ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸುಮಲತಾ


 ಸುಮಲತಾ


ಸುಮಲತಾ ದಕ್ಷಿಣ ಭಾರತದ ಸುಂದರ ನಟಿಯಾಗಿ, ನಮ್ಮ ಅಂಬರೀಷರ ಪತ್ನಿಯಾಗಿ, ಅನಿರೀಕ್ಷಿತವೆಂಬಂತೆ ರಾಜಕೀಯಕ್ಕೆ ಬಂದು ಲೋಕಸಭೆಯಲ್ಲಿ ಮಂಡ್ಯ ಕ್ಷೇತ್ರವನ್ನೂ  ಪ್ರತಿನಿಧಿಸಿದ್ದರು. 

ಸುಮಲತಾ 1963ರ ಆಗಸ್ಟ್ 27ರಂದು ಜನಿಸಿದರು. ಗುಂಟೂರಿನ ಬಳಿಯ ಬ್ರೋದಿಪೇಟ್ನಲ್ಲಿ ಇವರ ಶಾಲಾ ವಿದ್ಯಾಭ್ಯಾಸ ನಡೆಯಿತು. ಹದಿನೈದನೇ ವಯಸ್ಸಿಗೇ ಅಭಿನಯ ಜಗತ್ತಿಗೆ ಬಂದರು. 1979ರಲ್ಲಿ ಆಂಧ್ರಪ್ರದೇಶದಲ್ಲಿನ ಸೌಂದರ್ಯ ಸ್ಪರ್ಧೆಯಲ್ಲಿ ವಿಜಯಿಯಾದರು. ಹೀಗೆ ಅವರ ಚಿತ್ರಗಳು ನಿಯತಕಾಲಿಕೆಗಳಲ್ಲಿ ಮೂಡುತ್ತಿದ್ದಂತೆ ಅವರಿಗೆ ದಕ್ಷಿಣ ಭಾರತದ ಎಲ್ಲ ಭಾಷೆಗಳಿಂದ ಅವಕಾಶಗಳು ಹರಿದುಬಂದವು. 

ಸುಮಲತಾ ಅವರು 'ತಿಸೈ ಮಾರಿಯಾ ಪರವೈಗಳ್' (1979) ಎಂಬ ತಮಿಳು ಚಿತ್ರದ ಮೂಲಕ  ಚಲನಚಿತ್ರಲೋಕಕ್ಕೆ ಬಂದರು.  ಕನ್ನಡದಲ್ಲಿ ರಾಜ್‌ಕುಮಾರ್ ಎದುರು 'ರವಿಚಂದ್ರ' ಚಿತ್ರದಲ್ಲಿ ನಟಿಸಿದರು. ಸಮಾಜನಿಕಿ ಸವಾಲ್ (1979) ಮೂಲಕ ತೆಲುಗು ಚಿತ್ರರಂಗ ಪ್ರವೇಶಿಸಿದರು, ಮತ್ತು ಮೂರ್ಖನ್ (1980) ಮೂಲಕ ಮಲಯಾಳಂ ಪ್ರವೇಶಿಸಿದರು. ಹೀಗೆ ತಮ್ಮ ವೃತ್ತಿಜೀವನದ ಆರಂಭದಲ್ಲೇ ಕನ್ನಡ, ತಮಿಳು, ಮಲಯಾಳಂ ಮತ್ತು ತೆಲುಗು ಭಾಷೆಗಳ ಚಲನಚಿತ್ರಗಳಲ್ಲಿ ಕಾಣಿಸಿಕೊಂಡರು. ಹಿಂದಿಯಲ್ಲೂ ನಟಿಸಿದರು.  ಮುರಟ್ಟು ಕಾಳೈ ಮತ್ತು ಕಝುಗು ಚಿತ್ರಗಳಲ್ಲಿ ರತಿ ಅಗ್ನಿಹೋತ್ರಿ ಜೊತೆಗೆ ರಜನಿಕಾಂತ್ ಅವರ ನಾಯಕಿಯಾಗಿದ್ದರು. ಮಲಯಾಳಂನ ಪ್ರಸಿದ್ಧ ನಟ ಜಯನ್ ಅವರ ಕೊನೆಯ ಚಿತ್ರ ಕೊಲಿಲಕ್ಕಂ (1981)ಗೆ ನಾಯಕಿಯಾಗಿದ್ದರು.  ತಮ್ಮ ಮೊದಲ ಮಲಯಾಳಂ ಚಿತ್ರ 'ಮೂರ್ಖನ್‌'ನಲ್ಲಿ ಜಯನ್‌ ಅವರ ಎರಡನೇ ನಾಯಕಿಯಾಗಿ ನಟಿಸಿದ್ದರು. ಅವರ ಅತ್ಯಂತ ಸ್ಮರಣೀಯ ಮಲಯಾಳಂ ಚಲನಚಿತ್ರಗಳಲ್ಲಿ ತಾಜ್ವರಂ, ಇಸಾಬೆಲ್ಲಾ, ನೀರಕ್ಕೂಟು, ಧೀನರಾತ್ರಂಗಲ್, ತೂವನತುಂಬಿಕಲ್, ಪರಂಪರಾ ಮತ್ತು ನವದೆಹಲಿ ಸೇರಿವೆ. ಇವುಗಳು ಅವರಿಗೆ ಚಲನಚಿತ್ರ ವಿಮರ್ಶಕರ ಪ್ರಶಸ್ತಿ ತಂದುಕೊಟ್ಟಿವೆ. 

