ಮೈ.ಶ್ರೀ. ನಟರಾಜ
ಮೈ.ಶ್ರೀ. ನಟರಾಜ
ಮೈ.ಶ್ರೀ. ನಟರಾಜ ವಿದೇಶದ ನೆಲದಲ್ಲಿದ್ದು ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕದಲ್ಲಿ ಮಹತ್ವದ ಕೆಲಸ ಮಾಡುತ್ತ ಬಂದಿದ್ದಾರೆ. ಮೈ. ಶ್ರೀ. ನಟರಾಜ ಅವರು ವೃತ್ತಿಯಲ್ಲಿ ಅಮೆರಿಕದಲ್ಲಿ ಅಣುಶಕ್ತಿ ತಂತಜ್ಞಾನದಲ್ಲಿ ಅಧಿಕಾರಿಗಳಾಗಿ ಸಾಧನೆ ಮಾಡಿದಂತೆಯೇ ಕನ್ನಡದಲ್ಲಿ ಅಪಾರ ಅಕ್ಕರೆಯಿಂದ ಕೆಲಸ ಮಾಡುತ್ತ ಬಂದಿದ್ದಾರೆ.
ಆಗಸ್ಟ್ 27 ಮೈ.ಶ್ರೀ. ನಟರಾಜ ಅವರ ಜನ್ಮದಿನ. ಅವರ ಹುಟ್ಟೂರು ಹಾಸನ. ಹಾಸನದ ಸರ್ಕಾರಿ ಶಾಲೆಯಲ್ಲಿ
ಹೈಸ್ಕೂಲುವರೆಗೆ ವಿದ್ಯಾಭ್ಯಾಸ ಪೂರೈಸಿದ ಇವರು ಮುಂದೆ ಐಐಟಿ, ಪೊವೈ ಇಂದ ಸಿವಿಲ್ ಇಂಜಿನಿಯರಿಂಗ್ ಓದಿದರು.
ಮೈ.ಶ್ರೀ. ನಟರಾಜ ಅವರು ಅರವತ್ತರ ದಶಕದ ಕೊನೆಯಲ್ಲಿ ಅಮೆರಿಕೆಗೆ ತೆರಳಿ, ಅಮೆರಿಕದ ಅಣುಶಕ್ತಿ ನಿಯಂತ್ರಣ ಆಯೋಗದಲ್ಲಿ ರಾಕ್ ಮೆಕ್ಯಾನಿಕ್ಸ್ ತಂತ್ರಜ್ಞಾನದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರು.
ಮೈ. ಶ್ರೀ. ನಟರಾಜ ಅವರಿಗೆ ಶಾಲಾ ದಿನಗಳಿಂದ ಕನ್ನಡದಲ್ಲಿ ಅಪಾರ ಪ್ರೀತಿ. ಶಾಲೆಯ ದಿನಗಳಲ್ಲೇ ವಿವಿಧ ರೀತಿಯ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿದ್ದರು. ಕನ್ನಡ ಪಂಡಿತರಾಗಿ ವ್ಯಾಕರಣ ಗ್ರಂಥ ರಚನೆಗಳಲ್ಲಿ ಸಾಂಸ್ಕೃತಿಕ ಲೋಕದಲ್ಲಿ ಮಹತ್ವದ ಕೆಲಸ ಮಾಡಿದ್ದ ನಮ್ಮ ತಂದೆ ಪಂಡಿತ ತಿರು ಶ್ರೀನಿವಾಸಾಚಾರ್ ಅವರೂ ಇವರಿಗೆ ಗುರುಗಳಾಗಿದ್ದರಂತೆ.
ವಿದ್ಯಾರ್ಥಿಯಾಗಿದ್ದಾಗಲೇ ಮೈ. ಶ್ರೀ. ನಟರಾಜ ಅವರ ಮೇಲೆ ಡಾ. ಯು. ಆರ್. ಅನಂತಮೂರ್ತಿ ಅವರ ಸಾಹಿತ್ಯ ಪ್ರಭಾವ ಬೀರಿತ್ತು. ಮನಸ್ಸಲ್ಲಿ ಮೂಡುವಂತಹ ಭಾವವನ್ನು ವ್ಯಕ್ತಪಡಿಸಲು ಕನ್ನಡವಲ್ಲದೇ ಬೇರೆ ಯಾವ ಭಾಷೆಯಲ್ಲೂ ಸಾಧ್ಯವಿಲ್ಲ ಎನ್ನುವುದು ಇವರಿಗೆ ಮನದಟ್ಟಾಯಿತು. ಹಾಗಾಗಿ ಕವನಗಳನ್ನು ಬರೆಯಲು ಆರಂಭಿಸಿದರು. ಅಮೆರಿಕದಲ್ಲಿರುವ ಕನ್ನಡಿಗರ ಮಕ್ಕಳಿಗೆ ಕನ್ನಡ ಕಲಿಸುವ ಸಲುವಾಗಿ ‘ಯುಗಾದಿ ಬಂದಿತು ತುಂಬು ಹರುಷ ತಂದಿತು’ ಎಂಬ ಕಾವ್ಯವನ್ನು ರಚಿಸಿದರು. ಹೀಗೆ ಅವರ ಸಾಹಿತ್ಯ ಕೃಷಿ ಸಾಗುತ್ತ ಬಂತು.
