ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಮೈಸೂರು ನಾಗರಾಜ್


 ಮೈಸೂರು  ನಾಗರಾಜ್ 


ಇಂದು ಸಂಗೀತ ಕ್ಷೇತ್ರದಲ್ಲಿ ಮೈಸೂರು ನಾಗರಾಜ್ ಮತ್ತು ಮಂಜುನಾಥ್ ಸಹೋದರರೆಂದರೆ ಬಹುದೊಡ್ಡ ಹೆಸರು.  ಇಂದು ಈ ಸಹೋದರರಲ್ಲಿ ಹಿರಿಯರಾದ ಮೈಸೂರು ನಾಗರಾಜ್ ಅವರ ಜನ್ಮದಿನ.  

ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಗೌರವಾನ್ವಿತ ವಿದ್ವಾಂಸರಾದ ಮೈಸೂರು ನಾಗರಾಜ್  1960ರ ಆಗಸ್ಟ್ 27ರಂದು ಜನಿಸಿದರು.  2019ರಲ್ಲಿ ಅವರು ಕಛೇರಿ ನೀಡಲು ಆರಂಭಿಸಿದ 50 ವರ್ಷಗಳ ಆಚರಣೆ ಮೈಸೂರಿನಲ್ಲಿ ವಿಜೃಂಭಣೆಯಿಂದ ನಡೆಯಿತು.  ಅಂದರೆ ಕೇವಲ 8 ತುಂಬಿದ ವಯಸ್ಸಿನಲ್ಲೇ ಕಛೇರಿ ನೀಡುವ ಪರಿಣತಿ ಪಡೆದು ಇಂದು ವಿಶ್ವದೆಲ್ಲೆಡೆ ತಮ್ಮ ಸುಮಧುರ ನಾದವನ್ನು ವ್ಯಾಪಿಸುತ್ತಿರುವ ಮಹತ್ಸಾಧನೆ ಇವರದು.

ಮೈಸೂರಿನಲ್ಲಿ ಮಹಾನ್ ವಿದ್ವಾಂಸರಾದ ಮಹಾದೇವಪ್ಪ ಮತ್ತು ಅವರ ಪುತ್ರರಾದ ನಾಗರಾಜ್ ಮತ್ತು ಮಂಜುನಾಥ್ ಅವರನ್ನು ನಾವು ಚಿಕ್ಕಂದಿನಿಂದ ಹಲವಾರು ಕಛೇರಿಗಳಲ್ಲಿ ಕಾಣುತ್ತಾ ಬೆಳೆದವರು.   ಕಳೆದ ದಶಕದಲ್ಲಿ  ಅಮೆರಿಕದಲ್ಲಿ ಏರ್ಪಾಡಾಗಿದ್ದ ಈ ಯುವಕರ ಸಂಗೀತಕಛೇರಿಗೆ ಬಂದು ಆನಂದಿಸಿದ ಭಾರತರತ್ನ ಪಂಡಿತ್ ರವಿಶಂಕರ್ 'ಪ್ರಿನ್ಸಸ್ ಆಫ್ ಇಂಡಿಯನ್ ಮ್ಯೂಸಿಕ್’ ಎಂದು ಕೊಂಡಾಡಿದರು. 