ಸುಮಲತಾ ಅವರು ರವಿಚಂದ್ರ ಚಿತ್ರ ಅಲ್ಲದೆ, ಆಹುತಿ, ಅವತಾರ ಪುರುಷ, ತಾಯಿ ಕನಸು, ಕರ್ಣ, ಹಾಂಕಾಂಗ್ ನಲ್ಲಿ ಏಜೆಂಟ್ ಅಮರ್ ತಾಯಿಯ ಹೊಣೆ, ಕಲ್ಲರಳಿ ಹೂವಾಗಿ, ನ್ಯೂಡೆಲ್ಲಿ, ಕಥಾನಾಯಕ ಮುಂತಾದ ಅನೇಕ ಕನ್ನಡ ಚಲನಚಿತ್ರಗಳಲ್ಲಿ ನಟಿಸಿದರು.  ವಿಷ್ಣುವರ್ಧನ್ ಮತ್ತು ಅಂಬರೀಷ್ ಜೊತೆಗೆ ಅವರ ಜೋಡಿ ಜನಪ್ರಿಯವೆನಿಸಿತ್ತು. ಅವರು ದಕ್ಷಿಣ ಭಾರತದ ಎಲ್ಲ ಭಾಷೆಗಳ ಬಹುತೇಕ ಪ್ರಸಿದ್ಧ ನಾಯಕರೊಂದಿಗೆ ನಟಿಸಿದ್ದರು. 

ಸುಮಲತಾ ಅವರಿಗೆ 1987ರಲ್ಲಿ ಶ್ರುತಿಲಯಲು ಚಿತ್ರಕ್ಕಾಗಿ ಅತ್ಯುತ್ತಮ ನಟಿ ನಂದಿ ಪ್ರಶಸ್ತಿ  ಸಂದಿತು. ಆರು ಭಾಷೆಗಳನ್ನು ಸುಲಲಿತವಾಗಿ ಸಂಭಾಷಿಸುವ ಸುಮಲತಾ ಐದು ಭಾಷೆಗಳಲ್ಲಿ 220ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.

ನಮ್ಮ ಕನ್ನಡದ ಅಂಬರೀಷರ ಪತ್ನಿಯಾದ ಸುಮಲತಾ,  ಅಂಬರೀಷರ ನಿಧನಾನಂತರ, ರಾಜಕೀಯದಲ್ಲಿದ್ದ  ಅವರ ಅಭಿಮಾನಿಗಳ ಒತ್ತಾಸೆಯ ಮೇರೆಗೆ ರಾಜಕೀಯಕ್ಕೆ ಬಂದು 2019ರ ಲೋಕಸಭಾ ಚುನಾವಣೆಯಲ್ಲಿ ಗೆಲುವು ಕಂಡರು. 

ಸುಂದರ ಸಕ್ರಿಯ ವ್ಯಕ್ತಿತ್ವದ ಸುಮಲತಾ ಅವರ ಬದುಕಿನ ಮುಂದಿನ ಹಾದಿ ಸುಗಮವಾಗಿರಲಿ.

On the birthday of beautiful actress Sumalatha 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