ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಬೀನಾ ದಾಸ್


 ಬೀನಾ ದಾಸ್


ಬೀನಾ ದಾಸ್ ಭಾರತದ ಮಹಾನ್ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ್ತಿ. ಬೀನಾ ದಾಸ್ ಭೂಗತ ಚಳುವಳಿಯಲ್ಲಿ ಭಾಗವಹಿಸಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಹಲವಾರು ಸ್ತ್ರೀಶಕ್ತಿಗಳಲ್ಲಿ ಪ್ರಮುಖರು. 

ಬ್ರಹ್ಮ ಸಮಾಜದ ನೇತಾರ ಮತ್ತು ಸುಭಾಷ್ ಚಂದ್ರ ಬೋಸರ ಗುರುವಾಗಿದ್ದ ಬೇಣಿ ಮಾಧವ ದಾಸರ ಮಗಳಾದ ಬೀನಾ ದಾಸ್ ಕಲ್ಕತ್ತೆಯ ಕ್ರಾಂತಿಕಾರಿ ಹೋರಾಟಗಾರರ ಗುಂಪಿಗೆ ಸೇರಿದವರು. 1932ರಲ್ಲಿ ಫೆಬ್ರವರಿ 6ರಂದು ಬಂಗಾಲದ ಗವರ್ನರ್ ಆಗಿದ್ದ ಸ್ಟಾನ್ಲೇ ಜಾಕ್ ಸನ್ ಕಲ್ಕತ್ತಾ ವಿಶ್ವವಿದ್ಯಾಲಯದ ಘಟಿಕೋತ್ಸವ ಭಾಷಣ ಮಾಡಲು ಬಂದಾಗ ಅವರತ್ತ ಐದು ಗುಂಡುಗಳನ್ನು ಹಾರಿಸಿ ವಸಾಹತುಶಾಹಿಯ ವಿರುದ್ಧ ತನ್ನ ಪ್ರತಿಭಟನೆಯನ್ನು ತೋರಿದ ಅಪ್ರತಿಮ ಧೀರೆ ಈಕೆ. ಆಕೆ ಹಾರಿಸಿದ ಗುಂಡು ವಿಫಲವಾದದ್ದಲ್ಲದೆ ಆಕೆ ಪೊಲೀಸರ ಕೈಗೆ ಸಿಕ್ಕಿ ಏಳು ವರ್ಷಗಳ ಕಾಲ ಸೆರೆಮನೆ ವಾಸ ಅನುಭವಿಸಬೇಕಾಯಿತು. ನಂತರ ಹೊರಗೆ ಬಂದ ಮೇಲೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದಕ್ಕಾಗಿ ಮತ್ತೆ ಮೂರು ವರ್ಷಗಳ ಸೆರೆಮನೆ ವಾಸ ಪ್ರಾಪ್ತವಾಯಿತು. ಬ್ರಿಟಿಷ್ ವೃತ್ತಪತ್ರಿಕೆಗಳು ಆಕೆಯ ಸಾಹಸವನ್ನು ಬಣ್ಣಿಸಿ ಭಾರತದ ’ಜೋನ್ ಆಫ್ ಆರ್ಕ್’ ಎಂದು ಕರೆದವು. ತನ್ನೆಲ್ಲ ಹೋರಾಟದ ಅನುಭವವನ್ನು ಈಕೆ “ಶೃಂಖಲ್ ಝಂಕಾರ್’ ಎಂಬ ತಮ್ಮ ಆತ್ಮಚರಿತ್ರೆಯಲ್ಲಿ ನಿವೇದಿಸಿಕೊಂಡಿದ್ದಾರೆ.
’ಶೃಂಖಲ್ ಝಂಕಾರ್’ ಅಂದಿನ ಕ್ರಾಂತಿಕಾರಿ ಹೋರಾಟದಲ್ಲಿರುವ ಮಹಿಳೆಯರ ಜೀವನ, ಸಾಹಸ ಮತ್ತು ಸಾಮರ್ಥ್ಯವನ್ನು ಬಿಚ್ಚಿಡುತ್ತದೆ.

