ ಕೇಳಿದ, ಈ ಆಂತರ್ಯದಲ್ಲೇ ಆ ವೈಕುಂಠವನ್ನು ಕಂಡ ಅವ್ಯಕ್ತ ಸಂತಸ ಸಿಗುತ್ತದೆ.
On the birthday of our great vocalist Vidyabhushana
ಲೇಖಕರು ಈ ಕಾಮೆಂಟ್ ಅನ್ನು ತೆಗೆದು ಹಾಕಿದ್ದಾರೆ.
ಪ್ರತ್ಯುತ್ತರಅಳಿಸಿ