ನಾಗರಾಜ್ ಪುಟ್ಟ ವಯಸ್ಸಿನಲ್ಲೇ ತಮ್ಮ ತಂದೆ ಮೈಸೂರು ಮಹಾದೇವಪ್ಪನವರಿಂದ  ಸಂಗೀತ ಕಲಿಕೆ ಆರಂಭಿಸಿದರು. 60-70ರ ದಶಕದಲ್ಲಿ ಮೈಸೂರಿನ ಎಲ್ಲ ಗಾಯನ ಕಛೇರಿಗಳಿಗೆ ಪಿಟೀಲು ಸಾಥ್ ಕೊಡುತ್ತಿದ್ದ ವಿದ್ವಾಂಸರು ಮೈಸೂರು ಮಹಾದೇವಪ್ಪ.
ಆಕಾಶವಾಣಿಯ ಕಲಾವಿದರಾಗಿ ಪ್ರಸಿದ್ಧರಾಗಿದ್ದ ಅವರು ಮೈಸೂರು ವಿಶ್ವವಿದ್ಯಾಲಯ ಲಲಿತ ಕಲಾ ಕಾಲೇಜಿನ ‘ಪಿಟೀಲು ವಿಭಾಗ'ದ ಮುಖ್ಯಸ್ಥರಾಗಿ ಸಹಾ 26 ವರ್ಷ ದುಡಿದರು. ಮೈಸೂರಿನಲ್ಲಿ ಮಹಾದೇವಪ್ಪ ಕಟ್ಟಿ ಬೆಳೆಸಿದ ಜೆಎಸ್‌ಎಸ್ ಸಂಗೀತ ಸಭಾ ಸಾಂಸ್ಕೃತಿಕ ರಾಜಧಾನಿಯ ವೈಭವವನ್ನು ಮತ್ತಷ್ಟು ಹೆಚ್ಚಿಸಿದೆ. ಕೇವಲ ಮದ್ರಾಸ್‌ನಲ್ಲಿ ನಡೆಯುತ್ತಿದ್ದ ಸಂಗೀತ ವಿಚಾರ ಸಂಕಿರಣ, ಸಮ್ಮೇಳನ, ಮಾತುಕತೆಗಳನ್ನು ಮಹಾದೇವಪ್ಪ ಈ ಸಭಾದ ಮೂಲಕ ಮೈಸೂರಿಗೂ ತಂದರು. ಸಂಗೀತಕ್ಕೆ ಸಂಬಂಧಪಟ್ಟ ಕೃತಿಗಳನ್ನು ಪ್ರಕಟಿಸಿದರು.  ಮೈಸೂರು ಮಹಾದೇವಪ್ಪನವರು ಇತರೆಡೆಯ ಕಲಾವಿದರು ನಮ್ಮ ನಾಡಿನಲ್ಲಿಗೌರವ ಪಡೆವಂತೆ ನಮ್ಮ ಕಲಾವಿದರೂ ಬೇರಡೆ ಬೆಳಗಬೇಕು ಎಂಬ ಸದಾಶಯ ಹೊಂದಿದ್ದರು. ಅದಕ್ಕಾಗಿ ಅವರು ತಮ್ಮಿಬ್ಬರು ಮಕ್ಕಳನ್ನು ತಯಾರು ಮಾಡಿದರು. ವಿಶ್ವ ಸಂಗೀತ ಲೋಕದಲ್ಲಿ ಇಂದು ತಾರೆಗಳಾಗಿ ಪ್ರಕಾಶಿಸುತ್ತಿರುವ  ಮೈಸೂರು ನಾಗರಾಜ್ - ಡಾ. ಮಂಜುನಾಥ ಸಹೋದರರು ತಮ್ಮ ತಂದೆಯವರ ಸದಾಶಯದ ದ್ಯೋತಕವಾಗಿದ್ದಾರೆ. ಈ ಮಕ್ಕಳ ಪಾಲಿಗೆ ಮಹಾದೇವಪ್ಪ ಎಲ್ಲ ಅಪ್ಪಂದಿರಂತಿರಲಿಲ್ಲ. ಮಕ್ಕಳು ಇಂಗ್ಲಿಷ್ ಕಾನ್ವೆಂಟಿಗೆ ಹೋಗಿ ಎಲ್ಲಿ ಸಂಗೀತ ಮರೆತು ಬಿಡುತ್ತಾರೋ ಎಂಬ ಆತಂಕದಿಂದ ಅವರನ್ನು ದೊಡ್ಡ ಶಾಲೆಗಳಿಗೆ ಸೇರಿಸಲಿಲ್ಲ, ಸಮೀಪದ ಸರ್ಕಾರಿ ಶಾಲೆಗೆ ಹಾಕಿದರು. ಶಾಲೆ ಕಲಿಕೆಯ ಬಗ್ಗೆ ಅವರು ತಲೆಕೆಡಿಸಿಕೊಳ್ಳಲಿಲ್ಲ. ಆದರೆ ಮಕ್ಕಳ ಪಿಟೀಲು ಕಲಿಕೆಯ ಬಗ್ಗೆ ತಮ್ಮ ಕಛೇರಿಗಳನ್ನು ಬದಿಗೊತ್ತಿ ತರಬೇತಿಯಲ್ಲಿ ತೊಡಗಿದರು.   ಮಕ್ಕಳಿಬ್ಬರು ಹತ್ತನ್ನೆರಡು ತುಂಬುವಷ್ಟರಲ್ಲೇ ವಿಶ್ವ ವಿಖ್ಯಾತಿಯಾದರು. ಮದ್ರಾಸ್ ಸಂಗೀತಗಾರರು ಮುಟ್ಟದ ಗಟ್ಟಿ ರಾಗಗಳನ್ನು ಲೀಲಾಜಾಲವಾಗಿ ನುಡಿಸಿ ತೋರಿಸಿದರು. ಮಕ್ಕಳ ಕಛೇರಿ ಇದೆ ಅಂದರೆ ಮಹಾದೇವಪ್ಪನವರು ರಾತ್ರಿಯಿಡೀ ನಿದ್ದೆ ಮಾಡುತ್ತಿರಲಿಲ್ಲ, ಅವರ ಹೃದಯ ಬಡಿತ ಇಮ್ಮಡಿಯಾಗುತ್ತಿತ್ತು.  ಅವರ ಮನೆಗೆ ಬೇರೆ ಬೇರೆ ರಾಜ್ಯಗಳಿಂದ  ಕಛೇರಿಯ ಕರೆಯೋಲೆಗಳು ಬಂದವು.  ಎಲ್ಲ ರಾಜ್ಯಗಳ, ಎಲ್ಲ ದೇಶಗಳ ಜನ  ನಾಗರಾಜ - ಮಂಜುನಾಥರನ್ನು ಆರಾಧಿಸಿದರು. ಇಂದು ಮೈಸೂರು ಮಹಾದೇವಪ್ಪನವರ ಮೊಮ್ಮಕ್ಕಳಾದ ಸುಮಂತ್ ಮಂಜುನಾಥ್ ಮತ್ತು ಕಾರ್ತಿಕ್ ನಾಗರಾಜ್ ಸಹಾ ಮೇರುಮಟ್ಟದ ಪಿಟೀಲು ಕಲಾವಿದರಾಗಿ ರೂಪುಗೊಂಡಿದ್ದಾರೆ.