ಬೀನಾ 1911ರ ಆಗಸ್ಟ್ 24ರಂದು ಕೃಷ್ಣಾನಗರದಲ್ಲಿ ಜನಿಸಿದರು.  ಆಕೆ ಕೊಲ್ಕತ್ತ ಸೈಂಟ್ ಜಾನ್ಸ್ ಡಿಯೊಯೆಸಾನ್ ಹೆಣ್ಣುಮಕ್ಕಳ ಸೆಕೆಂಡರಿ ಶಾಲೆಯಲ್ಲಿ ಓದಿ, ಬೆಥುನೆ ಕಾಲೇಜಿನಲ್ಲಿ ಓದಿದರು.

ಬೀನಾ ತಂದೆ ಬೇಣಿ ಮಾಧವದಾಸ್, ಸುಭಾಷ್ ಚಂದ್ರ ಬೋಸರ ಗುರುವಾಗಿದ್ದವರು. ಜೊತೆಗೆ ಬ್ರಹ್ಮ ಸಮಾಜದ ನೇತಾರರೂ ಆಗಿದ್ದರು. ತಾಯಿ ಸರಳಾ ದೇವಿ ಸೀಮಿತ ಆದಾಯವುಳ್ಳ ಮಧ್ಯಮ ವರ್ಗದ ಕುಟುಂಬದಲ್ಲಿ ಕೌಟುಂಬಿಕ ಜವಾಬ್ದಾರಿಗಳನ್ನು ನಿರ್ವಹಿಸುತ್ತಲೇ ನೊಂದ ಮಹಿಳೆಯರಿಗೆ ಸೂರು ಕಲ್ಪಿಸಿಕೊಡುವ ಕೆಲಸಕ್ಕೆ ಸಮಯವನ್ನು ಹೊಂದಿಸಿಕೊಳ್ಳುತ್ತಿದ್ದರು. ಆಕೆ ಮಹಿಳೆಯರನ್ನು ಸಂಘಟಿಸಿ, ಅವರ ಮೂಲಕ ಬಡವರಿಗೆ ಓದಲು, ಬರೆಯಲು ಕಲಿಸುತ್ತಿದ್ದರು. ಜೊತೆಗೆ, ಹೊಲಿಗೆಯಲ್ಲಿ ತರಬೇತಿಯನ್ನು ಕೊಡುತ್ತಿದ್ದರು. ಅವರಿಗೆ ನೋಡಿಕೊಳ್ಳಲು ಅವರದೇ ಕುಟುಂಬವಿದ್ದರೂ ಬಡ ನಿರಾಶ್ರಿತ ಹೆಣ್ಣು ಮಕ್ಕಳಿಗಾಗಿ ಆಶ್ರಮವೊಂದನ್ನು ಆರಂಭಿಸಿದ್ದರು. ವಿದೇಶಿ ಆಳ್ವಿಕೆಯನ್ನು ಪ್ರತಿಭಟಿಸಲು ಮಹಾತ್ಮ ಗಾಂಧಿಯವರು ಆರಂಭಿಸಿದ ಅಸಹಕಾರ ಚಳುವಳಿಯು ದೇಶವಿಡಿ ಹಬ್ಬಿದ್ದು ಅದು ಬೀನಾ ದಾಸ್ ಅವರ ಕುಟುಂಬವನ್ನೂ ಹೊಕ್ಕಿತ್ತು. ಬೀನಾಳ ಅಣ್ಣ ನಿರ್ಮಲ ಚಂದ್ರ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿ ಸೆರೆಮನೆ ಸೇರಿದ್ದ. ಹೀಗಾಗಿ ಖಾದಿ ಮತ್ತು ಚರಖಾ ಅವರ ಮನೆಯನ್ನು ಕಾಯಂ ಆಗಿ ಪ್ರವೇಶಿಸಿದ್ದವು. ಇಂತಹ ಆದರ್ಶ ತಂದೆ ತಾಯಿಯರಿಗೆ ಜನಿಸಿದ ಬೀನಾ ದಾಸಳ ರಾಜಕೀಯ ಪ್ರವೇಶಕ್ಕೆ ಮನೆಯಲ್ಲಿ ಉತ್ಸಾಹಿ ವಾತಾವರಣವಿದ್ದು, ಆಕೆ ಕಾಂಗ್ರೆಸ್ ಕಾರ್ಯಕರ್ತಳಾಗಿ ಮತ್ತು ಸಮಾಜ ಸೇವಕಿಯಾಗಿ ಗಾಂಧಿ ಪ್ರತಿಪಾದಿಸಿದ ಅಹಿಂಸಾ ಚಳುವಳಿಗೆ ತನ್ನನ್ನು ಮುಡಿಪಾಗಿಟ್ಟರು. ನಂತರ ಕ್ರಮೇಣ ಅವರ ದೃಷ್ಟಿಕೋನದಲ್ಲಿ ಬದಲಾವಣೆಯಾಗುತ್ತಿದ್ದಂತೆ ಸಶಸ್ತ್ರಕ್ರಾಂತಿಯ ತತ್ವದಲ್ಲಿ ಅಚಲ ಶ್ರದ್ಧೆಯನ್ನು ಬೆಳೆಸಿಕೊಂಡರು. ಆಕೆ ತಂದೆಯ ಶಿಷ್ಯರಾಗಿದ್ದ ಸುಭಾಷ ಚಂದ್ರ ಬೋಸರು ಆಕೆಗೆ ಮಾರ್ಗದರ್ಶಕರಾಗಿದ್ದು ಆಕೆಗೆ ಆದರಣೀಯರೂ ಆಗಿದ್ದರು. ಆಕೆಯ ಅಕ್ಕ ಕಲ್ಯಾಣಿ ಭಟ್ಟಾಚಾರ್ಯ ಕೂಡ ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯವಾಗಿದ್ದು ಸೆರೆಮನೆವಾಸವನ್ನು ಅನುಭವಿಸಿದವರು.