ಮೈ. ಶ್ರೀ. ನಟರಾಜ ಅವರ ಪ್ರಕಟಿತ ಕೃತಿಗಳಲ್ಲಿ ನಾನೂ ಅಮೆರಿಕನ್ ಆಗಿಬಿಟ್ಟೆ, ಮಧುಚಂದ್ರ, ಸಿರಿಕೇಂದ್ರ, ಶೈಶವ ಮುಂತಾದ ಕವನ ಸಂಕಲನಗಳು ಸೇರಿವೆ. ಮೀನಿನ ಹೆಜ್ಜೆ, ನೇಣು, ಪರದೇಶಿಗಳ ಪಾರ್ಟಿ ಮತ್ತು ಇತರ ಮೂರು ನಾಟಕಗಳು, ಮತ್ತು ಐ ಆ್ಯಮ್ ಬ್ರಾಹ್ಮಣ್ ಮುಂತಾದವು ನಾಟಕ ಕೃತಿಗಳಲ್ಲಿ ಸೇರಿವೆ. ಜಾಲತರಂಗ ಮತ್ತು ಜಾಲತರಂಗಿಣಿ ಇವರ ಅಂಕಣ ಬರಹಗಳ ಸಂಗ್ರಹಗಳಲ್ಲಿವೆ. ಮಾಯಾವಿ ಸರೋವರ ಅನುವಾದಿತ ನಾಟಕ. The void and the womb ಎಂಬುದು (ಬಯಲು-ಬಸಿರು) ಕನ್ನಡ ಕಾದಂಬರಿಯ ಆಂಗ್ಲಾನುವಾದ. ಭಾಷೆಯಿಂದ ಭಾಷೆಗೆ ಮತ್ತು Beyond words ಅನುವಾದಿತ ಕವನ ಸಂಕಲನ. ಸಿರಿಗನ್ನಡ ಗೀತರಾಮಾಯಣ ನೀಳ್ಗಾವ್ಯ. ಕಥೆಯಂ ಕೇಳೆಲೋ ಕಂದ ಎಂಬುದು ಕಥಾ ಸಂಕಲನ. ನಾರೀಗೀತ ಎಂಬುದು ಹಾಸನದ ರಾಜಾರಾಯರ ಕಾದಂಬರಿಯ ಮರುಸೃಷ್ಟಿ. ರಂಗ-ತರಂಗ- ಕನ್ನಡದ ಮುನ್ನಡೆಯ ಮಿಂಚು ನೋಟ ಎಂಬುದು ಆಹ್ವಾನಿತ ಭಾಷಣಗಳ ಸಂಗ್ರಹ. ಕರಗಿಸುವ ಕಡಾಯಿ... ಕೋಸುಂಬರಿ ಕುಕ್ಕೆ ಎಂಬುದು ಪ್ರಬಂಧಗಳ ಸಂಗ್ರಹ. ಕನ್ನಡ ಕಾದಂಬರಿ ಲೋಕದಲ್ಲಿ ಹೀಗೆ ಹಲವು, ದೀಪ ತೋರಿದೆಡೆಗೆ ಮುಂತಾದವು ಸಂಪಾದನೆಗಳು. ಅಮೆರಿಕನ್ ಜಾನಪದ ಕನ್ನಡ ಕಂಗಳಿಗೆ ಕಂಡಂತೆ ಎಂಬುದು ಜ್ಯೋತಿ ವೆಂಕಟಸುಬ್ರಹ್ಮಣ್ಯ ಅವರೊಂದಿಗೆ ಮೂಡಿಸಿರುವ ಸಂಪಾದನೆ. ಆಪ್ತವಲಯದಲ್ಲಿ ಅಮೆರಿಕನ್ನಡ ಮಾಲಿಕೆಯಲ್ಲಿ ಎಚ್.ವೈ. ರಾಜಗೋಪಾಲ್ ತ್ರಿವೇಣಿ ಶ್ರೀನಿವಾಸರಾವ್ ಅವರೊಂದಿಗಿನ ಸಂಪಾದನೆ.