ಮೈಸೂರು ನಾಗರಾಜ್ ವೈಯಕ್ತಿಕ ಕಛೇರಿ, ತಮ್ಮ ಸಹೋದರ ಮಂಜುನಾಥ್ ಜೊತೆಗಿನ ಜಂಟಿ ಕಛೇರಿ, ಇತರ ಕಲಾವಿದರಿಗೆ ಸಹ ಕಲಾವಿದರಾಗಿ, ಜುಗಲ್ಬಂದಿ ಕಛೇರಿ ಹೀಗೆ ಎಲ್ಲ ರೀತಿಗಳಲ್ಲಿ ಪ್ರಸಿದ್ಧಿ ಪಡೆದಿದ್ದಾರೆ.  ತಮ್ಮ ಕಿರಿಯ ಸಹೋದರ ಮಂಜುನಾಥ್ ಅವರಿಗೆ ಅವರು ಜೊತೆಸಂಗೀತಗಾರರು ಮಾತ್ರವಲ್ಲ ಆಪ್ತಮಾರ್ಗದರ್ಶಕರಾಗಿ, ಗುರುವಾಗಿ  ಮತ್ತು ಸಹಚರರಾಗಿ ಪೊರೆಯುತ್ತ ಬಂದ ಹೃದಯ. 