ಬೀನಾ ಬ್ರಿಟಿಷ್ ವಿರೋಧಿ ಮನಃ ಸ್ಥಿತಿಯನ್ನು ರೂಪಿಸಿಕೊಳ್ಳುತ್ತಲೇ ಅದನ್ನು ಕ್ರಿಯೆಗೆ ಇಳಿಸುವ ನಿರ್ಧಾರ ತೆಗೆದುಕೊಳ್ಳುತ್ತಾರೆ. ಯಾವುದೇ ಪೂರ್ವ ತಯಾರಿಯಿಲ್ಲದೆ ಸ್ನೇಹಿತೆಯಿಂದ ಪಿಸ್ತೂಲು ಪಡೆದು ಬ್ರಿಟಿಷ್ ಅಧಿಕಾರಿಯತ್ತ ಗುಂಡು ಹಾರಿಸುವ ಬೀನಾಳ ಧೈರ್ಯಕ್ಕೆ ಯಾರಾದರೂ ಬೆರಗಾಗಬೇಕು.  ಈಕೆ ಬಂಧಿತರಾದಾಗ ಈಕೆಯನ್ನು ನೋಡಲು ಮಹಾತ್ಮ ಗಾಂಧಿಯವರು ಜೈಲಿಗೆ ಒಮ್ಮೆ ಭೇಟಿ ನೀಡಿದ್ದರು. ಶೃಂಖಲ್ ಝೇಂಕಾರ್ ಬಿನಾದಾಸರೊಬ್ಬರ ಕಥೆಯಾಗದೆ, ಆ ಕಾಲದ ಕ್ರಾಂತಿಕಾರಿ ಹೋರಾಟಗಾರರ ಬದುಕಿನ ಹಲವಾರು ಮುಖಗಳನ್ನು ಪರಿಚಯಿಸುತ್ತದೆ. ಆಕೆ ತಮ್ಮ ಹೋರಾಟದ ಬದುಕಿನಲ್ಲಿ ಭೇಟಿಯಾದ ಗಾಂಧಿ, ಸುಭಾಷ ಚಂದ್ರ ಬೋಸರಲ್ಲದೆ, ಅರುಣಾ ಅಸಫ್ ಆಲಿ, ಮೀನು ಮಸಾನಿ ಮುಂತಾದ ನಾಯಕರೊಂದಿಗಿನ ಅನುಭವವನ್ನು ಹಂಚಿಕೊಂಡಿದ್ದಾರೆ.