ಮೈ. ಶ್ರೀ. ನಟರಾಜ ಅವರ ವೈವಿಧ್ಯಮಯ ಸಾಧನೆಗಳಲ್ಲಿ ಕಾವೇರಿ ಕನ್ನಡ ಸಂಘದ ಕಾರ್ಯಕಾರಿ ಸಮಿತಿ ಮತ್ತು ಆಡಳಿತ ಮಂಡಲಿ ಅಧ್ಯಕ್ಷತೆ, ಕನ್ನಡ ಸಾಹಿತ್ಯ ರಂಗದ ಅಧ್ಯಕ್ಷತೆ, ಹಲವು ಪತ್ರಿಕೆಗಳ ಮತ್ತು ಸ್ಮರಣ ಸಂಚಿಕೆಗಳ ಸಂಪಾದಕತ್ವ, ಕನ್ನಡ ನಾಟಕ ತಂಡದೊಂದಿಗೆ ಊರೂರಿಗೆ ತಿರುಗಾಟ, ಸಂಸ್ಕೃತದಲ್ಲಿ ನವರತ್ನ ಮಾಲಿಕಾ ಎಂಬ ಒಂಬತ್ತು ಕೃತಿಗಳ ಹಾಗೂ ನವಮಣಿಮಾಲಿಕಾ (ಕನ್ನಡ) ಎಂಬ ಒಂಬತ್ತು ಕೃತಿಗಳ ಸಾಹಿತ್ಯ ರಚನೆ ಮುಂತಾದವು ಸೇರಿವೆ.
ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕದಲ್ಲಿ ಮೈ. ಶ್ರೀ. ನಟರಾಜ ಅವರಿಗೆ 'ಸಿರಿಕೇಂದ್ರ' ಕವನ ಸಂಕಲನಕ್ಕೆ ಗೊರೂರು ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ, ನ್ಯಾಶನಲ್ ಕೌನ್ಸಿಲ್ ಆಫ್ ಇಂಡಿಯನ್ ಅಸೋಸಿಯೇಷನ್ಸ್ ಪ್ರಶಸ್ತಿ, ಅಮೆರಿಕ ಮತ್ತು ಕೆನಡಾದ ಹಲವು ಕನ್ನಡ ಕೂಟಗಳ ಪ್ರಶಸ್ತಿ ಗೌರವಗಳು ಸಂದಿವೆ. ತಾಂತ್ರಿಕ ನೈಪುಣ್ಯತೆ ಮತ್ತು ಸೇವಾತತ್ಪರತೆಗಾಗಿ ಅಮೆರಿಕದ ಅಣುಶಕ್ತಿ ನಿಯಂತ್ರಣ ಆಯೋಗದ ಅತ್ಯುನ್ನತ ಪ್ರಶಸ್ತಿಗಳಲ್ಲೊಂದಾದ ವಿಶಿಷ್ಟ ಸೇವಾ ಪ್ರಶಸ್ತಿಯೂ ಇವರಿಗೆ ಸಂದಿದೆ.
ಹಿರಿಯರೂ, ಸಾಧಕರೂ, ಸೇವಾ ತತ್ಪರರೂ ಆದ ಮೈ. ಶ್ರೀ. ನಟರಾಜ ಅವರಿಗೆಆತ್ಮೀಯ ನಮಸ್ಕಾರ ಮತ್ತು ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ತಮ್ಮ ಮತ್ತು ತಮ್ಮ ಕುಟುಂಬದವರ ಬದುಕು ಸಕಲ ಸುಖ, ಸೌಖ್ಯ, ಸಂಪದ, ಸಂತಸ, ಸಾಧನೆ, ಸಂತೃಪ್ತಿಗಳಿಂದ ನಿತ್ಯ ಕಂಗೊಳಿಸುತ್ತಿರಲಿ. ನಿಮ್ಮ ನಡೆ ನಮ್ಮನ್ನು ನಿರಂತರ ಪ್ರೇರಿಸುತ್ತಿರಲಿ.
Happy birthday Mysore Nataraja Sir 🌷🙏🌷
ಕಾಮೆಂಟ್‌ಗಳು