ಇತ್ತೀಚಿನ ವರ್ಷದಲ್ಲಿ  ಮೈಸೂರು ನಾಗರಾಜ್ ಮತ್ತು ಮೈಸೂರು ಮಂಜುನಾಥ್ ಅವರಿಬ್ಬರಿಗೂ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಗೌರವ ಸಂದಿದೆ.  ಅದಕ್ಕೂ ಮಿಗಿಲಾಗಿ ಇಂದು ಮೈಸೂರು ನಾಗರಾಜ್ ಮತ್ತು ಮೈಸೂರು ಮಂಜುನಾಥ್ ಸಹೋದರರ ಪಿಟೀಲಿನ ಸುಶ್ರಾವ್ಯ ಝೇಂಕಾರ ಇಡೀ ವಿಶ್ವದೆಲ್ಲೆಡೆ ಸಂಗೀತ ರಸಿಕರನ್ನು ಸಮ್ಮೋಹಗೊಳಿಸಿದೆ. ಕರ್ನಾಟಕ ಶಾಸ್ತ್ರೀಯ ಸಂಗೀತವಲ್ಲದೆ  ಇಂದು ಪ್ರಸಿದ್ಧಿ ಪಡೆದಿರುವ ವಿವಿಧ ಶಾಸ್ತ್ರೀಯ ಜುಗಲ್ಬಂದಿ ಸಂಗೀತ ಕಾರ್ಯಕ್ರಮಗಳಲ್ಲೂ ಈ ಸಹೋದರರ ನಾದದ ಕೈಚಳಕ ಎಲ್ಲೆಡೆ ಪ್ರಸಿದ್ಧಿ  ಪಡೆದಿದೆ.  ಈ ಈರ್ವರೂ ತಮ್ಮ ಮಕ್ಕಳಿಗೂ ಈ ನಾದಸೌಗಂಧವನ್ನು ಪಸರಿಸಿ ಅವರುಗಳೊಂದಿಗೆ ಕೂಡಾ ಸಂಗೀತ ಕಾರ್ಯಕ್ರಮಗಳನ್ನು ನೀಡುತ್ತಿರುವುದು ಸಂಗೀತಕ್ಷೇತ್ರಕ್ಕೆ ಮತ್ತಷ್ಟು ವ್ಯಾಪ್ತಿಯನ್ನು ತಂದುಕೊಟ್ಟಿದೆ.

ಕೇಂದ್ರ ಸಂಗೀತ ನಾಟಕ ಅಕಾಡಮಿ ಪ್ರಶಸ್ತಿಯೇ ಅಲ್ಲದೆ ಮೈಸೂರು ನಾಗರಾಜ್ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಚೌಡಯ್ಯ ಮೆಮರಿಯಲ್ ರಾಷ್ಟ್ರೀಯ ಪ್ರಶಸ್ತಿ, ಅಮೆರಿಕನ್ ಆರ್ಟ್ಸ್ ಕೌನ್ಸಿಲ್ ಮೆರಿಟೋರಿಯಸ್ ಅವಾರ್ಡ್, ಅಮೆರಿಕದ ಓಕ್ಲಹೋಮಾ ವಿಶ್ವವಿದ್ಯಾಲಯ ನೀಡಿದ ಎಕ್ಸಲೆನ್ಸ್ ಅವಾರ್ಡ್ ಮುಂತಾದ ಅನೇಕ ಗೌರವಗಳು ಸಂದಿವೆ.

ಈ ಮಹಾನ್ ವಿದ್ವಾಂಸರುಗಳ ಸಂಗೀತ ಲೋಕವನ್ನು ಪುನೀತಗೊಳಿಸುತ್ತಲೇ ಸಾಗಲಿ ಎಂದು ಆಶಿಸುತ್ತಾ ಇಂದು ಹುಟ್ಟುಹಬ್ಬ ಆಚರಿಸುತ್ತಿರುವ ಆತ್ಮೀಯರಾದ ಮೈಸೂರು ನಾಗರಾಜ್ ಅವರಿಗೆ ಆತ್ಮೀಯವಾಗಿ ಹುಟ್ಟುಹಬ್ಬದ ಶುಭ ಹಾರೈಕೆಗಳನ್ನು ಹೇಳೋಣ.

Happy birthday Mysore Nagaraj Sir 🌷🙏🌷 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