�ಸ್ವಾತಂತ್ರ್ಯಾ ನಂತರ ಭಾರತವೆಂಬ ವಿಶಾಲ ನಾಡನ್ನು ಪುನರ್ನಿರ್ಮಾಣ ಮಾಡಬೇಕಾದ ಸಂದರ್ಭದಲ್ಲಿ ಇರುವ ಬಡತನ, ಅನಕ್ಷರತೆ , ಜಾತೀಯತೆ ಮತ್ತು ಕೋಮು ಸಾಮರಸ್ಯದಂತಹ ಮೂಲಭೂತ ಸಮಸ್ಯೆಗಳನ್ನು ಎದುರಿಸುವುದು ಹೇಗೆ? ಎಂಬುದರ ಚಿಂತೆಯನ್ನು ಬೀನಾದಾಸ್ ಮಾಡುತ್ತಾರೆ. ಈ ಸಮಸ್ಯೆಗಳು ಸ್ವಾತಂತ್ರ್ಯ ಹೋರಾಟಕ್ಕಿಂತ ಹೆಚ್ಚು ಸಂಕೀರ್ಣವೂ, ಗಾಬರಿಗೊಳಿಸುವಂಥವು ಆಗಿದ್ದವೆಂಬುದನ್ನು ಬೀನಾ ತಮ್ಮ ಬರಹದಲ್ಲಿ ಮನಗಾಣುತ್ತಾರೆ.
ಸೆರೆಮನೆವಾಸದಿಂದ ಹೊರಬಂದ ನಂತರ ಕಾಂಗ್ರೆಸ್ ಕಾರ್ಯಕರ್ತಳಾಗಿ ಕೆಲಸ ಮಾಡುತ್ತಿದ್ದಾಗ ಬೀನಾ ಬಂಗಾಲದ ಚರಿತ್ರಾರ್ಹ ಧರಮ್ ತಲ ಸತ್ಯಾಗ್ರಹದಲ್ಲಿ ನಿದ್ರೆಗಳಿಲ್ಲದ ಹಲವಾರು ರಾತ್ರಿಗಳನ್ನು ಕಳೆಯುತ್ತಾರೆ. ಹಾಗೆಯೇ ಅಮೃತ ಬಜಾರ್ ಪತ್ರಿಕೆಯ ಶೋಷಿತ ಕಾರ್ಮಿಕರು ನಡೆಸುತ್ತಿದ್ದ ಮುಷ್ಕರದ ನೇತೃತ್ವ ವಹಿಸಿ, ಅದನ್ನು ಸಮರ್ಥವಾಗಿ ನಿಭಾಯಿಸುತ್ತಾರೆ. ಗಲಭೆಯೆದ್ದ ನೌಖಾಲಿಯಲ್ಲಿ ಗಾಂಧಿಯವರೊಂದಿಗೆ ಪಾದಯಾತ್ರೆಯಲ್ಲಿ ಪಾಲ್ಗೊಂಡು ಪರಿಹಾರ ಕಾರ್ಯಗಳಿಗಾಗಿ ದುಡಿಯುತ್ತಾರೆ. ಶಾಲೆಗಳಿಲ್ಲದ ಹಳ್ಳಿಗೆ ಹೋಗಿ ಅಲ್ಲಿ ಶಾಲೆಗಳನ್ನು ಆರಂಭಿಸುವ ಕಾರ್ಯದಲ್ಲಿ ತೊಡಗುತ್ತಾರೆ. ಕೊನೆಗೆ, ಸ್ವಾತಂತ್ರ್ಯ ಬಂದ ನಂತರ ಪ್ರಜಾಪ್ರಭುತ್ವದ ಚುನಾವಣಾ ರಾಜಕೀಯ ಕ್ಷೇತ್ರಕ್ಕೆ ಸೆಳೆಯಲ್ಪಟ್ಟು, ಅವರ ಪಕ್ಷದ ನಿರ್ದೇಶನದ ಮೇರೆಗೆ ಶಾಸಕಾಂಗ ಸಭೆಯ ಸದಸ್ಯರಾಗಿ ಚುನಾಯಿತರಾಗುತ್ತಾರೆ. ಆಗ ಸಮಕಾಲೀನ ರಾಜಕೀಯದಲ್ಲಿ ವ್ಯಾಪಿಸಿದ್ದ ಬದಲಾವಣೆಯನ್ನು ಕಂಡು ಅತ್ಯಂತ ವೇದನೆಗೊಳಗಾಗುತ್ತಾರೆ. ಆತ್ಮಾರ್ಪಣೆಯ ಆದರ್ಶದ ರಾಜಕಿಯದ ಜಾಗವನ್ನು ತಕ್ಷಣವೇ ಅಧಿಕಾರದ ರಾಜಕೀಯವು ಆವರಿಸಿರುವುದನ್ನು ಕಾಣುತ್ತಾರೆ. ಅಸಂಖ್ಯ ಅನುಯಾಯಿಗಳಿದ್ದು, ಹೇಗೆ ಗಾಂಧೀಜಿಯವರು ಒಂಟಿಯಾದರೋ ಹಾಗೆಯೇ ಬೀನಾ ಕೂಡ ಮೌಲ್ಯಗಳ ಪಲ್ಲಟದೊಡನೆ ಹೊಂದಾಣಿಕೆ ಮಾಡಿಕೊಳ್ಳಲಾಗದೆ ಒಂಟಿಯಾಗುತ್ತಾರೆ.

ಬೀನಾ ದಾಸ್ ಅವರು ತಮ್ಮ ಆತ್ಮಕಥಾನಕವನ್ನು ತಾನು ಏಕೆ ಬರೆದೆ ಎಂದು ಪ್ರಶ್ನಿಸಿಕೊಳ್ಳುತ್ತಾ ಕೊನೆಯಲ್ಲಿ ಹೀಗೆ ಬರೆಯುತ್ತಾರೆ: “ಇದನ್ನು ಬರೆಯಲು ಆರಂಭಿಸಿದಾಗ ನಾನು ಏನು ಹೇಳಬೇಕೆಂದಿದ್ದೆ, ಎಂಬುದರ ಬಗ್ಗೆ ನನಗೆ ತಿಳಿಯದು. ನನ್ನ ಕಾರ್ಯಕ್ಷೇತ್ರಕ್ಕೆ ವಿದಾಯ ಹೇಳಬಯಸಿದ್ದನೆ? ನನ್ನ ಜೀವನ ರಥದ ಚಕ್ರಗಳ ಅವಿರತ ಚಲನೆಗೆ ಇತಿಶ್ರೀ ಹಾಡಬೇಕೆಂದಿದ್ದೆನೆ? ನಿಜವಾಗಿಯೂ ಕೆಲವೊಮ್ಮೆ ನನ್ನ ಮನಸ್ಸು ಮತ್ತು ಶರೀರವು ಆಯಾಸದಿಂದ ಬಳಲಿ ಬೆಂಡಾಗಿ ಸೋತುಹೋಗುತ್ತದೆ. ಮಾನವಕುಲದ ದುಃಖ-ದುಮ್ಮಾನಗಳನ್ನು ಕೇಳುತ್ತಲೇ ನಾನು ನನ್ನ ಜೀವನ ಯಾತ್ರೆಯನ್ನು ಆರಂಭಿಸಿದೆ. ಮನುಷ್ಯನ ಸಂಕಷ್ಟಗಳಿಗೆ ಕೊನೆಯೇ ಇಲ್ಲವಾಗಿದೆ. ನಮ್ಮ ಸುತ್ತಲೂ ಹಸಿವಿನ ಆಕ್ರಂದನ, ವಂಚಿತರ ನೋವುಗಳು ಸದಾ ಮೊರೆಯುತ್ತಲೇ ಇವೆ. ವಿರಮಿಸಲು ಸಮಯ ಇನ್ನೂ ದೂರವಿದೆ. ಇಂದು ನನ್ನ ಪ್ರಾರ್ಥನೆ ಒಂದೇ. ಸಂಕಷ್ಟಕ್ಕೆ ಸಿಲುಕಿರುವ ಮನುಕುಲದ ಹಿತಕ್ಕಾಗಿ ಸಕ್ರಿಯವಾಗಿ ಉಳಿಯುವುದು. ನಿಷ್ಕ್ರಿಯೆಯ ಉಸುಕಿನಲ್ಲಿ ಸಿಕ್ಕಿ ಕಳೆದುಹೋಗದೇ ಇರುವುದು. ನನ್ನ ಜೀವನದ ಕೊನೆಯವರೆಗೂ ಕವಿ ರವೀಂದ್ರನಾಥರ ನುಡಿಯನ್ನು ನುಡಿಯುವಷ್ಟು ಶಕ್ತಿ ಉಳಿದಿರಲೆಂದು ಆಶಿಸುತ್ತೇನೆ.

ನಿರಂತರ ಚಟುವಟಿಕೆಯಿಂದ ದಣಿವಾಗಿದ್ದರೂ
ಕೂರಲಾರೆನು ನಾನು ಶಾಂತಳಾಗಿ
ಮುಗಿಲು ಮುಟ್ಟುವ ಮನುಕುಲದ ಆಕ್ರಂದನ ಎಂದು ನಿಲ್ಲುವುದೋ
ಅನಾಚಾರಿಗಳ ಖಡ್ಗವು
ತನ್ನ ಕ್ರೂರ ಕಾದಾಟವನ್ನು ಎಂದು ಕೊನೆಗೊಳಿಸುವುದೊ
ನನಗಿಲ್ಲ ವಿರಾಮ ಅಲ್ಲಿಯತನಕ.

ಬೀನಾ ದಾಸ್ ಅವರಿಗೆ 1960ರಲ್ಲಿ ಪದ್ಮಶ್ರೀ ಗೌರವ ಸಲ್ಲಿಸಲಾಗಿತ್ತು.

ಬೀನಾ ದಾಸ್ 1986ರ ಡಿಸೆಂಬರ್ 26ರಂದು ಋಷಿಕೇಶದಲ್ಲಿ ನಿಧನರಾದರು.

ಮಾಹಿತಿ ಕೃಪೆ ಮತ್ತು ಆಧಾರ: ಎನ್. ಗಾಯತ್ರಿ ಅವರ ನಮ್ಮ ಕಥೆ/ ಭಾರತದ ಜೋನ್ ಆಫ್ ಆರ್ಕ್ – ಎನ್. ಗಾಯತ್ರಿ
Gayathri Nagarajarao www.hitaishinimag.com

On the birth anniversary of great revolutionary freedom fighter Bina Das

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